Sunday, September 21, 2014

ಭೂತಾಯಿ

                      ದಿ.೨೧.೦೯.೨೦೧೪ರಂದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನಲ್ಲಿ ಬಯಲು ಸಾಹಿತ್ಯ ವೇದಿಕೆ ಹಾಗೂ ಲೇಡೀಸ್ ಕ್ರಿಯೇಟಿವ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಶ್ರೀ.ಎನ್.ಎಂ.ಕೊಟ್ರೇಶ್ ಅವರ ಭೂತಾಯಿ, ಹಾಗೂ ಅಲೆಮಾರಿ ಎಂಬ ಕೃತಿಗಳು ಬಿಡುಗಡೆಯಾದವು. ಭೂತಾಯಿ ಕಾದಂಬರಿಯ ಕುರಿತು ಪುಸ್ತಕ ಪರಿಚಯವನ್ನು ನಾನು ಮಾಡಿದೆ. ಅದನ್ನೇ ಬ್ಲಾಗ್‌ನಲ್ಲಿ ಹಾಕಿರುವೆ. 

ಭೂತಾಯಿ
       ಓದುಗರಿಗೆ ಕಾದಂಬರಿ ಓದುವ ಹವ್ಯಾಸವನ್ನು ಆರಂಭಿಸಿದವರು ಮೊದಲಿಗೆ ಅ.ನ.ಕೃಷ್ಣರಾಯರು. ಅದುವರೆಗೆ ಕನ್ನಡಿಗರು ಕಾದಂಬರಿ ಓದುತ್ತಿರಲಿಲ್ಲವೆಂದಲ್ಲ, ಆದರೆ ಅದಕ್ಕೊಂದು ಓದುಗ ಸಮೂಹವನ್ನೇ ಸೃಷ್ಟಿಸಿದವರು ಅನಕೃ ಅವರು. ಹಾಗಾಗಿಯೇ ಅವರನ್ನು ಕಾದಂಬರಿ ಸಾರ್ವಭೌಮರೆಂದೇ ಗುರುತಿಸಲಾಗುತ್ತದೆ. ಅಂದಿನಿಂದ ಬೆಳೆದುಬಂದಿರುವ ಕಾದಂಬರಿಗಳ ಜಗತ್ತು ಈಗ ವಿಶಾಲವಾಗಿ ಬೆಳೆದುನಿಂತಿದೆ. ಕೆಲವು ಲೇಖಕರು ಕೆಲವು ಓದುಗರನ್ನು, ಕೆಲವು ಓದುಗರು ಕೆಲವು ಲೇಖರ ಕೃತಿಗಳನ್ನು ಮಾತ್ರ ಓದುವಷ್ಟರ ಮಟ್ಟಿಗೆ ಓದುಗ ಮತ್ತು ಲೇಖಕರ ಸಮೂಹ ಸೃಷ್ಟಿಯಾಗಿದೆ. 
         ಜಾಗತೀಕರಣದ ಇಂದಿನ ದಿನಗಳ ಭರಾಟೆಯಲ್ಲಿ ಕಾದಂಬರಿ ಓದುವ ಪ್ರತ್ಯೇಕ ಓದುಗರೇ ಇದ್ದಾರೆ. ಓದುಗನಿಗೆ ಸಂತಸ ನೀಡುವುದರೊಂದಿಗೇ ನೀತಿಯನ್ನು ತಿಳಿಸುವ, ರಸಾನುಭವ ಒದಗಿಸುವುದನ್ನು ಕಾದಂಬರಿಗಳು ಮಾಡುತ್ತವೆ. ಎಲೆಕ್ಟ್ರಾನಿಕ್ ಮಾಧ್ಯಮಗಳ ಭರಾಟೆಯಲ್ಲೂ ಪುಸ್ತಕ ಪ್ರೇಮಿಗಳು ಉಳಿದುಕೊಂಡಿರುವುದೇ ವಿಶೇಷ.
       ಹಿರಿಯರಾದ ಶ್ರೀ.ಎನ್.ಎಂ.ಕೊಟ್ರೇಶ್ ಅವರು ಈಗಾಗಲೇ ಹಲವಾರು ಕೃತಿಗಳಿಂದ, ಛಾಯಾಚಿತ್ರಗಳಿಂದ ನಾಡಿನಾದ್ಯಂತ ಪರಿಚಿತರು. ವ್ಯಕ್ತಿಯ ವ್ಯಕ್ತಿತ್ವವನ್ನು ಅವರ ಬರವಣಿಗೆಯಿಂದಲೂ ಗುರುತಿಸಬಹುದು. ಹತ್ತು ಹಲವು ದೇಶಗಳನ್ನು ಅವರು ಸುತ್ತಾಡಿದ್ದರೂ ಈ ನೆಲದ ಸೊಗಡು ಅವರನ್ನು ಬಿಟ್ಟಿಲ್ಲ. ಗ್ರಾಮೀಣ ಭಾಗದ ಬದುಕನ್ನೆ ಅವರು ತಮ್ಮ ಕಾದಂಬರಿಯ ಕಥಾವಸ್ತುವನ್ನಾಗಿ ಆಯ್ದುಕೊಂಡಿರುವುದು, ಗ್ರಾಮಗಳ ಬಗೆಗೆ ಅವರಿಗಿರುವ ಕಾಳಜಿಯನ್ನು ತೋರುತ್ತದೆ.
         ಪ್ರಸ್ತುತ ಭೂತಾಯಿ ಕಾದಂಬರಿ ಒಕ್ಕಲುತನದ ಒಬ್ಬ ಹೆಣ್ಣುಮಗಳ ಕಥಾನಕ ಎನ್ನುವುದಕ್ಕಿಂತ ವ್ಯವಸ್ಥೆಯ ವಿರುದ್ಧ, ಅನ್ಯಾಯದ ವಿರುದ್ಧ ಹೋರಾಟ ಮಾಡುವ ಹೋರಾಟಗಾರ್ತಿಯೊಬ್ಬಳ ಹೋರಾಟದ ಕತೆ ಎನ್ನಬಹುದು. ಇದು ಸತ್ಯಕತೆಯೆಂದೇ ಲೇಖಕರು ತಿಳಿಸಿರುವುದರಿಂದ ಈ ಕಾದಂಬರಿಯಲ್ಲಿ ಕಲ್ಪನೆ ಅಥವಾ ಫ್ಯಾಂಟಸಿ ಇಲ್ಲ. ಹಾಗೆಂದು ಕಾದಂಬರಿ ನೀರಸವಾಗಿಯೂ ಇಲ್ಲ. ಹಳ್ಳಿಗಾಡಿನ, ಬಡತನದ, ದುಡಿವ ವರ್ಗದ ವಾಸ್ತವ ಬದುಕಿನ ಚಿತ್ರಣ ಇಲ್ಲಿದೆ. ಕಾದಂಬರಿಯಲ್ಲಿ ೩ ತಲೆಮಾರುಗಳ ಚಿತ್ರಣವಿದೆ. ಕಷ್ಟ, ಛಲ, ಹೋರಾಟ, ನೋವು, ನಲಿವು, ಉಡಾಫೆ, ವ್ಯಂಗ್ಯ, ದುಷ್ಟತನ, ಕುತಂತ್ರ, ಪ್ರೀತಿ, ಮಮತೆ ಎಲ್ಲವೂ ಇಲ್ಲಿ ಮಿಳಿತಗೊಂಡಿವೆ. ಕಾದಂಬರಿಯ ಮುಖ್ಯ ನಾಯಕಿ ಭೂತಾಯವ್ವ ಭೂಮಿಗಾಗಿ ಹೋರಾಟ ಮಾಡುವ ತನ್ನ ಹಕ್ಕನ್ನು ಚಲಾಯಿಸಲು ಅಧಿಕಾರಶಾಹಿ ವ್ಯವಸ್ಥೆಯ ವಿರುದ್ಧ ಸೆಣಸುವ, ಸೆಡ್ಡು ಹೊಡೆವ ಛಲಗಾರ್ತಿಯಾಗಿ ಕಂಡುಬರುತ್ತಾಳೆ. 
         ಭೂತಾಯವ್ವನ ಪತಿ ಶಿವಕುಮಾರ ಲಂಪಟ, ಕುಡುಕ, ಅವನ ಶೋಕಿಯಿಂದಾಗಿ ಇಡೀ ಕುಟುಂಬವೇ ಬೀದಿಪಾಲಾಗುತ್ತದೆ. ಇದರ ಲಾಭವನ್ನು ಪಟ್ಟಭದ್ರ ಹಿತಾಸಕ್ತಿಗಳು, ಅಧಿಕಾರಿಶಾಹಿ ವಲಯ ಪಡೆಯಲು ಹವಣಿಸುತ್ತದೆ. ತನಗೆ ಸೇರಿದ ಭೂಮಿಯನ್ನು ಊರಗೌಡ, ಶಾನುಭೋಗರು ಸೇರಿ ನುಂಗಿಹಾಕಲು ಯತ್ನಿಸಿದಾಗ ಅದನ್ನು ಮರಳಿ ಪಡೆಯಲು ಭೂತಾಯವ್ವ ವ್ಯವಸ್ಥೆಯ ವಿರುದ್ಧ ನಡೆಸುವ ಹೋರಾಟವೇ ಭೂತಾಯಿ ಕಾದಂಬರಿಯ ಕಥಾಹಂದರ.
         ಕಾದಂಬರಿಯ ಮೊದಲ ಭಾಗದಲ್ಲಿ ಭೂತಾಯವ್ವನ ಚಿತ್ರವನ್ನು, ಆಕೆಯ ಸ್ಥಿತಿಯನ್ನು ಕಣ್ಮುಂದೆ ತಂದು ನಿಲ್ಲಿಸಲಾಗುವುದು. ಎರಡನೇ ಭಾಗದಿಂದ ಭೂತಾಯವ್ವನ ಪತಿಯ ತಂದೆಯಾದ ಬಾಳಪ್ಪನಿಂದ ಕಥಾನಕ ಆರಂಭಗೊಳ್ಳುವುದು. ಆದರೆ ಒಂದನೇ ಭಾಗಕ್ಕೂ ಎರಡನೇ ಭಾಗಕ್ಕೂ ಕೊಂಡಿ ಇಲ್ಲದ್ದರಿಂದ ಓದುಗನಿಗೆ ಮೊದಲಿಗೆ ಗೊಂದಲವುಂಟಾಗುವುದು. ಭೂತಾಯವ್ವನ ಕಥಾನಕ ಆರಂಭಗೊಂಡ ಸಂದರ್ಭದಲ್ಲಿಯೇ ಧಿಡೀರನೇ ಆಕೆಯ ಮಾವ ಬಾಳಪ್ಪನ ಬದುಕಿನ ಚಿತ್ರಣ ಆರಂಭಗೊಳ್ಳುವುದು ಓದುಗನಿಗೆ ತಡೆಯುಂಟಾದಂತಾಗುವುದು. ಆದರೆ ಮುಂದುವರೆದಂತೆಲ್ಲ ಎಲ್ಲ ಪಾತ್ರಗಳು ನಿಚ್ಚಳವಾಗಿ ಕಾಣತೊಡಗುತ್ತವೆ. ಕೊನೆ ಕೊನೆಯಲ್ಲಿ ಅಂತ್ಯ ಹೇಗಾಗಬಹುದೆಂಬ ಕುತೂಹಲವನ್ನು ಓದುಗರಿಗೆ ಉಳಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಕಥಾನಕ ಹೂವಿನ ಹಡಗಲಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ನಡೆಯುತ್ತದೆ. ಗ್ರಾಮೀಣ ಭಾಗದ ಅದರಲ್ಲೂ ದುಡಿಯುವ ವರ್ಗದ ಸಂಕಷ್ಟಗಳು ಹಲವಾರು. ಅದರಲ್ಲಿಯೇ ಶೋಷಣೆ ಮಾಡುವ, ದಬ್ಬಾಳಿಕೆ ನಡೆಸುವ ಗ್ರಾಮದ ಗೌಡರು, ಶಾನುಭೋಗರ ಆಳ್ವಿಕೆ, ಇದಕ್ಕೆ ವ್ಯವಸ್ಥೆಯ ಬೆಂಬಲ ಬೇರೆ. ಹೀಗಾದಾಗ ಬಡ ರೈತನ ಕುಟುಂಬ ಹೇಗೆ ಅವಸಾನದತ್ತ ದಾಪುಗಾಲು ಹಾಕುತ್ತದೆ ಎಂಬ ನೋಟ ಇಲ್ಲಿದೆ. 
        ಕಷ್ಟಪಟ್ಟು ದುಡಿವ ರೈತ ಬಾಳಪ್ಪ, ಕಾಳವ್ವನಿಗೆ ಬಹುದಿನಗಳ ಬೇಡಿಕೆ, ದೇವರಿಗೆ ಹರಕೆ ಹೊತ್ತಂತೆ ಶಿವಕುಮಾರನೆಂಬ ಸುಂದರಾಂಗ ಹುಟ್ಟುತ್ತಾನೆ. ಬಹುದಿನಗಳ ಹಂಬಲದಂತೆ ಜನಿಸಿದ ಮಗ ಓದಿ ದೊಡ್ಡ ವ್ಯಕ್ತಿಯಾಗಬೇಕೆಂಬ ಹಂಬಲ ತಂದೆ ತಾಯಿಯದು. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ಮಗನಿಗೋ ನಾಟಕದ ಗೀಳು ಸೇರಿಬಿಡುತ್ತದೆ. ನಾಟಕದ ಹುಚ್ಚಿನಿಂದಾಗಿ ೧೦ನೇ ತರಗತಿಯನ್ನೂ ಪಾಸು ಮಾಡದ ಶಿವಕುಮಾರನನ್ನು ಅವನ ಗೀಳಿಗೆ ಮಣಿದು ಕೊನೆಗೆ ತಂದೆ ತಾಯಿಯೇ ನಾಟಕ ರಂಗಕ್ಕೆ ಅರ್ಪಿಸಿಬಿಡುತ್ತಾರೆ. ಅದು ಅನಿವಾರ್ಯವೂ ಆಗಿಬಿಡುವ ಪರಿಸ್ಥಿತಿ ಅಥವಾ ದುಸ್ಥಿತಿಯೆಂದರೂ ತಪ್ಪಲ್ಲ. ಹೊಲಮನೆ ಕಡೆ ನೋಡದ ಶೋಕಿಲಾಲ ಶಿವಕುಮಾರ ನಾಟಕದ ಸಹಪಾತ್ರಧಾರಿ ಶಾರದಳ ಮೇಲೆ ಅನುರಕ್ತನಾಗುತ್ತಾನೆ. ಅದಕ್ಕೂ ತಂದೆ ತಾಯಿ ಅಸ್ತು ಎನ್ನುತ್ತಾರೆ. ಆದರೆ ಶಾರದ ಮೊದಲ ಹೆರಿಗೆಯಲ್ಲಿಯೇ ನಿಧನಳಾಗುತ್ತಾಳೆ. ಮಗುವೂ ಅಸುನೀಗುತ್ತದೆ. ಅಲ್ಲಿಯವರೆಗೂ ಹದ್ದುಬಸ್ತಿನಲ್ಲಿದ್ದ ಶಿವಕುಮಾರ, ಹೆಂಡತಿಯ ಸಾವಿನ ದು:ಖದಲ್ಲಿ ಎಲ್ಲ ಚಟಗಳ ದಾಸನಾಗುತ್ತಾನೆ. ಚಟಗಳು ಬೆಳೆದಂತೆ ಹಣದ ಅವಶ್ಯಕತೆಯೂ ಹೆಚ್ಚುತ್ತದೆ. ಅದಕ್ಕೆ ತಕ್ಕಂತೆ ಹಣಕ್ಕಾಗಿ ಪರದಾಟ ಆರಂಭವಾಗುತ್ತದೆ. ತಾಯಿಯೂ ನಿಧನಳಾಗುತ್ತಾಳೆ. ಪರಿಸ್ಥಿತಿಯ ಲಾಭ ಪಡೆದ ಗ್ರಾಮದ ಜಮದಗ್ನಿಗೌಡ, ಶಾನುಭೋಗ ಹನುಮಂತರಾಯ ಶಿವಕುಮಾರನಿಗೆ ಸಾಲ ಕೊಟ್ಟು ಸಾಲದ ಶೂಲದಲ್ಲಿ ನೂಕುತ್ತಾರೆ. ಇದನ್ನರಿತ ತಂದೆ ಬಾಳಪ್ಪ, ನಾಟಕ ಕಂಪನಿಯ ಮಾಲಿಕರು ಸೇರಿ ಶಿವಕುಮಾರನಿಗೆ ಮತ್ತೊಂದು ಮದುವೆ ಮಾಡುತ್ತಾರೆ. ಆಕೆಯೇ ಭೂತಾಯವ್ವ. ಹೊಲದ ಬಗ್ಗೆ, ಮಣ್ಣಿನ ಬಗ್ಗೆ ಅತೀವ ಪ್ರೀತಿ, ಗೌರವ ಇಟ್ಟುಕೊಂಡಿದ್ದ ಭೂತಾಯವ್ವ ಕಷ್ಟಪಡುವ ಹೆಣ್ಣುಮಗಳು. ಯಾವ ಗಂಡಸಿಗೂ ಕಡಿಮೆಯಿಲ್ಲದಂತೆ ಹೊಲದಲ್ಲಿ ದುಡಿವವಳು. ಆದರೆ ಪತಿರಾಯ ಶಿವಕುಮಾರ ಗೌಡ, ಶಾನುಭೋಗನ ಮಾತಿಗೆ ಮರುಳಾಗಿ ಹಣದಾಸೆಗೆ ತನ್ನ ೧೦ ಎಕರೆ ಹೊಲದಲ್ಲಿ ೪ ಎಕರೆ ಹೊಲವನ್ನು ಮಾರುತ್ತಾನೆ. ಇದನ್ನು ತಿಳಿದ ಭೂತಾಯವ್ವ ರಣಚಂಡಿಯಾಗುತ್ತಾಳೆ. ಈ ಸಂದರ್ಭದಲ್ಲಿ ಗಂಡ ಶಿವಕುಮಾರ ಅಸಹಾಯಕ, ದುರ್ಬಲ ಪ್ರಾಣಿಯಂತೆಯೇ ಕಾಣುತ್ತಾನೆ. ಮಗನ ಹಣೆಬರಹ ಗೊತ್ತಿದ್ದ ತಂದೆ ಬಾಳಪ್ಪ ೬ ಎಕರೆ ಹೊಲವನ್ನು ತನ್ನ ಸೊಸೆ ಭೂತಾಯವ್ವನ ಹೆಸರಿನಿಂದ ಮಾಡುವಂತೆ ಶಾನುಭೋಗನಿಗೆ ತಿಳಿಸಿರುತ್ತಾನೆ. ಆದರೆ ನರಿಬುದ್ಧಿಯ ಶಾನುಭೋಗ ಅದನ್ನು ನೋಂದಣಿ ಮಾಡಿಸದೇ ಹಾಗೇ ಇಟ್ಟು ಪಹಣಿ ಮಾತ್ರ ಭೂತಾಯವ್ವನ ಹೆಸರಿನಿಂದ ಕೊಡುತ್ತಿರುತ್ತಾನೆ. ಕೊನೆ ಕೊನೆಗೆ ಶಿವಕುಮಾರ ತಾನು ಮೋಸ ಹೋಗಿದ್ದು ತಿಳಿದು ಪ್ರಾಮಾಣಿಕವಾಗಿ ನಾಟಕ ರಂಗದಲ್ಲಿಯೇ ದುಡಿಯತೊಡಗುತ್ತಾನೆ. ಕೊನೆಗೆ ನಾಟಕದ ಸಂದರ್ಭದಲ್ಲಿಯೇ ಅಸುನೀಗುತ್ತಾನೆ. ಇದನ್ನರಿತ ಚಾಣಾಕ್ಷ ಗೌಡ, ಶಾನುಭೋಗ ೬ ಎಕರೆ ಹೊಲವನ್ನು ಶಿವಕುಮಾರನ ಫೋರ್ಜರಿ ಸಹಿಯೊಂದಿಗೆ ತಮ್ಮದಾಗಿಸಿಕೊಳ್ಳುತ್ತಾರೆ. ಈ ಭಾಗದಿಂದ ವಿಧವೆಯಾದ ಭೂತಾಯವ್ವನ ಆಕ್ರೋಶ, ರೋಷ, ಛಲ, ಹಟಮಾರಿತನ, ಜಿಗುಟುತನಗಳು ಪ್ರಕಟಗೊಳ್ಳುತ್ತವೆ. ತನಗಾದ ಅನ್ಯಾಯಕ್ಕಾಗಿ ತನ್ನ ಇಬ್ಬರು ಮಕ್ಕಳೊಂದಿಗೆ ಹೋರಾಟಕ್ಕೆ ತೊಡಗುತ್ತಾಳೆ. ಒಬ್ಬಂಟಿಗಳಾಗಿ ವ್ಯವಸ್ಥೆಯ ವಿರುದ್ಧ ಹೋರಾಡುವುದು ಅಷ್ಟು ಸುಲಭದ ಮಾತಲ್ಲ. ಕೊನೆಗೆ ಭೂತಾಯವ್ವನ ಮನೆಯನ್ನು ಕಸಿದುಕೊಂಡು ಊರನ್ನೇ ಬಿಡಿಸುತ್ತಾರೆ ಗೌಡ, ಶಾನುಭೋಗರು. ಹೂವಿನ ಹಡಗಲಿ ಪಟ್ಟಣ ಸೇರುವ ಭೂತಾಯವ್ವ ತನಗಾದ ಮೋಸ, ಅನ್ಯಾಯಕ್ಕಾಗಿ ಅಧಿಕಾರಿಗಳ ಬಳಿ ಅಲೆದಾಡುತ್ತಾಳೆ. ಕೂಲಿಯಿಂದ ಬಂದ ಹಣದಲ್ಲಿ ಸಂಸಾರ ನಿರ್ವಹಿಸುತ್ತಾಳೆ. ವಕೀಲರ ಬಳಿ ಅಲವತ್ತುಗೊಳ್ಳುತ್ತಾಳೆ. ಜನಪ್ರತಿನಿಧಿಗಳ ಬಳಿ, ಸಚಿವರ ಬಳಿಯೂ ಮನವಿ ಮಾಡುತ್ತಾಳೆ. ಆದರೆ ಎಲ್ಲರೂ ಈಕೆಯನ್ನು ಹುಚ್ಚಿ ಎಂದೇ ಪರಿಗಣಿಸುತ್ತಾರೆ. ತನ್ನ ೬ ಎಕರೆ ಹೊಲವನ್ನು ಪಡೆಯಲೇಬೇಕೆಂಬ ಛಲದಿಂದ ಕೊನೆಗೆ ಹೋರಾಟಗಾರರ, ಸಂಘಟನೆಗಳ ನೆರವಿನೊಂದಿಗೆ ನೇರ ನ್ಯಾಯಾಧೀಶರಿಗೆ ಮನವಿ ಸಲ್ಲಿಸುತ್ತಾಳೆ. ಇದ್ದ ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬಳು ಡೆಂಗೆ ಜ್ವರದಿಂದ ಸಾವಿಗೀಡಾರೆ, ಮತ್ತೊಬ್ಬಳು ಪ್ರೇಮಪ್ರಕರಣದಲ್ಲಿ ಸಿಲುಕಿ ದೂರದೂರಿನಲ್ಲಿ ನೆಲೆಸುತ್ತಾಳೆ. ಅಲ್ಲಿಂದ ಕಾದಂಬರಿ ತಿರುವು ಪಡೆದುಕೊಳ್ಳುತ್ತದೆ. ಅದುವರೆಗೂ ಭೂತಾಯವ್ವನ ಕಷ್ಟ, ಗೋಳು, ಅಳಲು, ಸಂಕಟಗಳಲ್ಲಿ ಮುಳುಗುವ ಓದುಗನಿಗೆ ಮುಂದೇನಾದೀತೋ ಎಂಬ ಕುತೂಹಲ ಮೂಡತೊಡಗುತ್ತದೆ. ನ್ಯಾಯಾಧೀಶರಿಂದ ಸರಿಯಾದ ನ್ಯಾಯನಿರ್ಣಯ ಭೂತಾಯವ್ವನಿಗೆ ದೊರೆಯುತ್ತದೆ. ಭೂತಾಯವ್ವನಿಗೆ ಜಮೀನು, ಗೌಡ ಶಾನುಭೋಗ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಆಗುತ್ತದೆ. ಆದರೆ ಭೂತಾಯವ್ವ ತನಗೆ ದೊರೆತ ಜಮೀನನ್ನು ತನ್ನ ಗ್ರಾಮದ ಶಾಲೆಗೇ ದಾನ ಮಾಡುತ್ತಾಳೇ. ತನಗಿನ್ನಾರು ಇಲ್ಲ, ನನಗಾಗಿ ಏನೂ ಬೇಡ ಎಂಬ ಭಾವದೊಂದಿಗೆ ತ್ಯಾಗಮಯಿಯಾಗಿ ತನ್ನ ಜಮೀನನ್ನು ಅರ್ಪಿಸಿ ನ್ಯಾಯಾಲಯದಲ್ಲಿಯೇ ಪ್ರಾಣಬಿಡುತ್ತಾಳೆ. ನಿಜವಾದ ಭೂತಾಯವ್ವ ಎಂದು ಎಲ್ಲರೂ ಪ್ರಶಂಸಿಸುತ್ತಾರೆ. 
            ಇಡೀ ಕಾದಂಬರಿಯಲ್ಲಿ ಅಪ್ಪಟ ಗ್ರಾಮೀಣ ಭಾಷೆಯ ಸಂಭಾಷಣೆ ಇದೆ. ಹಡಗಲಿಯ ಭಾಗದ ಗ್ರಾಮೀಣ ಭಾಷೆಯ ಸೊಗಡನ್ನು ಲೇಖಕರು ಬಳಸಿದ್ದಾರೆ. ಕಾದಂಬರಿಯಲ್ಲಿ ಗಾದೆಮಾತು, ನುಡಿಗಟ್ಟುಗಳನ್ನು ಧಾರಾಳವಾಗಿ ಬಳಸಲಾಗಿದೆ. ಮೊದಲ ೨ ಭಾಗಗಳನ್ನು ಹೊರತುಪಡಿಸಿದರೆ ಕಾದಂಬರಿಯ ಓಟಕ್ಕೆ ತೊಂದರೆಯೇನಿಲ್ಲ. ಇದು ಸತ್ಯಕತೆ ಎಂದು ಲೇಖಕರು ಹೇಳಿರುವರಾದರೂ ಎಲ್ಲಿಯೂ ಕಾದಂಬರಿ ನೀರಸವೆನಿಸುವುದಿಲ್ಲ. ಕಾದಂಬರಿಯ ಕಥಾನಕದ ಚೌಕಟ್ಟಿಗೆ ಸತ್ಯಕತೆಯನ್ನು ಒಗ್ಗಿಸಿಕೊಳ್ಳಲಾಗಿದೆ. ಸುತ್ತಲೂ ದಿನನಿತ್ಯ ನಡೆಯುವ ರೈತರ ಸಂಕಷ್ಟದ ಬದುಕು, ರಂಗಭೂಮಿ ಕಲಾವಿದರ ಬದುಕಿನ ಬವಣೆಯನ್ನು ಕಾದಂಬರಿ ಸಮರ್ಥವಾಗಿ ಹಿಡಿದಿಟ್ಟಿದೆ. ಸತ್ಯಕತೆಯೆಂಬ ಕಾರಣಕ್ಕಾಗಿಯೇನೋ ಎಂಬಂತೆ ಕಾದಂಬರಿಯಲ್ಲಿ ಕೆಲವೆಡೆ ಬರುವ ಪಾತ್ರಗಳು ಬದುಕಿನ ನಿಜವಾದ ಪಾತ್ರಗಳೇ ಆಗಿವೆ. ಉದಾಹರಣೆಗೆ ಹೋರಾಟ, ಜನಪರ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಪೀರಬಾಷ, ಶೇಷಗಿರಿರಾವ್, ಹಿರೇಮಠರುಗಳನ್ನು ಬಳಸಿಕೊಳ್ಳಲಾಗಿದೆ. ಅವರ ಪಾತ್ರಗಳು ಕತೆಗೆ ಪೂರಕವಾಗಿಯೂ ಇವೆ. ಹೂವಿನ ಹಡಗಲಿಯ ಕುರಿತು ಸಣ್ಣ ಟಿಪ್ಪಣಿಯೂ ಕಾದಂಬರಿಯಲ್ಲಿ ಮೂಡಿಬಂದಿದೆ. 
ಎನ್.ಎಂ.ಕೊಟ್ರೇಶ್ ಅವರಿಗೆ ಭಾಷೆಯನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಬಳಸುವ ಕಲೆಯೂ ಸಿದ್ಧಿಸಿದೆ. ಉದಾಹರಣೆಗೆ ಅದೆ ಹಡಗಲಿಯಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ ದೊಡ್ಡಮಠ ಎನ್ನುವ ನಾಮಧೇಯ ವ್ಯಕ್ತಿ ಕಮ್ಯುನಿಷ್ಟ್ ಮ್ಯಾನಿಫೆಸ್ಟೊವನ್ನು ಕೈಯಲ್ಲಿ ಹಿಡಿದುಕೊಂಡು ಇಲ್ಲಿಯ ಮಣ್ಣಿಗೆ ಕಾರಲ್ ಮಾರ್ಕ್ಸ್‌ನ ಸ್ಪರ್ಶ ನೀಡುವ ಹಂಬಲದಿಂದ ಉತ್ಸಾಹಿ ಯುವಕರನ್ನೆಲ್ಲ ಹುರಿದುಂಬಿಸಿ ಚಳುವಳಿಯಲ್ಲಿ ಧುಮುಕಿಸುತ್ತಿದ್ದರು. ತೇಟ್ ಒಮ್ಮೊಮೆ ಚ ಗುವೇರನಂತೆ ಇನ್ನೊಮ್ಮೆ ಫಿಡಲ್ ಕ್ಯಾಸ್ಟ್ರೊನಂತೆ ಮಾತನಾಡುತ್ತಿದ್ದ ಈತ ಓಚಿಮಿನ್ನಿನಂತೆ ಗಡ್ಡಬಿಟ್ಟು ಸದಾ ಖಾದಿ ತರಹದ ಬಣ್ಣದ ಜುಬ್ಬ ಪ್ಯಾಂಟು ತೊಟ್ಟು ಹಡಗಲಿ ತುಂಬ ಅವ್ವಿಲಿ, ಅಪ್ಪಿಲಿ, ಅಣ್ಣಿಲಿ, ತಮ್ಮಿಲಿ ಅಕ್ಕಿಲಿ, ಮರಿಯಿಲಿ, ಮುದಿಯಿಲಿ ಎಲ್ಲರನ್ನು ತನ್ನ ಕಮ್ಯುನಿಷ್ಟ್ ಪೀಪಿಯನ್ನು ಊದುತ್ತ ಹಿಂದೆ ಹಿಂದೆ ಎಳೆದುಕೊಂಡು ಕಿಂದರಿ ಜೋಗಿಯಂತೆ ಸುತ್ತಾಡುತ್ತಿದ್ದರು. 
                     ಇಡೀ ಕಾದಂಬರಿಯಲ್ಲಿ ಗ್ರಾಮೀಣ ಭಾಗದ ಸಂಭಾಷಣೆಯ ಸೊಗಡಿದ್ದರೆ, ಕೆಲವೆಡೆ ಮಾತ್ರ ಸಾಹಿತ್ಯಕವಾದ ವರ್ಣನೆಗಳು ಕಾಣಸಿಗುತ್ತವೆ. ಲೇಖಕರ ಕವಿತ್ವ ಇಲ್ಲಿ ಪ್ರಕಟಗೊಳ್ಳುತ್ತದೆ. ಉದಾ: ಸೂರ್ಯ ಮಾತ್ರ ಎಂದಿನ ದಿನನಿತ್ಯದ ಅರಳುವ ಮಂದಹಾಸದಂತೆಯೆ ಇಂದು ಸಹ ಅದೆ ನವ ನವೀನ ಎಳೆ ನಗೆಯನ್ನು ಹೊರಸೂಸುತ್ತ ಮೇಲೇರಿ ಬರುತ್ತಿದ್ದ. ಅವನಿಗೆ ಅವರು ಹೆಚ್ಚು, ಇವರು ಕಡಿಮೆ ಎನ್ನದೆ ಜಗತ್ತಿನ ಎಲ್ಲ ಚರಾಚರಗಳನ್ನು ಸಮಚಿತ್ತದಿಂದಲೆ ತನ್ನ್ನ ಹೊಂಬೆಳಕು ಚೆಲ್ಲುತ್ತಿದ್ದ. ಹಡಗಲಿಯ ಹೂತೋಟಗಳ ಬಗ್ಗೆಯೂ ಇದೇ ರೀತಿಯ ವರ್ಣನೆಗಳು ಕಾಣಸಿಗುತ್ತವೆ. ಅದೇ ರೀತಿಯಲ್ಲಿಯೇ ಪ್ರತಿಭಟನೆಯ ಕಾವನ್ನೂ ಎನ್.ಎಂ.ಕೊಟ್ರೇಶ್ ಅವರು ಸಮರ್ಥವಾಗಿ ಹಿಡಿದಿಡುತ್ತಾರೆ. ಭೂತಾಯವ್ವ ತನ್ನ ಹರಕು ಸೀರೆಯಲ್ಲಿ ಛಲವೆಂಬ ಪ್ರಖರವಾದ ಕೆಂಡದುಂಡೆಗಳನ್ನು ಕಟ್ಟಿಕೊಂಡು ಊರಿನಿಂದ ಹೊರಟಿದ್ದಳು. ಅಲ್ಲದೆ ತೆಳ್ಳನೆಯ ಬಡಕಲು ದೇಹಧಾರಿಯಾಗಿದ್ದರು ನೂರು ಮಂದಿ ಮೀಸೆ ಹೊತ್ತ ಗಂಡಸರ ವಿರುದ್ಧ ಏಕಕಾಲದಲ್ಲಿ ಸೆಣಸುವ ಛಲೋನ್ಮತ್ತ ಆತ್ಮವಿಶ್ವಾಸ ಉಳ್ಳ ಹೆಂಗಸಾಗಿದ್ದಳು ಭೂತಾಯವ್ವ ಎಂಬ ವಾಕ್ಯಗಳು ಪ್ರತಿಭಟನೆಯನ್ನು ಧ್ವನಿಸುತ್ತವೆ.
                    ಪುರುಷ ಪ್ರಧಾನ ಸಮಾಜದಲ್ಲಿ ಒಂಟಿ ಮಹಿಳೆ ಹೋರಾಡುವುದು ಸುಲಭವಲ್ಲ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ದಬ್ಬಾಳಿಕೆ, ದೌರ್ಜನ್ಯ, ಶೋಷಣೆ ನಿರಂತರವಾಗಿ ಶತಶತಮಾನಗಳಿಂದ ನಡೆಯುತ್ತಲೇ ಬಂದಿದೆ. ಹೆಣ್ಣಿನ ಭಾವನೆ, ವಿಚಾರಗಳಿಗೆ ಎಂದೂ ಆಸ್ಪದ ಕೊಡದ ಪುರುಷರ ಅಹಮಿಕೆಗೆ ಪೆಟ್ಟು ಕೊಡುವುದು ವ್ಯವಸ್ಥೆಯಲ್ಲಿ ಬಹಳ ಕಷ್ಟವಾದುದು. ಹೆಣ್ಣಿನ ಅಸಹಾಯಕತೆ, ತಾಳ್ಮೆ, ದುರ್ಬಲತೆಗಳನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ಪುರುಷರು ನಿರಂತರವಾಗಿ ಎಲ್ಲ ರೀತಿಯಿಂದಲೂ ಶೋಷಿಸುತ್ತಲೇ ಬಂದಿದ್ದಾರೆ. ಆಧುನೀಕರಣಗೊಂಡಿರುವ ನಗರ, ಪಟ್ಟಣ ಪ್ರದೇಶಗಳಲ್ಲಿ ಮಹಿಳೆಯರ ಮೇಲೆ ಒಂದು ರೀತಿಯ ದೌರ್ಜನ್ಯ ನಡೆದರೆ, ಗ್ರಾಮೀಣ ಭಾಗದಲ್ಲಿ ಮತ್ತೊಂದು ರೀತಿ. ಮಹಿಳೆ ಎಲ್ಲ ರಂಗದಲ್ಲೂ ಮುಂದೆ ಬರಬೇಕೆನ್ನುವ ಸಮಾಜ ಸದಾಕಾಲ ಹೆಣ್ಣಿಗೆ ಕಂದಾಚಾರ, ಸಂಪ್ರದಾಯಗಳ ಬೇಡಿಯನ್ನು ಆಕೆಯ ಕಾಲಿಗೆ ತೊಡಿಸಿಯೇ ಮಾತನಾಡುತ್ತದೆ. ಗ್ರಾಮಗಳಲ್ಲಿ ಇಡೀ ವ್ಯವಸ್ಥೆಯೇ ಹೆಣ್ಣನ್ನು ಹದ್ದುಬಸ್ತಿನಲ್ಲಿಡುವ ರೀತಿಯಲ್ಲಿರುತ್ತದೆ. ಹೀಗಾಗಿಯೇ ಭೂತಾಯಿ ಕಾದಂಬರಿಯಲ್ಲಿ ಭೂತಾಯವ್ವನ ಹೋರಾಟಕ್ಕೆ ಗ್ರಾಮದ ಜನತೆ ಬೆಂಬಲಿಸದೇ ಮೂಕ ಪ್ರೇಕ್ಷಕರಾಗಿರುತ್ತಾರೆ. ಕಾದಂಬರಿಯಲ್ಲಿ ಭೂತಾಯವ್ವನಿಗೆ ತನಗಾದ ಅನ್ಯಾಯ, ನ್ಯಾಯ ಒದಗಿಸದ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಆಕ್ರೋಶವಿದೆ, ಛಲವಿದೆ. ಆದರೆ ಅದನ್ನು ನ್ಯಾಯಯುತವಾಗಿಯೇ ಪಡೆಯುವೆನೆಂಬ ತಾಳ್ಮೆಯೂ ಎಚ್ಚರಿಕೆಯೂ ಇದೆ. ಹೀಗಾಗಿ ಗೌಡ, ಶಾನುಭೋಗರ ವಿರುದ್ಧ ಹೋರಾಡಲು ನ್ಯಾಯದ ಮಾರ್ಗವನ್ನೇ ಭೂತಾಯವ್ವ ಕಂಡುಕೊಳ್ಳುತಾಳೆಯೇ ಹೊರತು ಹಿಂಸಾತ್ಮಕ ಮಾರ್ಗವನ್ನಲ್ಲ. ಕಾದಂಬರಿ ಓದುತ್ತ ಹೋದಂತೆ ಭೂತಾಯವ್ವ ತನಗಾದ ನೋವು, ನಿರಾಶೆ, ಅನ್ಯಾಯಗಳಿಂದ ನೊಂದು ಎಲ್ಲಿ ಹಿಂಸಾತ್ಮಕ ಮಾರ್ಗ ಹಿಡಿಯುತ್ತಾಳೋ ಎನಿಸುತ್ತದೆ. ಆದರೆ ಭೂತಾಯವ್ವನ ಒಡಲಲ್ಲಿ ಬೆಂಕಿ ಇದ್ದರೂ ಅದು ನ್ಯಾಯದ ಸಂಯಮ ಮಾರ್ಗದಲ್ಲಿಯೇ ಇರುತ್ತದೆ ಎಂಬುದು ಗಮನಾರ್ಹ.
      ಕಾದಂಬರಿಯಲ್ಲಿ ಅಲ್ಲಲ್ಲಿ ಮುದ್ರಣ ದೋಷಗಳೂ ನುಸುಳಿವೆ. ಪುಟಗಳ ಸಂಖ್ಯೆ ಹೆಚ್ಚಾಗಬಾರದೆಂದೋ ಏನೋ ಅಕ್ಷರಗಳೂ ಚಿಕ್ಕದಾಗಿವೆ. ಒಟ್ಟಾರೆ ಕಾದಂಬರಿಯನ್ನು ಓದುತ್ತ ಹೋದಂತೆ ಇವೆಲ್ಲ ಗೌಣವಾಗಿ ಕಥಾಹಂದರ ಮಾತ್ರ ಕಣ್ಮುಂದೆ ಕಟ್ಟಿಕೊಳ್ಳುತ್ತದೆ. ಈ ದಿಸೆಯಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಭೂತಾಯಿ ವಿಶಿಷ್ಟವಾದ ಕೊಡುಗೆಯಾಗಿದೆ. 

No comments:

Post a Comment