Tuesday, March 11, 2014

ಸಾಸಿವೆ ತಂದವಳು-ಕೃತಿ ಪರಿಚಯ

                         ಮಾರಕ ಕಾಯಿಲೆಗಳೊಂದಿಗೆ ಹೋರಾಡಿ ದುರಂತ ಕತೆಯಾಗುವುದನ್ನು ಸಿನಿಮಾಗಳಲ್ಲಿ ನೋಡುತ್ತೇವೆ. ಅದು ಸಿನಿಮಾ ಯಶಸ್ವಿಯಾಗಲೆಂಬ ನಿರ್ದೇಶಕರ ಸೂತ್ರವೂ ಹೌದು. ಆದರೆ ಹಾಗೆ ಹೋರಾಡಿ ಯಶಸ್ಸು ಸಾಧಿಸಿದವರು ನಿತ್ಯ ಬದುಕಿನಲ್ಲಿದ್ದಾರಾದರೂ ಅವರು ಅದನ್ನು ಎಲ್ಲೂ ದಾಖಲಿಸುವುದು ಸಾಧ್ಯವಾಗುವುದಿಲ್ಲ. ದಾಖಲಾಗಲು ಅವರು ಮತ್ತಷ್ಟು ಶ್ರಮಪಡಬೇಕಾಗುವುದು. ಹೀಗಾಗಿ ಮಾರಕ ಕಾಯಿಲೆಯೊಂದಿಗೆ ಅಕ್ಷರಶ: ಬದುಕಿ ಅಕ್ಷರಗಳ ರೂಪದಲ್ಲಿ ದಾಖಲಾಗಿರುವುದು ವಿರಳವೆಂದೇ ಹೇಳಬಹುದು.
                      ಈ ರೀತಿಯಲ್ಲಿ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಯ ವಿರುದ್ಧ ಹೋರಾಡಿ ಅದರೊಂದಿಗೇ ಬದುಕನ್ನು ಹಂಚಿಕೊಂಡು ಅದಮ್ಯ ಉತ್ಸಾಹದಿಂದ ಹೊಸ ಜನ್ಮ ಪಡೆದವರು ಭಾರತಿ ಬಿ.ವಿ.ಯವರು. ಅವರ ಹೋರಾಟದ ಕೃತಿಯೇ ಸಾಸಿವೆ ತಂದವಳು. ಬುದ್ಧ ಸಾವಿಲ್ಲದ ಮನೆಯ ಸಾಸಿವೆ ತೆಗೆದುಕೊಂಡು ಬಾ ಎಂದು ದು:ಖತಪ್ತ ತಾಯಿಗೆ ಹೇಳಿದಂತೆಯೇ, ಭಾರತಿಯವರು ಸಾವಿನ ಕದ ತಟ್ಟಿ ಎದುರಿಸಿ, ಅಲ್ಲಿಂದಲೇ ಸಾಸಿವೆ ತಂದ ಕಥಾನಕ ಸಾಸಿವೆ ತಂದವಳು.
                         ಈ ಕೃತಿಯಲ್ಲಿ ಸಾವಿಗೆ ಸಮೀಪದ ಕ್ಯಾನ್ಸರ್‌ನೊಂದಿಗಿನ ಹೋರಾಟವಿದೆ, ಕಾಯಿಲೆಯನ್ನು ಲಘುವಾಗಿ ಪರಿಗಣಿಸಿ ಉತ್ಸಾಹ ಚಿಮ್ಮಿಸುವ ಆಶಾದಾಯಕ ಭಾವಗಳಿವೆ, ಕಾಯಿಲೆಯೊಂದಿಗೆ ಮಲಗಿದ್ದಾಗಲೂ ಹಾಸ್ಯಪ್ರಜ್ಞೆಯಿದೆ, ಆಸ್ಪತ್ರೆಗೆ ಹೋದಾಕ್ಷಣ ಉಂಟಾಗುವ ಆಧ್ಯಾತ್ಮದ ಹೊಳಹುಗಳಿವೆ, ಎಲ್ಲಕ್ಕೂ ಮಿಗಿಲಾಗಿ ಕಾಯಿಲೆಯ ಬಗ್ಗೆ ಸಂಪೂರ್ಣ ವಿವರಗಳಿವೆ. 
                        ಭಾರತಿಯವರು ಕ್ಯಾನ್ಸರ್ ಎಂದರೇನು, ಅದರ ಚಿಕಿತ್ಸೆ, ಚಿಕಿತ್ಸೆಯ ಹಂತಗಳು, ಒಬ್ಬ ರೋಗಿಯ ಮಾನಸಿಕ ತೊಳಲಾಟ ಎಲ್ಲವನ್ನೂ ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷವೆಂದರೆ, ಕೇವಲ ಕಾಯಿಲೆಯ ಬಗ್ಗೆಯೇ ಮಾಹಿತಿ ನೀಡುತ್ತ ಹೋದಲ್ಲಿ, ಅಥವಾ ತಮ್ಮ ನೋವನ್ನಷ್ಟೇ ಇಲ್ಲಿ ದಾಖಲಿಸಲು ಯತ್ನಿಸಿದ್ದಲ್ಲಿ ಓದುಗರಿಗೆ ಅಥವಾ ಸಹೃದಯರಿಗೆ ಅದೊಂದು ವರದಿಯಾಗುತ್ತಿತ್ತಷ್ಟೇ. ಆದರೆ ಲೇಖಕಿ ತಮ್ಮ ನೋವಿನಲ್ಲೂ ಸಹೃದಯರಿಗೆ ಕಾಯಿಲೆ, ರೋಗಿ, ತೊಳಲಾಟ ಎಲ್ಲವುಗಳನ್ನು ಹೇಳುತ್ತಲೇ ವರದಿಯಾಗದಂತೆ ಎಚ್ಚರವಹಿಸಿ, ಓದುವಿಕೆಯ ಓಘಕ್ಕೆ ತಡೆಯಾಗದಂತೆ ಅಲ್ಲಲ್ಲಿ ನವುರಾದ ಹಾಸ್ಯ ಪ್ರಸಂಗಗಳೊಂದಿಗೆ ಕೃತಿ ರಚಿಸಿರುವುದು ಅದ್ಭುತ. ಎಲ್ಲ ಇದ್ದೂ, ಏನೊಂದು ಇಲ್ಲದಂತೆ ಹಲುಬುವವರಿಗೆ, ಸಣ್ಣ ಪುಟ್ಟ ಕಾಯಿಲೆಗಳಿಗೂ ಭಯ ಬೀಳುವವರಿಗೆ ಸ್ಫೂರ್ತಿದಾಯಕ ಈ ಕೃತಿ. ಕ್ಯಾನ್ಸರ್‌ಪೀಡಿತರಿಗಂತೂ ಇದೊಂದು ಮನೋಬಲ ತುಂಬುವ ಕೈಪಿಡಿಯೆಂದೇ ಹೇಳಬಹುದು. 
                     ಕಾಯಿಲೆಯ ಸಂದರ್ಭದಲ್ಲಿ ಲೇಖಕಿಗೆ ಎಂತಹ ವಿಚಾರಗಳು ಅನುಭವವೇದ್ಯವಾಗುತ್ತವೆಂಬುದಕ್ಕೆ ಒಂದೊಂದು ಸಲ ಎಷ್ಟು ವರ್ಷ ಬದುಕಿರುತ್ತೇನೆ ಅಂತೆಲ್ಲ ಪ್ರಶ್ನೆ ಏಳುತ್ತದೆ. ಆಗ ನನಗೆ ನಾನೇ ಹೇಳಿಕೊಳ್ಳುತ್ತೇನೆ. ಯಾರಿಗೆ ಗೊತ್ತು ಹೇಳು ಎಲ್ಲಿಯವರೆಗೆ ಇರುತ್ತೇವೆ ಅಂತ? ನಿನಗೆ ಮಾತ್ರವಲ್ಲ, ಜಗತ್ತಿನ ಯಾವ ಖಾಯಿಲೆಯೂ ಇಲ್ಲದ ಅಪ್ಪಟ ಆರೋಗ್ಯವಂತನಿಗೆ ಕೂಡಾ ಈ ಪ್ರಶ್ನೆ ಹಾಕಿದರೆ ಅವನ ಉತ್ತರ ಗೊತ್ತಿಲ್ಲ ಅನ್ನುವುದೇ ಆಗಿರುತ್ತದಲ್ಲವೇ? ಬದುಕಿನ ಮೊಹಕತೆ ಮತ್ತು ಅರ್ಥ ಅಡಗಿರುವುದೇ ಈ ಅನಿಶ್ಚಿತತೆಯಲ್ಲಲ್ಲವೇ? ಅಂತ. ಯಾವ ಯಾವ ಜ್ಞಾನಿಗೂ ಸಾವು ಯಾವಾಗ ಅನ್ನುವುದು ಗೊತ್ತಿರೋದಿಲ್ಲ. ಹಾಗೆಯೇ ನನಗೂ ಕೂಡ... ಹಾಗಾಗಿ ನಾನು ಎಲ್ಲಿಯವರೆಗೆ ಬದುಕಿರುತ್ತೇನೋ ಅಲ್ಲಿಯವರೆಗೆ ಬದುಕಬೇಕು ಅಂತ ತೀರ್ಮಾನಿಸಿಬಿಟ್ಟಿದ್ದೇನೆ.......I want live my life till I am alive....
                                  ಕೃತಿ ಆರಂಭಗೊಳ್ಳುವುದು ಆಪರೇಷನ್ ಥಿಯೇಟರ್‌ನಿಂದ. ಅಲ್ಲಿ ಕ್ಯಾನ್ಸರ್ ಗಡ್ಡೆಯ ಶಸ್ತ್ರ ಚಿಕಿತ್ಸೆಯ ನಂತರ ತಮಗೆ ೪ನೇ ಬೆಡ್‌ನ ರೋಗಿ ಎಂಬ ಹೊಸ ನಾಮಧೇಯ ಬಂದಾಗಿನಿಂದ ತಮ್ಮ ಕಾಯಿಲೆಯ ಹಿಂದಿನ ಅನುಭವಗಳ ಸುರುಳಿಯನ್ನು ಬಿಚ್ಚಿಡುತ್ತ ಹೋಗುತ್ತಾರೆ. ಪ್ರತಿ ಕಾಯಿಲೆಗೂ ಭಯ ಬೀಳುವ ಮನೋಭಾವ ಹೊಂದಿದ ಲೇಖಕಿ, ಯಾವುದೇ ಕಾಯಿಲೆಯ ಬಗ್ಗೆ ಪತ್ರಿಕೆಯಲ್ಲಿ ಓದಿದರೂ ಅದು ತಮಗೇ ಬಂದಿದೆ ಎಂದು ಭೀತಿಗೊಳ್ಳುವ ಫೋಬಿಯಾ ಹೊಂದಿರುತ್ತಾರೆ. ವಿಚಿತ್ರವೆಂದರೆ ಕೆಮ್ಮು, ನೆಗಡಿಗೂ ಅಂಜುವ ಸ್ಥಿತಿಯಲ್ಲಿದ್ದ ಲೇಖಕಿ ಕ್ಯಾನ್ಸರ್ ವಿರುದ್ಧ ಹೋರಾಡಲು ಎಷ್ಟೊಂದು ಮಾನಸಿಕ ಸ್ಥೈರ್ಯವನ್ನು ಪಡೆದುಕೊಳ್ಳುತ್ತಾರೆಂದರೆ, ಶಸ್ತ್ರಚಿಕಿತ್ಸೆಯಾದ ನಂತರ ಕೆಲವೇ ದಿನಗಳಲ್ಲಿ ಗಾಯದ ಕೊಳಕು ಹರಿದುಹೋಗಲೆಂದು ಆಸ್ಪತ್ರೆಯವರು ದೇಹಕ್ಕೆ ಜೋಡಿಸಿದ್ದ ಪೈಪ್ ಮತ್ತು ಬಾಟಲಿಯನ್ನು ಹಿಡಿದುಕೊಂಡೇ ಆಟೊ ಹತ್ತಿ ಗೆಳತಿಯರ ಮನೆಗೆ ಹೋಗುತ್ತಾರೆಂದರೆ, ಅವರ ಮನೋಸ್ಥೈರ್ಯವನ್ನು ಊಹಿಸಿಕೊಳ್ಳಬಹುದು. ಅದಕ್ಕೆಂದೇ ಆಸ್ಪತ್ರೆಯ ನರ್ಸ್‌ಗಳು ಬಾಟಲ್ ಸಮೇತ ಆಟೊ ಹತ್ತಿ ಹೋದವರಾ? ಎಂದೆ ಇವರನ್ನು ಗುರುತಿಸುತ್ತಿದ್ದರಂತೆ. 
                         ಕ್ಯಾನ್ಸರ್ ಕಾಯಿಲೆಗೂ ಮುಂಚೆ ಸಣ್ಣ ಕಾಯಿಲೆಗಳಿಗೂ ಭಾರತಿಯವರು ಎಷ್ಟು ಗಾಬರಿಯಾಗುತ್ತಿದ್ದರೆಂದರೆ, ಅವರ ಪತಿಯ ಸಂಪಾದಿಸಿದ ದುಡ್ಡಲ್ಲಿ ಅರ್ಧದಷ್ಟು ಬರೀ ಡಾಕ್ಟರ್‌ಗಳಿಗೆ ಟೆಸ್ಟ್‌ಗಳಿಗೇ ಖರ್ಚಾಗುತ್ತಿತ್ತಂತೆ. ಅಷ್ಟೇ ಅಲ್ಲದೆ ಮುಂದೆ ನೋಡಿ ನಾನು ಸತ್ತು ಹೋದರೆ ನೀನು ಮತ್ತೆ ಮದುವೆ ಮಾಡಿಕೊಳ್ತೀಯಾ? ನನ್ನ ಮಗನ್ನ ಮಾತ್ರ ಚೆನ್ನಾಗಿ ನೋಡ್ಕೋ ಪ್ಲೀಸ್ ಎಂಬ ಮೆಲೋಡ್ರಾಮಾ ಸೀನ್‌ಗಳು ಬೇರೆ! ಒಂದು ದಿನ ರೋಸಿ ಹೋಗಿ ದಿನಾ ಸತ್ತೊಗೀನಿ, ಸತ್ತೋಗ್ತೀನಿ ಅಂತ ಹೆದರುತ್ತಾ ಬಾಳಿ ಅದೇನು ಸಾಧಿಸಿದ್ದೀಯಾ? ಈ ಥರ ಬಾಳೋದರ ಬದಲು ಸತ್ತು ಹೋಗೋದೇ ವಾಸಿ ಅಂದುಬಿಟ್ಟಿದ್ದ. ಅಂಥಾ ಚಿತ್ರಹಿಂಸೆ ಕೊಟ್ಟುಬಿಟ್ಟಿದ್ದೆ ಅವನಿಗೆ ಎಂದು ಹೇಳುತ್ತಾರೆ. 
                                    ವಿಧಿ, ಹಣೆಬರಹ ಅಂದರೇನು ಅಂತ ಲೇಖಕಿಗೆ ಕೇಳಿ ಹೇಳುತ್ತಾರೆ. ರೋಗ ಇಲ್ಲದಾಗ ಇದೆ, ಇದೆ ಅಂತ ಪರೀಕ್ಷೆ ಮಾಡಿಸಿಕೊಂಡ ನಾನು ಕ್ಯಾನ್ಸರ್ ನಿಜಕ್ಕೂ ನನ್ನೊಳಗೆ ಕಾಲಿಡುವಷ್ಟರಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದನ್ನೇ ಬಿಟ್ಟಿದ್ದೆ. ಇದನ್ನೇ ಇರಬೇಕು ಎಲ್ಲರು ವಿಧಿ, ಹಣೆಬರಹ ಅಂತೆಲ್ಲ ಕರೆಯುವುದು......
ಶಸ್ತ್ರ ಚಿಕಿತ್ಸೆಯ ನಂತರ ತಮ್ಮ ಚಿಕಿತ್ಸೆಯ ವಿವರವನ್ನು ಈ ರೀತಿ ಹೇಳುತ್ತಾರೆ  ನನಗೆ ೮ ಕೀಮೋ ಮತ್ತು ೩೩ ರೇಡಿಯೇಷನ್ ಬೇಕಿತ್ತು. ಕೀಮೋ ಪ್ರತಿ ೨೧ ದಿನಕ್ಕೊಂದು. ಅದಾದ ಮೇಲೆ ವಾರಕ್ಕೆ ೫ ದಿನದ ಹಾಗೆ ಆರೂವರೆ ವಾರ ರೇಡಿಯೇಷನ್! ಮನಸ್ಸು ಲೆಕ್ಕ ಹಾಕಿತು. ಅಂದರೆ ೧೬೮+೪೫ ಅಂದರೆ ೨೧೩ ದಿನಗಳು. ಅಂದರೆ ನೇರಾ ನೇರ ಬದುಕಿನ ೭ ತಿಂಗಳು. ಮಧ್ಯೆ ಮಧ್ಯೆ ಗ್ಯಾಪ್ ಎಲ್ಲ ಸೇರಿಸಿದರೆ ಹೆಚ್ಚೂ ಕಡಿಮೆ ೯ ತಿಂಗಳು. ೨೯ ದಿನಗಳ ಕಾಲ ಸ್ನಾನ ಮಾಡದ ಸ್ಥಿತಿಯನ್ನು ಹೇಳುವ ರೀತಿಯೆಂದರೆ, ಬದುಕಿನಲ್ಲಿ ನಮಗೆ ಯಾವುದರ ಬೆಲೆಯೂ ಇರುವಾಗ ಗೊತ್ತಾಗೋದೇ ಇಲ್ಲ. ಅದು ಇಲ್ಲದಾದಾಗಿನ ಕಾಲದಲ್ಲಿ, ಇದ್ದಾಗ ಎಷ್ಟು ಚೆಂದವಿತ್ತು ಅಂತ ಅನಿಸುತ್ತೆ. ಸ್ನಾನವೊಂದರ ಬೆಲೆ ಅವತ್ತು ಗೊತ್ತಾಯ್ತು. ಇಂತಹ ಮಾತುಗಳೇ ಓದುಗರನ್ನು ಹಿಡಿದಿಡುವುದು. 
                                   ಕೀಮೋ ಥೆರೆಪಿಯ ನೋವನ್ನು ಲೇಖಕಿ ಶಬ್ದಗಳ ರೂಪದಲ್ಲಿ ಹಿಡಿದಿಡಲು ಯತ್ನಿಸುತ್ತಾರೆ. ನಾನು ಹುಟ್ಟಿದಾಗಿನಿಂದ ಎಂದೂ ಅನುಭವಿಸದಂಥ ನೋವು ಅದು. ಈ ನೋವಿನ ಮುಂದೆ ಹೆರಿಗೆ ನೋವು ಏನೇನೂ ಅಲ್ಲ ಅನ್ನಿಸಿಬಿಟ್ಟಿತು. ಈ ನೋವು ದೇಹವನ್ನು ಚಪಾತಿ ಹಿಟ್ಟನ್ನು ಕಲೆಸಿದ ನಂತರ ನಾದುತ್ತೀವಲ್ಲ ಹಾಗೆ ನಾದಿಬಿಟ್ಟಿತು. ಇಂತಹ ಸ್ಥಿತಿಯಲ್ಲಿಯೇ ಮೂತ್ರವಿಸರ್ಜನೆಗೆ ಹೋಗಲೂ ಮನಸನ್ನು ಅರ್ಧಗಂಟೆ ಮೋಟಿವೇಟ್ ಮಾಡಿಕೊಳ್ಳಬೇಕು ಎಂದು ತಿಳಿಸುತ್ತಾರೆಂದರೆ ಕೀಮೋ ಥೆರೆಪಿಯಲ್ಲಿ ರೋಗಿಗಳು ಅನುಭವಿಸುವ ನೋವು ಎಂಥದ್ದೆಂದು ತಿಳಿಯಬಹುದು. ಕೀಮೋ ಥೆರೆಪಿಯಿಂದ ತಲೆಕೂದಲು, ಹುಬ್ಬು, ದೇಹದ ಎಲ್ಲ ಕೂದಲುಗಳೂ ಉದುರಿಹೋಗುವ ಹಿಂಸೆಯನ್ನು ಲೇಖಕಿ ವಿವರಿಸುತ್ತಾರೆ. ಹಾಗೆಯೇ ಅದನ್ನು ಎದುರಿಸಲು ತಮ್ಮಷ್ಟಕ್ಕೆ ತಾವೇ ಮನಸ್ಸನ್ನು ಬಲಗೊಳಿಸಿಕೊಂಡ ಪ್ರಸಂಗಗಳನ್ನೂ ಹೇಳುತ್ತಾರೆ.  ಕೀಮೋ ಥೆರೆಪಿಯಲ್ಲಿದ್ದಾಗ ಯಾವುದೇ ಸಾಂಕ್ರಾಮಿಕ ಕಾಯಿಲೆ ಬರದಂತೆ ಎಚ್ಚರವಹಿಸುವುದು ರೋಗಿಯ ಆದ್ಯ ಕರ್ತವ್ಯ. ಲೇಖಕಿ ಸುಮ್ಮನೆ ಕುಳಿತುಕೊಳ್ಳುವವರಲ್ಲವಲ್ಲ. ಹೀಗಾಗಿ ಮಾರ್ಕೆಟ್‌ಗೆ ಹೋದಾಗ ಮೂಗಿಗೆ ಮಾಸ್ಕ್ ರೀತಿಯಲ್ಲಿ ದುಪ್ಪಟ್ಟಾ ಹಾಕಿಕೊಂಡು ಹೋಗುತ್ತಿದರಂತೆ. ಯಾರಾದರೂ ಸೀನಿದರೆ, ಕೆಮ್ಮಿದರೆ ಬಾಂಬ್ ಸಿಡಿದವರಂತೆ ಅಲ್ಲಿಂದ ಓಡಿಹೋಗುತ್ತಿದ್ದರಂತೆ. 
                                   ಥೆರೆಪಿಯ ಸಂದರ್ಭದಲ್ಲಿ ತಮ್ಮ ತಲೆಕೂದಲು ಉದುರಿ ಉಳಿದವುಗಳನ್ನು ತೆಗೆಸಿದಾಗ ಉಂಟಾಗುವ ಭಾವವೆಂದರೆ ಸನ್ಯಾಸತ್ವ ಸ್ವೀಕರಿಸುವ ಮುಂಚೆ ಯಾಕೆ ತಲೆಯಲ್ಲಿನ ಕೂದಲನ್ನು ತೆಗೆಸುತ್ತಾರೆ ಅನ್ನೋದು ಕೂಡ ಅವತ್ತು ಅರ್ಥವಾದ ಹಾಗೆ ಅನ್ನಿಸಿತು. ನನ್ನಂಥ ಲೌಕಿಕ ಬದುಕಲ್ಲಿ ಮುಳುಗೇಳುವ ಹೆಣ್ಣಿಗೇ ಕಳೆದುಕೊಂಡ ಕೂದಲು ಇಷ್ಟೆಲ್ಲ ನಿರ್ಮೋಹತ್ವ ತರಬಹುದಾದರೆ, ಇನ್ನು ಸನ್ಯಾಸ ಅಪ್ಪಲು ಹೊರಟವರಿಗೆ? ಸುಮ್ಮನೆ ಕೂತ ಘಳಿಗೆಗಳಲ್ಲಿ ಏನೆಲ್ಲ ಜಿಜ್ಞಾಸೆಗಳು, ಜ್ಞಾನೋದಯಗಳು, ಸಾಕ್ಷಾತ್ಕಾರಗಳು.....! ಎಂದು ಒಂದೆಡೆ ಹೇಳಿದರೆ, ಕೂದಲನ್ನು ಕಳೆದುಕೊಂಡ ತಕ್ಷಣ ಅವತ್ತು ಯಾಕೋ ಎಲ್ಲ ಮೋಹ-ಬಂಧನ ಕಳೆದುಕೊಂಡ ಅನುಭವ ಮನಸ್ಸಿಗೆ. ಯಾವುದೂ ನನ್ನದಲ್ಲ. ಎಲ್ಲ... ಎಲ್ಲ ಕ್ಷಣಗಳು ಕಾಲಕ್ಕೆ ಸೇರಿದ್ದು. ಈ ಕ್ಷಣಗಳು ಕೂಡ ಕಾಲದ ಬುಟ್ಟಿಯಲ್ಲಿರುತ್ತವೆ. ನಮಗೆ ಅಂತ ಸುಮ್ಮನೆ ಒಂದು ಹಿಡಿ ಹಂಚುತ್ತದೆ. ಆಯಾ ದಿನಕ್ಕೆ ಬಂದ ಹಿಡಿಯಲ್ಲಿನ ಕ್ಷಣಗಳನ್ನು ಸುಖಪಟ್ಟು, ದು:ಖಿಸಿ ಬಿಟ್ಟು ಮುಗಿಸಬೇಕು ಅನ್ನಿಸುತ್ತದೆ. ಹೀಗೆ ತಮಗೆ ಅನಿಸಿದ್ದನ್ನು ನಿರಾತಂಕವಾಗಿ, ನಿರಾಳವಾಗಿ ಹೇಳಿಕೊಂಡು ಹೋಗುವುದರಿಂದಲೇ ಕೃತಿ ಆತ್ಮೀಯವೆನಿಸುತ್ತದೆ.
                             ನಾವೆಲ್ಲರೂ ನೆನಪಿಡಲೇಬೇಕಾದ ಒಂದು ಮಾತನ್ನು ಭಾರತಿ ಹೇಳುತ್ತಾರೆ ಮುಂಚೆ ನಾನು ಅಂದುಕೊಂಡಿದ್ದೆ ನಾನು ೧೦೦ ವರ್ಷಕ್ಕಿಂತ ಒಂದು ದಿನ ಮುಂಚೆ ಕೂಡ ಸಾಯುವುದಿಲ್ಲ ಅಂತ. ಹಾಗಾಗಿ ನನ್ನ ಪ್ಲ್ಯಾನ್‌ಗಳೆಲ್ಲ ಲಾಂಗ್ ಟರ್ಮ್‌ನವಾಗಿದ್ದವು. ಈಗ ಬದುಕು ನಾನು ಅಂದುಕೊಂಡಷ್ಟು ಉದ್ದವೂ ಇಲ್ಲ ಮತ್ತು ಗ್ಯಾರಂಟಿಯೂ ಇಲ್ಲ ಅನ್ನುವುದು ಗೊತ್ತಾಗಿಹೋಯಿತು.
                           ಮಾರಣಾಂತಿಕ ಕಾಯಿಲೆಪೀಡಿತರೊಂದಿಗೆ ಹೇಗೆ ವರ್ತಿಸಬೇಕೆಂಬುದನ್ನು ಲೇಖಕಿ ಮಾರ್ಮಿಕವಾಗಿ ಹೇಳುತ್ತಾರೆ. ಸಾಧಾರಣವಾಗಿ ಕ್ಯಾನ್ಸರ್ ಮಾತ್ರವಲ್ಲ, ಯಾವುದೇ ಮಾರಣಾಂತಿಕ ಖಾಯಿಲೆ ಅಥವ ತುಂಬ ಸೀರಿಯಸ್ ಆದ ಖಾಯಿಲೆ ಇರುವವರು ದು:ಖದಲ್ಲೇ ಇರುತ್ತೇವೆ ಮತ್ತು ಸದಾ ಬಳಬಳ ಅಳುತ್ತಲೇ ಇರುತ್ತೇವೆ ಅಂತ ಜಗತ್ತು ತೀರ್ಮಾನಿಸಿಬಿಟ್ಟಿರುತ್ತದೆ. ದು:ಖಿಗಳಾದವರಿಗೆ ಸಾಂತ್ವನದ ಮಾತುಗಳನ್ನು ಆಡಲೇಬೇಕೆಂದು ತೀರ್ಮಾನಿಸಿ, ಕೆಲವು ಮುರುಕು ಡೈಲಾಗ್‌ಗಳನ್ನು ರೆಡಿ ಮಾಡಿಟ್ಟುಕೊಂಡುಬಿಟ್ಟಿರುತ್ತಾರೆ. ಇಡೀ ಜಗತ್ತಿನ ಇಂಥ ಎಲ್ಲ ಇನ್ ಸೆನ್ಸಿಟಿವ್ ಜನರಿಗೆ ಕೆಲವು ಮಾತು ಹೇಳಲೇಬೇಕು.... ನೀವು ತೋರಿಸುವ ಕನಿಕರವಿದೆಯಲ್ಲ್ ಅದು ಮೂರು ಕಾಸಿನ ಬೆಲೆಗೂ ಬಾರದ್ದು ಅನ್ನುವುದು ನಮಗೆ ಗೊತ್ತಿದೆ. ಅದನ್ನು ನೀವೂ ತಿಳಿದುಕೊಳ್ಳಿ. ಒಬ್ಬ ಕ್ಯಾನ್ಸರ್ ರೋಗಿ ತನ್ನ ರೋಗದ ಬಗ್ಗೆ ಎಲ್ಲ ಮಾಹಿತಿಯೂ ಇರುವುದರಿಂದ, ಎಲ್ಲೋ ಕಂಡ-ಕೇಳಿದ ಅಪ್ರಬುದ್ಧ ಮಾತುಗಳನ್ನು ಆಡಿಯೇ ಮುಗಿಸುತ್ತೇನೆ ಅನ್ನು ಹಟಕ್ಕೆ ಬೀಳಬೇಡಿ. ನೀವು ಅಲ್ಲಿ ಇಲ್ಲಿ ಕೇಳಿದ್ದನ್ನು ನಾವು ಸ್ವತ: ಅನುಭವಿಸಿ ಆಗಿಹೋಗಿರುತ್ತದೆ. ಹಾಗಾಗಿ ನಮಗೆ ನಿಮಗಿಂತ ಎಲ್ಲವೂ ಹೆಚ್ಚು ಗೊತ್ತಿರುತ್ತದೆ. ಯಾಕೆಂದರೆ ನಿಮಗಿದು ಬರೀ ಲೊಚ್ ಲೊಚ್ ಎನ್ನುವಂಥ ಒಂದು ರೋಚಕ ಕಥೆ. ನಮಗಿದು ಸಾವು-ಬದುಕಿನ ಪ್ರಶ್ನೆ. ಸುಮ್ಮನೆ ನಮ್ಮನ್ನು ನಮ್ಮ ಧೈರ್ಯದೊಡನೆ ಬದುಕಲು ಬಿಡಿ. ಲೇಖಕಿಯ ಮಾತುಗಳು ಕಠೋರ ಎನ್ನಿಸಿದರೂ ವಾಸ್ತವವೂ ಹೌದು. ಗಾಯದ ಮೇಲೆ ಉಪ್ಪು ಸವರುವಂತೆ ಕ್ಯಾನ್ಸರ್ ಎಂದರೆ ನೀನು ಬದುಕುವ ಹಾಗೇ ಇಲ್ಲ ಎಂಬಂತೆ ರೋಗಿಯೊಂದಿಗೆ ಮಾತಿಗೆ ತೊಡಗುವುದೇ ನಿಜಕ್ಕೂ ಮೂರ್ಖತನದ ಪರಮಾವಧಿಯೇ. ಅವರಿಗೆ ನಾವು ಕೊಡಬೇಕಾದ್ದು ಆತ್ಮಸ್ಥೈರ್ಯವೇ ಹೊರತು ಅಂಜಿದವರ ಮೇಲೆ ಕಪ್ಪೆ ಎಸೆಯುವುದಲ್ಲ.
                                        ಕೊನೆಯಲ್ಲಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಲು ಹೋದಾಗ, ಪಕ್ಕಕ್ಕೆ ಕುಳಿತಾಕೆ ತನ್ನ ಸಂಸಾರದ ಜಂಜಾಟಗಳ ನೋವನ್ನೆಲ್ಲ ಲೇಖಕಿಯ ಮುಂದೆ ಹೇಳಿಕೊಳ್ಳುತ್ತಾಳೆ. ಆಗ ಲೇಖಕಿ ಅದೆಲ್ಲ ಏನಾರ ಇರ್ಲಿ ಮಾರಾಯ್ತಿ ನೀನು ಬರುಕಿರ್ತೀಯ. ಅದೊಂದು ಗ್ಯಾರಂಟಿ ಇದ್ದರೆ ಮತ್ತೆಲ್ಲ ನೋವುಗಳನ್ನು ಹೇಗೋ ಸಹಿಸಿಬಿಡಬಹುದು ಗೊತ್ತಾ? ಉಹೂ, ಬದುಕಿನ, ಉಸಿರಿನ ಬೆಲೆ ನಿನಗೆ ನಿಜಕ್ಕೂ ಗೊತ್ತಿಲ್ಲ ಅಂತ ಮನಸಿನಲ್ಲೆ ಅಂದುಕೊಳ್ಳುವರು. ಮುಂದೊಂದು ದಿನ ಈ ಜುಜುಬಿ ಕ್ಯಾನ್ಸರ್‌ನಿಂದ ಜನ ಸಾಯ್ತಿದ್ರಾ..?! ಅಂತ ಜಗತ್ತು ಆಶ್ಚರ್ಯಪಡುವಂತಾಗಲಿ ಅನ್ನುವ ಪ್ರಾರ್ಥನೆ ನನ್ನದು.. ಆಮೆನ್! ಎಂದು ಕೃತಿಯನ್ನು ಪೂರ್ಣಗೊಳಿಸುತ್ತಾರೆ.
                                ಒಟ್ಟಾರೆ ಇಡೀ ಕೃತಿ ಕ್ಯಾನ್ಸರ್ ಪೀಡಿತರ ಮನೋಭಾವವನ್ನು, ತಳಮಳವನ್ನು, ಸಾವಿಗೆ ಸಮೀಪವಾದ ಸಂದರ್ಭವನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಸಾಹಿತ್ಯ ಲೋಕದಲ್ಲಿ ಆತ್ಮಕಥನ ಪ್ರಕಾರದೊಳಗಿನ ನೋವಿನ, ಹೋರಾಟದ ಕಥನವಾಗಿ ವಿಭಿನ್ನವಾಗಿ ನಿಲ್ಲುವ ಕೃತಿಯಾಗಿದೆ. ಸರಳವಾದ ಶೈಲಿ, ನಿರೂಪಣಾ ತಂತ್ರ, ಬರವಣಿಗೆಯ ಓಘ ಎಲ್ಲವೂ ಅಚ್ಚುಕಟ್ಟಾಗಿ ಮೂಡಿದೆ. 
ಕೃತಿಗೆ ನೇಮಿಚಂದ್ರ ಮುನ್ನುಡಿ ಬರೆದಿದ್ದಾರೆ. ಯು.ಆರ್.ಅನಂತಮೂರ್ತಿ ಬೆನ್ನುಡಿ ಬರೆದಿದ್ದಾರೆ.


ಕೃತಿ : ಸಾಸಿವೆ ತಂದವಳು
ಲೇಖಕಿ: ಭಾರತಿ ಬಿ.ವಿ
ಪ್ರಕಾಶನ: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ
ಪ್ರಥಮ ಮುದ್ರಣ: ೨೦೧೩
ಬೆಲೆ: ರೂ.೧೦೦

5 comments:

  1. Kushiyaythu neevu wanna vivaragalannoo gamanisida reethige ... Thank you !

    ReplyDelete
  2. THUMBA ADBHUTAVAGIDE PUSTAKA IDARA POORTHI SARAMSHAVANNU ADBHUTAVAGI BAREDIDDARE PUSKTA ODADAVARIGE PUSTAKA ODALEBEKENNUAVA TAVAKA KOOTOHALA HUTTISUVADARALLI I POST YASHA PADEDIE SHUBHAHSYAGALU

    ReplyDelete
  3. ಈ ಪುಸ್ತಕವನ್ನು ಓದಿದೆ.ನಿಮ್ಮ ಅಭಿಪ್ರಾಯ/ ಪರಿಚಯ ಸೂಕ್ತವಾಗಿದೆ..

    ReplyDelete
  4. THIS BOOK DESERVES TO BE A TEXT BOOK FOR SCHOOLS AND COLLEGES IN ALL THE LANGUAGES THROUGH OUT THE WORLD.THIS BOOK TEACHES YOU HOW TO FACE DIFFICULTIES IN REAL LIFE .THAT IS THE REAL EDUCATION ..., NOT JUST COLLECTING SOME FACTS AND FIGURES WHICH YOU FORGET IN THE FUTURE CLASSES.

    ReplyDelete
  5. Originally title was different and quite meaningful. Some so called seularists objected and it was changed. When would our writers start writing fearlessly?

    ReplyDelete