Saturday, November 26, 2011

ಹೊಸ ಪುಸ್ತಕ : ಗುಡ್ ಅರ್ತ್ ಎಂಬ ಕೃಷಿ ಪ್ರಧಾನವಾದ ನೊಬೆಲ್ ಪುರಸ್ಕೃತ ಕಾದಂಬರಿ


                    ಭಾರತ ಹೇಗೆ ಕೃಷಿ ಪ್ರಧಾನವಾದ ದೇಶವೋ ಚೀನಾ ದೇಶವೂ ಕೃಷಿ ಪ್ರಧಾನವಾದ ದೇಶವೇ. ಇಂದು ಚೀನ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿದ್ದರೂ ಅದರ ಅಂತರಾಳದಲ್ಲಿ ಹರಿಯುತ್ತಿರುವುದು ಕೃಷಿಯ ಬೆವರೇ. ಅಮೆರಿಕನ್ ಲೇಖಕಿ ಪರ್ಲ್.ಎಸ್.ಬಕ್ ಚೀನಾ ದೇಶದಲ್ಲಿ ೫ ವರ್ಷಗಳವರೆಗೆ ಇದ್ದು, ಅಲ್ಲಿನವರಿಗೆ ಕೃಷಿಯ ಬಗೆಗಿರುವ ಒಲವು, ಅಲ್ಲಿನ ಬದುಕಿನ ಬವಣೆಗಳು, ಲಿಂಗ ತಾರತಮ್ಯ, ಮೇಲ್ವರ್ಗದವರ ಶೋಷಣೆ, ಭೂಮಿಯ ಬಗೆಗೆ ಕೃಷಿಕರಿಗಿರುವ ಪ್ರೀತಿ ಎಲ್ಲವನ್ನೂ ತಮ್ಮ ಗುಡ್ ಅರ್ತ್ ಕಾದಂಬರಿಯಲ್ಲಿ ಹಿಡಿದಿಟ್ಟಿದ್ದಾರೆ. ಅದನ್ನು ಇತ್ತೀಚೆಗೆ ಕನ್ನಡಕ್ಕೆ ಅನುವಾದಿಸಿದವರು ಪಾರ್ವತಿ ಜಿ.ಐತಾಳ್.

                   ಒಬ್ಬ ರೈತನಿಗೆ ಮಣ್ಣಿನ ಬಗೆಗಿರುವ ಭಕ್ತಿ, ಪ್ರೀತಿ, ತುಡಿತ ಹೇಗಿರುತ್ತದೆಂಬುದನ್ನು ಗುಡ್ ಅರ್ತ್ ಸಮರ್ಥವಾಗಿ ಹಿಡಿದಿಟ್ಟಿದೆ. ಉತ್ತರ ಚೀನಾದಲ್ಲಿನ ವಾಂಗ್‌ಲುಂಗ್ ಎಂಬ ರೈತನ ಮನೆತನವನ್ನು ಆಧಾರವಾಗಿಸಿಕೊಂಡು ಕಾದಂಬರಿಯನ್ನು ಹೆಣೆಯಲಾಗಿದೆ. ವಾಂಗ್‌ಲುಂಗ್‌ನ ತಂದೆ ಹಾಗೂ ವಾಂಗ್‌ಲುಂಗ್ ಆತನ ಮಕ್ಕಳು, ಮೊಮ್ಮಕ್ಕಳು ಕೂಡಿದಂತೆ ಒಟ್ಟು ೪ ತಲೆಮಾರುಗಳ ಕತೆ ಕಾದಂಬರಿಯಲ್ಲಿ ಹಾದುಹೋಗುತ್ತದೆ. ಪುಟ್ಟ ಭೂಮಿಯ ಒಡೆಯನಾಗಿದ್ದ ವಾಂಗ್‌ಲುಂಗ್‌ನಿಗೆ ಮಣ್ಣಿನಲ್ಲಿ ದುಡಿಯುವುದೆಂದರೆ ಅಪಾರ ಪ್ರೀತಿ. ತನ್ನ ಪ್ರಾಣಕ್ಕಿಂತ ಹೆಚ್ಚಿಗೆ ಮಣ್ಣನ್ನು ಪ್ರೀತಿಸಿತ್ತಿರುತ್ತಾನೆ. ಹೀಗಾಗಿ ಮೈಮುರಿದು ದುಡಿದು ನಿಧಾನವಾಗಿ ಭೂಮಿಯನ್ನು ಕೊಳ್ಳುತ್ತ ಹೋಗುತ್ತಾನೆ. ಯಾವುದು ಕೈಬಿಟ್ಟರೂ ಭೂಮಿ ಎಂದಿಗೂ ತನ್ನನ್ನು ನಂಬಿದವರನ್ನು ಕೈಬಿಡುವುದಿಲ್ಲ ಎಂಬ ಸಿದ್ಧಾಂತ ವಾಂಗ್‌ಲುಂಗ್‌ನದು. ಭೂಮಿಯಿಂದ ದೊರೆತ ಪ್ರತಿ ಪೈಸೆಯನ್ನೂ ಜೋಪಾನವಾಗಿಟ್ಟುಕೊಳ್ಳುವ ವಾಂಗ್‌ಲುಂಗ್‌ನಿಗಿರುವ ಆಸೆ ಒಂದೇ ಹೆಚ್ಚು ಭೂಮಿಯನ್ನು ಕೊಂಡು ಹೆಚ್ಚು ದುಡಿಯಬೇಕೆನ್ನುವುದು. ಈ ನಿರ್ಧಾರದಲ್ಲಿ ಆತ ತನ್ನ ಹೆಂಡತಿಯ ಬಗ್ಗೆಯೂ ಕರುಣೆ ಹೊಂದಿರುವುದಿಲ್ಲ. ಹೆಂಡತಿ ಓಲನ್ ಕುರೂಪಿಯಾಗಿದ್ದರೂ ಸಹನೆ, ಕರುಣೆ, ಚಿಂತನಾಪರಳಾಗಿರುತ್ತಾಳೆ. ಪ್ರತಿ ಸಂದರ್ಭದಲ್ಲೂ ವಾಂಗ್‌ಲುಂಗ್‌ನಿಗೆ ಹೆಗಲು ಕೊಡುತ್ತಾಳೆ. ಎಲ್ಲಿಯೂ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸದೇ ಇರುವುದು, ಚೀನಾ ದೇಶದಲ್ಲಿ ಹೆಣ್ಣಿನ ಬಗೆಗಿರುವ ಅನಾದರವನ್ನು ಎತ್ತಿ ತೋರುತ್ತದೆ. ಹೆರಿಗೆಯ ಸಮಯದಲ್ಲೂ ವಿಶ್ರಾಂತಿ ಪಡೆಯದೇ ದುಡಿಯುವ, ಹೆರಿಗೆಯಾದ ಸಂಜೆಯೇ ಹೊಲಕ್ಕೆ ಮರಳಿ ಬಂದು ಗಂಡನೊಂದಿಗೆ ಸರಿಸಾಟಿಯಾಗಿ ಶ್ರಮಿಸುವ ಓಲನ್‌ಳ ಪಾತ್ರ ಓದುಗರನ್ನು ಹಿಡಿದಿಡುತ್ತದೆ. ಭೋಗದಾಸೆಗೆ ತನ್ನ ಭೂಮಿಯನ್ನೆಲ್ಲ ಮಾರುವ ಊರಿನ ಶ್ರೀಮಂತ ಹುವಾಂಗ್ ಮನೆತನದ ಭೂಮಿಯನ್ನು ಕೊಳ್ಳುತ್ತಾನೆ. ನೆರೆ ಬಂದಾಗ ಕುಗ್ಗದೆ, ಮನುಷ್ಯರನ್ನೇ ತಿನ್ನುವಂತಹ ಬರ ಬಂದಾಗ ಎಲ್ಲವನ್ನೂ ಎದುರಿಸಿ, ದೂರದ ಪಟ್ಟಣಕ್ಕೆ ಹೋಗಿ, ಅಲ್ಲಿನ ಬದುಕಿನ ಬಗ್ಗೆ ತಿರಸ್ಕಾರ ಹೊಂದಿ, ಮತ್ತೆ ಮರಳಿ ತನ್ನ ಊರಿಗೆ ಮರಳಿ ತನ್ನ ಭೂಮಿಯಲ್ಲೇ ತನ್ನ ಶ್ರೇಯಸ್ಸಿದೆ ಎಂದು ಕಂಡುಕೊಂಡ  ವಾಂಗ್‌ಲುಂಗ್ ಶ್ರೀಮಂತಿಕೆಯನ್ನು ಪಡೆಯುತ್ತಾನೆ. ಮಾನವ ಸಹಜ ದೌರ್ಬಲ್ಯಗಳನ್ನೂ ಹೊಂದಿರುವ ವಾಂಗ್‌ಲುಂಗ್ ಬೆಲೆವೆಣ್ಣನ್ನೂ ತಂದಿರಿಸಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ಆತನಲ್ಲಿ ಉಂಟಾಗುವ ತುಮುಲ, ಕೌಟುಂಬಿಕ ಸಮಸ್ಯೆ ಎಲ್ಲವನ್ನೂ ಪರ್ಲ್ ಬಕ್ ಸಮರ್ಥವಾಗಿ ಕಾದಂಬರಿಯಲ್ಲಿ ಹಿಡಿದಿಟ್ಟಿದ್ದಾರೆ. ವಯಸ್ಸಾದ ನಂತರ ವಾಂಗ್‌ಲುಂಗ್ ಹೆಂಡತಿಯನ್ನು ಕಳೆದುಕೊಳ್ಳುತ್ತಾನೆ. ಮಕ್ಕಳು ಪ್ರೌಢಾವಸ್ಥೆಗೆ ಬಂದು ತಮ್ಮದೇ ಲೆಕ್ಕಾಚಾರದಲ್ಲಿ ತೊಡಗುತ್ತಾರೆ. ಬದುಕಿನ ಚಿತ್ರಣ ಬದಲಾದರೂ, ಸಾಮಾಜಿಕ ಬದಲಾವಣೆಗಳಾದರೂ ವಾಂಗ್‌ಲುಂಗ್‌ನಿಗೆ ಮಾತ್ರ ತನ್ನ ಮಣ್ಣಿನ ಬಗೆಗಿರುವ ವ್ಯಾಮೋಹ ಹೋಗುವುದೇ ಇಲ್ಲ. ವ್ಯಾಮೋಹ ಎಂದರೆ ಶ್ರಮ, ದುಡಿಮೆಯ ವ್ಯಾಮೋಹ. ತನ್ನ ಇಬ್ಬರು ಮಕ್ಕಳೂ ಭೂಮಿಯನ್ನು ಮಾರುವ ನಿರ್ಧಾರಕ್ಕೆ ಬಂದಾಗ ವಾಂಗ್‌ಲುಂಗ್‌ನಿಗೆ ಆಘಾತವೆನಿಸುತ್ತದೆ. ಭೂಮಿಯನ್ನು ಮಾರಿದರೆ ಅದೇ ನಮ್ಮ ಕೊನೆ ಎಂಬ ಮಾತನ್ನು ಮಕ್ಕಳಿಗೆ ತಿಳಿಸುತ್ತಾನಾದರೂ ತಂದೆಯ ಮಾತು ಕೇಳುವ ಸ್ಥಿತಿಯಲ್ಲಿ ಮಕ್ಕಳಿರುವುದಿಲ್ಲ. ಅಲ್ಲಿಗೆ ಕಾದಂಬರಿ ಕೊನೆಯಾಗುತ್ತದೆ.
                       ಒಟ್ಟಾರೆ ವಾಂಗ್‌ಲುಂಗ್ ರೈತನ ಮೂಲಕ ಕೃಷಿಯಲ್ಲಿರುವ ಬವಣೆ, ಕಷ್ಟನಷ್ಟಗಳು, ಎಲ್ಲವನ್ನೂ ಎದುರಿಸಿ ದುಡಿಯುವ ರೀತಿಯನ್ನು ಪರ್ಲ್‌ಬಕ್ ವಿಶದೀಕರಿಸಿದ್ದಾರೆ. ಸೋಮಾರಿಗಳನ್ನು ಎಂದೂ ಸಹಿಸದ ವಾಂಗ್‌ಲುಂಗ್ ದುಡಿಮೆಯೇ ಮೂಲಮಂತ್ರ ಎನ್ನುತ್ತಾನೆ. ಭೂಮಿಯನ್ನು ಮಾರುವುದರಿಂದ ಅವನತಿ ಆರಂಭ ಎಂಬುದು ವಾಂಗ್‌ಲುಂಗ್‌ನ ನಂಬಿಕೆ. ಸೋಮಾರಿಗಳಾಗದೆ ಭೂಮಿಯನ್ನೇ ನಂಬಿ ದುಡಿದರೆ ಭೂಮಿ ಎಲ್ಲವನ್ನೂ ಕೊಡುತ್ತದೆ ಎಂದು ಕಾದಂಬರಿ ತಿಳಿಸುತ್ತದೆ. ಅಲ್ಲದೆ ಚೀನಾ ದೇಶದ ಜನಜೀವನವನ್ನೂ ತಿಳಿಸುತ್ತದೆ. 
                    ನೋಬೆಲ್ ಪುರಸ್ಕೃತ ಗುಡ್‌ಅರ್ತ್ ಕಾದಂಬರಿಯನ್ನು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದವರು ಪಾರ್ವತಿ ಜಿ. ಐತಾಳ್ ಅವರು. ಕಾದಂಬರಿ ಎಲ್ಲಿಯೂ ಅಡೆತಡೆ ಇಲ್ಲದಂತೆ ಓದಿಸಿಕೊಂಡು ಹೋಗುತ್ತದೆ. ಇದಕ್ಕೆ ಮೂಲ ಕಾರಣ ಕನ್ನಡದ ಅನುವಾದ. ಕನ್ನಡಕ್ಕೆ ಉತ್ತಮ ಅನುವಾದ ಕೃತಿಯೊಂದನ್ನು ನೀಡಿರುವ ಪಾರ್ವತಿ ಜಿ.ಐತಾಳ್ ಅಭಿನಂದನಾರ್ಹರು.


ಕೃತಿ: ನೊಬೆಲ್ ಪ್ರಶಸ್ತಿ ಪುರಸ್ಕೃತ ಚೀನೀ ಕಾದಂಬರಿ ಗುಡ್‌ಅರ್ತ್
ಕನ್ನಡಕ್ಕೆ: ಪಾರ್ವತಿ ಜಿ.ಐತಾಳ್
ಬೆಲೆ: ರೂ. ೧೯೫/-
ಪ್ರಕಾಶನ: ಅಂಕಿತ ಪುಸ್ತಕ ಪ್ರಕಾಶನ, ಬೆಂಗಳೂರು.
ಮೊದಲ ಮುದ್ರಣ: ೨೦೧೧

Tuesday, October 25, 2011

ಕೂಡ್ಲಿಗಿ ತಾಲೂಕಿನ ವಿಶಿಷ್ಟ ಗ್ರಾಮ ವಲಸೆ

            ತಾಲೂಕು ೧೬ನೇ ಶತಮಾನದ ವಿಜಯನಗರ ಅರಸರ ಕಾಲದಿಂದಲೂ ವಿವಿಧ ಪಾಳೆಗಾರರ ಆಳ್ವಿಕೆಯಲ್ಲಿ ಒಳಪಟ್ಟಿದ್ದ ಪ್ರದೇಶವಾಗಿದೆ. ಹೀಗಾಗಿ ಇಲ್ಲಿನ ಪ್ರತಿಯೊಂದ ಗ್ರಾಮ, ಹಟ್ಟಿಗಳೂ ವಿಶೇಷ ನಾಮಧೇಯವನ್ನು ಹೊಂದಿವೆ. ಇವುಗಳಲ್ಲಿ ವಿಶೇಷವಾದ ಐತಿಹಾಸಿಕ ಕುರುಹುಗಳಿರುವ ಅಲಕ್ಷಿತ ಗ್ರಾಮ ವಲಸೆ.




     ಹೆಸರೇ ಸೂಚಿಸುವಂತೆ ವಲಸೆ ಬಂದ ಅಥವಾ ಗುಳೆಬಂದ ಜನಾಂಗ ವಾಸವಿರುವ ಗ್ರಾಮವೇ ವಲಸೆಯಾಗಿರಬಹುದೆಂಬುದು ಸ್ಥಳೀಯ ಐತಿಹ್ಯಗಳಿಂದ ತಿಳಿದುಬರುತ್ತದೆ. ಹುರುಳಿಹಾಳು ಗ್ರಾಮ ಪಂಚಾಯ್ತಿಗೆ ಸೇರಿದ ವಲಸೆ ಪುಟ್ಟ ಗ್ರಾಮ. ಗ್ರಾಮದ ಸುತ್ತಲೂ ೪ ಬುರುಜುಗಳಿದ್ದು, ಇವುಗಳ್ಲಲಿ ೩ ನಾಶವಾಗಿದ್ದು, ಒಂದು ಮಾತ್ರ ಸುಸ್ಥಿತಿಯಲ್ಲಿದೆ. ಬುರುಜುಗಳ ಸುತ್ತಲೂ ಕೋಟೆಯ ಕಟ್ಟಡವಿತ್ತೆಂಬುದಕ್ಕೆ ಕಲ್ಲಿನ ಕೋಟೆಯ ಶಿಥಿಲಗೊಂಡ ಕುರುಹುಗಳಿವೆ. ಗ್ರಾಮದಲ್ಲಿ ಹೆಚ್ಚು ವಾಸವಾಗಿರುವವರು ನಾಯಕ ಜನಾಂಗದವರು. ಗ್ರಾಮದ ಮಧ್ಯೆ ವಿಶೇಷವಾದ ದೇವಸ್ಥಾನವಿದ್ದು, ಇಲ್ಲಿ ಎರಡು ದೈವಗಳಿವೆ. ಯರಗಟ್ಟೆನಾಯಕ ಹಾಗೂ ಗಾದ್ರಿಪಾಲನಾಯಕ. ವಿಶೇಷವೆಂದರೆ ಎರಡೂ ದೇವಸ್ಥಾನಗಳೂ ಗುಡಿಸಲಿನ ಮಾದರಿಯಲ್ಲಿದ್ದು, ಒಳಗೆ ದೇವರ ಪೂಜಾಸಾಮಗ್ರಿಗಳನ್ನಿರಿಸಲಾಗಿದೆ. ಬೇಡ ಜನಾಂಗದ ಪ್ರತಿಷ್ಠೆಯ ಸಂಕೇತವಾಗಿರುವ ಬಿಲ್ಲು, ಖಡ್ಗಗಳನ್ನು ಇಲ್ಲಿ ಪೂಜಿಸಲಾಗುವುದು. ದೈವಗಳ ಮೂರ್ತಿಗಳೂ ಇಲ್ಲಿವೆ. ವರ್ಷಕ್ಕೊಮ್ಮೆ ದಸರೆಯ ನಂತರ ಹುಣ್ಣಿಮೆಯ ಹತ್ತಿರದ ದಿನಗಳಲ್ಲಿ ಜಾತ್ರೆ ನಡೆಯುತ್ತದೆ. ಜಾತ್ರೆಗೆ ನಾಡಿನ ವಿವಿಧ ಭಾಗಗಳಾದ ಶಿವಮೊಗ್ಗ, ಅಂಕಮನಾಳ, ಆಂಧ್ರಪ್ರದೇಶದ ಗೊಲ್ಲಹಳ್ಳಿ, ಕೋನಸಾಗರ, ಹಿರೇಹಳ್ಳಿ, ಕರ್ನಾರ ಮನೆತನದ ೬ ಕರ್ನಾರಹಟ್ಟಿ ಗ್ರಾಮಸ್ಥರು ಮೊದಲಾದ ನಾಯಕ ಜನಾಂಗದವರು ಪಾಲ್ಗೊಳ್ಳುವರು. ಯರಗಟ್ಟೆನಾಯಕ, ಗಾದ್ರಿಪಾಲನಾಯಕರನ್ನು ಮ್ಯಾಸ ಮಂಡಲದ ಪ್ರಬುದ್ಧ ದೇವರುಗಳೆಂದು ಪೂಜಿಸಲಾಗುತ್ತದೆ. ದೇವಸ್ಥಾನವನ್ನು ನಿರ್ಮಿಸಿದ ಕಾಲವನ್ನು ಕೇಳಿದರೆ, ತಮ್ಮ ವಂಶಜರಿಂದಲೂ ಇದೇ ರೀತಿ ಉಳಿದುಬಂದಿದೆಯೆಂದು ಗ್ರಾಮಸ್ಥರು ತಿಳಿಸುತ್ತಾರೆ. ನಾಯಕ ಜನಾಂಗ ಅಥವಾ ಬೇಡ ಜನಾಂಗದ ಬೇಟೆಯ ಸಂಕೇತಗಳಾಗಿರುವ ಆಯುಧಗಳನ್ನು ಇಲ್ಲಿ ಪೂಜಿಸುವುದು ವಿಶೇಷವಾಗಿದೆ. ವಲಸೆ ಎಂಬ ಹೆಸರು ಹೇಗೆ ಬಂತೆಂದು ಗ್ರಾಮದ ಹಿರಿಯರನ್ನು ಕೇಳಿದರೆ, ಯರಗಟ್ಟೆನಾಯಕ ಮೂಲತ: ಬೆಳ್ಳಗಟ್ಟೆಯ ಸಮೀಪದ ತಮಟೆಕಲ್‌ನ ನಾಯಕ. ಯುದ್ಧದ ಸಂದರ್ಭದಲ್ಲಿ ತನ್ನ ಹಿಂಬಾಲಕರೊಂದಿಗೆ ಬಂದು ಈ ಪ್ರದೇಶದಲ್ಲಿ ಸಮಾಧಿಸ್ಥನಾದ. ಆತನ ಸಮಾಧಿಯೇ ದೇವಸ್ಥಾನವೆಂದು ಗ್ರಾಮದ ಜಿ.ಬಿ.ಪಾಲಯ್ಯ ಹೇಳುತ್ತಾರೆ. ಯರಗಟ್ಟೆನಾಯಕ ಹಾಗೂ ಗಾದ್ರಿಪಾಲನಾಯಕ ಇಬ್ಬರೂ ಮಹಾನ್ ಶೂರರು. ಅವರ ವಂಶಸ್ಥರೇ ನಮ್ಮ ಜನಾಂಗ ಎಂದೂ ಅವರು ಹೇಳಿದರು. ಯರಗಟ್ಟೆನಾಯಕ ಹಾಗೂ ಆತನ ತಂಡ ಇಲ್ಲಿ ವಲಸೆ ಬಂದು ನೆಲೆಸಿದುದಕ್ಕೆ ವಲಸೆ ಎಂಬ ಹೆಸರು ಬಂದಿರಬಹುದೇನೋ ಎಂದು ಹಿರಿಯರು ಊಹಿಸುತ್ತಾರೆ. ಮತ್ತೊಂದು ವಿಶೇಷವೆಂದರೆ ಯರಗಟ್ಟೆನಾಯಕ ಎತ್ತುಗಳನ್ನು ಪಾಲನೆ ಮಾಡುತ್ತಿದ್ದ. ಹೀಗಾಗಿ ಆತನ ಎತ್ತುಗಳೆಂದೇ ೨೫ ಎತ್ತುಗಳನ್ನು ದೇವರ ಎತ್ತುಗಳೆಂದು ಮೀಸಲಿರಿಸಲಾಗಿದೆ. ಅವುಗಳನ್ನು ಅಪ್ಪೇನಹಳ್ಳಿಯ ಬಳಿ ಡಿ.ಸಿದ್ದಾಪುರದಲ್ಲಿರಿಸಲಾಗಿದ್ದು, ಅವುಗಳನ್ನು ನೋಡಿಕೊಳ್ಳಲೆಂದೇ ಒಬ್ಬ ವ್ಯಕ್ತಿಯನ್ನು ನೇಮಕ ಮಾಡಲಾಗಿದೆ. ಆತನಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸುವುದೂ ಗ್ರಾಮಸ್ಥರ ಜವಾಬ್ದಾರಿಯಾಗಿದೆ. ಪ್ರತಿವರ್ಷದ ಜಾತ್ರೆಗೆ ದೇವರ ಎತ್ತುಗಳನ್ನು ವಿಧಿವತ್ತಾಗಿ ಕರೆತಂದು ಪೂಜಿಸಲಾಗುತ್ತದೆ.

         ಇಷ್ಟೊಂದು ವೈಶಿಷ್ಟ್ಯಗಳಿರುವ ವಲಸೆ ಗ್ರಾಮದಲ್ಲಿ ಯಾರೂ ವಾಹನಗಳನ್ನೇರಿ ಹೋಗುವಂತಿಲ್ಲ. ಸೈಕಲ್, ಬೈಕ್‌ಗಳನ್ನು ಗ್ರಾಮದ ಹೊರಗೆ ತಂದೇ ವಾಹನವೇರಿ ಹೋಗಬೇಕು. ಇದು ಇಲ್ಲಿಯ ಅಲಿಖಿತ ನಿಯಮಗಳಲ್ಲೊಂದು. ಬಂಡಿಗಳನ್ನೂ ಗ್ರಾಮದಲ್ಲಿ ತರುವಂತಿಲ್ಲ. ಇದು ಈ ಗ್ರಾಮದ ಪದ್ಧತಿ. ‘ಹಿಂದಿನೋರು ನಡಸ್ಕೊಂಡು ಬಂದಾರ, ಅದನ್ನ ನಾವು ಮುಂದುವರಿಸೀವಿ’ ಎಂದು ಗ್ರಾಮದ ಚಂದ್ರಪ್ಪ ಹೇಳುತ್ತಾರೆ. ‘ನಮ್ ದೇವರದು ಭಾಳ ಇತಿಹಾಸ ಐತೆ, ೨-೩ ದಿನಾ ಆದ್ರೂ ಮುಗಿಯಂಗಿಲ್ಲ’ ಎಂದು ತಳವಾರ ನಿಂಗಪ್ಪ, ದಡ್ಲ ಮಾರಮ್ಮನ ಪೂಜಾರ ಹೇಳುತ್ತಾರೆ. ‘ನಮ್ ಊರಿನ ಬಗ್ಗೆ ನಮ್ ಹುಡುಗ್ರಿಗೆ ಏನೂ ತಿಳಿದಿಲ್ಲ, ತಿಳಿಸಬೇಕಾದ ಹಿರೇರು ಹುಡುಗರಿಗೆ ಹೇಳಿದ್ರ, ಎಷ್ಟೋ ವಿಷಯಗಳ ಗೊತ್ತಾಗ್ತಾವ’ ಎಂದು ಗ್ರಾಮದ ಯುವಕ ಓಂಕಾರಪ್ಪ ಹೇಳುತ್ತಾರೆ. ಆಸಕ್ತರು ಈ ಗ್ರಾಮವನ್ನು ಸಂದರ್ಶಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಓಂಕಾರಪ್ಪ, ಮೊಬೈಲ್ ಸಂ.೯೯೦೧೮೬೮೬೯೨ಗೆ ಸಂಪರ್ಕಿಸಬಹುದು.
                               

ಕೆಡಿಎಲ್೧ ಚಿತ್ರ: ಕೂಡ್ಲಿಗಿ ತಾಲೂಕಿನ ಅಲಕ್ಷಿತ ವಿಶೇಷ ಐತಿಹಾಸಿಕ ಗ್ರಾಮ ವಲಸೆಯ ಆರಾಧ್ಯ ದೈವ ಯರಗಟ್ಟೆನಾಯಕನ ದೇಗುಲ.
ಕೆಡಿಎಲ್೨: ದೇಗುಲದ ಒಳಭಾಗದ ನೋಟ.
ಕೆಡಿಎಲ್೩ ಹಾಗೂ ಕೆಡಿಎಲ್೪: ಗ್ರಾಮದ ೪ ಬುರುಜುಗಳಲ್ಲಿ ಉಳಿದಿರುವ ಸುಸ್ಥಿತಿಯಲ್ಲಿರುವ ಒಂದು ಬುರುಜಿನ ದೃಶ್ಯ.
ಕೆಡಿಎಲ್೫: ಗಾದ್ರಿಪಾಲನಾಯಕನ ದೇಗುಲ
ಕೆಡಿಎಲ್೬: ಬುರುಜಿನ ಮಧ್ಯೆ ಇಂತಹ ಅನೇಕ ಮರದ ದಿಮ್ಮಿಗಳನ್ನಿರಿಸಿ ನಿರ್ಮಿಸಲಾಗಿದೆ.


Saturday, September 17, 2011

ಬೆಂಕಿಯಲ್ಲಿ ಅರಳಿದ ಹೂ ನಳಿನಿ ಜಮೀಲಾ : ಲೈಂಗಿಕ ಕಾರ್ಯಕರ್ತೆಯೊಬ್ಬಳ ಆತ್ಮಕಥನ ಇದೀಗ ಕನ್ನಡದಲ್ಲಿ



        ಸಾಹಿತ್ಯದ ಆತ್ಮಕಥನಗಳು ಕನ್ನಡಕ್ಕೆ ಬಂದಾಗ ಓದುಗರಿಗೆ ನವಿರೇಳಿಸಿದ್ದವು. ನೋವು, ಹತಾಶೆ, ಶೋಷಣೆ, ಅಮಾನವೀಯತೆಗಳನ್ನು ಅನುಭವಿಸಿದವರಿಂದಲೇ ನೇರವಾಗಿ ಆತ್ಮಕಥನಗಳಾಗಿ ಕನ್ನಡ ಓದುಗರಿಗೆ ಮರಾಠಿ ಸಾಹಿತ್ಯದಿಂದ ಇತರೆ ಭಾಷೆಗಳಿಂದಲೂ ಲಭಿಸಿತ್ತು. ಆದರೆ ಮಹಿಳೆಯೊಬ್ಬರು ಲೈಂಗಿಕ ಕಾರ್ಯಕರ್ತೆಯಾಗಿ ಅನುಭವಿಸಿದ ನೋವನ್ನು ಕಣ್ಣೋಟದಿಂದ ಕಂಡ ಜಗತ್ತನ್ನು ಅನಾವರಣಗೊಳಿಸಿದ ಆತ್ಮಕಥನ ಕನ್ನಡದಲ್ಲಿ ಬಂದಿರುವುದು ವಿಶೇಷ.
           ಮೂಲತ: ಮಲೆಯಾಳಂ ಭಾಷೆಯ ಜ್ಞಾನ್ ಲೈಂಗಿಕ ತೊಳಿಲಾಳಿ ಎಂಬ ನಳಿನಿ ಜಮೀಲಾರ ಆತ್ಮಕಥನವನ್ನು ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥನ ಎಂದು ಕನ್ನಡಕ್ಕೆ ಅನುವಾದಿಸಿದವರು ಕೆ.ನಾರಾಯಣಸ್ವಾಮಿಯವರು. ನೇರ, ದಿಟ್ಟ, ನಿರ್ಭಿಡೆಯಿಂದ ತಮ್ಮ ಬದುಕನ್ನು ಅಕ್ಷರ ರೂಪದಲ್ಲಿ ಹಿಡಿದಿಟ್ಟ ನಳಿನಿ ಜಮೀಲಾರ ಆತ್ಮಕಥನವನ್ನು ಓದುತ್ತ ಹೋದಂತೆ ನಮಗರಿಯದ ಪ್ರಪಂಚವನ್ನು ಪ್ರವೇಶಿಸಿದ ಅನುಭವವಾಗುತ್ತದೆ. ಹಾಗೆ ನೋಡಿದರೆ ಕನ್ನಡ ಸಾಹಿತ್ಯದಲ್ಲಿ ಪ್ರಗತಿಶೀಲರು ತಮ್ಮ ಕತೆ, ಕಾದಂಬರಿಗಳಲ್ಲಿ ವೇಶ್ಯೆಯರ ಬಗ್ಗೆ, ಅವರ ಬದುಕಿನ ಬಗ್ಗೆ ಅನುಕಂಪದಿಂದ ಬರೆದಿರುವರಾದರೂ ಅಲ್ಲಿ ಎದ್ದು ಕಾಣುವುದು ಅನುಕಂಪ ಮಾತ್ರ. ಆದರೆ ಆ ಬದುಕನ್ನೇ ಅನುಭವಿಸಿದ ದಾರುಣತೆ ನಮಗೆ ಸಿಗುವುದು ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥನದಲ್ಲಿ ಮಾತ್ರ. ಬಾಲ್ಯದಿಂದಲೂ ಪ್ರತಿ ಹೆಜ್ಜೆಗೂ ಕಷ್ಟ, ಅವಮಾನ, ಕುತೂಹಲ, ದೌರ್ಜನ್ಯಗಳಿಗೊಳಗಾಗುತ್ತಲೇ, ಸಮಾಜವನ್ನು ಎದುರಿಸುವ ನಿರ್ಭಯವನ್ನು ಬೆಳೆಸಿಕೊಳ್ಳುತ್ತಲೇ ಬರುತ್ತಾರೆ ನಳಿನಿ. ತಮ್ಮ ಆತ್ಮಕಥನದುದ್ದಕ್ಕೂ ಲೈಂಗಿಕ ಕಾರ್ಯಕರ್ತೆಯರ ಬದುಕನ್ನು ಅನಾವರಣಗೊಳಿಸಿದಾಗ ಲೈಂಗಿಕ ಶೋಷಣೆಯ ಭೀಕರ ಜಗತ್ತೊಂದು ನಮ್ಮೆದುರು ತೆರೆದಿಟ್ಟಂತಾಗುತ್ತದೆ. ರೌಡಿಗಳ, ಪೊಲೀಸ್‌ರ, ರಾಜಕೀಯ ಧುರೀಣರ, ಶ್ರೀಮಂತರ ಲೈಂಗಿಕ ತೃಷೆಗೆ ಪಕ್ಕಾಗುತ್ತಲೇ ಸಮಾಜವನ್ನು ಎದುರಿಸುವ ದಿಟ್ಟತನವನ್ನೂ ನಳಿನಿ ತೋರುತ್ತಾರೆ. ಕೆಲವು ಪ್ರಸಂಗಗಳಲ್ಲಿ ತಾವು ಪೊಲೀಸ್ ಹಾಗೂ ರೌಡಿಗಳಿಂದ ಹೇಗೆ ಸಿನಿಮೀಯವಾಗಿ ತಪ್ಪಿಸಿಕೊಂಡೆವೆಂಬುದನ್ನೂ ಚಿತ್ರಣದ ರೀತಿಯಲ್ಲಿ ಹಿಡಿದಿಡುತ್ತಾರೆ. ಬದುಕಿನಲ್ಲಿ ಕೇವಲ ಅಮಾನವೀಯ ಮುಖಗಳನ್ನು ಕಂಡ ನಳಿನಿ, ತಮ್ಮ ಮಗಳ ಬದುಕು ತನ್ನಂತಾಗುವುದು ಬೇಡವೆಂದು ಯತ್ನಿಸುವುದೂ ಓದುಗರ ಕಣ್ಣಂಚಿನಲ್ಲಿ ಹನಿ ತುಳುಕಿಸುತ್ತದೆ. ಪುಟ್ಟ ಮಗಳನ್ನು ಕಾಮುಕರ ಕಣ್ಣಿಂದ ತಪ್ಪಿಸುವುದಕ್ಕೆ ನಳಿನಿ ಹೆಣಗುವ ಭಾಗಗಳು ಆತ್ಮಕಥನದ ದಾರುಣತೆಯನ್ನು ಮೇಲ್ ಸ್ತರಕ್ಕೇರಿಸುವಂತಹ ಸಂದರ್ಭಗಳಾಗಿವೆ. 
              ಇಷ್ಟೆಲ್ಲ ಕಷ್ಟಗಳ ಮಧ್ಯೆಯೂ ನಳಿನಿ ಜಮೀಲಾರ ಆತ್ಮಕಥನ ಯಾಕೆ ಒಂದೇ ವೇಗಕ್ಕೆ ಓದಿಸಿಕೊಳ್ಳುವುದೆಂದರೆ, ನಳಿನಿ ಬದುಕಿಗೆ ವಿಮುಖರಾಗದೇ ಇರುವುದು, ಜೀವನೋತ್ಸಾಹ ಕಳೆದುಕೊಳ್ಳದಿರುವುದು. ಒಂದೆಡೆ ಲೈಂಗಿಕ ಕಾರ್ಯಕರ್ತೆಯರ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಲೇ, ದೇಶದ ವಿವಿಧ ಸ್ಥಳಗಳಲ್ಲಿ ಭಾಷಣಗಳನ್ನು ಮಾಡುತ್ತಲೇ, ಅದೇ ವೃತ್ತಿಯಲ್ಲಿ ಮುಂದುವರಿಯುವುದು ಓದುಗರನ್ನು ಬೆರಗಾಗಿಸುತ್ತದೆ. ಯಾಕೆಂದರೆ ಸಮಾಜದಲ್ಲಿ ಸ್ವಲ್ಪ ಸ್ಥಾನಮಾನವನ್ನು ಗಳಿಸಿದ ವ್ಯಕ್ತಿಯ ನಡೆ, ನುಡಿ, ಗತ್ತುಗಳು ತೀವ್ರವಾಗಿ ಬದಲಾಗುತ್ತವೆ. ಆದರೆ ನಳಿನಿ ಲೈಂಗಿಕ ಕಾರ್ಯಕರ್ತೆಯಾಗಿ ತಮ್ಮ ವೃತ್ತಿಯನ್ನು ಎಲ್ಲೂ ಕೀಳಾಗಿ ಕಂಡಿಲ್ಲ. ಬಹುಶ: ಅದಕ್ಕಾಗಿಯೇ ಅವರಿಗೆ ಎರಡನ್ನೂ ಸಮಾನ ಮನಸ್ಸಿನಿಂದ ನೋಡಲು ಸಾಧ್ಯವಾಗಿದೆಯೆನಿಸುತ್ತದೆ. ಇದು ಆತ್ಮಕಥನದ ವಿಶೇಷವೂ ಹೌದು. ನಳಿನಿಯವರ ಆತ್ಮಕಥನದಲ್ಲಿ ಎಲ್ಲಿಯೂ ಭಾಷೆ ಕೆಟ್ಟದಾಗಿ ಬಳಕೆಯಾಗಿಲ್ಲ. ರೌಡಿಗಳು, ತಮ್ಮ ಸಹವರ್ತಿಗಳು ಅಶ್ಲೀಲ ಪದಗಳನ್ನು ಉಪಯೋಗಿಸುವುದನ್ನು ನಳಿನಿ ಬರೆದುಕೊಳ್ಳುತ್ತಾರಾದರೂ ಎಲ್ಲಿಯೂ ಸಭ್ಯತೆಯ ಎಲ್ಲೆ ಮೀರಿಲ್ಲ. ಆತ್ಮಕಥನವಾಗಿರುವುದರಿಂದ ವರದಿಯಾಗುವ ಅಪಾಯಕ್ಕೆ ಸಿಕ್ಕಿಕೊಳ್ಳುವ ಸಂಭವವಿರುತ್ತದೆ. ಆದರೆ ನಳಿನಿ ಜಮೀಲಾರ ಬರಹ ಎಲ್ಲಿಯೂ ವರದಿ ಎನ್ನಿಸುವುದಿಲ್ಲ. ಎಲ್ಲ ಭಾವಗಳನ್ನೊಳಗೊಂಡ ಸುಂದರ ಕಾವ್ಯದಂತೆ ಆತ್ಮಕಥನ ಓದುಗರೆದುರು ತೆರೆದುಕೊಳ್ಳುತ್ತದೆ. ಮೂಲ ಭಾಷೆಯಲ್ಲಿ ಆತ್ಮಕಥನ ಹೇಗೆ ಮೂಡಿಬಂದಿದೆಯೇನೋ ಆದರೆ ಕೆ.ನಾರಾಯಣಸ್ವಾಮಿಯವರು ಕನ್ನಡಕ್ಕೆ ಅಪರೂಪದ ಆತ್ಮಕಥನವನ್ನು ಸಮರ್ಥವಾಗಿ ಅನುವಾದಿಸಿರುವುದಕ್ಕಾಗಿ ಕೃತಜ್ಞತೆಗಳನ್ನು ಹೇಳದೇ ಇರಲಾಗುವುದಿಲ್ಲ.
              ಕೊನೆಯದಾಗಿ ಆತ್ಮಕಥನದ ಕೆಲವು ಭಾಗಗಳು: ಹಿಂದಿನ ದಿನಗಳಲ್ಲಿ ಗಂಡಸರು ಮಹಿಳೆಯರನ್ನು ಸ್ಪರ್ಶಿಸಲು, ಮೈ ಮುಟ್ಟಲು ತಮಗೆ ಅಧಿಕಾರವಿದೆ ಎಂದು ಭಾವಿಸಿದ್ದರು. ಆದರೆ ಅವರಲ್ಲಿ ಬಹಳ ಮಂದಿ ಸುಮ್ಮನೆ ಮುಟ್ಟಿ ತೃಪ್ತಿಪಟ್ಟುಕೊಳ್ಳುತ್ತಿದ್ದರು. ಈಗ ಹಾಗಲ್ಲ, ಒಂಟಿಯಾಗಿ ನಿಂತ ಹೆಂಗಸರ ಮೇಲೆ ಯಾವುದೇ ತೆರನಾದ ದೌರ್ಜನ್ಯ ಮಾಡಲು ಹೇಸದವರ ಸಂಖ್ಯೆ ಹೆಚ್ಚುತ್ತಿದೆ. .............................ನನಗೀಗ ಐವತ್ತೆರಡು ವರ್ಷ. ಈಗಲೂ ಪೀಡಕರ ಕಾಟ ತಪ್ಪಿಲ್ಲ. ಈಗಿನ ಗಂಡಸರಿಗೆ ವಯಸ್ಸು, ರೂಪ ಏನೇನೂ ಬೇಕಾಗಿಲ್ಲ.  ಎಷ್ಟು ವರ್ಷ ಉರುಳಿದರೂ ಗಂಡಿನ ಮನೋಭಾವದಲ್ಲಿ ಬದಲಾವಣೆಗಳ ಗಾಳಿ ಬೀಸುತ್ತಲೇ ಇಲ್ಲ. ಅಂತಹ ಆಶೆ ಕೇವಲ ಭ್ರಮೆ! ಹೆಣ್ಣುಗಳೆಂದರೆ ತಮ್ಮ ಭೋಗಕ್ಕಾಗಿ ಸೃಷ್ಟಿಸಲ್ಪಟ್ಟವರೆಂಬ ಧೋರಣೆ ದಿನದಿನಕ್ಕೂ ಹೆಚ್ಚುತ್ತಲೇ ಇದೆ. 

ಕೃತಿ : ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥನ
ಮೂಲ ಲೇಖಕಿ : ನಳಿನಿ ಜಮೀಲಾ
ಕನ್ನಡಕ್ಕೆ : ಕೆ.ನಾರಾಯಣಸ್ವಾಮಿ ಗೌರಿಬಿದನೂರು
ಬೆಲೆ: ರೂ. ೧೫೦
ಪ್ರಕಾಶನ: ಸೃಷ್ಟಿ ಪಬ್ಲಿಕೇಶನ್ಸ್, ವಿಜಯನಗರ, ಬೆಂಗಳೂರು.  ಗಾಳಿ ಬೀಸುತ್ತಲೇ ಇಲ್ಲ. ಅಂತದೆ.’ಲ್ಲ, ಒಂಟಿಯಾಗಿ ವುದಿಲ್ಲ. ಎಲ್ಲ ಭಾವಗಳ

Tuesday, September 13, 2011

ಹಿಜ್ರಾ ಒಬ್ಬಳ ಆತ್ಮಕತೆ-ಬದುಕು ಬಯಲು

ಕನ್ನಡದಲ್ಲೀಗ ಅನುವಾದಿತ ಉತ್ತಮ ಆತ್ಮಕತೆಗಳು ಬಿಡುಗಡೆಯಾಗುತ್ತಿವೆ. ನಳಿನಿ ಜಮೀಲಾ ಅವರ ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥನ ನಂತರ ಇದೀಗ ಲಂಕೇಶ್ ಪ್ರಕಾಶನದಡಿಯಲ್ಲಿ ಎ.ರೇವತಿಯವರ ಬದುಕು ಬಯಲು ಎಂಬ ಹಿಜ್ರಾ ಒಬ್ಬಳ ಆತ್ಮಕತೆ ಕನ್ನಡದಲ್ಲಿ ಬಿಡುಗಡೆಯಾಗಿದೆ. ಮೂಲತ: ಇಂಗ್ಲೀಷ್‌ನ ಟ್ರುತ್ ಅಬೌಟ್ ಮಿ-ಎ ಹಿಜ್ರಾ ಲೈಫ್ ಸ್ಟೋರಿ ಎಂಬ ಕೃತಿಯನ್ನು ಲೇಖಕಿ ದು.ಸರಸ್ವತಿಯವರು ಕನ್ನಡಕ್ಕೆ ಸುಂದರವಾಗಿ ಅನುವಾದಿಸಿದ್ದಾರೆ.
ದೇಹದ ಅಂಗಾಂಗಳ ಮೂಲಕ ಗಂಡು, ಹೆಣ್ಣು ಎಂದು ಗುರುತಿಸಲಾಗುತ್ತದೆ. ಆದರೆ ಗಂಡಿನೊಳಗಿರುವ ಹೆಣ್ಣಿನ ಭಾವನೆ, ನಡವಳಿಕೆಯನ್ನು ಏನಂತ ಗುರುತಿಸುವುದು? ನಡುವೆ ಸುಳಿವಾತ್ಮನು ಗಂಡೂ ಅಲ್ಲ ಹೆಣ್ಣೂ ಅಲ್ಲ ಎಂದು ವಚನಕಾರರು ೧೨ನೇ ಶತಮಾನದಲ್ಲಿಯೇ ಹೇಳಿದ್ದಾರೆ. ಆತ್ಮವನ್ನು ಗಂಡು, ಹೆಣ್ಣು ಎಂದು ಗುರುತಿಸಲಾಗದು. ಗಂಡಾಗಿದ್ದೂ ಭಾವನಾತ್ಮಕವಾಗಿ ಹೆಣ್ಣಾಗಿರುವವರು, ಹೆಣ್ಣಾಗಿ ಲಿಂಗ ಬದಲಾವಣೆಗೊಂಡು ಹಿಜ್ರಾ, ನಂಬರ್ ೯, ಚಕ್ಕಾ, ಹೆಣ್ಣಿಗ ಎಂದು ವಿಧವಿಧವಾಗಿ ಸಮಾಜದಲ್ಲಿ ಕೀಳಾಗಿ ಕರೆಯಲ್ಪಡುವ ಹಿಜ್ರಾಗಳ ಬದುಕು ಎಷ್ಟು ಅಸಹನೀಯ, ಬದುಕು ಎಷ್ಟು ದುರ್ಭರ ಎಂಬುದನ್ನು ತಿಳಿಯಬೇಕಾದರೆ ಖಂಡಿತ ಬದುಕು ಬಯಲು ಕೃತಿಯನ್ನು ಓದಲೇಬೇಕು.
ಸಮಾಜದಲ್ಲಿ ಗಂಡಿಗೆ, ಹೆಣ್ಣಿಗೆ, ಅಂಗವಿಕಲರಿಗೆ, ರೋಗಿಗಳಿಗೆ, ತಲೆಹಿಡುಕರಿಗೆ, ಭ್ರಷ್ಟರಿಗೆ, ದುಷ್ಟರಿಗೆ ಎಲ್ಲರಿಗೂ ತಮ್ಮದೇ ಆದ ಸ್ಥಾನವಿದೆ. ಆದರೆ ಹಿಜ್ರಾಗಳಿಗೆ ಯಾವುದೇ ಸ್ಥಾನವಿಲ್ಲ ಎಂದು ಹೆಣ್ಣಾಗಿ ಬದಲಾವಣೆಗೊಂಡ ರೇವತಿ ನೊಂದು ನುಡಿಯುತ್ತಾರೆ.
ತಮಿಳುನಾಡಿನ ಸೇಲಂ ಜಿಲ್ಲೆಯ ನಮಕ್ಕಲ್ ತಾಲೂಕಿನ ಪುಟ್ಟ ಹಳ್ಳಿಯ ರೇವತಿಯಾಗಿ ಬದಲಾಗುವ ದೊರೆಸ್ವಾಮಿಗೆ ಬಾಲ್ಯದಿಂದಲೇ ರಂಗೋಲಿ ಹಾಕುವ, ಕಸ ಗುಡಿಸುವ, ಪಾತ್ರೆ ತೊಳೆಯುವ ಕೆಲಸಗಳು ಇಷ್ಟವಾಗುತ್ತಿದ್ದವು ಎಂದು ಆರಂಭಗೊಳ್ಳುವ ಆತ್ಮಕತೆ, ಮುಂದೆ ಹೆಣ್ಣಿನ ವೇಷಭೂಷಣಗಳನ್ನು ತೊಟ್ಟುಕೊಳ್ಳುವುದರಲ್ಲೇ ಆನಂದವನ್ನು ಹುಡುಕುವ ಪ್ರಯತ್ನ ನಡೆಯುತ್ತದೆ. ಹಾಗೆ ನಡವಳಿಕೆ ಬದಲಾದಾಗ ಸಮಾಜ ನೋಡುವ ಕ್ರೂರ ನೋಟ, ವ್ಯಂಗ್ಯ, ಹಾಸ್ಯ, ಅಸಹನೀಯತೆಗಳನ್ನು ರೇವತಿ ಕಣ್ಮುಂದೆ ಕಟ್ಟುವಂತೆ ಚಿತ್ರಿಸುತ್ತಾರೆ. ಮೊದಲು ದೊರೈಸ್ವಾಮಿಯಾಗಿದ್ದ ಬಾಲಕನಲ್ಲಿ ಹೆಣ್ಣಿನ ನಡವಳಿಕೆಗಳು ಬೆಳೆಯತೊಡಗಿದಾಗ, ಆತ ಇಬ್ಬಂದಿತನದಲ್ಲಿ ಸಿಲುಕಿ ಕೊನೆಗೆ ಹೆಣ್ಣಾಗುವುದರಲ್ಲಿಯೇ ತನಗೆ ಸುಖವಿದೆ ಎಂದು ತಿಳಿಯುತ್ತಾನೆ. ಅಂತಹವರೊಂದಿಗೇ ಬೆರೆಯಲು ಆತ ಹಾತೊರೆಯುತ್ತಾನೆ. ಮನೆ, ಸಮಾಜದಲ್ಲಿ ಹೆಣ್ಣಿಗ ಎಂದು ಹೀಯಾಳಿಸಿಕೊಂಡ ದೊರೆಸ್ವಾಮಿ, ಸಂಪೂರ್ಣವಾಗಿ ಹೆಣ್ಣೇ ಆಗಲು ಹಾತೊರೆಯುತ್ತಾನೆ. ಈ ಭಾವನೆ ಎಷ್ಟು ಬೆಳೆಯುತ್ತದೆಂದರೆ ಏನೇ ಆಗಲಿ ಹೆಣ್ಣಾಗಲೇಬೇಕು ಎಂಬ ಹಟ ಬಲಿಯುತ್ತದೆ. ಅದಕ್ಕಾಗಿ ತನ್ನಂತೆಯೇ ಇರುವ ತನ್ನ ಭಾವನೆಗಳನ್ನು ಅರಿತುಕೊಳ್ಳುವ ವ್ಯಕ್ತಿತ್ವವಿರುವವರನ್ನು ಹುಡುಕುತ್ತ ಹೋಗುತ್ತಾನೆ. ತಾಯಿಗಿಂತಲೂ ಹಿಜ್ರಾಗಳೇ ದೊರೆಸ್ವಾಮಿಗೆ ಇಷ್ಟವಾಗುವುದು ಇದೇ ಕಾರಣದಿಂದ. ಶಸ್ತ್ರಚಿಕಿತ್ಸೆಯಿಂದ ಲಿಂಗ ಬದಲಾವಣೆ ಮಾಡಿಸಿಕೊಳ್ಳುವ ದೊರೆಸ್ವಾಮಿ ರೇವತಿಯಾಗುತ್ತಾಳೆ. ದೆಹಲಿ, ಮುಂಬೈಗಳಂತಹ ಮಹಾನಗರಗಳಲ್ಲಿ ಹಳ್ಳಿಯಿಂದ ಹೋದ ಏನೂ ಅರಿಯದ ದೊರೆಸ್ವಾಮಿ, ರೇವತಿಯಾಗಿ, ಹಿಜ್ರಾ ಆಗಿ, ಹಿಜ್ರಾಗಳ ಸಂಪ್ರದಾಯ, ಪದ್ಧತಿಗಳನ್ನೇ ಅನುಸರಿಸಿಕೊಂಡು ಬೆಳೆಯುತ್ತಾಳೆ. ದೆಹಲಿ, ಮುಂಬೈಗಳ ಕಾಮಾಟಿಪುರದಂತಹ ಪ್ರದೇಶಗಳಲ್ಲಿ ಸೆಕ್ಸ್ ವರ್ಕರ್ ಆಗಿ ಅನುಭವಿಸುವ ಯಾತನೆ, ಬೆಂಗಳೂರು ನಗರದಲ್ಲಿ ಅನುಭವಿಸುವ ನೋವು ಎಲ್ಲವೂ ಓದುಗರಿಗೆ ಹಿಜ್ರಾರ ಬದುಕಿನ ದಾರುಣ ಕತೆಯನ್ನು ಬಿಂಬಿಸುತ್ತವೆ. ಪೊಲೀಸ್, ರೌಡಿಗಳ ಕೈಯಲ್ಲಿ ನಲುಗುವ ಅವರ ಬದುಕು ಹೋರಾಟದಾಯಕವಾದುದು. ಕೆಲವರಿಗೆ ಬದುಕೆಂಬುದು ಹೋರಾಟವಾಗಿರುತ್ತದೆ ಆದರೆ ನಮ್ಮಂಥವರಿಗೆ ಹೋರಾಟವೇ ಬದುಕು ಎಂದು ರೇವತಿ ಆತ್ಮಕಥನದಲ್ಲಿ ಹೇಳುತ್ತಾರೆ. ಎಲ್ಲೋ ಒಂದು ಹಿಡಿ ಪ್ರೀತಿ, ಒಂದು ಹಿಡಿ ವಾತ್ಸಲ್ಯ, ಒಂದು ಹಿಡಿ ಸಾಮಾನ್ಯ ಬದುಕಿಗಾಗಿ ಹಂಬಲಿಸುವ ರೇವತಿ ಹೆಣ್ಣಿನಂತೆಯೇ, ಪ್ರೀತಿಸಿದವನೊಬ್ಬನನ್ನು ಮದುವೆಯಾಗಿ ಇನ್ನು ನನ್ನ ಬದುಕೆಲ್ಲ ಸುಖಮಯ ಎನ್ನುವಾಗಲೇ ದುರಂತ ಕಾಣುತ್ತದೆ. ಪ್ರೀತಿಸಿದವ ತಿರಸ್ಕರಿಸಿ ಹೊರಟು ಹೋದಾಗ ಮತ್ತೆ ಹೀನ ಬದುಕಿಗೇ ವಾಪಸಾಗುವಾಗ ರೇವತಿಯ ಅಳಲನ್ನು ಕೇಳುವ ಒಂದು ಜೀವವೂ ನಾಗರಿಕ ಸಮಾಜದಲ್ಲಿರುವುದಿಲ್ಲ. ಕೇವಲ ಹೆಣ್ಣಾಗಬೇಕೆಂಬ ಬಯಕೆಯೇ ವ್ಯಕ್ತಿಯೊಬ್ಬನ ಬದುಕನ್ನು ದುರ್ಭರಗೊಳಿಸುವ ಕಥನ ನಾಗರಿಕ ಸಮಾಜಕ್ಕೆ ಪ್ರಶ್ನೆ ಹಾಕುವಂತಿದೆ. ಹಿಜ್ರಾ, ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಕಾರ್ಯನಿರ್ವಹಿಸುವ ಸಂಗಮ ಎನ್ನುವ ಸಂಸ್ಥೆಯಲ್ಲಿ ಕೆಲಸದಲ್ಲಿ ತೊಡಗುವ ರೇವತಿಯ ಬದುಕಿನಲ್ಲಿ ಕೆಲವು ಮಾರ್ಪಾಟುಗಳಾದರೂ ಸಮಾಜ ಹಿಜ್ರಾಗಳನ್ನು ನೋಡುವ ದೃಷ್ಟಿ ಮಾತ್ರ ಬದಲಾಗುತ್ತಿಲ್ಲ ಎಂಬ ನೋವು ಕಾಡುತ್ತದೆ. ಕಚೇರಿಗಳಲ್ಲಿ ಗಂಡೋ, ಹೆಣ್ಣೋ ಎಂಬ ದಾಖಲೆಯನ್ನು ಒದಗಿಸಲು ಒದ್ದಾಡುವ ಅಧಿಕಾರಿಗಳೆದುರು ದಿಟ್ಟವಾಗಿ ಹೆಣ್ಣೆಂದು ಹೋರಾಡಿ ದಾಖಲೆ ಪಡೆದವರು ರೇವತಿ. ಬೆಂಗಳೂರು ನಗರದಲ್ಲಿ ೨೦೦೩ರಲ್ಲಿ ಮೊಟ್ಟಮೊದಲ ಬಾರಿ ಹಿಜ್ರಾ ಒಬ್ಬಳಿಗೆ ಆಸ್ಪತ್ರೆಯಲ್ಲಿ ಹೆಣ್ಣೆಂದು ಅಧಿಕೃತ ಪ್ರಮಾಣ ಪತ್ರ ಪಡೆದವರೂ ರೇವತಿ ಎಂದರೆ ಅಚ್ಚರಿಯಾಗುವುದು. ನಂತರ ವಿವಿಧ ಸಮಾವೇಶಗಳಲ್ಲಿ ಪಾಲ್ಗೊಂಡು ಹಿಜ್ರಾರ ದುರಂತ ಕತೆಯನ್ನು ಪ್ರಸ್ತಾಪಿಸುತ್ತಾರೆ.
ಇಡೀ ಆತ್ಮಕತೆಯಲ್ಲಿ ರೇವತಿ ಪ್ರೀತಿಗಾಗಿ ಅಂಗಲಾಚುವ ಸ್ಥಿತಿ ಕರುಣಾಜನಕವಾದುದು. ಹಾಗೆ ಪ್ರೀತಿಗೆ ಹಂಬಲಿಸುತ್ತಲೇ, ಸುತ್ತಲ ಸಮಾಜವನ್ನು ಎದುರಿಸುವ ಛಲವನ್ನೂ ಬೆಳೆಸಿಕೊಳ್ಳುತ್ತಾರೆ. ಹೀನಾತಿಹೀನ ಸುಳಿಯೊಳಗೆ ಸಿಲುಕಿಯೂ ಅದರಿಂದ ಮೇಲೆ ಬರಲು ಯತ್ನಿಸುವ ಭಾವನೆಗಳ ತಾಕಲಾಟ, ಕತ್ತಲ ಲೋಕದ ದಾರುಣ ಸ್ಥಿತಿ, ಪೊಲೀಸ್, ರೌಡಿಗಳ ಮತ್ತೊಂದು ಮುಖ, ಎಲ್ಲವೂ ಆತ್ಮಕತೆಯಲ್ಲಿ ಅನಾವರಣಗೊಂಡಿವೆ. ಕೆಲವೊಮ್ಮೆ ಹಿಜ್ರಾಗಳ ಬದುಕು ಇಷ್ಟೊಂದು ಯಾತನೆಯಿಂದ ಕೂಡಿದೆಯಾ? ಎಂದು ಬೆಚ್ಚಿಬೀಳುತ್ತೇವೆ. ನಾಗರಿಕ ಸಮಾಜದ ನಗ್ನಸತ್ಯವೊಂದನ್ನು ರೇವತಿ ಹೊರಹಾಕಿದ್ದರೆ. ಇಡೀ ಆತ್ಮಕಥನದಲ್ಲಿ ಹೆಣ್ಣಾಗಿ ಪರಿವರ್ತನೆಯಾಗಿರುವುದು ತನ್ನ ತಪ್ಪು ಎಂದು ರೇವತಿ ಎಲ್ಲೂ ಹೇಳುವುದಿಲ್ಲ. ನನ್ನಲ್ಲಿ ಅಂತಹ ಭಾವನೆ, ಪರಿವರ್ತನೆಗಳು ಮೂಡಿದರೆ ಅದು ನನ್ನ ತಪ್ಪೇ? ಎಂದು ಅವರು ಸಮಾಜವನ್ನು ಪ್ರಶ್ನಿಸುತ್ತಾರೆ. ಕೃತಿ ಎಲ್ಲೂ ಅಸಹನೀಯವೆನಿಸುವುದಿಲ್ಲ. ಅಲ್ಲಲ್ಲಿ ಮಡಿವಂತ ಓದುಗರನ್ನು ಮುಜುಗರಕ್ಕೀಡುಮಾಡುವ ಭಾಷೆಯಿದೆಯಾದರೂ ಹಿಜ್ರಾಗಳ ಬದುಕಿನ ಬಗ್ಗೆ ಬರೆದುಕೊಳ್ಳುವಾಗ ರೇವತಿಗೆ ಅದು ಅನಿವಾರ್ಯವೂ ಆಗಿದೆ. ರೇವತಿಯ ಆತ್ಮಕತೆಯೊಂದಿಗೆ ನಮಗೆಂದೂ ಗೊತ್ತಿರದ ಹಿಜ್ರಾಗಳ ಬದುಕೂ ಇಲ್ಲಿ ತೆರೆದುಕೊಂಡಿದೆ. ಉತ್ತಮ ಕೃತಿಯೊಂದನ್ನು ಕನ್ನಡಕ್ಕೆ ತಂದಿರುವ ಲೇಖಕಿ ದು.ಸರಸ್ವತಿಯವರಿಗೆ ಧನ್ಯವಾದಗಳನ್ನು ಹೇಳಲೇಬೇಕು. ಹಾಗೆಯೇ ಲಂಕೇಶ್ ಪ್ರಕಾಶನಕ್ಕೂ ಕೂಡ.
ಕೊನೆಯಲ್ಲಿ ಕೃತಿಯ ಕೆಲ ಭಾಗಗಳು, ನನ್ನ ವರ್ತನೆ ಹುಡುಗಿಯಂತಿದೆ ಎಂದು ನನಗೆ ಗೊತ್ತಿತ್ತು. ಹಾಗಿರುವುದೇ ನನಗೆ ಸಮಾಧಾನವೆನಿಸುತ್ತಿತ್ತು. ಹೇಗೆ ಹುಡುಗನಂತಿರಬೇಕೆಂದು ನನಗೆ ಗೊತ್ತಿರಲಿಲ್ಲ. ಹುಡುಗಿಯಂತಿರುವುದು ಊಟ ಮಾಡಿದಷ್ಟೆ ಸಹಜವಾಗಿತ್ತು. ಯಾರಾದರೂ ಊಟ ಮಾಡಬೇಡ ಎಂದರೆ ಮಾಡದೇ ಇರುವುದಕ್ಕೆ ಸಾಧ್ಯವಾ? ಹಾಗೇನೇ ಬೇರೆಯವರು ನೀನು ಹುಡುಗಿ ತರ ಇರಬೇಡ ಅಂದಾಕ್ಷಣ ಹಾಗೆ ಇರದಿರುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ನಾನು ಹಾಗೂ ನನ್ನ ತರಹದವರು ಎಲ್ಲಿ ನಿಂತೀದೀವೋ ಅಲ್ಲಿಗೆ ನಮ್ಮನ್ನ ತಂದು ನಿಲ್ಲಿಸಿರೋದು ಈ ಸಮಾಜ ಮತ್ತು ಕಾನೂನು. ಇವೆರಡೂ ನಮ್ಮನ್ನು ತಿರಸ್ಕಾರದಿಂದ ನೋಡುತ್ತವೆ. ದುಡ್ಡಿನ ಸಲುವಾಗಿ ನನ್ನ ಗೌರವವನ್ನು ಪಕ್ಕಕ್ಕಿಟ್ಟು ಬೀದಿಗಿಳಿದೆ. ನನ್ನನ್ನ ಬೀದಿಸೂಳೆ ಅಂತ ಕರೀತಾರೆ, ಆದರೆ ನಮ್ಮನ್ನ ಬಳಸಿಕೊಂಡು ನಮ್ಮಿಂದ ದುಡ್ಡು ಕೀಳೋ ಪೊಲೀಸರನ್ನ ಏನಂತ ಕರೆಯಬೇಕು?, ಲೋಕ ನನ್ನನ್ನು ಓರೆಯಾಗೇ ನೋಡುತ್ತೆ. ಗಂಡಸಾಗಿ ಹುಟ್ಟಿ ಹೆಂಗಸಾದದ್ದು ತಪ್ಪು ಅನ್ನುತ್ತೆ. ದೇವರೇ ನನಗೆ ಈ ಭಾವನೆಗಳನ್ನು ಕೊಟ್ಟಿರೋದು. ಆದ್ರೆ ಈ ಭಾವನೆಗಳನ್ನು ಗೌರವಿಸದಿರೋ ಜಗತ್ತಲ್ಲಿ ನಾನು ಬದುಕಬೇಕು. ಭಿಕ್ಷೆ ಬೇಡೋದನ್ನ, ಮದುವೆ ಮಾಡ್ಕೊಳೋದನ್ನ ತಪ್ಪು ಎಂದು ಜಗತ್ತು ಪರಿಗಣಿಸುತ್ತೆ. ನಾನು ಕೊಲೆ ಮಾಡಿಲ್ಲ, ಮೋಸ ಮಾಡಿಲ್ಲ, ಅಥವಾ ಕಳ್ಳತನ ಮಾಡಿಲ್ಲ ಆದರೂ ಅಪರಾಧಿ ತರಹ ಜಗತ್ತು ನನ್ನನ್ನು ಕಾಣುತ್ತೆ. ನನ್ನ ಯೌವನ, ಸೌಂದರ್ಯವನ್ನು ಶೋಷಣೆ ಮಾಡೋ ಈ ಜಗತ್ತಿಗೆ ನನ್ನೊಳಗಿನ ಪ್ರತಿಭೆಯನ್ನು ಈಚೆ ತೆಗೆಯೋಕೆ ಗೊತ್ತಿಲ್ಲ. ಈ ಜಗತ್ತಲ್ಲಿ ಬದುಕಬೇಕೆಂದರೆ ಅದರ ಬೇಡಿಕೆಗಳೊಂದಿಗೆ ನಾನು ಹೊಂದಾಣಿಕೆ ಮಾಡ್ಕೊಳ್ಳಲೇಬೇಕು.
ಕೃತಿ : ಬದುಕು ಬಯಲು ಹಿಜ್ರಾ ಒಬ್ಬಳ ಆತ್ಮಕತೆ
ಮೂಲ ಲೇಖಕಿ: ಎ.ರೇವತಿ
ಅನುವಾದ: ದು.ಸರಸ್ವತಿ
ಪ್ರಕಾಶನ: ಲಂಕೇಶ್ ಪ್ರಕಾಶನ, ಬೆಂಗಳೂರು
ಬೆಲೆ: ರೂ.೨೦೦

Monday, September 12, 2011

ಜೋಕುಮಾರಸ್ವಾಮಿ ಹಬ್ಬ

ಜೋಕುಮಾರಸ್ವಾಮಿ ಗಂಗಾಮತಸ್ಥರ ಆರಾಧ್ಯ ದೈವ. ಜೋಕುಮಾರನನ್ನು ಪೂಜಿಸುವುದರಿಂದ ಮಳೆ ಬರುವುದೆಂಬ ನಂಬಿಕೆ ರೈತರಲ್ಲಿ ಹಾಸುಹೊಕ್ಕಾಗಿದೆ. ಗಂಗಾಮತಸ್ಥ ಜನಾಂಗದವರ ಮನೆಯಿಂದಲೇ ಜೋಕುಮಾರನ ಹುಟ್ಟು. ಪಟ್ಟಣದಲ್ಲಿ ಬಾರಿಕರ ಗೌರಮ್ಮನವರ ಮನೆಯಲ್ಲಿ ಜೋಕುಮಾರಸ್ವಾಮಿ ಹುಟ್ಟುತ್ತಾನೆ. ‘ಅಡ್ಡಡ್ಡ ಮಳಿ ಬಂದ, ದೊಡ್ಡದೊಡ್ಡ ಕೆರಿ ತುಂಬಿ, ಗೊಡ್ಡುಗಳೆಲ್ಲ ಹೈನಾಗಿ ಜೋಕುಮಾರ, ಜೋಕುಮಾರ, ಮಡಿವಾಳರ ಕೇರಿ ಹೊಕ್ಕಾನೆ ಜೋಕುಮಾರ, ಮುಡಿ ತುಂಬಾ ಹೂ ಮುಡಿದಂತ ಚಲುವಿ ತನ್ನ ಮಡದಿಯಾಗೆಂದ ಸುಕುಮಾರ........’ ಎಂದು ಗುಂಪಾಗಿ ಹಾಡುತ್ತ ಪುಟ್ಟಿಯೊಂದರಲ್ಲಿ ಜೋಕುಮಾರನನ್ನು ಮನೆಗಳಿಗೆ ಹೊತ್ತೊಯ್ಯುವ ಹಬ್ಬದ ಆಚರಣೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಇದೀಗ ಆರಂಭಗೊಂಡಿದೆ.
ಹಲಕಜ್ಜಿ ನರಸಮ್ಮ, ಹಲಕಜ್ಜಿ ಓಬಮ್ಮ, ದಾಣಿ ಸಣ್ಣಚೌಡಮ್ಮ, ದಾಣೇರ ಹನುಮಂತಮ್ಮ, ಬಾರಿಕರ ವೇಣುಗೋಪಾಲ, ಪವನಕುಮಾರ ಇವರೆಲ್ಲ ಹಬ್ಬದ ಸಂದರ್ಭದಲ್ಲಿ ಜೋಕುಮಾರನನ್ನು ಹೊತ್ತು ಹಾಡು ಹೇಳುತ್ತಾ ಪಟ್ಟಣದಲ್ಲಿ ಸಂಚರಿಸುತ್ತಿದ್ದಾರೆ.
ಬೆನಕನ ಅಮವಾಸ್ಯೆಯಾದ ೭ನೇ ದಿನದಿಂದ ಜೋಕುಮಾರನ ಹಬ್ಬ ಆರಂಭಗೊಳ್ಳುತ್ತದೆ. ಎಣ್ಣೆ ಮತ್ತು ಮಣ್ಣಿನಿಂದ ಜೋಕುಮಾರನನ್ನು ತಯಾರಿಸಲಾಗುತ್ತದೆ. ಈ ರೀತಿಯಲ್ಲಿ ಸಿದ್ಧಗೊಂಡ ಜೋಕುಮಾರನ ಮೂರ್ತಿಗೆ ಬೇವಿನ ಎಲೆ, ಸಜ್ಜೆ, ಜೋಳ, ದಾಸವಾಳ ಹೂವಿನಿಂದ ಪೂಜೆ ಮಾಡಿ ಅಲಂಕರಿಸಲಾಗುವುದು. ಜೋಕುಮಾರಸ್ವಾಮಿ ಆಚರಣೆಯ ಹಿಂದೆಯೂ ಒಂದು ಕಥೆಯಿದೆ. ಜೋಕ ಮತ್ತು ಎಳೆಗೌರಿ ಎಂಬ ದಂಪತಿಗಳಿಗೆ ಬಹು ಕಾಲ ಮಕ್ಕಳಾಗದ ಕಾರಣ ಶಿವನನ್ನು ಪ್ರಾರ್ಥಿಸುತ್ತಾರೆ. ಆಗ ಶಿವನು ಒಬ್ಬ ಮಗನನ್ನು ಅನುಗ್ರಹಿಸುತ್ತಾನೆ. ಆದರೆ ಆ ಮಗುವಿಗೆ ಶೀಘ್ರ ಬೆಳವಣಿಗೆ ಹಾಗೂ ಏಳೇ ದಿನಗಳ ಆಯಸ್ಸು ಇರುತ್ತದೆ. ಹೀಗಿರಬೇಕಾದರೆ ಒಮ್ಮೆ ಮಳೆ ಹೋಗಿ ಬೆಳೆಗಳೆಲ್ಲ ಒಣಗಿ, ಜನರ ಸಂಕಟ ಮುಗಿಲು ಮುಟ್ಟುತ್ತದೆ. ಆಗ ಜೋಕುಮಾರ ತನ್ನ ಕುದುರೆಯನ್ನೇರಿ ಹೊಲಗದ್ದೆಗಳಲ್ಲಿ ಸಂಚರಿಸತೊಡಗುತ್ತಾನೆ. ಅವನು ತನ್ನ ಮೇಲು ಹೊದಿಕೆಯನ್ನು ಒಮ್ಮೆ ಜೋರಾಗಿ ಬೀಸಿದಾಗ ಅದರ ಸೆಳಕಿಗೆ ಚದುರಿದ ಮೋಡಗಳು ಮಳೆ ಸುರಿಸುತ್ತವೆ. ಯಥೇಚ್ಚವಾಗಿ ಬಿದ್ದ ಮಳೆಯಿಂದಾಗಿ ಬೆಳೆಗಳು ಸಮೃದ್ಧವಾಗಿ ಬೆಳೆಯುತ್ತವೆ. ಬತ್ತಿ ಬರಿದಾಗಿದ್ದ ಕೆರೆಗಳು ತುಂಬಿ ಹರಿಯುತ್ತವೆ. ಇದರಿಂದ ಸಂತಸಗೊಂಡು ಜೋಕುಮಾರನು ಹಾಗೇ ಹೊಲಗದ್ದೆಗಳಲ್ಲಿ ಸಂಚರಿಸುತ್ತಿದ್ದಾಗ ಸುಂದರಿಯಾದ ಒಬ್ಬ ಯುವತಿಯನ್ನು ನೋಡುತ್ತಾನೆ. ಆಕೆ ಅಗಸರ ಯುವತಿ. ಅವಳನ್ನು ಇಷ್ಟಪಟ್ಟ ಜೋಕುಮಾರನನ್ನು ಸಹಿಸದ ಆ ಯುವತಿಯ ತಂದೆ, ಜೋಕುಮಾರನ ತಲೆಯನ್ನು ಕತ್ತರಿಸಿ ನದಿಗೆ ಎಸೆದುಬಿಡುತ್ತಾನೆ. ಆ ತಲೆಯು ಒಬ್ಬ ಬೆಸ್ತರವನಿಗೆ ದೊರಕುತ್ತದೆ. ಆತನು ಜೋಕುಮಾರನನ್ನು ಗುರುತಿಸಿ, ತಮ್ಮ ಬೆಳೆಗಳನ್ನು ರಕ್ಷಿಸಿ ತಮ್ಮ ಬದುಕಿಗೆ ಆಧಾರವಾದ ಜೋಕುಮಾರನ ತಲೆಯನ್ನು ಊರಿಗೆ ತರುತ್ತಾನೆ. ಊರವರೆಲ್ಲ ಸೇರಿ ಜೋಕುಮಾರನಿಗೆ ಪೂಜೆ ಸಲ್ಲಿಸುತ್ತಾರೆ. ಅಂದಿನಿಂದ ಈ ಜೋಕುಮಾರನ ಪೂಜೆ ಆಚರಣೆಗೆ ಬಂತೆಂದು ಪ್ರತೀತಿ ಇದೆ.
ಸಾಮಾನ್ಯವಾಗಿ ಜೋಕುಮಾರಸ್ವಾಮಿಯನ್ನು ಪುಟ್ಟಿಯಲ್ಲಿ ಹೊತ್ತ ಮಹಿಳೆಯರು ಹಾಗೂ ಪುರುಷರ ಗುಂಪು ಜೋಕುಮಾರನ ಕುರಿತಾದ ಕತೆ, ಹಾಡುಗಳನ್ನು ಹೇಳುತ್ತಾ ಸಂಚರಿಸುತ್ತಾರೆ. ನಿಗದಿಪಡಿಸಿದ ಹಾಗೂ ಸಂಚರಿಸಿದ ಮನೆಗಳಲ್ಲಿ ಅಡಿಕೆ, ಎಲೆ, ಅಕ್ಕಿ, ರಾಗಿ, ಎಣ್ಣೆ, ಉಪ್ಪು, ಹುಣಸೆ, ಒಣಮೆಣಸಿನಕಾಯಿ, ಬೆಲ್ಲ ಮುಂತಾದ ಪದಾರ್ಥಗಳನ್ನು ಕೊಡುವರು. ಜೋಕುಮಾರನನ್ನು ಹೊತ್ತು ಸಂಚರಿಸುವುದರಲ್ಲಿನ ನಿಯಮವೆಂದರೆ ೭ ದಿನ ೭ ಊರು ತಿರುಗಬೇಕು ಎಂಬುದು. ೭ ದಿನಗಳ ಪ್ರಕ್ರಿಯೆ ಕೊನೆಗೊಂಡ ನಂತರ ಕೊನೆಯ ದಿನ ಗುರುತಿಸಿದ ಮನೆಯಲ್ಲಿ ಜೋಕುಮಾರನ ಮೂರ್ತಿಗೆ ಚೂರಿ ಹಾಕುವರು. ನಂತರ ಜೋಕುಮಾರ ಸತ್ತನೆಂದು ಅಗಸರ ಬಂಡೆ ಅಡಿ ಮಣ್ಣಿನಲ್ಲಿ ಹೂತು ಹಾಕಿ ಬರುವರು. ಹೀಗೆ ಹೂತಿಡುವ ಸಂದರ್ಭದಲ್ಲಿ ವಿಧಿ ವಿಧಾನಗಳಿವೆ. ನಂತರ ಸಂಚರಿಸಿದ ಸಂದರ್ಭದಲ್ಲಿ ದೊರೆತ ಧಾನ್ಯಗಳಿಂದ ಅಡುಗೆ ಮಾಡಿ ಸಾಮೂಹಿಕ ಭೋಜನ ಮಾಡುವರು. ಜೋಕುಮಾರಸ್ವಾಮಿ ಈಗ ತಾಲೂಕಿನ ಮನೆ ಮನೆಗಳಿಗೆ ಸಂಚಾರ ಹೊರಟಿದ್ದಾನೆ.