Friday, November 15, 2013

ಹತ್ತು ನಿಮಿಷ ಸಮಯವಿದೆಯೇ ?

ನೀವು ಹೇಳುತ್ತೀರಿ - ನಮ್ಮ ಸರ್ಕಾರಕ್ಕೆ ತಾಕತ್ತೇ ಇಲ್ಲ.
ನೀವು ಹೇಳುತ್ತ್ತೀರಿ - ನಮ್ಮ ಕಾನೂನುಗಳು ಓಬಿರಾಯನ ಕಾಲದವು.
ನೀವು ಹೇಳುತ್ತೀರಿ - ನಮ್ಮ ಮುನಿಸಿಪಾಲಿಟಿಗಳು ಕಸ ಎತ್ತುವುದಿಲ್ಲ. ನೀವು ಹೇಳುತ್ತೀರಿ - ನಮ್ಮ ಫೋನ್‌ಗಳೆಲ್ಲಿ ಕೆಲಸ ಮಾಡುತ್ತವೆ? ರೈಲ್ವೆ ಬಿಡಿ, ಅದೇ ಒಂದು ದೊಡ್ಡು ಜೋಕು. ಅಂಚೆ? ಸರಿ ಎಂದಾದರೂ ಕಲಕ್ಕೆ ಸರಿಯಾಗಿ ಬಟವಾಡೆ ಮಾಡುತ್ತವೆಯೇ? ಇನ್ನು ವಿಮಾನ ಸಾರಿಗೆ - ಜಗತ್ತಿನಲ್ಲಿ ಇಂಥ ಕಳಪೆಯದು ಬೇರೊಂದಿಲ್ಲ. ನಮ್ಮ ದೇಶ ನಾಯಿಪಾಲಾಗಿ ಹೋಗಿದೆ, ಗುಂಡಿಗೆ ಬಿದ್ದು ಎಷ್ಟೊ ವರ್ಷಗಳಾಗಿ ಹೋಗಿವೆ
                     ಈ ಮಾತುಗಳನ್ನು ನೀವು ಹೇಳುತ್ತಲೇ ಹೋಗುತ್ತೀರಿ. ಆದರೆ ಇದರ ಬಗ್ಗೆ ನೀವು ಏನು ಮಾಡಿದ್ದೀರಿ? ಒಬ್ಬ ವ್ಯಕ್ತಿ ಸಿಂಗಪುರಕ್ಕೆ ಹೊರಟಿದ್ದಾನೆಂದು ಭಾವಿಸಿ, ಮಸಲಾ ನೀವೆ ಎಂದು ಇಟ್ಟುಕೊಳ್ಳೋಣ. ವಿಮಾನ ನಿಲ್ದಾಣದಿಂದ ಹೊರಬರುತ್ತೀರಿ. ಹೌದು, ಜಗತ್ತಿನಲ್ಲೇ ಅದು ಸರ್ವಶ್ರೇಷ್ಟ ವಿಮಾನ ನಿಲ್ದಾಣ. ಸಿಂಗಪುರದಲ್ಲಿ ನೀವು ರಸ್ತೆಯ ಮೇಲೆ ಸಿಗರೇಟು ತುಂಡನ್ನು ಬಿಸುಡುವುದಿಲ್ಲ. ಅಂಗದಿಗಳಲ್ಲಿ ತಿನ್ನುವುದಿಲ್ಲ. ಅವರ ನೆಲದಡಿಯ ಸಾರಿಗೆ ಸಂಪರ್ಕ ಕಂಡು ನೀವೇ ಹೆಮ್ಮೆಯಿಂದ ಹೇಳಿಕೊಳ್ಳುತ್ತೀರಿ, ಅರ್ಚರ್ಡ್ ರಸ್ತೆಯಲ್ಲಿ ಸಂಜೆ ೫ರಿಂದ ೮ರವರೆಗೆ ವಾಹನ ಚಲಾಯಿಸಲು ೫ ಡಾಲರ್ ಶುಲ್ಕವನ್ನು ನಗುನಗುತ್ತಲೇ ಕೊಡುತ್ತೀರಿ. ಅದಕ್ಕಿಂತಲೂ ಹೆಚ್ಚಿಗೆ ಸಮಯ ತೆಗೆದುಕೊಂಡಾಗ ಪಂಚಿಂಗ್ ಜಾಗಕ್ಕೇ ಬಂದು ಪಂಚ್ ಮಾಡುತ್ತೀರಿ. ನೀವು ಎಂಥ ದೊಡ್ಡ ಮನುಷ್ಯರಾದರೂ ಅಷ್ಟೇ. ಸಿಂಗಪುರದಲ್ಲಿ ತುಟಿಪಿಟಕ್ಕೆನ್ನದೆ ಇವೆಲ್ಲವನ್ನೂ ಮಾಡುತ್ತೀರಿ ಅಲ್ಲವೆ? ಇನ್ನು ದುಬೈನಲ್ಲಿ ರಂಜಾನ್ ಸಮಯದಲ್ಲಿ ಸಾರ್ವಜನಿಕವಾಗಿ ತಿನ್ನುವ ಸಾಹಸ ನೀವು ಮಾಡುವುದಿಲ್ಲ.
                        ತಿಂಗಳಿಗೆ ಹತ್ತು ಪೌಂಡ್ ಆಮಿಷ ತೋರಿಸಿ ನಾನು ಈಗ ಎಸ್.ಟಿ.ಡಿ, ಐ.ಎಸ್.ಡಿ.ಯಲ್ಲಿ ಮಾತನಾಡುವ ಟೆಲಿಫೋನಿನ ಬಿಲ್ಲನ್ನು ಬೇರೆಯವರ ನಂಬರಿಗೆ ವರ್ಗಾಯಿಸು ಎಂದು ಲಂಡನ್ನಿನಲ್ಲಿ ನೀವು ಎಂದಾದರೂ ಹೇಳಬಲ್ಲಿರಾ? ವಾಷಿಂಗ್‌ಟನ್‌ನಲ್ಲಿ ನಿಮ್ಮ ವಾಹನವನ್ನು ಗಂಟೆಗೆ ೫೫ ಕಿ.ಮೀ.ಗೂ ಹೆಚ್ಚು ಓಡಿಸುತ್ತ ಗೊತ್ತಾ ನಾನು ಯಾರ ಮಗ? ತೆಗೆದುಕೊ ನಾಲ್ಕು ಕಾಸು ಎಂದು ಪೊಲೀಸ್‌ರಿಗೆ ಎಸೆದು ಹೋಗಲು ಸಾಧ್ಯವೆ? ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ಎಳೆನೀರು ಕುಡಿದು ಬಿಸುಟ ಚಿಪ್ಪನ್ನು ಕಸದ ತೊಟ್ಟಿಯಲ್ಲಲ್ಲದೆ ಬೇರೆಲ್ಲಾದರೂ ನೋಡಲು ಸಾಧ್ಯವೆ? ಹಾಗಿದ್ದಲ್ಲಿ, ಆ ನೀನು ಕುರಿತು ಇನ್ನಷ್ಟು ಹೇಳಬೇಕು. ವಿದೇಶಿ ನೆಲದಲ್ಲಿ, ವಿದೇಶಿ ಕಾನೂನನ್ನು ವಿನೀತರಾಗಿ ಗೌರವಿಸಿ, ನಮ್ಮ ದೇಶಕ್ಕೆ ಬಂದೊಡನೆ ಎಲ್ಲವನ್ನೂ ಗಾಳಿಗೆ ತೂರುವುದೇಕೆ? ಈ ನೆಲ ಮುಟ್ಟುತ್ತಲೇ ಏಕೆ ಇಂಥ ಪರಿವರ್ತನೆ? ಸಿಗರೇಟು ತುಂಡುಗಳನ್ನು ಅದೇ ನೀವು ಇಲ್ಲಿ ಬಿಸುಡುವಿರಿ., ಹರಿದ ಕಾಗದಗಳನ್ನು ರಸ್ತೆಯ ಮೇಲೆ ಹಾಕುತ್ತೀರಿ. ಹೊರದೇಶದಲ್ಲಿ ಅವರ ದೇಶದವರೇ ಎಂಬಂತೆ ಶಿಸ್ತು ಪಾಲಿಸುತ್ತೀರಿ, ಭಾರತಕ್ಕೆ ಬಂದೊಡನೆ ಏಕೆ ಇಂಥ ಮನೋಭಾವ? ನನಗೆ ಮುಂಬೈನ ಮಾಜಿ ಮುನಿಸಿಪಲ್ ಕೌನ್ಸಿಲರ್ ತಿನೈಕರ್ ಅವರ ಸಂದರ್ಶನವೊಂದು ಥಟ್ಟನೆ ನೆನಪಾಗುತ್ತಿದೆ. 
                       ಶ್ರೀಮಂತರ ನಾಯಿಗಳನ್ನು ಹೇಸಿಗೆ ಉದುರಿಸಲೆಂದೇ ಬೀದಿಗೆ ಮೆರವಣಿಗೆಯಲ್ಲಿ ತರುತ್ತಾರೆ. ಅದೇ ಜನ ಮುನಿಸಿಪಾಲಿಟಿಯನ್ನು ತರಾಟೆಗೆ ತೆಗೆದುಕೊಂಡು ಈ ಮಂದಿಗೆ ಕ್ಲೀನ್ ಎಂಬುದರ ಪದವೇ ಗೊತ್ತಿಲ್ಲ ಎಂದು ಮೂಗು ಮುರಿಯುತ್ತಾರೆ. ಮುನಿಸಿಪಾಲಿಟಿಯವರೇನು ಮಾಡಬೇಕು? ಶ್ರೀಮಂತರ ನಾಯಿಗಳು ಬೀದಿಗಿಳಿಯುತ್ತಲೇ ಅವುಗಳ ಹಿಂದೆ ಪೊರಕೆ ಬುಟ್ಟಿಗಳ ಸಮೇತ ಹೋಗಬೇಕೆ?
                       ಅಮೆರಿಕದಲ್ಲಿ ನಾಯಿ ಮಾಡುವ ಹೇಸಿಗೆಯನ್ನು ಅದರ ಮಾಲೀಕರೆ ಸ್ವಚ್ಛಗೊಳಿಸಬೇಕು. ಜಪಾನ್‌ನಲ್ಲೂ ಇದೇ ಕ್ರಮವಿದೆ. ನಮ್ಮಲ್ಲಿ ಎಂದಾದರೂ ಹೀಗೆ ಮಾಡಿದ್ದೇವೆಯೆ? ಮತಗಟ್ಟೆಗೇನೋ ಟಾಕೋಠೀಕಾಗಿ ಹೋಗಿ ಮತ ಚಲಾಯಿಸಿ ಬರುತ್ತೇವೆ. ಅಲ್ಲಿಗೆ ಮುಗಿಯಿತು ಕರ್ತವ್ಯ. ಮನೆಯಲ್ಲೇ ಕುಳಿತು ಸರ್ಕಾರ ಹಾಗೆ ಮಾಡಲಿಲ್ಲ, ಹೀಗೆ ಮಾಡಲಿಲ್ಲ ಎಂದು ಆರೋಪದ ಪಟ್ಟಿ ತಯಾರಿಸುತ್ತೇವೆ. ನಮ್ಮ ಕೊಡುಗೆ ಏನು ಎಂದು ಎಂದಾದರೂ ಯೋಚಿಸಿದ್ದೇವೆಯೇ? ಎಂದಾದರೂ ಬೀದಿಯಲ್ಲಿ ಹಾರಾಡುವ ಹರಿದ ಕಾಗದದ ಚೂರನ್ನು ಕಸದ ತೊಟ್ಟಿಗೆ ಹಾಕಿದ್ದೇವೆಯೆ? ರೈಲ್ವೆ ಶೌಚಾಲಯ ತೀರ ಹೊಲಸು, ಅದನ್ನು ಸರಿಯಾಗಿ ಕ್ಲೀನ್ ಮಾಡುವುದಿಲ್ಲ ಎಂದು ಹಲುಬುತ್ತೇವೆ. ಹೊಲಸು ಮಾಡುವವರು ಯಾರು? ನಾವೇ ತಾನೆ? ಇಂಡಿಯನ್ ಏರ್ ಲೈನ್ಸ್, ಏರ್ ಇಂಡಿಯಾ ರುಚಿಕರ ಆಹಾರ ಕೊಡಬೇಕು ಎಂದು ನಿರೀಕ್ಷಿಸುತ್ತೇವೆ. ಸ್ವಲ್ಪ ಅವಕಾಶ ಸಿಕ್ಕಿದರೂ ಏನೇನನ್ನೋ ಎಗರಿಸಿಬಿಡುತ್ತೇವೆ.
                        ಇನ್ನು ಸಾಮಾಜಿಕ ಕಂಟಕಗಳಾದ ವರದಕ್ಷಿಣೆ, ಮಹಿಳೆಯರಿಗೆ ಕಿರುಕುಳ ಇಂಥ ಪ್ರಶ್ನೆ ಬಂದಾಗ ಎಲ್ಲ ಮಾಧ್ಯಮಗಳ ಮೂಲಕ ಸಾರ್ವಜನಿಕವಾಗಿ ಧ್ವನಿ ಏರಿಸಿ ಮಾತನಾಡುತ್ತೇವೆ. ಆದರೆ ಅದೇ ನಮ್ಮ ಮನೆಯಲ್ಲಿ?  ನೋಡಿ ಇಡೀ ವ್ಯವಸ್ಥೆಯೇ ಬದಲಾಗಬೇಕು, ನಾನು ನನ್ನ ಮಗನೊಬ್ಬನಿಗೆ ವರದಕ್ಷಿಣೇ ತೆಗೆದುಕೊಳ್ಳದಿದ್ದರೆ ಏನಾಯಿತು? ಜಗತ್ತು ಬದಲಾಗುತ್ತದೆಯೇ? ಎಂದು ನಿಮಗೆ ನೀವೇ ಸಾಂತ್ವನ ಮಾಡಿಕೊಳ್ಳುತ್ತೀರಿ. ಹಾಗಾದರೆ ಯಾವುದು ಈ ವ್ಯವಸ್ಥೆ? ನಾವು ನೀವು ಸೇರಿಯೇ ಅಲ್ಲವೆ ಈ ವ್ಯವಸ್ಥೆ ಎನ್ನುವುದು ರೂಪುಗೊಂಡಿರುವುದು. ನೀವು ಎಂದು ಹೇಳುವುದು ಸುಲಭ, ನಾವು ಎಂದು ಹೇಳುವುದು ಕಷ್ಟ ಅಲ್ಲವೆ?  ನಮ್ಮ ಬುಡಕ್ಕೇ ಬಂದಾಗ ಮುದುರಿ ಗೂಡು ಸೇರಿಕೊಳ್ಳುವ ಪ್ರವೀಣರು ನಾವು. 
                          ಯಾವುದೋ ಪರರಾಷ್ಟ್ರವನ್ನು ಆಗಾಗ ಎದೆಯುಬ್ಬಿಸಿ ನೆನೆಸಿಕೊಳ್ಳುತ್ತ ಅವರು ಬಂದು ನಮ್ಮದೆಲ್ಲವನ್ನೂ ರಿಪೇರಿ ಮಾಡಿಕೊಡುತ್ತಾರೆಂದು ಭ್ರಮಿಸುತ್ತ, ಅವರ ಕೈಗೆ ನಮ್ಮ ದೇಶದ ಭವಿಷ್ಯವನ್ನಿತ್ತು ಓಡಿ ಹೋಗುವ ತವಕ ನಮ್ಮದು. ಇಲ್ಲಿ ಸೋಂಭೇರಿಗಲಾಗಿ, ಅಮೆರಿಕಕ್ಕೆ ಓಡಿಹೋಗಿ, ಆದೇಶದ ವ್ಯವಸ್ಥೆಯ ಬಗ್ಗೆ ಬಾಯಿತುಂಬ ಮಾತನಾಡುತ್ತೇವೆ. ನ್ಯೂಯಾರ್ಕಿನಲ್ಲಿ ಏನೋ ಎಡವಟ್ಟು ಎಂದೊಡನೆ, ಲಂಡನ್‌ಗೆ ಓಡಿಹೋಗುತ್ತೇವೆ, ಇಂಗ್ಲೆಂಡಿನಲ್ಲಿ ನಿರುದ್ಯೋಗದ ವಾಸನೆ ಬಡಿದೊಡನೆ ಕೊಲ್ಲಿದೇಶದ ವಿಮಾನವನ್ನು ಹತ್ತಲು ಹಾತೊರೆಯುತ್ತೇವೆ. ಅಲ್ಲಿ ಕೊಲ್ಲಿ ಯುದ್ಧದಲ್ಲಿ ಸಿಕ್ಕಿಹಾಕಿಕೊಂಡರೆ ತಾರಕದಲ್ಲಿ ಕೂಗಿಕೊಳ್ಳುತ್ತ ನಮ್ಮನ್ನು ರಕ್ಷಿಸಿ ಎಂದು ಅಂಗಲಾಚುತ್ತೇವೆ. ಭಾರತ ಸರ್ಕಾರ ನಿಮ್ಮನ್ನು ವಾಪಸ್ ಕರೆಸಿಕೊಳ್ಳಲು ಏನೆಲ್ಲ ಲಾಗಾ ಹಾಕಬೇಕು. ನಮ್ಮ ದೇಶದ ಮಾನ ಹರಾಜು ಮಾಡಲು ಎಲ್ಲರಿಗೂ ಉತ್ಸಾಹ. ಹಣಕ್ಕೆ ನಮ್ಮ ಪ್ರಜ್ಞೆಯನ್ನು ಅಡವಿಟ್ಟಿದ್ದೇವೆ.
                         ನನ್ನ ನೆಚ್ಚಿನ ಭಾರತೀಯರೇ, ನಾನು ಇಲ್ಲಿ ಬರೆದಿರುವುದು ಸ್ವಲ್ಪ ಖಾರ ಎನ್ನಿಸಬಹುದು ಆದರೆ ನಮ್ಮ ಅಂತರಂಗವನ್ನು ಶೋಧಿಸುವ ಕೆಲಸ ಮಾಡಬೇಕಾಗಿದೆ. ನಮ್ಮ ಪ್ರಜ್ಞೆಯೇ ನಮಗೆ ಮುಳ್ಳಾಗಿ ಚುಚ್ಚಬೇಕು. ಭಾರತಕ್ಕೆ ನಾವೇನು ಮಾಡಬೇಕು ಎನ್ನುವುದನ್ನು ನಾವೆಲ್ಲ ಕೂಡಿಯೇ ಯೋಚಿಸೋಣ. ನನ್ನ ಮಾತುಗಳು ಸರಿ ಎನ್ನಿಸಿದರೆ ಈ ಭಾಷಟನದ ಪ್ರತಿಯನ್ನು ಪ್ರತಿ ಭಾರತೀಯನಿಗೂ ರವಾನೆ ಮಾಡಿ. ಇ-ಮೇಲ್‌ನಲ್ಲಿ ಯಾವುದೋ ಕೆಟ್ಟ ಜೋಕು, ಕೆಲಸಕ್ಕೆ ಬಾರದ ಹರಟೆ ಕಳಿಸುವುದಕ್ಕೆ ಬದಲು.

ಸಂಗ್ರಹ : ಭವ್ಯ ಭಾರತದ ಕನಸುಗಾರ ಅಬ್ದುಲ್ ಕಲಾಂ
ಲೇಖಕ : ಟಿ.ಆರ್.ಅನಂತರಾಮು
ಪ್ರಕಾಶನ : ಸಪ್ನ ಬುಕ್ ಹೌಸ್, ಬೆಂಗಳೂರು
ಬೆಲೆ : ರೂ.೧೨೦


Thursday, November 14, 2013

ಹತ್ತು ನಿಮಿಷ ಸಮಯವಿದೆಯೇ ?

                     ನನಗೆ ಕಸಿವಿಸಿಯಾಗುವುದೆಂದರೆ ಏಕೆ ನಮ್ಮ ಮಾಧ್ಯಮಗಳು ಸದಾ ನಕಾರಾತ್ಮಕ ಪ್ರಸಂಗಗಳಿಗೆ ಭಾರಿ ಪ್ರಚಾರ ನೀಡುತ್ತವೆ. ನಮ್ಮದೇ ಸಾಮರ್ಥ್ಯವನ್ನು ಗುರುತಿಸಲು ಏಕೆ ಹಿಂದೇಟು ಹಾಕುತ್ತೇವೆ? ಎಂಥ ಹೆಮ್ಮೆ ಪಡುವ ದೇಶ ನಮ್ಮದು. ಎಷ್ಟೋ ಕ್ಷೇತ್ರಗಳಲ್ಲಿ ಅಬ್ಬಬ್ಬಾ ಎನ್ನಿಸುವಷ್ಟು ಪ್ರಗತಿ ಸಾಧಿಸಿದ್ದೇವೆ. ಆದರೆ ಅದನ್ನೆಲ್ಲ ಗುರುತಿಸಲು ಅದೇನೋ ಹಿಂಜರಿಕೆ. ಅದೇನೋ ಆಲಸ್ಯ. ಏಕೆ ಇಂಥ ಮನೋಭಾವ?ಹಾಲು ಉತ್ಪಾದನೆಯಲ್ಲಿ ನಾವು ಜಗತ್ತಿನಲ್ಲೇ ಮೊದಲಿಗರು. ದೂರಸಂವೇದಿ ಉಪಗ್ರಹಗಳ ಯಶಸ್ವಿ ಉಡಾವಣೆಯಲ್ಲಿ ನಾವು ನಂಬರ್ ಒನ್. ಗೋಧಿ ಬೆಳೆಯಲ್ಲಿ ನಮ್ಮದು ಎರಡನೇ ಸ್ಥಾನ. ಭತ್ತದಲ್ಲೂ ಅಷ್ಟೇ ಎರಡನೆಯ ಸ್ಥಾನ ನಮ್ಮದು.
                    ಡಾ.ಸುದರ್ಶನ್ ಅವರ ಸಾಧನೆಯನ್ನೇ ನೋಡಿ. ಈ ಮನುಷ್ಯ ಬುಡಕಟ್ಟು ಗ್ರಾಮಗಳನ್ನು ಹೇಗೆ ಸ್ವಾವಲಂಬಿಯಾಗುವಂತೆ ಪರಿವರ್ತನೆ ಮಾಡಿದ್ದಾರೆ.
                    ಇಂಥ ಸಾಧನೆಗಳು ಲಕ್ಷಾಂತರವಿವೆ. ಆದರೆ ನಮ್ಮ ಮಾಧ್ಯಮಗಳಿಗೆ ನಮ್ಮ ವೈಫಲ್ಯಗಳನ್ನು ವೈಭವೀಕರಿಸುವ ಹುಚ್ಚು. ಒಮ್ಮೆ ಟೆಲ್ ಅವಿವ್‌ನಲ್ಲಿ ವೃತ್ತಪತ್ರಿಕೆ ಓದುತ್ತಿದ್ದೆ. ಹಿಂದಿನ ದಿನ ಭಾರಿ ಅನಾಹುತವಾಗಿತ್ತು. ಬಾಂಬ್ ದಾಳಿ ಆಗಿತ್ತು. ಸಾವು ನೋವಾಗಿತ್ತು. ಎಲ್ಲೆಲ್ಲೂ ಭಯದ ವಾತಾವರಣ. ಆದರೆ ಮರುದಿನದ ವೃತ್ತಪತ್ರಿಕೆಯಲ್ಲಿ ಒಂದು ಚಿತ್ರ ಮುದ್ರಣವಾಗಿತ್ತು. ಅದು ಒಬ್ಬ ಯಹೂದಿ ಸಂಭಾವಿತನದು. ಆತ ಇಡೀ ಆ ಬಣಗುಟ್ಟುವ ನೆಲವನ್ನು ನಂದನವನವನ್ನಾಗಿ ರೂಪಾಂತರಗೊಳಿಸಿದ್ದ. ಇಂಥ ಸುದ್ದಿ ಅಂಥ ಕ್ಷಣಗಳಲ್ಲಿ ಬದುಕಿಗೆ ಭರವಸೆ ಮೂಡಿಸುತ್ತಿತ್ತು. ಜೀವನಕ್ಕೆ ಬೇಕಾಗಿರುವುದು ಸಕಾರಾತ್ಮಕ ದೃಷ್ಟಿ. ಬಾಂಬ್ ದಾಳಿ, ಸಾವು ನೋವು ಇವೆಲ್ಲ ಸುದ್ದಿಯನ್ನು ಪ್ರಕಟಿಸಿತ್ತು ಆ ಪತ್ರಿಕೆ ನಿಜ. ಆದರೆ ಮುಖಪುಟದಲ್ಲಲ್ಲ. ದೊಡ್ಡ ಅಕ್ಷರಗಳಲ್ಲೂ ಅಲ್ಲ. ಒಳಪುಟದಲ್ಲಿ. ಅದನ್ನು ವೈಭವೀಕರಿಸುವ ಉತ್ಸಾಹವನ್ನು ಪತ್ರಿಕೆಗಳು ತೋರಲಿಲ್ಲ. ಅವೆಲ್ಲ ಒಳ್ಳೆ ಸುದ್ದಿಗಳ ಮಧ್ಯೆ ಹೂತುಹೋಗಿದ್ದವು. ನಮ್ಮಲ್ಲಿ ಪತ್ರಿಕೆಗಳಲ್ಲಿ ನಾವು ಬಹುತೇಕ ಓದುವುದೇ ಕೊಲೆ, ಸುಲಿಗೆ, ಅತ್ಯಾಚಾರ, ಭಯೋತ್ಪಾದನೆ ಇಂಥ ಸುದ್ದಿಗಳನ್ನು. ಏನಾಗಿದೆ ನಮಗೆ?

ಸಂಗ್ರಹ : ಭವ್ಯ ಭಾರತದ ಕನಸುಗಾರ ಅಬ್ದುಲ್ ಕಲಾಂ
ಲೇಖಕ : ಟಿ.ಆರ್.ಅನಂತರಾಮು
ಪ್ರಕಾಶನ : ಸಪ್ನ ಬುಕ್ ಹೌಸ್, ಬೆಂಗಳೂರು
ಬೆಲೆ : ರೂ.೧೨೦

Saturday, August 10, 2013

ನಮ್ಮ ಮನೆಯ ಟೈಗರ್

        
  ಅಪ್ಪಾಜಿ, ಟೈಗರ್‌ಗೆ ಏನೋ ಆತು ಎಂದು ನನ್ನ ಮಗ ಆಕಾಶ್ ಓಡೋಡುತ್ತ ಬಂದ. ನನಗೋ ಗಾಬರಿ ಪ್ರತಿದಿನವೂ ನಮ್ಮನ್ನು ಕಂಡೊಡನೆ ಬಾಲ ಅಲ್ಲಾಡಿಸುತ್ತ, ಪ್ರೀತಿಯ ಮೊಗ ತೋರುತ್ತಿದ್ದ ಟೈಗರ್‌ಗೆ ಏನಾಯ್ತೋ ಎಂದು ಆತಂಕವಾಯ್ತು. ಟೈಗರ್ ಯಾರು ಅಂತ ಅದರ ಹಿನ್ನೆಲೆ ಹೇಳಲೇಬೇಕು.
          ೧೧ ವರ್ಷಗಳ ಹಿಂದೆ ಸೊಂಡೂರಿನಲ್ಲಿ ಕೋಳಿ ಫಾರ್ಮ್‌ನಲ್ಲಿ ಟೈಗರ್ ಎಂಬ ಪುಟ್ಟ ಮರಿ ತನ್ನ ಇತರ ಸಹೋದರರೊಂದಿಗಿತ್ತು. ನಾಯಿಯನ್ನು ಸಾಕಲೇಬೇಕೆಂದು ಮನೆಯವಳ ವಿರೋಧವನ್ನೂ ಲೆಕ್ಕಿಸದೆ ಸೊಂಡೂರಿಗೆ ಹೋಗಿದ್ದೆ. ಚುಚುಚು ಎಂದು ಕರೆದೊಡನೆ ಯಾವ ಮರಿಗಳೂ ತಿರುಗಿ ನೋಡದಿದ್ದರೂ ಒಂದು ಮರಿ ಮಾತ್ರ ನನ್ನ ಬಳಿ ಬಂತು. ಅದರ ಮುಸುಡಿಯೋ ಕಪ್ಪಾಗಿತ್ತು. ಆದರೆ ಕರೆದ ತಕ್ಷಣ ನಿಮ್ಮ ಬಳಿ ಬರುವ ನಾಯಿಮರಿಯನ್ನೇ ಸಾಕಿರಿ ಎಂದು ಎಲ್ಲೋ ಪತ್ರಿಕೆಯಲ್ಲಿ ಓದಿದ್ದು ನೆನಪಾಯ್ತು. ಸರಿ ಅದನ್ನ ತಂದೆ. ಮನೆಯವಳು ಮೊದಲಿಗೆ ವಿರೋಧಿಸಿದರೂ ನಂತರ ಅದನ್ನೇ ತೀರ ಹಚ್ಚಿಕೊಂಡು ನನ್ನನ್ನೇ ವಿರೋಧಿಸತೊಡಗಿದಳು. ಅದಕ್ಕೆ ಟೈಗರ್ ಎಂದೇ ನಾಮಕರಣ ಮಾಡಿದೆವು. ಪುಟ್ಟದಾಗಿದ್ದಾಗ ಮನೆಯಲ್ಲಿ ನಾವು ಮಲಗುವ ಜಾಗದಲ್ಲೇ ಬಂದು ತಾನೂ ತಲೆದಿಂಬಿಗೆ ತಲೆಯಿರಿಸಿ ಮಲಗುತ್ತಿತ್ತು. ಅಲ್ಸೇಶಿಯನ್ ನಾಯಿಯ ಕ್ರಾಸ್ ಮಾಡಿದ ಮರಿಯಾಗಿದ್ದರಿಂದ ಕಿವಿ, ಬೆನ್ನ ಮೇಲೆ ಕಪ್ಪು ಪಟ್ಟೆ, ತುಂಬುಕೂದಲಿನ ಬಾಲ ಎಲ್ಲ ಅಲ್ಸೇಶಿಯನ್ ರೀತಿಯಲ್ಲೇ ಇತ್ತು. ಟೈಗರ್ ನಮ್ಮ ಮನೆಯ ಸದಸ್ಯನಾಗಿಬಿಟ್ಟ. ಇದುವರೆಗೂ ಟೈಗರ್‌ನನ್ನು ನಾಯಿ ಎಂದು ಸಂಬೋಧಿಸಿಯೇ ಇಲ್ಲ. ಬಾರೋ ಹೋಗೋ, ಎಂದೇ ಕರೆಯುವುದು.

           ಎಷ್ಟೊ ಸಂದರ್ಭಗಳಲ್ಲಿ ಮನೆಯ ಬಳಿ ಹಾವು ಕಾಣಿಸಿದಾಗ ವಿಪರೀತ ಬೊಗಳಿ ಟೈಗರ್ ನಮ್ಮನ್ನ ಎಚ್ಚರಿಸಿದ್ದಾನೆ. ನಾವು ಒಳಗೆ ಊಟ ಮಾಡುತ್ತಿರುವಾಗ ಆತನನ್ನು ಮರೆತಾಗ ಸಂಕಟಪಟ್ಟು ಕುಯ್ಯೋ ಎಂದು ಅರಚಿದ್ದಾನೆ. ಟೈಗರ್‌ಗೆ ಸೌತೆಕಾಯಿ ಅಂದ್ರೆ ತುಂಬಾ ಇಷ್ಟ. ನನ್ನ ಪತ್ನಿ ಸಂತೆಯಿಂದ ಸೌತೆಕಾಯಿ ತಂದು ಒಳಗೆ ಹೆಚ್ಚತೊಡಗಿದೊಡನೆ ಬ್ರಹ್ಮಾಂಡವೇ ನಡುಗುವಷ್ಟು ಟೈಗರ್ ಬೊಗಳತೊಡಗುತ್ತಾನೆ. ವಾರಕ್ಕೆ ಸರಿಸುಮಾರು ೧ ಕೆಜಿಯಷ್ಟು ಸೌತೆಕಾಯಿ ಟೈಗರ್‌ಗೆ ಬೇಕೇ ಬೇಕು.
ಆಗಾಗ ಟೈಗರ್‌ಗೆ ಕಾಯಿಲೆ ಬಂದದ್ದೂ ಉಂಟು. ಆಗ ಡಾಕ್ಟರ್‌ನ್ನು ಕರೆಸಿರುತ್ತೇವೆ. ಮೊದಲಿಗೆ ಅವರೊಂದಿಗೆ ಸಹಕರಿಸುವ ಟೈಗರ್, ಅವರ ಕೈಯಲ್ಲಿ ಇಂಜಕ್ಷನ್ ಕಂಡೊಡನೇ ಓಡಿಹೋಗಿ ಮಂಚದ ಅಡಿಗೆ ಸೇರಿಬಿಡುತ್ತಾನೆ. ನಾವೇ ಪ್ರೀತಿಯಿಂದ ರಮಿಸಿ, ಮುದ್ದುಮಾಡಿದ ನಂತರ ಇಂಜಕ್ಷನ ತೆಗೆದುಕೊಳ್ಳುತ್ತಾನೆ. ಇದುವರೆಗೂ ಇಂಜಕ್ಷನ್ ಮಾಡುವಾಗ ಗುರ್ರ್ ಅನ್ನುವದಾಗಲೀ, ಕಚ್ಚುವುದಾಗಲೀ ಮಾಡಿಲ್ಲ. ಆದರೆ ಮತ್ತೊಮ್ಮೆ ಡಾಕ್ಟರ್ ಬಂದಾಗ ಇಂಜಕ್ಷನ್ ನೆನಪಿಸಿಕೊಂಡು ಓಡಿಹೋಗಿ ಮೂಲೆ ಸೇರುತ್ತಾನೆ. ಆಗ ಆತನ ಕೈ, ಕಾಲು ನಡುಗುತ್ತಿರುತ್ತವೆ. ಡಾಕ್ಟರ್ ಅಂತೂ ಎಂಥಾ ನಾಯಿ ಸಾಕೀರಿ ಸಾರ್, ಅದಕ್ಕೆ ಎಷ್ಟೊಂದು ಸೂಕ್ಷ್ಮತೆ ಇದೆ ಎಂಬುದನ್ನು ನೋಡಿದರೆ ನನಗೇ ಆಶ್ಚರ್ಯವಾಗುತ್ತೆ ಎಂದರು. ನಾನು ಊರಿಗೆ ಹೋಗಿ ಬಂದರೆ ಆತನನ್ನು ಮಾತನಾಡಿಸದಿದ್ದರೆ ನನಗೆ ಒಳಗೆ ಪ್ರವೇಶವೇ ಇಲ್ಲ. ನನ್ನ ತಂದೆ ಇದ್ದಾಗಲೂ ಟೈಗರ್‌ಗೆ ಏನನ್ನಾದರೂ ತೆಗೆದುಕೊಂಡು ಬರುತ್ತಿದ್ದರು. ಯಾರಾದರೂ ಏನ್ರೀ ಇಷ್ಟೊಂದು ಬೇಕರಿ ಐಟೆಮ್ಸ್ ತೊಗೊಂಡಿದ್ದೀರಿ ಎಂದರೆ, ಹೌದ್ರಪ್ಪ ನನಗೆ ಇಬ್ಬರು ಮೊಮ್ಮಕ್ಕಳ ಜೊತೆಗೆ ಟೈಗರ್ ಒಬ್ಬನಿದ್ದಾನೆ. ಆತನಿಗೆ ಏನಾದರೂ ಒಯ್ಯದೇ ಇದ್ದರೆ ನನ್ನನ್ನ ಮನೆಯೊಳಗೇ ಬಿಡೊದಿಲ್ಲ ಎಂದು ಹೇಳುತ್ತಿದ್ದರು. ನನ್ನ ತಂದೆ ನಿಧನರಾದ ದಿನ ಹಾಗೂ ೨ ದಿನಗಳವರೆಗೆ ಟೈಗರ್ ಏನನ್ನೂ ಊಟ ಮಾಡದೇ ದು:ಖದಲ್ಲಿಯೇ ಮಲಗಿದ್ದ. ಆತನಿಗೆ ಇಷ್ಟವಾದ ಸೌತೆಕಾಯಿ, ಬೇಕರಿ ತಿಂಡಿಯನ್ನು ಹಾಕಿದರೂ ಸ್ವಲ್ಪವೂ ತಿನ್ನದಿರುವುದು ನೋಡಿಯೇ ಮನೆಗೆ ಬಂದ ಎಷ್ಟೋ ಜನ ಕಣ್ಣೀರು ಹಾಕಿದರು.

               ಇಂತಹ ಟೈಗರ್‌ಗೆ ಮೊನ್ನೆ ಕಾಯಿಲೆಯಾಗಿದ್ದಕ್ಕೆ, ಪಶುಚಿಕಿತ್ಸಾ ಆಸ್ಪತ್ರೆಯ ಸಹಾಯಕ ಬಂದಿದ್ದ. ಅದೇನು ಇಂಜಕ್ಷನ್ ಮಾಡಿದನೋ ಏನೋ, ಆತ ಹೋದ ಸ್ವಲ್ಪ ಹೊತ್ತಿಗೇ ಟೈಗರ್ ಸಂಕಟದಿಂದ ಸುತ್ತುಹಾಕತೊಡಗಿದ, ಮೈಯನ್ನು ಮಣಿಸಿ ತೂರಾಡತೊಡಗಿದ. ನಾಲಗೆಯನ್ನು ಹೊರಚಾಚಿ, ಕಣ್ಣನ್ನು ಬೆಳ್ಳಗೆ ಮಾಡಿದಾಗ ನನಗೆ ಹೊಟ್ಟೆಯಲ್ಲಿ ಸಹಿಸಲಾಗದ ಸಂಕಟ ಸುರುವಾಯ್ತು. ಆಗಲೇ ನನ್ನ ಮಗ ಆಕಾಶ್ ಓಡಿ ಬಂದು ಅಪ್ಪಾಜಿ ಟೈಗರ್‌ಗೆ ಏನೋ ಆತು ಅಂದದ್ದು. ಸಹಾಯಕನಿಗೆ ಫೋನ್ ಮಾಡಿದರೆ ಸ್ವಿಚ್ ಆಫ್ ಬಂತು. ಆಗ ರಾತ್ರಿ ೧೧ ಗಂಟೆ. ಏನು ಮಾಡಬೇಕಪ್ಪ ಅಂತ ಕೊನೆಗೆ ದೇವರ ಅಂಗಾರವನ್ನು ಟೈಗರ್‌ನ ಹಣೆಗೆ ಹಚ್ಚಿದೆವು. ಮನೆಯಲ್ಲಿ ಎಲ್ಲರೂ ಟೈಗರ್ ಸುತ್ತಲೂ ಕುಳಿತು ದೇವರನ್ನು ನೆನೆಸಿದೆವು. ನಮಗೆ ಬೇಕಾದ ಸಹಾಯಕ ಗುಂಡಣ್ಣ ಎಂಬ ಹುಡುಗನೊಬ್ಬನಿಗೆ ವಿಷಯ ತಿಳಿಸಿದೆವು. ಆತ ಆ ರಾತ್ರಿಯಲ್ಲೇ ಮನೆಗೆ ಬಂದು ಏನೂ ಆಗಿಲ್ಲ ಸರ್, ಗಾಬರಿ ಆಗಬ್ಯಾಡ್ರಿ, ಇಂಜಕ್ಷನ್ ಡೋಸ್ ಜಾಸ್ತಿ ಆದಂಗೆ ಕಾಣ್ತದೆ, ಸ್ವಲ್ಪ ಹಾಲು ಕೊಡ್ರಿ ಕುಡಿಸೋಣ ಎಂದ. ಹಾಗೂ ಹೀಗೂ ಮಾಡಿ ಟೈಗರ್‌ನ ಬಾಯನ್ನು ಅಗಲಿಸಿ ಚಮಚದಿಂದ ಹಾಲನ್ನು ಹಾಕಿದೆವು. ೧ ಗಂಟೆ ಕಳೆದ ಮೇಲೆ ಟೈಗರ್ ಮತ್ತೆ ಮೊದಲಿನಂತಾದ, ಹಾಲು ಕುಡಿಯಲು ಸುರು ಮಾಡಿದ. ನಮಗೆಲ್ಲ ಆಗ ನೆಮ್ಮದಿಯಾಯ್ತು. ಈಗ ಟೈಗರ್ ಮತ್ತೆ ಮೊದಲಿನಂತೇ ಎಲ್ಲ ಊಟ ಮಾಡುತ್ತಾನೆ. ನಮ್ಮನ್ನು ಕಂಡೊಡನೇ ಬಾಲ ಅಲ್ಲಾಡಿಸುತ್ತ ಏನನ್ನಾದರೂ ಕೊಡಿ ಎಂದು ಗೋಗರೆಯುತ್ತಾನೆ. ಸೌತೆಕಾಯಿ ತಂದರೆ ಬ್ರಹ್ಮಾಂಡ ನಡುಗುವಂತೆ ಬೊಗಳತೊಡಗುತ್ತಾನೆ.

Friday, June 7, 2013

ಕನ್ನಡದಲ್ಲೊಂದು ಅಪೂರ್ವ ಆತ್ಮಕಥನ ಗೊಂದಲಿಗ್ಯಾ-ಕೃತಿ ಪರಿಚಯ


       ಮರಾಠಿ ದಲಿತ ಆತ್ಮಕಥನಗಳ ಧಾಟಿಯಲ್ಲಿಯೇ ಕನ್ನಡದಲ್ಲಿ ಕಳೆದ ವರ್ಷ ಮೂಡಿಬಂದ ಎ.ಎಂ.ಮದರಿಯವರ ಅಪೂರ್ವ ಆತ್ಮಕಥನ ಗೊಂದಲಿಗ್ಯಾ. ಹೆಸರೇ ಸೂಚಿಸುವಂತೆ ಗೊಂದಲಿಗರ ಜನಾಂಗದ ನೋವು, ಸಂಕಟ, ತಲ್ಲಣಗಳನ್ನು ಗರ್ಭೀಕರಿಸಿಕೊಂಡಿರುವ ಗೊಂದಲಿಗ್ಯಾ ಕನ್ನಡ ಸಾಹಿತ್ಯದ ದಲಿತ ಆತ್ಮಕಥನಗಳಲ್ಲಿ ಪ್ರಮುಖ ಸ್ಥಾನ ಪಡೆಯುವಂತಹದ್ದಾಗಿದೆ. 
ಗೊಂದಲಿಗರು ಎಂಬ ಹೆಸರಿನ ಬದಲಾಗಿ, ಬಯ್ಗುಳದಂತಿರುವ ಗೊಂದಲಿಗ್ಯಾ ಎಂಬ ಹೆಸರನೇ ಯಾಕೆ ಕೃತಿಗಿರಿಸಿದರು ಎಂದು ತಿಳಿಯಬೇಕಾದಲ್ಲಿ ಇಡೀ ಪುಸ್ತಕವನ್ನು ಓದಲೇಬೇಕು. ಗೊಂದಲಿಗ್ಯಾ ಇಲ್ಲಿ ಸಮಾಜ ತುಚ್ಛೀಕರಿಸಿ ಬಯ್ಯುತ್ತಿದ್ದ ಬೈಗುಳದ ಪದದ ರೂಪದಲ್ಲಿ ಬಂದಿದೆ. ಆ ಎಲ್ಲ ತಲ್ಲಣಗಳನ್ನು ತೋರಿಸಲೆಂದೇ ಮದರಿಯವರು ತಮ್ಮ ಕೃತಿಗೆ ಗೊಂದಲಿಗ್ಯಾ ಎಂದೆ ಹೆಸರಿಸಿದ್ದಾರೆ. 
ಅಲೆಮಾರಿಗಳಾಗಿರುವ ಗೊಂದಲಿಗರ ಬದುಕು, ಬವಣೆ, ಅವಮಾನ, ಕೀಳರಿಮೆ, ಹತಾಶೆ, ವ್ಯವಸ್ಥೆಯ ಬಗ್ಗೆ ಕಿಚ್ಚಿದ್ದರೂ ಅದನ್ನು ಎದುರಿಸಲಾಗದೆ ಅವಡುಗಚ್ಚಿ ಸಹಿಸುವ ತಾಳ್ಮೆ, ಎಲ್ಲವೂ ಆತ್ಮಕಥೆಯಲ್ಲಿ ಮುಪ್ಪುರಿಯಾಗಿ ಮೂಡಿಬಂದಿವೆ. 
ಮದರಿಯವರು ಮೂಲತ: ಮೃದು ಹಾಗೂ ಸಂಕೋಚ ಸ್ವಭಾವದವರಾಗಿದ್ದುದರಿಂದಲೋ ಅಥವಾ ಗೊಂದಲಿಗರ ಜನಾಂಗದ ಶೋಷಣೆಯ ವ್ಯವಸ್ಥೆಯಲ್ಲಿ ಸಿಲುಕಿಕೊಂಡಿದ್ದರಿಂದಲೋ ಆತ್ಮಕಥನದಲ್ಲಿ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಆಕ್ರೋಶದ ಗುಣ ಎಲ್ಲಿಯೂ ಕಂಡುಬರುವುದಿಲ್ಲ. ಅಲ್ಲಲ್ಲಿ ಮಾತಿನ ಚಾಟಿಯೇಟನ್ನು ಶೋಷಣೆ ಮಾಡುವವರ ವಿರುದ್ಧ ಬೀಸುವರಾದರೂ ಇಡೀ ಆತ್ಮಕಥೆಯಲ್ಲಿ ಅದು ಗೌಣವಾಗಿದೆ. ಮದರಿಯವರು ಬಾಲ್ಯದಿಂದಲೂ ಮೇಲ್ವರ್ಗದ, ಮೇಲ್ಜಾತಿಯ ಜನರ ತುಳಿತಕ್ಕೊಳಗಾಗುವುದೇ ಅಲ್ಲದೆ ಕ್ರೂರ ವ್ಯವಸ್ಥೆಯ ಕಬಂಧ ಬಾಹುಗಳಲ್ಲಿಯೂ ನಲುಗುವುದರಿಂದಲೂ ಆತ್ಮಕಥನದುದ್ದಕ್ಕೂ ಅಂತರ್ಮುಖಿಯಾಗಿಯೇ ತೋರುತ್ತಾರೆ. ಅಲ್ಲದೆ ಅವರ ಕುಟುಂಬದ ಸಮಸ್ಯೆಗಳೂ ಅವರನ್ನು ಹಣ್ಣು ಮಾಡಿದ್ದುದರಿಂದಲೂ ಮದರಿಯವರು ಆತ್ಮಕಥನದಲ್ಲಿ ಶೋಷಣೆಯ ಮತ್ತಷ್ಟು ನೋವನ್ನು ಸಹಿಸಿಕೊಳ್ಳುವವರಾಗಿ ಕಾಣುತ್ತಾರೆ.
ಮದರಿಯವರು ಕೃತಿಯಲ್ಲಿ ತಮ್ಮ ಜನಾಂಗ ಗುಡಿಗುಂಡಾರಗಳಲ್ಲಿ ಬೀಡು ಬಿಡುವ, ಊರೂರು ತಿರುಗುವ, ಅವಮಾನಗಳಿಗೆ ಗುರಿಯಾಗುವ ಘಟನೆಗಳನ್ನು ಕಣ್ಮುಂದೆ ಕಟ್ಟುವಂತೆ ಚಿತ್ರಿಸಿದ್ದಾರೆ. ಹೀಗಾಗಿ ಇದು ಎ.ಎಂ.ಮದರಿ ಎಂಬ ಒಬ್ಬ ವ್ಯಕ್ತಿಯ ಆತ್ಮಕಥನವಾಗಿರದೇ ಅವರ ಹಿಂದಿರುವ ಇಡೀ ಗೊಂದಲಿಗರ ಜನಾಂಗದ ಆತ್ಮಕಥನವಾಗಿಯೇ ನಮಗೆ ಕಾಣಸಿಗುತ್ತದೆ. ಪ್ರತಿ ಊರುಗಳಿಗೆ ಹೋದಾಗ ನಡೆಯುವ ಘಟನೆಗಳು ಗೊಂದಲಿಗರ ಜೀವನ ಚಿತ್ರಣವನ್ನೇ ನೀಡುತ್ತವೆ. ಕತೆ, ತತ್ವಪದಗಳನ್ನು, ಗೀಗೀ ಪದಗಳನ್ನು ಹೇಳುತ್ತ ಅಥವಾ ಪಾತ್ರೆಗಳನ್ನು ಮಾರುತ್ತ ಅಲೆಯುವ ಗೊಂದಲಿಗರ ಬದುಕು ಸಾಮಾಜಿಕವಾಗಿ ಕೆಳಸ್ತರದಲ್ಲಿಯೇ ನಲುಗುತ್ತಿರುವವರ ಬದುಕಾಗಿದೆ. ಅದಕ್ಕೆಂದೇ ಮದರಿಯವರು ತಮ್ಮ ಜನಾಂಗವೂ ಎಂದೋ ಪರಿಶಿಷ್ಟ ಜಾತಿ, ಜನಾಂಗದಲ್ಲಿ ಗುರುತಿಸಬೇಕಾದುದು ಆದರೆ ಅಸಂಘಟನೆಯಿಂದಾಗಿ ಇನ್ನೂ ಜನಾಂಗದ ಬದುಕು ಕತ್ತಲಲ್ಲಿಯೇ ಉಳಿದಿದೆ ಎಂದು ವ್ಯಥೆಪಡುತ್ತಾರೆ. ಅಂತೆಯೇ ಮದರಿಯವರು ಹೇಳುವಂತೆ, ಗೊಂದಲಿಗರ ಜನಾಂಗದಲ್ಲಿ ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುವರೆದವರು ಇಡೀ ರಾಜ್ಯದಲ್ಲಿ ಸಿಗುವುದು ವಿರಳ. ಇದಕ್ಕೆ ಕಾರಣ ಜನಾಂಗದಲ್ಲಿ ಇಂದಿಗೂ ಮುಂದುವರೆದುಕೊಂಡು ಬಂದಿರುವ ಕಂದಾಚಾರ, ಮೂಢನಂಬಿಕೆಗಳು ಎನ್ನುತ್ತಾರೆ. ಕುಟುಂಬದ ಹೆಣ್ಣುಮಕ್ಕಳು ದುಡಿಯಬೇಕು, ಗಂಡಂದಿರು ಆ ದುಡಿಮೆಯಿಂದಲೇ ಬದುಕಬೇಕೆಂಬ ಅಸಹಜ ಆಚರಣೆಗಳು ಜನಾಂಗದಲ್ಲಿರುವುದರಿಂದ, ಹೆಣ್ಣುಮಕ್ಕಳು ಇಂದಿಗೂ ಎಲ್ಲ ನೋವುಗಳನ್ನೂ ಮೌನವಾಗಿಯೇ ಸಹಿಸಿಕೊಂಡು ಆ ವ್ಯವಸ್ಥೆಗೆ ಹೊಂದಿಕೊಂಡುಬಿಟ್ಟಿದ್ದಾರೆಂದು ಮದರಿ ವಿವರಿಸುತ್ತಾರೆ. ಅಸಂಘಟಿತರಾಗಿರುವ ಗೊಂದಲಿಗರ ಜನಾಂಗವನ್ನು ಒಂದೆಡೆ ಸೇರಿಸಿ, ಸಂಘಟಿತರನ್ನಾಗಿ ಮಾಡಿ ಸಾಮಾಜಿಕವಾಗಿ ಅವರನ್ನು ಮುಂಚೂಣಿಯಲ್ಲಿ ತರುವುದು ಕಷ್ಟಸಾಧ್ಯ ಎಂದು ಹೇಳುತ್ತಾರೆ. ತಾವೆಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ ಎಂಬ ನೋವೂ ಅವರಿಗಿದೆ. 
ನನ್ನ ಹೆಸರು ಅಪ್ಪಣ್ಣ, ಹಿರಿಯರು ಅಪ್ಪಣ್ಣ, ಅಪ್ಪಾಸಾಹೇಬ ಎಂದು ಕರೆದರೆ, ಗೆಳೆಯರು ಅಪ್ಪಯ್ಯ ಎಂದೂ ಕರೆಯುತ್ತಿದ್ದರು ಇಲ್ಲಿಂದ ಆರಂಭಗೊಳ್ಳುವ ಮದರಿಯವರ ಆತ್ಮಕಥನವು ಬಾಲ್ಯ, ಯೌವ್ವನ, ಅಲೆದಾಟ, ನೋವು, ಅವಮಾನ, ಹತಾಶೆ, ಸಹನೆ, ಛಲ ಎಲ್ಲವುಗಳ ಸುಳಿಯಲ್ಲಿ ಸಿಲುಕಿ ಕೊನೆಗೆ ನಿವೃತ್ತಿ ಅಂಚಿನಲ್ಲಿದ್ದಾಗ, ಬ್ಯಾಂಕಿನಲ್ಲಿ ಸಾಲ ಕೇಳಲು ಹೋದಾಗ, ಮೆನೇಜರ್ ಕೇಳುತ್ತಾರೆ ನಿಮ್ಮ ಊರು ಯಾವುದು?. ಈ ಪ್ರಶ್ನೆಗೆ ಉತ್ತರಿಸುವುದರ ಜೊತೆಯಲ್ಲಿಯೇ ಓದುಗರನ್ನು ಚಿಂತನೆಗೆ ಹಚ್ಚುವಲ್ಲಿ ಕಥನ ಪೂರ್ಣಗೊಳ್ಳುತ್ತದೆ. 
ಇಡೀ ಆತ್ಮಕಥನದ ಭಾಷೆ ಸುಲಲಿತವೂ, ಸರಳವೂ ಆಗಿರುವುದರಿಂದ ಎಲ್ಲಿಯೂ ಹಿಡಿತ ತಪ್ಪದಂತೆ ಓದಿಸಿಕೊಂಡು ಹೋಗುವಲ್ಲಿ ಕಥನ ಯಶಸ್ವಿಯಾಗಿದೆ. ಅಲ್ಲಲ್ಲಿ ಬರುವ ಆಡುಭಾಷೆ ಆತ್ಮಕಥನದ ಉದ್ದೇಶಕ್ಕೆ ಪೂರಕವಾಗಿಯೇ ಬಂದಿದೆ. ಗೊಂದಲಿಗರು ಊರನ್ನು ಪ್ರವೇಶಿಸಿದರೆ, ಊರಿನವರು ತಮಾಷೆಗೆ ಕುರಸಾಲ್ಯಾ ಸೂಳಿಮಕ್ಳು ಗೊಂದಲಿಗೇರ ಬಂದ್ರ ಇಡೀ ಊರ ಗದ್ದಲ ಹಿಡಿಸ್ತಾರು ಎನ್ನುವಲ್ಲಿ ಆಡುಭಾಷೆಯ ಗ್ರಾಮೀಣ ಸೊಗಡು ಕಾಣುತ್ತದೆ. ಮೇಲ್ವರ್ಗದವರ ದೌರ್ಜನ್ಯಕ್ಕೆ ಉದಾಹರಣೆಯಾಗಿ, ಬಾಲ್ಯದಲ್ಲಿ ಗೆಳೆಯರೊಂದಿಗೆ ನಡೆದ ತುಂಟಾಟದ ಸಂದರ್ಭದಲ್ಲಿ ವಿನಾಕಾರಣ (ಗೊಂದಲಿಗರು ಎಂಬ ಒಂದೇ ಕಾರಣಕ್ಕಾಗಿ) ಮದರಿಯವರನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಹೊಡೆಯಲಾಗುತ್ತದೆ. ಇದೆಲ್ಲ ದೋಸಗೇರ(ಗೊಂದಲಿಗರು) ಹುಡಗನದ ಹಲ್ಕಟಗಿರಿ. ತಿರಕೊಂಡ ತಿನ್ನ ಸೂಳೆಮಗ ಇವನ ಕಳುಮಾಡಾಕ ಹಚ್ಯಾನ, ಮದಲ ಅವನ ಕಂಬಕ್ಕಟ್ರಿ ಎಂದು ಕೂಡಿದ ಜನ ಬಯ್ಯುತ್ತಾರೆ, ಹೊಡೆಯುತ್ತಾರೆ. ಇಂಥ ಅನೇಕ ಅವಮಾನಕರ ಪ್ರಸಂಗಗಳನ್ನು ಮದರಿಯವರು ಬದುಕಿನುದ್ದಕ್ಕೂ ಅನುಭವಿಸುತ್ತ ಬಂದಿರುವುದನ್ನು ಓದುಗರೆದುರು ತೆರೆದಿಡುತ್ತಾರೆ. ಸರ್ಕಾರಿ ಉದ್ಯೋಗಿಯಾದ ಸಂದರ್ಭದಲ್ಲಿಯೂ ಸಹೋದ್ಯೋಗಿಗಳಲ್ಲಿ ಕಂಡುಬರುವ ತಿರಸ್ಕಾರ, ವ್ಯಂಗ್ಯ, ತುಚ್ಛೀಕರಿಸುವ ಸಂದರ್ಭಗಳನ್ನು ವಿವರಿಸಿದ್ದಾರೆ.
ತಮ್ಮ ಬದುಕಿನುದ್ದಕ್ಕೂ ಸಾಮಾಜಿಕವಾಗಿ, ಆರ್ಥಿಕವಾಗಿ ತಾವು ಅನುಭವಿಸಿದ ನೋವುಗಳು, ಕುಟುಂಬದ ಅವಿರತ ಕಷ್ಟಗಳನ್ನು ಮದರಿಯವರು ಚಾಚೂತಪ್ಪದೆ ವಿವರಿಸುತ್ತ ಹೋಗುತ್ತಾರೆ. ಓದುಗನಿಗೆ ಅಲ್ಲಲ್ಲಿ ಸಿಗುವ ಸಂತಸದ ಹೊಳಹುಗಳೆಂದರೆ, ಮದರಿಯವರು ಗೆಳೆಯರೊಂದಿಗೆ ಹಾಸ್ಯ ಮಾಡುವ ಪ್ರಸಂಗಗಳು, ಸಾಹಿತಿಗಳ ಗೆಳೆತನದಲ್ಲಿ ಅವರಿಗೆ ದೊರೆಯುವ ಅಲ್ಪ ನೆಮ್ಮದಿಗಳು ಮಾತ್ರ. ಆತ್ಮಕಥನದ ಕೊನೆಯವರೆಗೂ ಜನಾಂಗದ ನೋವುಗಳ ಪ್ರತಿನಿಧಿಯಾಗಿಯೇ ಮದರಿಯವರು ಕಾಣುತ್ತಾರೆ. ಹೀಗಾಗಿ ಗೊಂದಲಿಗ್ಯಾ ಮದರಿಯವರ ಆತ್ಮಕಥನದ ಜೊತೆಯಲ್ಲಿಯೇ ಗೊಂದಲಿಗರ ನೋವುಗಳ ಕಥನವೂ ಆಗಿದೆ. 
ಒಟ್ಟಾರೆ ಕನ್ನಡ ಸಾಹಿತ್ಯ ಲೋಕದಲ್ಲಿ ಇದೊಂದು ಅಪೂರ್ವವಾದ ಕೃತಿಯೆಂದೇ ನನ್ನ ಅನಿಸಿಕೆ.

ಕೃತಿ : ಗೊಂದಲಿಗ್ಯಾ
ಲೇಖಕರು: ಎ.ಎಂ.ಮದರಿ
ಪ್ರಕಾಶನ : ಲೋಹಿಯಾ ಪ್ರಕಾಶನ, ಬಳ್ಳಾರಿ.
ಬೆಲೆ : ೧೨೫