Saturday, December 22, 2012

ಪಾಳೆಯಗಾರರ ಗುಡೇಕೋಟೆ



ತಾಲೂಕಿನಲ್ಲಿ ಪಾಳೆಯಗಾರರು ಆಳ್ವಿಕೆ ನಡೆಸಿದ ಹಲವಾರು ಚಾರಿತ್ರಿಕ ಸ್ಥಳಗಳ್ದಿದು, ಅವುಗಳಲ್ಲಿ ಮಹತ್ವವಾದದ್ದು ಗುಡೇಕೋಟೆ ಪ್ರದೇಶ. ಗುಡೇಕೋಟೆ ತಾಲೂಕಿನ ಹೋಬಳಿ ಕೇಂದ್ರವಾಗಿದ್ದು, ತಾಲೂಕು ಕೇಂದ್ರದಿಂದ ೨೮ ಕಿ.ಮೀ ದೂರದ್ಲಲಿದೆ. ಇಲ್ಲಿನ ದಂತಕಥೆಯಂತೆ ಗುಡೇಕೋಟೆಯನ್ನು ಬಾಣಾಸುರನೆಂಬ ಅರಸ ಆಳುತ್ತಿದ್ದ. ಮಹಾನ್ ಶಿವಭಕ್ತನಾಗ್ದಿದ ಬಾಣಾಸುರನ ಕೋರಿಕೆಯಂತೆ ಶಿವಪಾರ್ವತಿಯರು ಗುಡೇಕೋಟೆಯನ್ನು ರಕ್ಷಿಸುವುದಾಗಿ ಅಭಯ ನೀಡಿದ್ದರಂತೆ. ಅದರಂತೆಯೇ ಇಂದಿಗೂ ಗುಡೇಕೋಟೆ ಗ್ರಾಮದ ಹೊರಭಾಗದಲ್ಲಿ ಶಿವಪಾರ್ವತಿಯರ ಸುಂದರ ದೇಗುಲವಿದೆ. ವಿಶೇಷವೆಂದರೆ ಶಿವನು ಪಾರ್ವತಿಯನ್ನು ತೊಡೆಯ ಮೇಲೆ ಕೂಡಿಸಿಕೊಂಡಿರುವ ಅಪರೂಪದ ವಿಗ್ರಹ ಇಲ್ಲಿದೆ.


ಸಂಶೋಧಕರ ಅಭಿಮತದಂತೆ ಗುಡ್ಡದ ಮೇಲೆ ಕಟ್ಟಿರುವ ಕೋಟೆಯಿರುವ ಕಾರಣ ಇದನ್ನು ಗುಡ್ಡದಕೋಟೆ, ಗುಡ್ಡಕೋಟೆ, ಗುಡೇಕೋಟೆ ಎಂಬ ಹೆಸರು ಬರಲು ಕಾರಣವಿರಬಹುದು ಎನ್ನುತ್ತಾರೆ. ಗುಡೇಕೋಟೆಯನ್ನು ಆಳಿದ ಪಾಳೆಯಗಾರರ‍್ಲಲಿ ಪ್ರಮುಖರೆಂದರೆ ಗಂಡಳನಾಯಕ, ಬೊಮ್ಮಂತರಾಜ, ಚಿನ್ನಯರಾಜ, ಇಮ್ಮಡಿ ರಾಜಪ್ಪನಾಯಕ, ಜಟಿಂಗರಾಯ, ರಾಮಪ್ಪನಾಯಕ, ಇನ್ನಿತರರು. ಗುಡೇಕೋಟೆ ಪಾಳೆಯಗಾರರೊಂದಿಗೆ ಚಿತ್ರದುರ್ಗದ ಪಾಳೆಯಗಾರರು ಸಂಬಂಧ ಬೆಳೆಸಿದ್ದರು ಎಂದು ಸಂಶೋಧಕ ಡಾ.ವಿರುಪಾಕ್ಷಿ ಪೂಜಾರಹಳ್ಳಿಯವರಿಂದ ತಿಳಿದುಬರುತ್ತದೆ. ಮಹತ್ವದ ಅಂಶವೆಂದರೆ ಕನ್ನಡ ನಾಡಿನ ವೀರ ಮಹಿಳೆಚಿiರಲ್ಲಿ ಒಬ್ಬಳಾಗಿರುವ ಚಿತ್ರದುರ್ಗದ ಒನಕೆ ಓಬವ್ವನ ತವರೂರು ಗುಡೇಕೋಟೆ. ಗುಡೇಕೋಟೆಯ ಛಲವಾದಿ ಚಿನ್ನಪ್ಪನ ಮಗಳು ಓಬವ್ವ ಎಂದು ಆಕರ ಗ್ರಂಥಗಳಿಂದ ತಿಳಿದುಬರುತ್ತದೆ. 
ಗುಡೇಕೋಟೆ ಸುತ್ತಲೂ ಬೆಟ್ಟಗಳಿಂದ ಆವರಿಸಿರುವ ಪ್ರದೇಶ. ಶತ್ರುಗಳಿಗೆ ಸುಲಭವಾಗಿ ನಿಲುಕಲಾಗದ ಬೃಹತ್ ಹೆಬ್ಬಂಡೆಗಳಿಂದ ಕೂಡಿರುವ ಬೆಟ್ಟದ ಮೇಲೆ ಸುಂದರವಾದ, ಅಭೇದ್ಯವಾದ ಕೋಟೆಯನ್ನು ನಿರ್ಮಿಸಲಾಗಿದೆ. ಕೋಟೆ ಅಲ್ಲಲ್ಲಿ ಶಿಥಿಲವಾಗಿದು, ಗತವೈಭವವನ್ನು ಸಾರುತ್ತದೆ. ಗುಡೇಕೋಟೆಯ್ಲಲಿ ತಕ್ಷಣವೇ ಆಕರ್ಶಿಸುವುದು ಗ್ರಾಮದ ಪ್ರವೇಶದ್ವಾರದಲ್ಲಿಯೇ ಇರುವ ಉಪ್ಪರಿಗೆಯ ಸ್ಮಾರಕ. ವಾಸ್ತುಶಿಲ್ಪ ಶೈಲಿಯಿಂದ ತಕ್ಷಣ ಗಮನ ಸೆಳೆಯುತ್ತದೆ. ಇದನ್ನು ತಂಗಾಳಿ ಮಹಲ್ ಎಂದೂ ಕರೆಯುತ್ತಾರೆ. ಈಗಾಗಲೇ ಶಿಥಿಲಾವಸ್ಥೆಯ್ಲಲಿರುವ ಸುಂದರ ಉಪ್ಪರಿಗೆಯನ್ನು ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯವರು ರಕ್ಷಿಸಬೇಕಾಗಿದೆ.


ಇದಲ್ಲದೆ ಇಲ್ಲಿ ಪಾಳೆಯಗಾರರ ಕಾಲಕ್ಕೆ ಸಂಬಂಧಿಸಿದ ಆಂಜನೇಯ ದೇವಾಲಯ, ಚೌಡಮ್ಮ ದೇವಾಲಯ, ಮಲಿಯಮ್ಮ ದೇವಾಲಯ, ರಾಮಲಿಂಗೇಶ್ವರ ದೇವಾಲಯ, ಬಸವಣ್ಣ ದೇವಾಲಯ, ಕಾಳಮ್ಮ ದೇವಾಲಯ, ಈಶ್ವರ ದೇವಾಲಯ, ಲಕ್ಷ್ಮೀ ವೆಂಕಟೇಶ್ವರ ದೇವಾಲಯ, ಚೌಳೇಶ್ವರ, ಪಂಚಲಿಂಗೇಶ್ವರ, ಶಿವ-ಪಾರ್ವತಿಯರ ದೇವಾಲಯ ಪ್ರಮುಖವಾದವು. ಎಲ ದೇವಾಲಯಗಳೂ ವಿಜಯನಗರ ಪೂರ್ವ ಮತ್ತು ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲಾಗಿರುವ ದೇವಾಲಯಗಳಾಗಿವೆ. ಗುಡೇಕೋಟೆಯಲ್ಲಿ ಸಂಚರಿಸುವಾಗ ಪಾಳೆಯಗಾರರ ಆಳ್ವಿಕೆಯ ಪ್ರದೇಶದಲ್ಲಿ ಸಂಚರಿಸುತ್ತಿರುವ ಅನುಭವ ಇನ್ನೂ ಉಂಟಾಗಲು ಕಾರಣವೆಂದರೆ ಆಗಿನ ಕುರುಹುಗಳು ಇನ್ನೂ ಸ್ಮಾರಕಗಳಾಗಿ ಉಳಿದಿರುವುದು. ಕೂಡ್ಲಿಗಿ ತಾಲೂಕಿನಲ್ಲಿ ಸಂದರ್ಶಿಸಬೇಕಾದ ಪ್ರೇಕ್ಷಣೀಯ ಐತಿಹಾಸಿಕ ಸ್ಥಳಗಳಲ್ಲಿ ಗುಡೇಕೋಟೆಯೂ ಒಂದು. ಇಲ್ಲಿನ ಸ್ಮಾರಕಗಳನ್ನು ಉಳಿಸಿಕೊಳ್ಳುವ, ಸಂರಕ್ಷಿಸುವ ಕಾರ್ಯ ಮಾತ್ರ ಆಗಬೇಕಾಗಿರುವ ಮಹತ್ವದ ಕಾರ್ಯವಾಗಿದೆ. 

ಕೂಡ್ಲಿಗಿ ತಾಲೂಕಿನ ಶಿಲಾಯುಗದ ನಿಲುಗಲ್ಲುಗಳು



ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಪ್ರಾಗೈತಿಹಾಸಿಕದ ಕುರುಹುಗಳನ್ನು ಹೊಂದಿರುವ ಅನೇಕ ಸ್ಥಳಗಳಿವೆ. ಇತಿಹಾಸಕಾರರು ಇವುಗಳನ್ನು ಪತ್ತೆಹಚ್ಚುವಲ್ಲಿ ಅಥವಾ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯವರು ಗುರುತಿಸುವಲ್ಲಿ ನಿರ್ಲಕ್ಷಿಸಿದ್ದರೂ, ಗ್ರಾಮಸ್ಥರಲ್ಲಿ ಅವುಗಳ ಬಗ್ಗೆ ನಂಬಿಕೆ, ಮುಗ್ಧತೆ ಇನ್ನೂ ಉಳಿದುಕೊಂಡು ಬಂದಿದೆ. ಅವುಗಳಲ್ಲಿ ವಿಶೇಷವಾದುದು ತಾಲೂಕಿನ ಕುಮತಿ ಹಾಗೂ ಹುಲಿಕುಂಟೆ ಗ್ರಾಮಗಳ ಬಳಿಯಿರುವ ಬೃಹತ್ ಗಾತ್ರದ ರಕ್ಕಸಗಲ್ಲು ಅಥವಾ ನಿಲುಗಲ್ಲುಗಳು.


ಕೂಡ್ಲಿಗಿಯಿಂದ ಸುಮಾರು ೪೫ ಕಿ.ಮೀ ದೂರದ್ಲಲಿರುವ ಕುಮತಿ ಗ್ರಾಮದ ಹೊರವಲಯದ ಹೊಲದಲ್ಲಿ ೨ ಒರಟು ಕಲ್ಲಿನ ಮಾನವಾಕೃತಿಗಳನ್ನು ನಿಲ್ಲಿಸಲಾಗಿದೆ. ಪ್ರತಿಯೊಂದು ರಕ್ಕಸಗಲ್ಲು ೧೦ ಅಡಿ ಎತ್ತರ ಇವೆ. ಒರಟು ಬಂಡೆಯಲ್ಲಿ ಕೆತ್ತಲಾಗಿರುವ ಇವಕ್ಕೆ ಯಾವುದೇ ರೀತಿಯ ಕುಶಲ ಕೆತ್ತನೆಯಿಲ್ಲ. ರುಂಡದ ಭಾಗ ಹಾಗೂ ಎರಡು ಕೈಗಳನ್ನು ಸಂಕೇತಿಸುವಂತೆ ಮಾತ್ರ ಒರಟು ಬಂಡೆ ಕಲ್ಲಿನಲ್ಲಿ ಕೆತ್ತಲಾಗಿದೆ. ಇದೇ ಸ್ಥಳದಲ್ಲಿಯೇ ಇನ್ನೂ ೩ ಮಾನವಾಕೃತಿಯ ಶಿಲೆಗಳಿರಬಹುದಾದ ಅವಶೇಷಗಳಿವೆ. ಹುಲಿಕುಂಟೆ ಗ್ರಾಮದ ಹೊರವಲಯದಲ್ಲಿನ ಬೆಟ್ಟದಲ್ಲಿಯೂ ಕುಮತಿ ರೀತಿಯ ನಿಲುಗಲ್ಲುಗಳಿವೆಯಾದರೂ, ಗಾತ್ರದಲ್ಲಿ ಇವು ಚಿಕ್ಕವು. ಇವುಗಳ ಗಾತ್ರ ೪ ಅಡಿ. ಇಲ್ಲಿಯೂ ಸಹ ೧ ನಿಲುಗಲ್ಲು ಸುಸ್ಥಿತಿಯಲ್ಲಿದ್ದು, ಮತ್ತೆರಡು ಕಾಲನ ತುಳಿತಕ್ಕೆ ನಾಶವಾಗಿವೆ. ಅವುಗಳ ತುಂಡುಗಳೂ ಸಹ ಅಲ್ಲಿಯೇ ಇವೆ. ಸ್ಥಳೀಯರು ಇವುಗಳನ್ನು ‘ರಕ್ಕಸಗಲ್ಲು’ ‘ರಕ್ಕಸಮಡ್ಡಿ’ ಎಂದೇ ಕರೆಯುತ್ತಾರೆ. ನುಂಕಮಲ್ಲೇಶ್ವರನು ರಾಕ್ಷಸರಿಗೆ ಬಾಣ ಹೊಡೆದಾಗ, ರಾಕ್ಷಸರು ಈ ರೀತಿಯಲ್ಲಿ ಕಲ್ಲಾಗಿ ನಿಂತರು ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.


ಇವು ಮಧ್ಯಪ್ರಾಚೀನ ಶಿಲಾಯುಗದ ನಿಲುಗಲ್ಲುಗಳಾಗಿವೆ ಎಂಬುದು ಸಂಶೋಧಕರ ಅಭಿಮತ. ೧೯೯೫ರಲ್ಲಿ ಕೇಂದ್ರ ಪುರಾತತ್ವ ಇಲಾಖೆಯ ನಿರ್ದೇಶಕರಾಗಿದ್ದ ಡಾ.ಕೆ.ಪಿ.ಪೂಣಚ್ಚ, ಡಾ.ಎಂ.ಸಿ.ನರಸಿಂಹನ್ ನೇತೃತ್ವದಲ್ಲಿ ಗ್ರಾಮಾಂತರ ಸರ್ವೇಕ್ಷಣ ಸಂದರ್ಭದಲ್ಲಿ ಕುಮತಿಯ ಗ್ರಾಮದ ಕೆ.ಎಂ.ತಿಪ್ಪೇರುದ್ರಯ್ಯನವರ ಹೊಲದಲ್ಲಿ ಈ ಮಾನವಾಕೃತಿಯ ಶಿಲ್ಪಗಳನ್ನು ಪ್ರಥಮ ಬಾರಿಗೆ ಪತ್ತೆ ಹಚ್ಚಲಾಯಿತು. ಇವುಗಳನ್ನು ದೇಶದಲ್ಲಿಯೇ ಅಪರೂಪವೆನ್ನಲಾಗಿದ್ದು, ಈ ರೀತಿಯ ನಿಲುಗಲ್ಲುಗಳು ಆಂದ್ರಪ್ರದೇಶ, ತಮಿಳುನಾಡು, ಉತ್ತರ ಭಾರತದ ಕೆಲವು ಸ್ಥಳಗಳಲ್ಲಿ ಮಾತ್ರ ಈ ರೀತಿಯ ಆಕೃತಿಗಳು ದೊರೆತಿವೆ ಎಂದಿದ್ದಾರೆ, ಆದರೆ ಅವುಗಳಾವವೂ ಈ ರೀತಿಯಲ್ಲಿ ಸುಸ್ಥಿತಿಯಲ್ಲಿ ಇಲ್ಲ ಎಂದು ಅವರು ತಮ್ಮ ಸಂಶೋಧನಾ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಇವು ದೇಶದಲ್ಲಿಯೇ ಸುಸ್ಥಿತಿಯಲ್ಲಿರುವ ಅಪರೂಪದ ಮಾನವಾಕೃತಿಯ ಶಿಲ್ಪಗಳೆನ್ನುವುದಕ್ಕೆ ಸಂಶೋಧಕರಾದ ಡಾ.ಅ.ನ.ಸುಂದರ್, ಪ್ರೊ.ಲಕ್ಷ್ಮಣ ತೆಲಗಾವಿ, ಡಾ.ಶೇಷಾದ್ರಿ ಮುಂತಾದವರು ಸಹಮತ ವ್ಯಕ್ತಪಡಿಸಿದ್ದಾರೆ.
ರಕ್ಕಸಗಲ್ಲುಗಳಿರುವ ಸ್ಥಳಕ್ಕೆ ಅನೇಕ ವಿದ್ವಾಂಸರು, ಸಂಶೋಧಕರು ಭೇಟಿ ನೀಡಿದ್ದಾರೆ. ಪತ್ರಿಕೆಯಲ್ಲಿಯೂ ಈ ಕುರಿತು ವರದಿ ಪ್ರಕಟಗೊಂಡಿದೆ. ಆದರೆ ಇದುವರೆಗೂ ಈ ಕುರಿತು ಗಂಭೀರವಾದ ಚರ್ಚೆ ನಡೆದಿಲ್ಲ. ಕುಮತಿ ಹಾಗೂ ಹುಲಿಕುಂಟೆ ಗ್ರಾಮದ ಹೊರವಲಯದಲ್ಲಿ ಉಳಿದಿರುವ ೨ ರಕ್ಕಸಗಲ್ಲುಗಳನ್ನು ಸಂರಕ್ಷಿಸುವಲ್ಲಿ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯವರು ಕ್ರಮ ಕೈಗೊಂಡಲ್ಲಿ, ಸಂಶೋಧಕರ ಸಂಶೋಧನೆಗೆ ರಕ್ಕಸಗಲ್ಲುಗಳು ನೆರವಾಗಬಹುದು. ಇಲ್ಲದಿದ್ದಲ್ಲಿ ಉಳಿದಿರುವ ಈ ಅಪೂರ್ವವಾದ ರಕ್ಕಸಗಲ್ಲುಗಳೂ ನಶಿಸಿಹೋಗಬಹುದಾಗಿದೆ.


Friday, October 12, 2012

ಯೆಂಡ್ಕುಡ್ಕನ್ ಪದಗೋಳು




ತೂರಾಡೋ ಸಂದ್ರ
ಬಿದ್ಗಿದ್ದಾನ್ರಪ್ಪೋ
ಪೆವಿಕಾಲಾದ್ರೂ ಅಂಟ್ಸಿ

ದಿನಾಲೂ ಸೀದಾ ಮನಿ ಹಾದಿ
ಇಡ್ಕೊಂಡೋದ್ರೆ, ಈ ಹಾದಿ ಮಾತ್ರಾ
ಎಂಗೋ ಏನೋ ನನ್ನೇ ಇಡ್ಕಂತೈತೆ

ಪರ್‌ಪಂಚೆಲ್ಲ ಗರ್ರ್ ಅಂತಾ
ತಿರ್ಗೋವಾಗ ನೆಟ್ಟಗ
ನಿಂದ್ರಂದ್ರ ಎಂಗೆ ನಿಲ್ಬೇಕ್ ನೀವೇ ಏಳಿ

ಕಳ್ ನನ್‌ಮಗ
ಒಂದೇ ಗ್ಳಾಸ್ ಇಡಂದ್ರೆ
ಕೊನಿ ಕೊನೀಗ್
ನನ್ಗೇ ಗೊತ್ ಆಗ್ಲಾರ್ದಂಗೆ
೪ ಗ್ಳಾಸ್ ಇಡ್ತಾನಾ
ರೊಕ್ಕ ಅವರ್ಪ್ಪಂದಾ?

ಕತ್ಲಂದ್ರೆ ಬಯ
ನಮ್ ಜನ್ರಿಗೆ
ಎಂಡ್ರಂದ್ರೆ ಬಯ
ನಮ್ಮಂತಾ ಕುಡುಕರ್ಗೆ

ಕುಡ್ ಕುಡದೇ
ಹಾಳಾದ್ರು ನಮ್ಮಂತೋರು
ಕುಡೀಲಾರ್ದೆ ಹಾಳಾದ್ರು
ಎಂಥೇಂಥೋರು

ಕುಡ್ದಾಗ್ ಮಾತ್ರ
ನಿಜಾ ಏಳ್ತೀವಿ ದಣಿ
ಕುಡೀದಿದ್ದಾಗ ಮಾತ್ರಾ
ನಿಜವಾಗ್ಲೂ ಸುಳ್ಳ್ ಏಳ್ತೀವಿ

ಅಪಮಾನಗಳಿಗಿಲ್ಲ ವಿರಾಮ : ಒಂದು ನೋಟ


            ಇತ್ತೀಚೆಗೆ ಬಿಡುಗಡೆಯಾದ ಡಾ.ವೆಂಕಟಗಿರಿ ದಳವಾಯಿಯವರ ಅಪಮಾನಗಳಿಗಿಲ್ಲ ವಿರಾಮ ಕವನ ಸಂಕಲನ ಕಾವ್ಯದ ಹೊರಳು ನೋಟವನ್ನು ಗುರುತಿಸುವ ಸಂಕಲನವಾಗಿದೆ. ಸಂಕಲನದಲ್ಲಿ ಒಟ್ಟು ೪೩ ಕವಿತೆಗಳಿದ್ದು, ಹಳೆಬೇರು, ಹೊಸ ಚಿಗುರು ಎಂಬಂತೆ ಹಿಂದಿನ ಎಲ್ಲ ಕಾವ್ಯಪ್ರಕಾರಗಳನ್ನು ಒಡಲೊಳಗಿಟ್ಟುಕೊಂಡು ಮೂಡಿರುವ ಕವಿತೆಗಳೇನೋ ಎನಿಸುವಂತಿವೆ.
ದಳವಾಯಿಯವರು ಹೇಗೆ ಸಹೃದಯಿಗಳೋ ಅವರ ಕವಿತೆಗಳಲ್ಲೂ ಅದರ ಛಾಪು ಮೂಡಿದೆ. ಕಾವ್ಯದಲ್ಲಿ ಬಂಡಾಯದ ಹೊಳಹಿದ್ದರೂ ಅದು ಮೃದುವಾಗಿಯೇ ವ್ಯಕ್ತವಾಗಿದೆ. ಜಾತಿಮದದ ಮುಳ್ಳನ್ನು ತೆಗೆಯುವ ಕವಿಯ ಭಾಷೆ ಹೀಗಿದೆ:

ಮಲ್ಲಯ್ಯನ ಬೆಟ್ಟ, ಕನಕನ ಬಾದ, ಶಿಶುವಿನಾಳದ
ಶಿಶುಗಳ ನಾನೆನ್ನುವ ಅಹಂಕಾರದ ಮಾತುಗಳು
ವೃಕ್ಷವಾಗಿ, ಪ್ರಭುವಿನ ನಿರ್ಮೋಹ,
ಕನಕನ ರಾಗಿತನ, ಷರೀಫನ ಷರಿಯತ್‌ಗೆ
ತೊಡಕಾಗುವ ಮುನ್ನ ತುಂಡರಿಸಬೇಕಿದೆ
ಜಾತಿ ಮದದ ನಾಲಿಗೆಯೆಂಬ ಮುಳ್ಳನ್ನು. (ಸ್ಥಾವರಕ್ಕಳಿವುಂಟು)

ಶಬ್ದಗಳ ಓಟ, ಭಾಷೆಯನ್ನು ಸಮರ್ಥವಾಗಿ ಹಿಡಿದಿಡುವಿಕೆಗೆ :
ರಕ್ತ ಬೀಜಾಸುರರಂತೆ ಕಾಡುವ
ವಿರೂಪದ ಕಲ್ಪನೆಗೆ ಬೆಳೆದು ನಿಂತ
ವಿಷದ ಜೋಳಿಗೆ ಅದ ಮೀರಿ ನಿಲ್ಲುವ
ಕಟ್ಟಡದ ಅಂಚಿಗೆ ಭೂತದ ಸಿಡಿಲು.
ಸುರಿದ ಮಳೆ; ನಿಲ್ಲದ ಹಾವುಗಳ
ಹರಿದಾಟ ಮೋಡದೊಂದಿಗೆ ಸಖ್ಯ
ಬಯಸದೇ ಹುತ್ತದೊಂದಿಗಷ್ಟೇ ಸರಸ.
ಸುರಗಿಯೆಂಬ ಬೇಲಿಯ ಆಟಕ್ಕೆ ನೀನಷ್ಟೆ
ಸಾಕ್ಷಿ. ಅದಕ್ಕೆಂದೇ ಈ ಅಪಮಾನ.(ಅಪಮಾನಗಳಿಗಿಲ್ಲ ವಿರಾಮ)

ಇಲ್ಲಿ ಬಳಸಿರುವ ರಕ್ತ ಬೀಜಾಸುರರು, ವಿಷದ ಜೋಳಿಗೆ, ಭೂತದ ಸಿಡಿಲು, ಹಾವುಗಳ ಹರಿದಾಟ, ಹುತ್ತದೊಂದಿಗಷ್ಟೆ ಸರಸ ಶಬ್ದಗಳು ಕಾವ್ಯದ ಓಘ, ಶಬ್ದಚಿತ್ರಗಳಿಗೆ ಸಾಕ್ಷಿಯಾಗಿವೆ. ಇಡೀ ಕವಿತೆ ಕಾವ್ಯ ನಿಯಮದ ಚೌಕಟ್ಟಿನೊಳಗೆ ಪರಿಪೂರ್ಣವಾಗಿ ಹೊಂದಿಕೊಂಡಿದೆ ಎನ್ನುವಷ್ಟರ ಮಟ್ಟಿಗೆ ಓದುಗನನ್ನು ಸೆರೆಹಿಡಿಯುತ್ತದೆ.

ದಿನದ ಜಂಜಡವನ್ನೇ ಕಾವ್ಯವನ್ನಾಗಿಸುವಲ್ಲಿ ದಳವಾಯಿ ಯಶಸ್ವಿಯಾಗಿದ್ದಾರೆ:

ಸೂರ್ಯ ಹಗಲಲ್ಲೇ ಕಾಣಿಸಿಕೊಳ್ಳುತ್ತಿದ್ದಾನೆ.
ಚಂದ್ರ ರಾತ್ರಿಗಳನ್ನೇ ನೆಚ್ಚಿಕೊಳ್ಳುತ್ತಿದ್ದಾನೆ.
ಬೇಸರಗೊಂಡು
ರಾತ್ರಿ ಸೂರ್ಯನ ಜನಕರು
ನಾವಾಗಬಾರದೆಂದು ಧೇನಿಸುತ್ತೇವೆ(ಅದೇ ಮಾತು ಕದಾ ತೆಗೀ)

ಅಲ್ಲಲ್ಲಿ ನವೋದಯ, ನವ್ಯದ ನೆನಪುಗಳೂ ಕವಿತೆಯಲ್ಲಿ ಮೂಡುತ್ತವೆ. ಹೀಗಾಗಿ ಓದುಗನಿಗೆ ಎಲ್ಲವನ್ನೂ ಒಳಗೊಂಡ ವಿಶೇಷವಾದ, ಹೊಸತನದ ಕವಿತೆಗಳೆನಿಸುತ್ತವೆ:

ಇದ್ದ ಕಾಲ ಕೊಟ್ಟ ಪ್ರೀತಿ
ಮೈಥುನ ಅದೆಲ್ಲವೂ ಗೀಜಗನಷ್ಟೇ
ಸುಂದರ ಮತ್ತು ಹತ್ತಿರ(ಬದುಕೆಲ್ಲವೂ ಬರಿದು.)

ಗಂಧ ಪೂಸಿತ ಬಳುಕಿನ ವಡ್ಡ್ಯಾಣದ
ಭಾರ ಹೊತ್ತ ಕನ್ನಿಕೆಯ ಕೆನ್ನೆ ತುಂಬ
ಅರಗಳಿಗೆಯೂ ನಿಲ್ಲದೇ ಸುರಿವ ಜೇನಹನಿಯೊಂದು
ಮತ್ತೆ ಕಾಣದು ಮತ್ತೆ ಬಾರದು(ನಕ್ಷತ್ರ ಮತ್ತು ಅಳು)

ಮೋಟು ಮರಕ್ಕೆ ಮೋಡದಂತೆ
ನಿಂತು ಸುಮ್ಮನೆ ನೀರುಣಿಸುತ್ತೇನೆ
ಪುಷ್ಪವತಿಯೂ-ಫಲವತಿಯೂ ನೀನೇ ಆಗಬೇಕೆಂದು!(ಎಲ್ಲಾ ನೀನೇ)

         ವ್ಯವಸ್ಥೆಯ ವಿರುದ್ಧದ ಆಕ್ರೋಶವೂ ತಣ್ಣಗೆ ಹರಿದರೂ, ವ್ಯಂಗ್ಯ, ವಿಶಾದ, ಅಸಹಾಯಕತೆಗಳು ಮೇಳೈಸಿ ಕವಿತೆಗೆ ಸಾರ್ಥಕತೆಯನ್ನೂ ಒದಗಿಸಿವೆ.

ಶಿಬಿ ಬಲಿಗಳು
ಹುಟ್ಟುತ್ತಲೇ ಇರುತ್ತಾರೆ
ಗಿಡ್ಡನಾಗಿ ಉದ್ದವಾಗುವ ಗಾಳಿ-ಬೆಂಕಿಯಾಗುವ
ಹೆಣ್ಣು ಕ್ರಿಮಿಯಾಗುವ ಗರುಡ-ವಾಮನರ
ತಂತ್ರ ಅರಿಯದೆ. ಈ ಶಿಬಿ ಸಂತತಿ ಬೆಳೆದ
ರಕ್ತ ಮಾಂಸದ ತೋಳನ್ನು, ತೊಡೆಯನ್ನು ಕತ್ತರಿಸಿ
ಕೊಡುತ್ತಲೇ ಸಿಡಿ ಬಂಡಿಗೆ ನೇತಾಡುತ್ತಾರೆ
ಧನ್ಯತೆಯ ಅಮಲಿನಲ್ಲಿ.(ಸೇವಕನ ಮನೆಯಿಂದ)

ಏರುವ ದಂಡೆಯಲ್ಲಿ ರುದ್ರ ನರ್ತನ ಗೇಯುತಿಹ
ಭಸ್ಮಾಸುರರಿಗೆ ಒಂದಿಷ್ಟು ಕರುಣೆ ಮತ್ತಷ್ಟು
ಪ್ರೀತಿ ದೊರೆತಿತಾದರೂ ಎಲ್ಲಿಂದ? ನಗುವಿನ
ತೆನೆಯನ್ನು ಸುಟ್ಟು ತಿನ್ನುವ ವಿಕೃತ ದೇಹಿಗಳಿಗೆ
ಅನುಕೂಲಕ್ಕೆಂದೇ ಈ ಕತ್ತಲು(ಮೇಲೆ ಪಲ್ಲಿವಿಸುವುದು ನೋಡಾ)

ಬದುಕಿನ ನಶ್ವರತೆ, ಬಂಧನಗಳ ಕುರಿತು ಕವಿ ಅಕ್ಕಮಹಾದೇವಿ ಹಾಗೂ ಶರೀಫರನ್ನು ನೆನೆದು ಬರೆದಿರುವ ಕವಿತೆ ನಾನು ಮೆಚ್ಚಿರುವ ಕವಿತೆಗಳಲ್ಲೊಂದು:

ಅದೇ ಮಹಾದೇವಿ ನಿನ್ನ ಬೆನ್ನು ಕಂಡ
ಸಂತೆಯ ನಾಯಿ ಶಯನದ ಹಾಳು ದೇಗುಲಕ್ಕೆ
ಬಂದು ಜೊಲ್ಲು ಸುರಿಸುತ್ತಲೇ ತಿರುತಿರುಗಿ
ಕೂತಿದೆ ಕಟ್ಟೆಯ ಮೇಲೆ ಚನ್ನ ಮಲ್ಲಿ
ಕಾರ್ಜುನ ಇಲ್ಲದ ವೇಳೆ ದೊರಕಿತೆಂದು

ನಿಮಗೋ ಇಹಕ್ಕೊಬ್ಬ ಗಂಡ ಪರಕ್ಕೊಬ್ಬ ಗಂಡ
ನನಗಿನ್ನೂ ಕಾಯುವ ಗಂಡನಿಲ್ಲದೆ ಹಾವಿಗೆ
ಅಂಜಿದ್ದೇನೆ, ಕಪ್ಪೆಗೆ ಅಂಜಿದ್ದೇನೆ, ನನಗೂ
ಹುಡುಕಿಕೊಡಿ ಅಂಗಸಂಗವ ಬೆರೆತುಬಿಡುವ
ಬೆತ್ತವೊಂದನ್ನು ಮುಡಿಯುತ್ತೇನೆ
ಚಂದ್ರನಂತೆ ತಡ ಮಾಡದೇ! (ಮುಡಿ ಏರಿದ ಗಂಗೆ)

ಮಕ್ಕಳಿಂದಲೂ ಹಿರಿಯರು ಎನೆಲ್ಲವ ಕಲಿಯಬಹುದು ಎಂಬುದನ್ನು ಸಂಕಲನದ ೨ ಕವಿತೆಗಳು ತಿಳಿಹೇಳುತ್ತವೆ.

ಆಗಾಗ ಕ್ರಿಸ್ತ, ಗಾಂಧೀ, ಶರೀಫ, ಅಂಬೇಡ್ಕರರ
ಥೇರಿಗಾಥಾವನ್ನು ಹೇಳುವೆನಾದರೂ
ಯಾಕೆ ಸತ್ತರು? ಎಂದು ಭೀತಿ ಹುಟ್ಟಿಸುತ್ತಾಳೆ
ಈಗೀಗ ಕಥೆಗಳನ್ನು ಹೇಳುವುದಕ್ಕೆ
ಹಿಂಜರಿಯುತ್ತೇನೆ. ಅವರು ಸತ್ತಿಲ್ಲ ನಾವೇ
ಕೊಂದಿದ್ದೇವೆ ಎಂಬ ನಂಬಿಕೆಯಿಂದ!(ಸತ್ತ ಪ್ರಶ್ನೆಗೆ.ಕೊಂದ ನೆನಪು)

ತಟ್ಟನೆ ಹೊಳೆದದ್ದು ನಾವು ಲೋಕದೊಳಗೆ
ಉooಜ  ಎನಿಸಿಕೊಳ್ಳುವುದು ಮಕ್ಕಳಿಂದ ಹಾಗೂ
ನಮ್ಮನ್ನು ಶುದ್ಧಗೊಳಿಸುವುದೂ ಈ ಮಕ್ಕಳೇ
ಆಗಾಗ ನಾನೂ ಅವಸರದಿ
ಊome Woಡಿಞ ಮಾಡುತ್ತಿದ್ದೇನೆ,
ಆದರೆ ಮಿಸ್ ಬರೆದಿಲ್ಲ ಇನ್ನೂ ಗಿeಡಿಥಿ ಉooಜ ಅಂತ(ಅಮ್ಮನ ರೂಪಾಂತರ)

              ಅಲ್ಲದೆ ಶಿಕ್ಷಕರ ದಿನಾಚರಣೆಗೋಸ್ಕರವೇ ಬರೆದ ೩ ಕವಿತೆಗಳಿವೆ. ಶಿಕ್ಷಕರ ಘನತೆ, ಅವರ ಕೊಡುಗೆ, ಅವರ ಮೌಲ್ಯಗಳೆಲ್ಲ ಕವಿತೆಗಳಲ್ಲಿ ಹರಳುಗಟ್ಟಿವೆ.
          ಹೊಸತನದ ಬೆಚ್ಚನೆಯ ಅನುಭವ ನೀಡುವ ದಳವಾಯಿಯವರ ಅಪಮಾನಗಳಿಗಿಲ್ಲ ವಿರಾಮ ಸಂಕಲನ ಕಾವ್ಯಲೋಕಕ್ಕೊಂದು ವಿಶಿಷ್ಟ ಕೊಡುಗೆಯಾಗಿದೆ. ಅಂದವಾದ ಮುದ್ರಣ, ಮುಖಪುಟ ಕವನ ಸಂಕಲನಕ್ಕೆ ಮೆರುಗನ್ನು ತಂದಿದೆ.

ಕೃತಿ: ಅಪಮಾನಗಳಿಗಿಲ್ಲ ವಿರಾಮ
ಪ್ರಕಾಶನ: ಸಾಯಿಮಣಿ ಪ್ರಕಾಶನ ಹೊಸಪೇಟೆ.
ಮೊದಲ ಮುದ್ರಣ: ೨೦೧೨
ಬೆಲೆ: ೭೫ ರೂ.ಗಳು.

Monday, September 24, 2012

ಸಮಸ್ಯೆಗಳಾಗಿ ಕುಳಿತಿರುವ ಬ್ರಿಟಿಷರ ಕಾಲದ ತಿಜೋರಿಗಳ ಗ್ರಾಮ ಹನುಮನಹಳ್ಳಿ


            ನಮ್ಮ ದೇಶವನ್ನು ಬ್ರಿಟಿಷರು ೨೦೦ ವರ್ಷಗಳ ಕಾಲ ಆಳಿದರು ಎಂಬುದು ಇತಿಹಾಸದ ಮಾತು. ಈಗಿನ ಯುವಜನಾಂಗಕ್ಕೆ ಇದನ್ನು ಅರ್ಥೈಸಿಕೊಳ್ಳುವುದು ಇನ್ನೂ ಕಷ್ಟವೇ ಅನಿಸಬಹುದು. ಆದರೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ತೂಲಹಳ್ಳಿ ಬಳಿಯ ಹನುಮನಹಳ್ಳಿ ಗ್ರಾಮಕ್ಕೆ ಹೋದರೆ ಅಲ್ಲಿನ ಬಹುತೇಕ ಮನೆಗಳಲ್ಲಿ ಬ್ರಿಟಿಷರ ಕಾಲದ ತಿಜೋರಿಗಳು ಈಗಲೂ ಇವೆ. ಆದರೆ ಅವೆಲ್ಲ ಪಳೆಯುಳಿಕೆಗಳಂತಾಗಿ ಮೂಲೆ ಸೇರಿವೆ. ಇಷ್ಟೊಂದು ತಿಜೋರಿಗಳು ಈ ಗ್ರಾಮದಲ್ಲಿ ಹೇಗೆ ಸೇರಿದವೆಂಬುದೇ ಅಚ್ಚರಿಯ ಸಂಗತಿ. ಗ್ರಾಮಸ್ಥರಿಗೂ ಈ ಕುರಿತು ಗೊತ್ತಿಲ್ಲ. ವಿಶೇಷವೆಂದರೆ ಇವೆಲ್ಲವೂ ಗ್ರಾಮಸ್ಥರಿಗೆ ಸಮಸ್ಯೆಯಾಗಿ ಕುಳಿತಿರುವುದು.
            ತಾಲೂಕಿನ ತೂಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿರುವ ಹನುಮನಹಳ್ಳಿ ಕೂಡ್ಲಿಗಿ ತಾಲೂಕು ಕೇಂದ್ರದಿಂದ ಸುಮಾರು ೩೫ ಕಿ.ಮೀ ದೂರವಿದೆ. ಮೊದಲ ನೋಟಕ್ಕೇ ಕುಗ್ರಾಮದಂತೆ ಕಂಡುಬರುವ ಹನುಮನಹಳ್ಳಿಯಲ್ಲಿನ ಜನತೆ ತಮ್ಮ ಜಮೀನು, ಮನೆಯೊಂದಿಗೆ ನೆಮ್ಮದಿಯಿಂದ ಬದುಕಿದ್ದಾರೆ. ಒಕ್ಕಲುತನ ಪ್ರಧಾನ ವೃತ್ತಿ. ಕೂಲಿ ಕೆಲಸಕ್ಕೆ ಹೋಗುವ ಬಡಕುಟುಂಬಗಳೂ ಇಲ್ಲಿವೆ. ಆದರೆ ಹಳೆಯ ಮನೆಗಳಲ್ಲಿ ಹೆಜ್ಜೆಯಿರಿಸಿದರೆ ಕಂಡುಬರುವುದು ಬ್ರಿಟಿಷರ ಕಾಲದ ಭದ್ರವಾದ ತಿಜೋರಿಗಳು. ೪-೫ ಅಡಿ ಎತ್ತರದ ಈ ತಿಜೋರಿಗಳು ಬಹುತೇಕ ಮನೆಗಳ್ಲಲಿ ಫ್ರಿಜ್‌ಗಳ ರೀತಿಯಲ್ಲಿವೆ. ತಿಜೋರಿಗಳ ಮೇಲ್ಭಾಗದ್ಲಲಿ ಹಿತ್ತಾಳೆಯಲ್ಲಿ ಸಿದ್ಧಪಡಿಸಿದ ಬ್ರಿಟಿಷರ ರಾಜಲಾಂಛನವಿದೆ. ಮೇಲ್ಗಡ ಬ್ರಿಟಿಷ ರಾಜಮನೆತನದ ಕಿರೀಟ, ಅದರೆ ಮೇಲೆ ಸಿಂಹ, ಎರಡೂ ಬದಿಯಲ್ಲಿ ಸಿಂಹ ಮತ್ತು ಕುದುರೆ ಚಿತ್ರಗಳಿವೆ. ಚಿನ್ಹೆಯಲ್ಲಿ ಲ್ಯಾಟಿನ್ ಭಾಷೆಯ್ಲಲಿರುವ gÀĪÀ honi soit qui mal y pense ಎಂದಿದೆ. ಇಂಗ್ಲಿಷ್‌ನಲ್ಲಿ ಇದರರ್ಥ  evil be to him who evil thinks
ಎಂದಾಗುವುದು. ಇದರ ಕೆಳಗಡೆಯಲ್ಲಿಯೂ ಲ್ಯಾಟಿನ್ ಭಾಷೆಯಲ್ಲಿ dieuet mon droit ಎಂದಿದೆ. ಇಂಗ್ಲಿಷ್‌ನಲ್ಲಿ ಇದರರ್ಥ god and my right  ಎಂದಾಗುವುದು.


          ವಿಶೇಷವೆಂದರೆ ಈ ತಿಜೋರಿಗಳು ಎಷ್ಟು ಭದ್ರ ಹಾಗೂ ಉಕ್ಕಿನ ಬಾಗಿಲುಗಳನ್ನು ಹೊಂದಿವೆಯೆಂದರೆ ಇವನ್ನು ಕೊಂಚ ಸರಿಸಲೂ ಸಾಧ್ಯವಿಲ್ಲ. ಟನ್‌ಗಟ್ಟಲೆ ತೂಗುವ ಈ ತಿಜೋರಿಗಳನ್ನು ಎತ್ತಿ ಕೊಂಚ ಸರಿಸಲು ಕನಿಷ್ಟ ೮ ಜನರಾದರೂ ಬೇಕು. ಅಲ್ಲದೆ ಕೆಲವು ಮನೆಗಳಿಗೆ ಹೊಸರೂಪ ನೀಡಿ ನಿರ್ಮಿಸುವಾಗ ಇವುಗಳನ್ನು ಬೇರೆಡೆ ಸಾಗಿಸಲು ಸಾಧ್ಯವಾಗದೆ ಅವುಗಳನ್ನು ಇದ್ದಲ್ಲಿಯೇ ಇರಲು ಬಿಟ್ಟಿದ್ದಾರೆ. ಮತ್ತೆ ಕೆಲವರು ಇದಾವ ಸಮಸ್ಯೆ ಎಂದು ತಮ್ಮ ಸಂಬಂಧಿಕರಿಗೋ, ಸ್ನೇಹಿತರಿಗೋ ಕಾಣಿಕೆಯಾಗಿ ನೀಡಿ ಕೈ ತೊಳೆದುಕೊಂಡಿದ್ದಾರೆ. ಇಂದಿಗೂ ಸುಸ್ಥಿತಿಯಲ್ಲಿರುವ ಈ ತಿಜೋರಿಗಳ ಬಾಗಿಲನ್ನು ತೆರೆಯಲು ೨-೩ ಬೀಗದ ಕೈಗಳಿವೆ. ಎಲ್ಲವನ್ನೂ ಒಟ್ಟಿಗೆ ಬಳಸಿದಾಗ ಮಾತ್ರ ತಿಜೋರಿ ತೆರೆಯುತ್ತದೆ. ಬಾಗಿಲುಗಳೇ ಅಂಗೈಯಗಲ ಗಾತ್ರವನ್ನು ಹೊಂದಿವೆ. ಒಳಗಡೆ ೨-೩ ಖಾನೆಗಳಿವೆ. ಹಿಂದಿನ ಕಾಲದವರು ಹಣ, ಒಡವೆಗಳನ್ನಿರಿಸುತ್ತಿದ್ದರೋ ಏನೋ, ಈಗ ಮಾತ್ರ ಅಲ್ಲಿ ಕೆಲವು ಕಾಗದ ಪತ್ರಗಳನ್ನು ಹೊರತುಪಡಿಸಿದರೆ ಏನೇನೂ ಇಲ್ಲದೆ ಖಾಲಿಯಾಗಿವೆ. 
‘ಯಾವಾಗಲೋ ನಮ್ಮ ಮುತ್ತಾತರ ಕಾಲದಿಂದ ತಿಜೋರಿಗಳು ಹಂಗೇ ಅದಾವ ಸರ್, ಅವನ್ನು ಮನ್ಯಾಗ ಇಟ್ಟೀವಷ್ಟೇ ಅದರಿಂದೇನೋ ಪ್ರಯೋಜನಿಲ್ಲ ಎಂದು ಗ್ರಾಮದ ಕೆ.ಚನ್ನಬಸಪ್ಪ ಹೇಳುತ್ತಾರೆ. ‘ನಮ್ ದುಡಿಮೆ ನಾವು ಆರಾಮದೀವಿ, ಹೊಸಾ ಮನಿ ಕಟ್ಬೇಕಂದ್ರ ಅವನ್ನ ಏನ್ಮಾಡಬೇಕೆಂಬೂದ ದೊಡ್ಡ ಸಮಸ್ಯೆ’ ಎಂದು ಬಣಕಾರ ಚನ್ನಬಸಪ್ಪ, ಮಾಗಡಿ ಹೆಗ್ಗನಗೌಡ್ರು ಹೇಳುತ್ತಾರೆ. 
        ಗ್ರಾಮದಲ್ಲೇನೋ ತಿಜೋರಿಗಳಿವೆ, ಆದರೆ ಎಲ್ಲವೂ ಖಾಲಿಯಾಗಿವೆ ಇನ್ನೂ ವಿಚಿತ್ರವೆಂದರೆ ಇಲ್ಲಿನ ಜನತೆಗೆ ಅವು ದೊಡ್ಡ ಸಮಸ್ಯೆಯಾಗಿ ಕೂತಿವೆ. 


Sunday, August 26, 2012

ಸದ್ದಿಲ್ಲದೇ ಮರೆಯಾಗುತ್ತಿರುವ ಸೈಕಲ್ ರಿಕ್ಷಾಗಳು


          ದೈಹಿಕ ಶ್ರಮವನ್ನೇ ಬಯಸುವ ಕೆಲವೇ ಕೆಲವು ಕೆಲಸಗಳಲ್ಲಿ ಸೈಕಲ್ ರಿಕ್ಷಾ ತುಳಿಯುವುದು. ತ್ರಿಚಕ್ರದ ಸೈಕಲ್ ರಿಕ್ಷಾಗಳು ಕೆಲವು ದಶಕಗಳ ಹಿಂದೆ ರಸ್ತೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಂಚರಿಸುತ್ತಿದ್ದವು. ರಿಕ್ಷಾ ತುಳಿಯುವವರೂ ಅದರಿಂದಲೇ ತಮ್ಮ ಜೀವನೋಪಾಯ ಕಂಡುಕೊಂಡಿದ್ದರು. ಆದರೆ ಆಧುನಿಕ ಬದುಕಿನಲ್ಲಿ ವಾಹನಗಳ ಭರಾಟೆ ಹೆಚ್ಚಿದಂತೆಲ್ಲ ಸೈಕಲ್ ರಿಕ್ಷಾಗಳು ಮಾಯವಾಗಿ ರಿಕ್ಷಾ ಚಾಲಕರ ಬದುಕು ಅಸಹನೀಯವೆನಿಸತೊಡಗಿದೆ. ಅವರೀಗ ಪರ್ಯಾಯ ಮಾರ್ಗವನ್ನು ಹುಡುಕಲೇಬೇಕಾಗಿದೆ.
              ಕೂಡ್ಲಿಗಿ ಪಟ್ಟಣದಲ್ಲಿ ೧೯೯೦ರ ದಶಕದಲ್ಲಿ ೨೦ ಸೈಕಲ್ ರಿಕ್ಷಾಗಳಿದ್ದವು. ಸಾರ್ವಜನಿಕರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ರಿಕ್ಷಾ ಚಾಲಕರು ಕರೆದೊಯ್ಯುತ್ತಿದ್ದರು. ಇಬ್ಬರು ಕುಳಿತುಕೊಳ್ಳುವ ಅವಕಾಶವಿದ್ದ ಸೈಕಲ್ ರಿಕ್ಷಾಗಳಿಗೆ ಮಳೆ ಬಂದಾಗ ರಕ್ಷಣೆಗಾಗಿ ಮೇಲೇರಿಸಿಕೊಳ್ಳುವ ಟಾಪ್‌ಗಳಿದ್ದವು. ಮಿರಿಮಿರಿ ಮಿಂಚುತ್ತಿದ್ದ ಗಾಲಿಗಳ ರಿಮ್‌ಗಳು, ಹ್ಯಾಂಡಲ್‌ಗಳಿಗೆ ಹೂಕುಚ್ಚಗಳು, ಮಾರ್ಗದಲ್ಲಿ ಸಂಚರಿಸುವ ಜನರನ್ನು ಚದುರಿಸಲು ಗಂಟೆ, ರಿಕ್ಷಾದಲ್ಲಿ ಕುಳಿತವರು ಉಳಿದವರಿಗಿಂತ ಭಿನ್ನವಾಗಿಯೇ ಕಾಣುತ್ತಿದ್ದರು. ಚಾಲಕ ಮಾತ್ರಮಳೆ, ಬಿಸಿಲು, ಗಾಳಿಗೆ ಮೈಯೊಡ್ಡಿ ರಿಕ್ಷಾ ತುಳಿಯುತ್ತಿದ್ದ. ಕೆಲವರು ಮರುಕಪಟ್ಟು ಹೆಚ್ಚಿನ ಬಾಡಿಗೆ ನೀಡಿದರೆ, ಕೆಲವರು ಕಡಿಮೆಯೇ ಕೊಡುತ್ತಿದ್ದರೆಂದು ಹಳಬರು ನೆನೆಯುತ್ತಾರೆ. ರಿಕ್ಷಾಗಳನ್ನು ತುಳಿದು ತುಳಿದೇ ವಯಸ್ಸಾದ ಮೇಲೆ ಮಂಡಿನೋವಿನಿಂದ ಬಳಲುವವರೂ ಇದ್ದಾರೆ. ಇತ್ತೀಚೆಗೆ ಪಟ್ಟಣದಲ್ಲಿ ಆಟೋಗಳು ಬಂದ ನಂತರ ರಿಕ್ಷಾ ಚಾಲಕರನ್ನು ಕೇಳುವವರೇ ಇಲ್ಲದಂತಾಗಿ, ಬದಲಾಗುತ್ತಿರುವ ದಿನಗಳಿಗೆ ತಕ್ಕಂತೆ ರಿಕ್ಷಾ ಚಾಲಕರೂ ಪರ್ಯಾಯ ಮಾರ್ಗವನ್ನು ಹುಡುಕಿಕೊಂಡಿದ್ದಾರೆ. ರಿಕ್ಷಾಗಳು ತಮ್ಮ ಮೂಲ ಸ್ವರೂಪವನ್ನೇ ಕಳೆದುಕೊಂಡು ಅವೀಗ ಭಾರವಸ್ತುಗಳನ್ನು ಸಾಗಿಸುವ ಬಂಡಿಗಳಾಗಿ ಮಾರ್ಪಟ್ಟಿವೆ. ಅದಕ್ಕೆ ತಕ್ಕಂತೆ ಅವುಗಳ ವಿನ್ಯಾಸವೂ ಬದಲಾಗಿದೆ. ದಶಕದ ಹಿಂದೆ ಪ್ರತಿದಿನವೂ ೧೫೦ ರೂ.ಗಳವರೆಗೆ ದುಡಿಯುತ್ತಿದ್ದ ರಿಕ್ಷಾ ಚಾಲಕರು, ಇದೀಗ ಕೇವಲ ೬೦ ರೂ.ಗಳಿಗೇ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಹಲವಾರು ಜನ ಚಾಲಕರು ರಿಕ್ಷಾಗಳ ಸಹವಾಸವೇ ಬೇಡವೆಂದು ಕೂಲಿ ಕೆಲಸಗಳಿಗೆ, ಹಮಾಲಿ ಕೆಲಸಗಳಿಗೆ ಹೋಗುತ್ತಿದ್ದಾರೆಂದು ರಿಕ್ಷಾ ಚಾಲಕ ಹನುಮಂತಪ್ಪ ಹೇಳುತ್ತಾರೆ. ರಿಕ್ಷಾ ತುಳಿಯುತ್ತಿದ್ದ ಹಳಬರು ಮಂಡಿನೋವಿನಿಂದ ಮನೆಸೇರಿ, ತಮ್ಮ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳಿಸುವ ದುಸ್ಥಿತಿಯೊದಗಿದೆ. ಹೀಗಾಗಿ ಸದ್ಯ ಪಟ್ಟಣದಲ್ಲಿರುವ ೩೦ ಜನ ರಿಕ್ಷಾ ಚಾಲಕರ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಪಡೆಯದೇ ಪರ್ಯಾಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಲ್ಲಿ ಎಸ್ಸೆಸ್ಸೆಲ್ಸಿಯೇ ಹೆಚ್ಚಿನ ಶಿಕ್ಷಣವಾಗಿದೆ. ಹೆಚ್ಚಿನ ಓದಿಗೆ ಇವರಲ್ಲಿ ಆರ್ಥಿಕ ಬಲವಿಲ್ಲ. ಬ್ಯಾಂಕ್‌ಗಳು ಸಾಲ ನೀಡುವುದೂ ಇಲ್ಲ.


ಇವರಿಗೀಗ ಸಾಮಾನುಗಳನ್ನು ಹೇರಿಕೊಂಡು ಹೋಗುವ ಲಗೇಜ್ ಆಟೊಗಳು ಸ್ಪರ್ಧಿಗಳಾಗಿವೆ. ಹೀಗಾಗಿ ಇವರಿಗೆ ಎತ್ತನ್ನು ಹೂಡುವ ಟೈರ್ ಬಂಡಿಯಾದರೆ ಹೇಗೋ ಜೀವನ ಸಾಗಿಸಬಹುದು ಎಂಬುದು ಇವರ ಬಯಕೆ. ರಿಕ್ಷಾ ಚಾಲಕರ ಸಂಘವೂ ರಚಿತವಾಗಿದೆ. ಈಗ ಜನರನ್ನು ಕೂಡಿಸಿಕೊಂಡು ಹೋಗುವ ರಿಕ್ಷಾಗಳಿಲ್ಲ. ಅವೆಲ್ಲ ಈಗ ಪಳೆಯುಳಿಕೆ ಅಥವಾ ನೆನಪುಗಳು ಮಾತ್ರ. ಅವುಗಳನ್ನು ನೋಡಬೇಕೆಂದರೆ ಹಳೆಯ ಫೋಟೊಗಳಲ್ಲಿ ಮಾತ್ರನೋಡಬಹುದಾಗಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಿಲ್ಪವನದಲ್ಲಿ ಕ್ಲಿಕ್ಕಿಸಿದ ಚಿತ್ರಗಳು















Saturday, May 5, 2012

ಗಜಲ್




ಮೈತುಂಬ ಹೂ ಹೊತ್ತ ಮರ ಕಣ್ತುಂಬ ಕನವರಿಕೆ ನೀನೆಂದು ಬರುವಿ
ಮಧು ಬಟ್ಟಲಲಿ ತುಂಬಿದೆ ಕಂಬನಿ ತುಳುಕೀತು ಎದೆತುಂಬಿ ನೀನೆಂದು ಬರುವಿ

ದೂರದಲೆಲ್ಲೋ ಕೋಗಿಲೆಯ ಕೂಜನ ಮನದಲೇನೋ ತನನ
ವಿರಹದುರಿಯ ನವಿಲಿನ ನರ್ತನ ಎದೆತುಂಬ ಸಾವಿರ ಕಣ್ಣು ನೀನೆಂದು ಬರುವಿ

ರೆಪ್ಪೆಗಳಡಿಯಲಿ ಅಡಗಿದೆ ಸಾವು ಕಣ್ಗೊಂಯಲಿ ನೀನೇ
ಕಾಲ ಜಾರಿಹೋಗುವ ಮುನ್ನ ಕಣ್ಮಿಟುಕಿಸದೆ ಕಾದಿರುವೆ ನೀನೆಂದು ಬರುವಿ

ತೆರೆಗಳಾಗಿ ಅಪ್ಪಳಿಸಿವೆ ನೆನಪುಗಳು ಗಾಯಗಳನುಳಿಸಿ
ಜಗವೆಲ್ಲ ನಗುತಿದೆ ಇವನಿಗೇನೋ ಮರುಳೆಂದು ನೀನೆಂದು ಬರುವಿ

ಸವಿನೆನಪುಗಳೂ ಕೊರೆಯುವವೆಂದು ತಿಳಿದಿರಲಿಲ್ಲ ನನಗೆ
ಕೈಜಾರಿದ ಮುತ್ತಿನ ಬೆಲೆಯ ನೀ ಹೋದ ಮೇಲರಿತೆ ನೀನೆಂದು ಬರುವಿ

ಕಾಲನ ಕಾಲ್ತುಳಿತಕ್ಕೆ ನಲುಗಿದೆ ಈ ದೇಹ ಬೆಳಕಿನ ಬಾಗಿಲನರಸಿ
ಕೈಚಾಚಿ ಕರೆದಿಹನು ಅವನು ಹೇಗೆ ತಾನೇ ಹೋಗಲಿ ನೀನೆಂದು ಬರುವಿ

Thursday, April 26, 2012

ಬತ್ತಿದ ಕೂಡ್ಲಿಗಿ ಕೆರೆ : ಹೊರಬಂದ ಈಶ್ವರ ದೇವಾಲಯ






ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪ್ರಮುಖ ಕೆರೆಗಳಲ್ಲಿ ಪಟ್ಟಣದ ಹೊರವಲಯದಲ್ಲಿರುವ ದೊಡ್ಡಕೆರೆಯೂ ಒಂದು. ೯೨.೫೬ ಹೆಕ್ಟೇರ್‌ನಷ್ಟು ನೀರಿನ ಹರವಿನ ಕ್ಷೇತ್ರವಿರುವ ದೊಡ್ಡಕೆರೆ ಮಳೆಗಾಲದಲ್ಲಿ ತುಂಬಿ ಭೋರ್ಗರೆದಾಗ ಪಟ್ಟಣದ ಜನತೆಯೆಲ್ಲ ಸಂತಸಪಡುತ್ತಾರೆ.
ಈ ಕೆರೆಯ ವೈಶಿಷ್ಟ್ಯವೆಂದರೆ ಈ ಕೆರೆಯ್ಲಲಿ ಕಾವಲು ಕಾಯಲೆಂದೇ ಹಿಂದಿನ ಪಾಳೆಗಾರರು ಕಾವಲಿನ ಜನರನ್ನಿಟ್ಟಿದ್ದರು. ಹೀಗಾಗಿ ಕೆರೆ ಕಾವಲು ಕಾಯುವವರು ಕೆರೆಯ ಪಕ್ಕದಲ್ಲಿ ವಾಸ್ತವ್ಯ ಹೂಡಿ, ಅದೇ ಒಂದು ಗ್ರಾಮವಾಗಿ, ಪ್ರಸ್ತುತ ಅದನ್ನು ‘ಕೆರೆ ಕಾವಲರ ಹಟ್ಟಿ’ ಎಂದು ಹೆಸರು ಬಂದಿದೆ. ಕೆರೆಯನ್ನು ಕಾವಲು ಕಾಯುವವರ ಹಟ್ಟಿಯೇ ಮುಂದೆ ಕೆರೆ ಕಾವಲರ ಹಟ್ಟಿಯೆಂಬ ಆಡು ಭಾಷೆಗೆ ರೂಪಾಂತರಗೊಂಡಿದೆ. ಇಂತಹ ಐತಿಹಾಸಿಕ ಹಿನ್ನೆಲೆಯಿರುವ ಕೆರೆಯ ಮಧ್ಯೆ ಈಶ್ವರನ ದೇವಸ್ಥಾನವಿದೆ. ಕೆರೆ ತುಂಬಿದಾಗ ಕೇವಲ ದೇವಸ್ಥಾನದ ಗೋಪುರದ ಭಾಗ ಮಾತ್ರ ಕಂಡು ಉಳಿದೆಲ್ಲವೂ ನೀರಿನಲ್ಲಿ ಮುಳುಗಿರುತ್ತದೆ. ಕೆರೆ ಬತ್ತಿದಾಗ ಮಾತ್ರ ಹೊರಕಾಣುವ ಈಶ್ವರ ದೇವಸ್ಥಾನ ಈಗಾಗಲೇ ಶಿಥಿಲಗೊಂಡಿದೆ. ಕುತೂಹಲದಿಂದ ದೇವಸ್ಥಾನವನ್ನು  ಕಾಣಲು ಹೋದರೆ, ದೇವಸ್ಥಾನದ ಸುತ್ತಲೂ ಪೌಳಿ ಇದ್ದುದು ಕಂಡುಬರುತ್ತದೆ. ನೆಲಮಟ್ಟದಿಂದ ೬ ಅಡಿ ಎತ್ತರವಿರುವ ದೇವಸ್ಥಾನದ ಒಳಗೆ ಕುಳಿತೇ ಒಳಹೋಗಬೇಕು. ದೇವಸ್ಥಾನವನ್ನು ಪೂರ್ವಾಭಿಮುಖವಾಗಿ ನಿರ್ಮಿಸಲಾಗಿದೆ. ಮುಂಭಾಗದ್ಲಲಿ ಮೇಲ್ಗಡೆ ಚಕ್ರಾಕಾರದ ಕೆತ್ತನೆಯಿದೆ. ಗರ್ಭಗುಡಿಯ ಮುಂಭಾಗದ ಪ್ರಮುಖ ದ್ವಾರದ ಮೇಲೆ ಗಜಲಕ್ಷ್ಮಿಯ ಕೆತ್ತನೆಯಿದೆ. ದ್ವಾರದ ಕಂಬಗಳೂ ಕೆತ್ತನೆಯಿಂದ ಕೂಡಿವೆ. ದೇವಸ್ಥಾನ ಶಿಥಿಲಗೊಂಡಿರುವುದರಿಂದ, ನೀರಿನಲ್ಲಿ ಹಾಳಾಗಿರುವುದರಿಂದ ಕೆತ್ತನೆಗಳೆಲ್ಲ ಅಸ್ಪಷ್ಟವಾಗಿವೆ. ಗರ್ಭಗುಡಿಯ ಒಳಭಾಗ ಲಿಂಗುವನ್ನು ಕಾಣಬಹುದಾಗಿದೆ. ದೇವಸ್ಥಾನದ ಮುಂಭಾಗದಲ್ಲಿ ಶಿಥಿಲಗೊಂಡ ನಂದಿಯ ಮೂರ್ತಿಯಿದೆ. ಕೆರೆಯ ಮಣ್ಣೆಲ್ಲ ದೇವಸ್ಥಾನದ ಹೊರಗೆ, ಒಳಗೆ ನುಗ್ಗಿರುವುದಕ್ಕೇನೋ ದೇವಸ್ಥಾನ ಹೂತುಹೋದಂತಾಗಿದೆ. ದೇವಸ್ಥಾನವು ದೊಡ್ಡ ಬಂಡೆಗಳಿಂದ ಪಟ್ಟಿಕೆಯಾಕಾರದಲ್ಲಿ ನಿರ್ಮಾಣಗೊಂಡಿದೆ. ಶಿಥಿಲಗೊಂಡಿರುವುದರಿಂದಾಗಿ ಗೋಪುರದ ಕಲ್ಲುಗಳ ಜೋಡಣೆ ತಪ್ಪಿದಂತಾಗಿದೆ.
ಏನೇ ಇರಲಿ ಕೆರೆ ಕಾವಲು ಕಾಯುವವರನ್ನು ನೇಮಕ ಮಾಡಿದ್ದ ಪಾಳೆಗಾರರು ಕೆರೆಯನ್ನು ಪವಿತ್ರ ಸ್ಥಳವೆಂದು ಪೂಜಿಸಲು ಬಹುಶ: ಈಶ್ವರನ ದೇವಸ್ಥಾನವನ್ನು ನಿರ್ಮಿಸಿರಬಹುದೆಂದು ಪಟ್ಟಣದ ಹಿರಿಯರು ಹೇಳುತ್ತಾರೆ. ಐತಿಹಾಸಿಕ ಗುರುತಾಗಿ ಉಳಿದಿರುವ, ಶಿಥಿಲಗೊಂಡಿರುವ ದೊಡ್ಡಕೆರೆಯ ಈಶ್ವರನ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದಲ್ಲಿ ಕೆರೆಗೆ ಮತ್ತಷ್ಟು ಪ್ರಾಮುಖ್ಯತೆ ಬರಬಹುದೆಂಬುದು ಜನರ ಆಶಯ. ಕೆರೆ ಸಂಪೂರ್ಣ ಬತ್ತಿದೆ. ಆಸಕ್ತರು ದೇವಸ್ಥಾನವನ್ನು ನೋಡಬಹುದಾಗಿದೆ.



Sunday, April 15, 2012

ನೀಲಾಗಸದಲ್ಲಿ ಮೇಘಗಳ ವೈಭವ

         ಆಗಸದ ನೀಲವರ್ಣದಲ್ಲಿ ಬೆಳ್ಳನೆಯ, ಕಪ್ಪನೆಯ, ವರ್ಣಮಯ ಮೇಘಗಳ ವೈಭವ ಕಂಡು ಏನೋ ಮಹಾಕವಿ ಕಾಳಿದಾಸ ಮೇಘ ಸಂದೇಶ ಕಾವ್ಯ ಬರೆದಿರಬಹುದು. ಹಿಂಜಿದ ಅರಳೆಯು ಗಾಳಿಗೆ ತೂರಿ ಮೋಡಗಳಾಗಿಹವೆ? ಎಂದು ಕವಿಯೊಬ್ಬರು ಮಗುವಿನ ತೊದಲ್ನುಡಿಯಲ್ಲಿ ಪ್ರಶ್ನಿಸಿದ್ದಾರೆ.
           ಬರಿದಾದ ನೀಲ ಆಗಸಕ್ಕಿಂತ ಮೋಡಗಳಿರುವ ಬಾನೇ ಸುಂದರ ಎಂದು ಯಾರಿಗಾದರೂ ಅನಿಸದೇ ಇರದು. ಖಾಲಿ ಆಗಸ ಖಾಲಿ ಮನಸಿನ ಸಂಕೇತವೆಂದೇನೋ ಮೋಡಗಳಿಂದೊಡಗೂಡಿದ ಆಗಸವನ್ನು ಎಲ್ಲರೂ ಬಯಸುತ್ತಾರೆ. ಕವಿಗಳಿಗೆ ಅದು ಪ್ರಿಯತಮೆಗೆ ಕರೆದೊಯ್ಯುವ ಮೇಘ ಸಂದೇಶವಾದರೆ, ರೈತರಿಗೆ ಜೀವದಾಯಿನಿಯಾಗಿದೆ. ಬಿಳಿಯ ಮೋಡಗಳು ಸುಂದರವಾದರೂ ಅದರಿಂದ ಮಳೆ ಬರುವುದಿಲ್ಲವಾದ್ದರಿಂದ ರೈತರು ಬಿಳಿ ಮೋಡಗಳನ್ನು ಇಷ್ಟಪಡುವುದಿಲ್ಲ. ಕಪ್ಪನೆಯ ಮೋಡಗಳು ಆಗಸವನ್ನೆಲ್ಲ ಆವರಿಸಿದೊಡನೆ ರೈತರಿಗೆ ಮಳೆಯ ಮುನ್ಸೂಚನೆಯ ಸಂತಸ. ಮಕ್ಕಳಿಗೆ ಕುಣಿದು ಕುಪ್ಪಳಿಸುವ ಸಂದರ್ಭದ ಅವಕಾಶ. ಚಿತ್ರ ನಿರ್ದೇಶಕನಿಗೆ ಸುಂದರ ಭಾವನೆಗಳ ಕಥಾಹಂದರ. ಒಟ್ಟಿನಲ್ಲಿ ಅವರವರ ಭಾವಕ್ಕೆ ತಕ್ಕಂತೆ ಆಗಸದ ಮೋಡಗಳು ರೂಪುಗೊಂಡಿರುತ್ತವೆ.
           ಕ್ಷಣ ಕಾಲ ಎಲ್ಲವನ್ನೂ ಮರೆತು ಆಗಸದತ್ತಲೇ ದಿಟ್ಟಿ ನೆಟ್ಟು ಕೇವಲ ಮೋಡಗಳನ್ನೇ ನೋಡುತ್ತಿದ್ದರೆ ಮೂರ್ತತೆಯಿಂದ ಅಮೂರ್ತತೆಯೆಡೆ ಒಯ್ಯುವ ಭಾವ ಬಾರದೇ ಇರದು.
ಮೋಡಗಳಲ್ಲೂ ಎಷ್ಟೊಂದು ವಿಧ? ಕ್ಯಾಮೆರಾದ ಕಣ್ಣಿಗೆ ಕಂಡದ್ದು, ಹೊಳೆದದ್ದು, ಮೂಡಿದ್ದು ಎಲ್ಲವೂ ಕಣ್ಣೆದುರಿಗಿದೆ.

Friday, April 13, 2012

ಕೂಡ್ಲಿಗಿ ಕಾಡಿನಲ್ಲೀಗ ಅರಳಿದೆ : ಕಾಡಿನ ಜ್ವಾಲೆ ಮುತ್ತುಗದ ಹೂ

ಗಿಡಕ್ಕೇ ಬೆಂಕಿ ಹತ್ತಿದೆಯೇನೋ ಎಂಬ ಭ್ರಮೆ ಮೂಡಿಸುವಷ್ಟು ಬೆಂಕಿಯ ಕೆನ್ನಾಲಗೆಯಂತೆ ಹೂಗಳನ್ನರಳಿಸಿಕೊಳ್ಳುವ ಗಿಡ ಮುತ್ತುಗದ ಗಿಡ ಆಂಗ್ಲ ಭಾಷೆಯಲ್ಲಿ ಫ್ಲೇಮ್ ಆಫ್ ದಿ ಫಾರೆಸ್ಟ್. ಕೂಡ್ಲಿಗಿಯ ಕುರುಚಲು ಕಾಡಿನಲೀಗ ಇದರದೇ ದರ್ಬಾರು. ತಾಲೂಕಿನ ಅರಣ್ಯಪ್ರದೇಶದಲ್ಲಿ ಸಂಚರಿಸಿದರೆ ಥಟ್ಟನೆ ತನ್ನ ವರ್ಣಮಯ ಹೂಗಳಿಂದ ಸೆಳೆಯುವುದೇ ಮುತ್ತುಗದ ಗಿಡ. 
ಜನೆವರಿಯಿಂದ ಮಾರ್ಚ್ ತಿಂಗಳವರೆಗೆ ತಾಲೂಕಿನ ಕುರುಚಲು ಕಾಡಿನಲ್ಲಿ ತಿರುಗಾಡಿದರೆ, ತಕ್ಷಣ ತನ್ನ ಬೆಂಕಿಯ ನಾಲಗೆಯಂತಹ ಬಣ್ಣದಿಂದ ಮನಸೆಳೆಯುವ ಈ ಗಿಡ ಪ್ರಾಚೀನ ಕಾಲದಿಂದಲೂ ಭಾರತೀಯರಿಗೆ ಪವಿತ್ರವೆನಿಸಿಕೊಂಡಿದೆ. ಇದನ್ನು ಮುತ್ತುಗದ ಗಿಡ ಎಂದು ಕನ್ನಡದಲ್ಲಿ, ಪಲಾಶ ಎಂದು  ಹಿಂದಿಯಲ್ಲಿ, ಲಾಕ್ಷಾತರು ಎಂದು ಸಂಸ್ಕೃತದಲ್ಲಿ, ಫ್ಲೇಮ್ ಆಫ್ ದಿ ಫಾರೆಸ್ಟ್ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲಾಗುತ್ತದೆ. ‘ಬ್ಯುಟಿಯಾ ಮೊನೆಸ್ಪರ್ಮಾ’ ಎಂಬ ಬೊಟಾನಿಕಲ್ ಹೆಸರು ಇದಕ್ಕಿದೆ. 



ಸುಮಾರು ೨೦-೪೦ ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ಈ ಗಿಡದ ಎಲೆಗಳನ್ನು ಊಟದ ತಟ್ಟೆಯನ್ನು ತಯಾರಿಸಲು ಬಳಸಲಾಗುತ್ತಿತ್ತು. ಪತ್ರೋಳಿ ಎಂದೇ ಕರೆಯಲ್ಪಡುವ ಊಟದ ತಟ್ಟೆಗಳನ್ನು ಇದರ ಎಲೆಗಳನ್ನು ಹರಿದು, ಬಿಸಿಲಿನಲ್ಲಿ ಒಣಗಿಸಿ, ಸಣ್ಣ ಕಡ್ಡಿಗಳಿಂದ ಚುಚ್ಚಿ ಸಿದ್ಧಪಡಿಸಲಾಗುತ್ತಿತ್ತು. ಈಗ ಎಲ್ಲೆಡೆ ಕಾಗದದ, ಪ್ಲಾಸ್ಟಿಕ್‌ನ ತಟ್ಟೆಗಳು ಬಂದಿವೆ. ಡಿಸೆಂಬರ್‌ನಲ್ಲಿ ತನ್ನ ಎಲ್ಲ ಎಲೆಗಳನ್ನು ಉದುರಿಸಿಕೊಂಡು ನಗ್ನವಾಗಿ ನಿಲ್ಲುವ ಮುತ್ತುಗದ ಗಿಡ ಜನೆವರಿಯಿಂದ ಮೈತುಂಬ ಹೂಗಳನ್ನರಳಿಸಿಕೊಂಡಾಗ ನೋಡಲು ಕಣ್ಣುಗಳೇ ಸಾಲವು ಎನಿಸುತ್ತದೆ. ಹೂವಿಗೆ ವಾಸನೆ ಇಲ್ಲದಿದ್ದರೂ ತಕ್ಷಣ ಕಣ್ಮನ ಸೆಳೆಯುವ ಆಕರ್ಷಣ ಶಕ್ತಿ ಇದಕ್ಕಿದೆ. ಗಾಢ ಕೆಂಪು, ಹಳದಿ ಬಣ್ಣದ ಮಿಶ್ರಣದಂತಿರುವ ಈ ಹೂವುಗಳು ಗಿಳಿಯ ಕೊಕ್ಕಿನಂತಿವೆ. ಅದಕ್ಕಾಗಿಯೇ ಇದನ್ನು ಪ್ಯಾರೆಟ್ ಟ್ರೀ ಎಂದೂ ಕರೆಯಲಾಗುತ್ತದೆ. ರೈತರು ಮುತ್ತುಗದ ಗಿಡವನ್ನು ಪೂಜ್ಯ ಭಾವನೆಯಿಂದ ನೋಡುತ್ತಾರೆ. ಸುಗ್ಗಿಯಾಗಿ ರಾಶಿಯಾದಾಗ ಪೂಜೆಗಾಗಿ ಇದರ ಹೂವುಗಳನ್ನೇ ಬಳಸಲಾಗುತ್ತದೆ. ಜಗತ್ತಿನ ಎಲ್ಲ ಗಿಡಗಳಿಗೂ ಪುರಾತನವಾದುದು ಎಂಬ ನಂಬಿಕೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಇದನ್ನು ಮುದುಕನ ಮರ ಮತ್ತು ಮುದುಕನ ಹೂ ಎಂದು ಗುರುತಿಸಲಾಗುತ್ತದೆ. ಇದರ ಹೂಗಳನ್ನು ಮೊದಲೆಲ್ಲ ಹೋಳಿ ಹುಣ್ಣಿಮೆಯ ಬಣ್ಣಕ್ಕಾಗಿ ಬಳಸಲಾಗುತ್ತಿತ್ತು. ಇದು ಪರಿಸರ ಸ್ನೇಹಿ ಬಣ್ಣವಾಗಿದ್ದುದರಿಂದ ಚರ್ಮಕ್ಕೂ ಯಾವುದೇ ಹಾನಿಯನ್ನುಂಟುಮಾಡುತ್ತಿದ್ದಿಲ್ಲ. ಈಗ ರಾಸಾಯನಿಕ ಮಿಶ್ರಣದ ಬಣ್ಣವನ್ನು ಬಳಸುವುದರಿಂದಾಗಿ ಚರ್ಮಕ್ಕೆ ಹಾನಿ. ಆದರೆ ಅದರೆಡೆ ಚಿಂತಿಸುವವರಾರು? 
ಇಷ್ಟೆಲ್ಲ ವೈಶಿಷ್ಟ್ಯಗಳಿರುವ ಮುತ್ತುಗದ ಗಿಡ ಹಾಗೂ ಅದರ ಹೂವುಗಳ ಸೌಂದರ್ಯದತ್ತ ಯಾರ ಗಮನವೂ ಇದ್ದಂತಿಲ್ಲ. ಈ ಗಿಡಗಳ ಸಂತತಿ ಕಡಿಮೆಯಾಗುತ್ತಿರುವುದೂ ಇದೇ ಕಾರಣಕ್ಕೇನೋ. ಮನೆಯಲ್ಲಿ ಕುಂಡಗಳಲ್ಲಿ ಬಗೆ ಬಗೆಯ ಗಿಡಗಳನ್ನು ಹಣ ಕೊಟ್ಟು ಕೊಂಡು ತಂದು ಕಾಳಜಿ ಮಾಡಿ ನೋಡುವ ನಮಗೆ ನೈಸರ್ಗಿಕವಾಗಿ ಕಾಣಸಿಗುವ ಸುಂದರ ಗಿಡ, ಹೂಗಳ ಬಗ್ಗೆ ಆಸಕ್ತಿ ಮೂಡದಿರುವುದು ವಿಪರ್ಯಾಸ. ಈ ಗಿಡವನ್ನು ನೋಡಬೇಕೆಂಬ ಆಸಕ್ತಿಯಿರುವವರು ಗುಡೇಕೋಟೆ ಮಾರ್ಗದಲ್ಲಿ ಕುರುಚಲು ಕಾಡಿನಲ್ಲಿ ಸ್ವಲ್ಪ ಅಲೆದರೂ ಸಾಕು, ಬೆಂಕಿಯ ಕೆನ್ನಾಲಗೆಯಂತಿರುವ ಹೂಗಳನ್ನರಳಿಸಿಕೊಂಡ ವರ್ಣರಂಜಿತ ಗಿಡಗಳು ನಿಮ್ಮನ್ನು ಸ್ವಾಗತಿಸುತ್ತವೆ. ಹುಡುಕುವ ತಾಳ್ಮೆ, ನೋಡುವ ಆಸಕ್ತಿಯಿದ್ದಲ್ಲಿ ಇವು ನಿಮಗೆ ಕಂಡೇ ಕಾಣುತ್ತವೆ. ಮತ್ತೇಕೆ ತಡ ? ಹೊರಡಿ. ಯಾಕೆಂದರೆ ಗಿಡಗಳನ್ನೆಲ್ಲ ಕಡಿದೊಗೆಯುವ ಈ ದಿನಗಳಲ್ಲಿ ಮುಂದೊಮ್ಮೆ ಈ ಗಿಡಗಳು ನೋಡಲು ಸಿಗುವುದೋ ಇಲ್ಲವೋ ಯಾರಿಗೆ ಗೊತ್ತು?