Monday, April 21, 2014

ಆಪರೇಷನ್ ಮಂಕಿ ಎಂಬ ಕಾರ್ಯಾಚರಣೆ


                          ಅರೆ ನಜೀರ್ ರಸ್ಸೀಕೊ ಸಹಿ ಪಕಡ್, ನಹಿತೊ ಉಸ್‌ಕೊ ಶಕ್ ಆಯೇಗಾ ಎಂಬ ಮಾತುಗಳು ಬೃಹದಾಕಾರದ ಮರದ ಕೆಳಗಿನಿಂದ ಕೇಳಿಬಂದವು. ಮಾರ್ಕೆಟ್‌ನಿಂದ ಮರಳಿ ಬರುವಾಗ ಮಾರ್ಗದಲ್ಲಿ ಪಂಜರಗಳು, ೪-೫ ಜನ ಕೆಲಸಗಾರರು, ಅವರನ್ನು ನಿಯಂತ್ರಿಸುತ್ತಿರುವ ಕೆಂಪು ಗಡ್ಡ, ತಲೆಯ ವ್ಯಕ್ತಿಯೊಬ್ಬರನ್ನು ನೋಡಿದೊಡನೆ ನನ್ನ ಕುತೂಹಲ ಹೆಚ್ಚಾಯಿತು. ಇಲ್ಲಿ ಏನೋ ನಡೆದಿದೆ ಎಂದು ಮೆಲ್ಲನೆ ಅವರ ಬಳಿ ಸಾಗಿದೆ. 
                                         ಕೂಡ್ಲಿಗಿ ಪಟ್ಟಣದಲ್ಲಿ ಇತ್ತೀಚೆಗೆ ಮಂಗಗಳ ಹಾವಳಿ ವಿಪರೀತವಾಗಿದ್ದುದರಿಂದ ಪಟ್ಟಣ ಪಂಚಾಯ್ತಿ ವತಿಯಿಂದ ಮಂಗಗಳನ್ನು ಹಿಡಿಯುವ ಅನುಭವಿಗಳನ್ನು ದೂರದ ಮಹಾರಾಷ್ಟ್ರದ ಮೀರಜ್‌ನಿಂದ ಕರೆಸಲಾಗಿತ್ತು. ಪಟ್ಟಣದಲ್ಲಿನ ಮಂಗಗಳನ್ನೆಲ್ಲ ಹಿಡಿದು ಬೇರೆಡೆ ಸಾಗಿಸುವ ಜವಾಬ್ದಾರಿ ಅವರದು. ಗುಂಪಿನ ನಾಯಕನ ಹೆಸರು ಶಬ್ಬೀರ್ ಹನೀಫ್ ಶೇಖ್. ಇಂತಹ ಗುಂಪು ಮರಗಳ ಮೇಲಿನ ಮಂಗಗಳನ್ನು ಉಪಾಯವಾಗಿ ಪಂಜರದಲ್ಲಿ ಹಿಡಿಯುತ್ತಿರುವ ಅಪರೂಪದ ದೃಶ್ಯ ಕಂಡುಬಂದಿತು. ಮೊದಲೇ ಚಂಚಲ ಸ್ವಭಾವದ ಮಂಗಗಳು ಇವರ ಬಲೆಗೆ ಹೇಗೆ ಬಿದ್ದಾವು ಎಂಬ ಕುತೂಹಲ ಹಾಗೂ ಆಶ್ಚರ್ಯ. ತಡೆಯಲಾರದೆ ಕೆಂಪುಗಡ್ಡದ ಲೀಡರ್‌ನ್ನು ಕೇಳಿಯೇಬಿಟ್ಟೆ. ಸಾಬ್ ಇವ್ರು(ಮಂಗಗಳು) ಇದಾರಲ್ಲ, ಭಾಳ ಹುಶಾರಾಗಿರ್ತಾರೆ. ಅವ್ರನ್ನ ಹಿಡೀಲಿಕ್ಕೆ ಭಾಳಾ ಯೋಚ್ನೆ ಮಾಡ್ಬೇಕು ಎಂದ. ಅಲ್ಲದೆ ಮತ್ತೊಂದು ವಿಶೇಷವನ್ನು ಶಬ್ಬೀರ್ ತಿಳಿಸಿದ್ದೇನೆಂದರೆ, ಬೆಳಿಗ್ಗೆ, ಸಾಯಂಕಾಲ ಅವ್ರು ಓಡಾಡ್ತಾರೆ, ಮಧ್ಯಾಹ್ನ ನಿದ್ದಿ ಮಾಡ್ತಾರೆ, ಆವಾಗ ಅವ್ರು ಸಿಗಲ್ಲ ಎಂದದ್ದು. ಅದಾವ ಮಾಯಾಮಂತ್ರ ಮಾಡುತ್ತಾನೋ ಈತ ಎಂದು ನೋಡತೊಡಗಿದೆ. ಮರಗಳ ಮೇಲಿನ ಮಂಗಗಳಲ್ಲಿ ನಾಯಕ ಮಂಗವೇ ಇವರ ಮೊದಲ ಗುರಿ. ಅದು ಬಂದರೆ ಉಳಿದೆಲ್ಲ ಬರುತ್ತವೆ ಎಂಬ ಟೆಕ್ನಿಕ್ ಇವರದು.
                                    ಮಂಗಗಳು ಇರುವ ಮರಗಳ ಕೆಳಗೆ ತಂತಿ ಜಾಲರಿ ಇರುವ ಪಂಜರಗಳ ಬಾಗಿಲನ್ನು ತೆರೆದು ಇರಿಸಲಾಗುತ್ತದೆ. ಪಂಜರದ ಮುಂದೆ ಒಳಗೆಲ್ಲ ಮಂಗಗಳಿಗೆ ಇಷ್ಟವಾಗುವ ಬಾಳೆಹಣ್ಣು, ಶೇಂಗಾಗಳನ್ನು ಚೆಲ್ಲಲಾಗುತ್ತದೆ. ಬಾಗಿಲ ಹಗ್ಗವನ್ನು ಹಿಡಿದು ಒಬ್ಬ ದೂರದಲ್ಲಿ ಅನುಮಾನ ಬರದಂತೆ ಕುಳಿತಿರುತ್ತಾನೆ. ಮೊದಲಿಗೆ ಮಂಗಗಳು ಪಂಜರದ ಒಳಗೆಲ್ಲ ಓಡಾಡಿ ಹಣ್ಣುಗಳು, ಶೇಂಗಾ ಇತರ ತಿನಿಸುಗಳನ್ನು ನಿರ್ಭಯವಾಗಿ ತೆಗೆದುಕೊಂಡು ಹೋಗಲು ಬಿಡಲಾಗುತ್ತದೆ. ಇದರಿಂದ ಅವುಗಳಿಗೆ ಇಲ್ಲಿ ಯಾವ ಅಪಾಯವೂ ಇಲ್ಲ ಎಂಬ ನಂಬಿಕೆ ಬರುತ್ತದೆ. ಹೀಗೆ ನಂಬಿಕೆ ಬಂದ ಹಲವಾರು ಮಂಗಗಳು ಪಂಜರದೊಳಗೆ ಬಂದೊಡನೆ ಹಗ್ಗ ಹಿಡಿದವನು ಬಾಗಿಲು ಜಗ್ಗುತ್ತಾನೆ. ಒಳಗೆ ಬಂದ ಮಂಗಗಳನ್ನು ಉಪಾಯವಾಗಿ ಅದಕ್ಕೆ ಜೋಡಿಸಿದ ಮತ್ತೊಂದು ಪಂಜರದೊಳಗೆ ಕೂಡಿಹಾಕಲಾಗುತ್ತದೆ. ಮತ್ತೆ ಮೊದಲಿನ ಪಂಜರವನ್ನು ಬಾಗಿಲು ತೆಗೆದು ಸಿದ್ಧಪಡಿಸಲಾಗುತ್ತದೆ. ಎಲ್ಲ ಮಂಗಗಳೂ ಪಂಜರದೊಳಗೆ ಬಂದು ಬೀಳುವವರೆಗೆ ಇದು ಪುನರಾವರ್ತನೆಯಾಗುತ್ತದೆ. ಎಲ್ಲ ಸುಲಭದ ಕೆಲಸವಲ್ಲ ಎಂದು ನನಗನ್ನಿಸಿತು. ಹಾಗಂತ ಶಬ್ಬೀರ್‌ರನ್ನು ಕೇಳಿದೆ. ಅವರು ನಕ್ಕು, ಇವ್ರು ಮೊದ್ಲಿಗೆ ಬೀಳೋದು ಸುಲಭ ಅನ್ಸುತ್ತೆ ಸಾಬ್, ಇನ್‌ಮೇಲೆ ನೋಡಿ, ಅನುಮಾನ ಬಂದು ಒಬ್ರೂ ಬರೋದಿಲ್ಲ ಎಂದ. ಏನಾಶ್ಚರ್ಯ, ಶಬ್ಬೀರ್ ಹೇಳಿದಂತೆ ಕೆಲವು ಅನುಮಾನ ಬಂದ ಮಂಗಗಳು ಕೆಳಗಿಳಿಯಲೇ ಇಲ್ಲ. ಇದು ನಮ್ಗೆ ಸವಾಲ್ ಸಾಬ್, ನಮ್ ಕಷ್ಟ್ ಎಲ್ಲ ಈಗೈತೆ ನೋಡಿ ಎಂದು ಶಬ್ಬೀರ್ ಹೇಳಿದರು. ಬೆಳಿಗ್ಗೆ ೧೦ಕ್ಕೆ ಶುರುವಾದ ಇವರ ಕಾರ್ಯಾಚರಣೆ ಸಂಜೆಯವರೆಗೆ ಮುಂದುವರೆದಿತ್ತು. ಬೆಳಿಗ್ಗೆ ಅತ್ಯಂತ ವೇಗವಾಗಿ ಬಂದು ಬಲೆಗೆ ಬಿದ್ದ ಮಂಗಗಳು ಬರುಬರುತ್ತ ಹಿಡಿಯುವುದೇ ಕಷ್ಟವಾಗತೊಡಗಿತು. ಛಲ ಬಿಡದ ತ್ರಿವಿಕ್ರಮನಂತೆ ಶಬ್ಬೀರ್ ಸಂಜೆಯವರೆಗೆ ಶ್ರಮವಹಿಸಿ ಸುಮಾರು ೩೦ ಮಂಗಗಳನ್ನು ಹಿಡಿದರು. 
                                      
                          ಹಿಡಿದ ಮಂಗಗಳನ್ನು ಏನು ಮಾಡುವಿರೆಂದು ಶಬ್ಬೀರ್‌ನನ್ನು ಕೇಳಿದೆ. ಅಲ್ಲಾನ ಆಣೆಯಾಗಿ ಹಿಡ್ದಿರೋ ಇವ್ರನ್ನ ಲಕ್ಷ ರೂ.ಗಳ್ನ ಕೊಟ್ರೂ ಮಾರಾಟ ಮಾಡೋದಿಲ್ಲ ಸಾಬ್, ಅವ್ರಿಂದ ನಮ್ ಹೊಟ್ಟೆ ತುಂಬ್ತೈತೆ, ಅವ್ರಿಗೆ ಅನ್ಯಾಯ ಆದ್ರೆ ಅಲ್ಲಾ ಮೆಚ್ತಾನಾ? ಅವ್ರನ್ನ ಹಂಪಿ ಹತ್ರ ಕಾಡೈತಲ್ಲಾ ಅಲ್ಲಿ ಬಿಟ್ಟು ಬರ್ತೇವೆ ಸಾಬ್. ಅಲ್ಲಿ ಅವ್ರು ಆರಾಮಾಗಿ ಇರ್ತಾರೆ ಎಂದು ಶಬ್ಬೀರ್ ಹೇಳಿದರು. ಪಂಜರದಲ್ಲಿ ಬಂದಿಯಾದ ಮಂಗಗಳನ್ನು ಪಟ್ಟಣ ಪಂಚಾಯ್ತಿಯ ಟ್ರ್ಯಾಕ್ಟರ್‌ನಲ್ಲಿ ಒಯ್ಯಲಾಯಿತು. ಮರುದಿನ ಶಬ್ಬೀರ್ ಮತ್ತು ಅವರ ತಂಡ ಪಟ್ಟಣದ ಬೇರೊಂದೆಡೆ ದಟ್ಟವಾದ ಮರಗಳಿದ್ದಲ್ಲಿ ಇರುವ ಮಂಗಗಳಿಗಾಗಿ ಪಂಜರ ಸಿದ್ಧಪಡಿಸಿ ಕುಳಿತಿರುವುದು ಕಂಡುಬಂದಿತು. ಈ ಪ್ರಕ್ರಿಯೆ ನಿರಂತರವಾಗಿ ೪ ದಿನಗಳವರೆಗೆ ನಡೆಯಿತು. ಶಬ್ಬೀರ್‌ನದು ಇದೇ ಕಾಯಕ ಎಂದು ತಿಳೀದುಬಂದಿತು. ರಾಜ್ಯದಾದ್ಯಂತವಲ್ಲದೆ ಹೊರರಾಜ್ಯಗಳಲ್ಲೂ ಮಂಗಗಳನ್ನು ಹಿಡಿಯುವ ಅಧಿಕೃತ ಎಕ್ಸ್‌ಪರ್ಟ್ ಎಂದೇ ಖ್ಯಾತರಾಗಿರುವ ಶಬ್ಬೀರ್ ಒಂದು ಮಂಗ ಹಿಡಿಯಲು ೩೦೦ ರೂ.ಗಳ ಶುಲ್ಕ ಪಡೆಯುತ್ತಾರೆ. ಪುರಸಭೆ, ಹೊಲಗಳ ರೈತರು ಕರೆ ಕಳಿಸಿದಲ್ಲಿ ಮಾತ್ರ ಇವರು ಬಂದು ಮಂಗಗಳನ್ನು ಹಿಡಿಯುತ್ತಾರೆ.
                             ಹೊಟ್ಟೆ ಹೊರೆಯಲು ಎಷ್ಟೊಂದು ವಿಧದ ಪ್ರಾಮಾಣಿಕ ಮಾರ್ಗಗಳಿವೆಯಲ್ಲ ಎಂದೆನಿಸದೇ ಇರಲಿಲ್ಲ. ಎಲ್ಲೆಂದರಲ್ಲ ಜಿಗಿಯುವ ಮಂಗಗಳನ್ನೇನೋ ಹಣ ಕೊಟ್ಟು ಹಿಡಿಸಿ ದೂರ ಬಿಡುವ ವ್ಯವಸ್ಥೆ ಇದೆ ನಿಜ, ಆದರೆ ಮನುಷ್ಯನ ಮನಸ್ಸೆಂಬ ಮಂಗವನ್ನು ಹಿಡಿಯಲು ಯಾರಿಗೆ ಹೇಳುವುದು ಎಂದು ಯೋಚಿಸತೊಡಗಿದೆ.


No comments:

Post a Comment