Saturday, September 17, 2011

ಬೆಂಕಿಯಲ್ಲಿ ಅರಳಿದ ಹೂ ನಳಿನಿ ಜಮೀಲಾ : ಲೈಂಗಿಕ ಕಾರ್ಯಕರ್ತೆಯೊಬ್ಬಳ ಆತ್ಮಕಥನ ಇದೀಗ ಕನ್ನಡದಲ್ಲಿ



        ಸಾಹಿತ್ಯದ ಆತ್ಮಕಥನಗಳು ಕನ್ನಡಕ್ಕೆ ಬಂದಾಗ ಓದುಗರಿಗೆ ನವಿರೇಳಿಸಿದ್ದವು. ನೋವು, ಹತಾಶೆ, ಶೋಷಣೆ, ಅಮಾನವೀಯತೆಗಳನ್ನು ಅನುಭವಿಸಿದವರಿಂದಲೇ ನೇರವಾಗಿ ಆತ್ಮಕಥನಗಳಾಗಿ ಕನ್ನಡ ಓದುಗರಿಗೆ ಮರಾಠಿ ಸಾಹಿತ್ಯದಿಂದ ಇತರೆ ಭಾಷೆಗಳಿಂದಲೂ ಲಭಿಸಿತ್ತು. ಆದರೆ ಮಹಿಳೆಯೊಬ್ಬರು ಲೈಂಗಿಕ ಕಾರ್ಯಕರ್ತೆಯಾಗಿ ಅನುಭವಿಸಿದ ನೋವನ್ನು ಕಣ್ಣೋಟದಿಂದ ಕಂಡ ಜಗತ್ತನ್ನು ಅನಾವರಣಗೊಳಿಸಿದ ಆತ್ಮಕಥನ ಕನ್ನಡದಲ್ಲಿ ಬಂದಿರುವುದು ವಿಶೇಷ.
           ಮೂಲತ: ಮಲೆಯಾಳಂ ಭಾಷೆಯ ಜ್ಞಾನ್ ಲೈಂಗಿಕ ತೊಳಿಲಾಳಿ ಎಂಬ ನಳಿನಿ ಜಮೀಲಾರ ಆತ್ಮಕಥನವನ್ನು ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥನ ಎಂದು ಕನ್ನಡಕ್ಕೆ ಅನುವಾದಿಸಿದವರು ಕೆ.ನಾರಾಯಣಸ್ವಾಮಿಯವರು. ನೇರ, ದಿಟ್ಟ, ನಿರ್ಭಿಡೆಯಿಂದ ತಮ್ಮ ಬದುಕನ್ನು ಅಕ್ಷರ ರೂಪದಲ್ಲಿ ಹಿಡಿದಿಟ್ಟ ನಳಿನಿ ಜಮೀಲಾರ ಆತ್ಮಕಥನವನ್ನು ಓದುತ್ತ ಹೋದಂತೆ ನಮಗರಿಯದ ಪ್ರಪಂಚವನ್ನು ಪ್ರವೇಶಿಸಿದ ಅನುಭವವಾಗುತ್ತದೆ. ಹಾಗೆ ನೋಡಿದರೆ ಕನ್ನಡ ಸಾಹಿತ್ಯದಲ್ಲಿ ಪ್ರಗತಿಶೀಲರು ತಮ್ಮ ಕತೆ, ಕಾದಂಬರಿಗಳಲ್ಲಿ ವೇಶ್ಯೆಯರ ಬಗ್ಗೆ, ಅವರ ಬದುಕಿನ ಬಗ್ಗೆ ಅನುಕಂಪದಿಂದ ಬರೆದಿರುವರಾದರೂ ಅಲ್ಲಿ ಎದ್ದು ಕಾಣುವುದು ಅನುಕಂಪ ಮಾತ್ರ. ಆದರೆ ಆ ಬದುಕನ್ನೇ ಅನುಭವಿಸಿದ ದಾರುಣತೆ ನಮಗೆ ಸಿಗುವುದು ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥನದಲ್ಲಿ ಮಾತ್ರ. ಬಾಲ್ಯದಿಂದಲೂ ಪ್ರತಿ ಹೆಜ್ಜೆಗೂ ಕಷ್ಟ, ಅವಮಾನ, ಕುತೂಹಲ, ದೌರ್ಜನ್ಯಗಳಿಗೊಳಗಾಗುತ್ತಲೇ, ಸಮಾಜವನ್ನು ಎದುರಿಸುವ ನಿರ್ಭಯವನ್ನು ಬೆಳೆಸಿಕೊಳ್ಳುತ್ತಲೇ ಬರುತ್ತಾರೆ ನಳಿನಿ. ತಮ್ಮ ಆತ್ಮಕಥನದುದ್ದಕ್ಕೂ ಲೈಂಗಿಕ ಕಾರ್ಯಕರ್ತೆಯರ ಬದುಕನ್ನು ಅನಾವರಣಗೊಳಿಸಿದಾಗ ಲೈಂಗಿಕ ಶೋಷಣೆಯ ಭೀಕರ ಜಗತ್ತೊಂದು ನಮ್ಮೆದುರು ತೆರೆದಿಟ್ಟಂತಾಗುತ್ತದೆ. ರೌಡಿಗಳ, ಪೊಲೀಸ್‌ರ, ರಾಜಕೀಯ ಧುರೀಣರ, ಶ್ರೀಮಂತರ ಲೈಂಗಿಕ ತೃಷೆಗೆ ಪಕ್ಕಾಗುತ್ತಲೇ ಸಮಾಜವನ್ನು ಎದುರಿಸುವ ದಿಟ್ಟತನವನ್ನೂ ನಳಿನಿ ತೋರುತ್ತಾರೆ. ಕೆಲವು ಪ್ರಸಂಗಗಳಲ್ಲಿ ತಾವು ಪೊಲೀಸ್ ಹಾಗೂ ರೌಡಿಗಳಿಂದ ಹೇಗೆ ಸಿನಿಮೀಯವಾಗಿ ತಪ್ಪಿಸಿಕೊಂಡೆವೆಂಬುದನ್ನೂ ಚಿತ್ರಣದ ರೀತಿಯಲ್ಲಿ ಹಿಡಿದಿಡುತ್ತಾರೆ. ಬದುಕಿನಲ್ಲಿ ಕೇವಲ ಅಮಾನವೀಯ ಮುಖಗಳನ್ನು ಕಂಡ ನಳಿನಿ, ತಮ್ಮ ಮಗಳ ಬದುಕು ತನ್ನಂತಾಗುವುದು ಬೇಡವೆಂದು ಯತ್ನಿಸುವುದೂ ಓದುಗರ ಕಣ್ಣಂಚಿನಲ್ಲಿ ಹನಿ ತುಳುಕಿಸುತ್ತದೆ. ಪುಟ್ಟ ಮಗಳನ್ನು ಕಾಮುಕರ ಕಣ್ಣಿಂದ ತಪ್ಪಿಸುವುದಕ್ಕೆ ನಳಿನಿ ಹೆಣಗುವ ಭಾಗಗಳು ಆತ್ಮಕಥನದ ದಾರುಣತೆಯನ್ನು ಮೇಲ್ ಸ್ತರಕ್ಕೇರಿಸುವಂತಹ ಸಂದರ್ಭಗಳಾಗಿವೆ. 
              ಇಷ್ಟೆಲ್ಲ ಕಷ್ಟಗಳ ಮಧ್ಯೆಯೂ ನಳಿನಿ ಜಮೀಲಾರ ಆತ್ಮಕಥನ ಯಾಕೆ ಒಂದೇ ವೇಗಕ್ಕೆ ಓದಿಸಿಕೊಳ್ಳುವುದೆಂದರೆ, ನಳಿನಿ ಬದುಕಿಗೆ ವಿಮುಖರಾಗದೇ ಇರುವುದು, ಜೀವನೋತ್ಸಾಹ ಕಳೆದುಕೊಳ್ಳದಿರುವುದು. ಒಂದೆಡೆ ಲೈಂಗಿಕ ಕಾರ್ಯಕರ್ತೆಯರ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಲೇ, ದೇಶದ ವಿವಿಧ ಸ್ಥಳಗಳಲ್ಲಿ ಭಾಷಣಗಳನ್ನು ಮಾಡುತ್ತಲೇ, ಅದೇ ವೃತ್ತಿಯಲ್ಲಿ ಮುಂದುವರಿಯುವುದು ಓದುಗರನ್ನು ಬೆರಗಾಗಿಸುತ್ತದೆ. ಯಾಕೆಂದರೆ ಸಮಾಜದಲ್ಲಿ ಸ್ವಲ್ಪ ಸ್ಥಾನಮಾನವನ್ನು ಗಳಿಸಿದ ವ್ಯಕ್ತಿಯ ನಡೆ, ನುಡಿ, ಗತ್ತುಗಳು ತೀವ್ರವಾಗಿ ಬದಲಾಗುತ್ತವೆ. ಆದರೆ ನಳಿನಿ ಲೈಂಗಿಕ ಕಾರ್ಯಕರ್ತೆಯಾಗಿ ತಮ್ಮ ವೃತ್ತಿಯನ್ನು ಎಲ್ಲೂ ಕೀಳಾಗಿ ಕಂಡಿಲ್ಲ. ಬಹುಶ: ಅದಕ್ಕಾಗಿಯೇ ಅವರಿಗೆ ಎರಡನ್ನೂ ಸಮಾನ ಮನಸ್ಸಿನಿಂದ ನೋಡಲು ಸಾಧ್ಯವಾಗಿದೆಯೆನಿಸುತ್ತದೆ. ಇದು ಆತ್ಮಕಥನದ ವಿಶೇಷವೂ ಹೌದು. ನಳಿನಿಯವರ ಆತ್ಮಕಥನದಲ್ಲಿ ಎಲ್ಲಿಯೂ ಭಾಷೆ ಕೆಟ್ಟದಾಗಿ ಬಳಕೆಯಾಗಿಲ್ಲ. ರೌಡಿಗಳು, ತಮ್ಮ ಸಹವರ್ತಿಗಳು ಅಶ್ಲೀಲ ಪದಗಳನ್ನು ಉಪಯೋಗಿಸುವುದನ್ನು ನಳಿನಿ ಬರೆದುಕೊಳ್ಳುತ್ತಾರಾದರೂ ಎಲ್ಲಿಯೂ ಸಭ್ಯತೆಯ ಎಲ್ಲೆ ಮೀರಿಲ್ಲ. ಆತ್ಮಕಥನವಾಗಿರುವುದರಿಂದ ವರದಿಯಾಗುವ ಅಪಾಯಕ್ಕೆ ಸಿಕ್ಕಿಕೊಳ್ಳುವ ಸಂಭವವಿರುತ್ತದೆ. ಆದರೆ ನಳಿನಿ ಜಮೀಲಾರ ಬರಹ ಎಲ್ಲಿಯೂ ವರದಿ ಎನ್ನಿಸುವುದಿಲ್ಲ. ಎಲ್ಲ ಭಾವಗಳನ್ನೊಳಗೊಂಡ ಸುಂದರ ಕಾವ್ಯದಂತೆ ಆತ್ಮಕಥನ ಓದುಗರೆದುರು ತೆರೆದುಕೊಳ್ಳುತ್ತದೆ. ಮೂಲ ಭಾಷೆಯಲ್ಲಿ ಆತ್ಮಕಥನ ಹೇಗೆ ಮೂಡಿಬಂದಿದೆಯೇನೋ ಆದರೆ ಕೆ.ನಾರಾಯಣಸ್ವಾಮಿಯವರು ಕನ್ನಡಕ್ಕೆ ಅಪರೂಪದ ಆತ್ಮಕಥನವನ್ನು ಸಮರ್ಥವಾಗಿ ಅನುವಾದಿಸಿರುವುದಕ್ಕಾಗಿ ಕೃತಜ್ಞತೆಗಳನ್ನು ಹೇಳದೇ ಇರಲಾಗುವುದಿಲ್ಲ.
              ಕೊನೆಯದಾಗಿ ಆತ್ಮಕಥನದ ಕೆಲವು ಭಾಗಗಳು: ಹಿಂದಿನ ದಿನಗಳಲ್ಲಿ ಗಂಡಸರು ಮಹಿಳೆಯರನ್ನು ಸ್ಪರ್ಶಿಸಲು, ಮೈ ಮುಟ್ಟಲು ತಮಗೆ ಅಧಿಕಾರವಿದೆ ಎಂದು ಭಾವಿಸಿದ್ದರು. ಆದರೆ ಅವರಲ್ಲಿ ಬಹಳ ಮಂದಿ ಸುಮ್ಮನೆ ಮುಟ್ಟಿ ತೃಪ್ತಿಪಟ್ಟುಕೊಳ್ಳುತ್ತಿದ್ದರು. ಈಗ ಹಾಗಲ್ಲ, ಒಂಟಿಯಾಗಿ ನಿಂತ ಹೆಂಗಸರ ಮೇಲೆ ಯಾವುದೇ ತೆರನಾದ ದೌರ್ಜನ್ಯ ಮಾಡಲು ಹೇಸದವರ ಸಂಖ್ಯೆ ಹೆಚ್ಚುತ್ತಿದೆ. .............................ನನಗೀಗ ಐವತ್ತೆರಡು ವರ್ಷ. ಈಗಲೂ ಪೀಡಕರ ಕಾಟ ತಪ್ಪಿಲ್ಲ. ಈಗಿನ ಗಂಡಸರಿಗೆ ವಯಸ್ಸು, ರೂಪ ಏನೇನೂ ಬೇಕಾಗಿಲ್ಲ.  ಎಷ್ಟು ವರ್ಷ ಉರುಳಿದರೂ ಗಂಡಿನ ಮನೋಭಾವದಲ್ಲಿ ಬದಲಾವಣೆಗಳ ಗಾಳಿ ಬೀಸುತ್ತಲೇ ಇಲ್ಲ. ಅಂತಹ ಆಶೆ ಕೇವಲ ಭ್ರಮೆ! ಹೆಣ್ಣುಗಳೆಂದರೆ ತಮ್ಮ ಭೋಗಕ್ಕಾಗಿ ಸೃಷ್ಟಿಸಲ್ಪಟ್ಟವರೆಂಬ ಧೋರಣೆ ದಿನದಿನಕ್ಕೂ ಹೆಚ್ಚುತ್ತಲೇ ಇದೆ. 

ಕೃತಿ : ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥನ
ಮೂಲ ಲೇಖಕಿ : ನಳಿನಿ ಜಮೀಲಾ
ಕನ್ನಡಕ್ಕೆ : ಕೆ.ನಾರಾಯಣಸ್ವಾಮಿ ಗೌರಿಬಿದನೂರು
ಬೆಲೆ: ರೂ. ೧೫೦
ಪ್ರಕಾಶನ: ಸೃಷ್ಟಿ ಪಬ್ಲಿಕೇಶನ್ಸ್, ವಿಜಯನಗರ, ಬೆಂಗಳೂರು.  ಗಾಳಿ ಬೀಸುತ್ತಲೇ ಇಲ್ಲ. ಅಂತದೆ.’ಲ್ಲ, ಒಂಟಿಯಾಗಿ ವುದಿಲ್ಲ. ಎಲ್ಲ ಭಾವಗಳ

No comments:

Post a Comment