Sunday, January 11, 2015

ಕನ್ನಡಕ್ಕೊಂದು ಅಪರೂಪದ ಕೃತಿ ದೇವರು ಎಂಬ ಸಂಕೇತನಾಮ

                   ಪುರಾತನ ಕಾಲದಿಂದಲೂ ಇದುವರೆಗೂ ಆಂತಿಕವಾಗಿ ಇದೇ ಸತ್ಯ ಎಂದು ಹೇಳಲಾಗದ ದೊಡ್ದ ಕಗ್ಗಂಟೆಂದರೆ ದೇವರು ಇದ್ದಾನೆಯೇ ? ಎಂಬ ಪ್ರಶ್ನೆ. ದೇವರು ಇದ್ದಾನೆಯೋ ಇಲ್ಲವೋ ಅದನ್ನು ಚರ್ಚಿಸುವುದಕ್ಕಿಂತ ಮುಂಚೆ ಕನ್ನಡಕ್ಕೆ ಹೊಸತನ ತಂದುಕೊಟ್ಟಿರುವ ಮಣಿ ಭೌಮಿಕ್ ಅವರ ಕೋಡ್ ನೇಮ್ ಗಾಡ್  ಕೃತಿಯ ಅನುವಾದ ದೇವರು ಎಂಬ ಸಂಕೇತ ನಾಮ  ಕೃತಿಯನ್ನು ಓದಬೇಕು. ಇದನ್ನು ಕನ್ನಡಕ್ಕೆ ರೂಪಾಂತರಿಸಿದವರು ಕೆ.ಪುಟ್ಟಸ್ವಾಮಿಯವರು.
                    ಮೂಲತ: ಮಣಿ ಭೌಮಿಕ್ ಪಶ್ಚಿಮ ಬಂಗಾಳದವರು. ಅತ್ಯಂತ ಕಡುಬಡತನದಲ್ಲಿ ಜನಿಸಿ, ದೇಶದ ಕಟ್ಟಕಡೆಯ ಕಷ್ಟಕರ ಬದುಕಿನ ಸ್ಥಿತಿಯನ್ನು ಬಾಲ್ಯದಲ್ಲಿ ಅನುಭವಿಸಿದವರು. ಆದರೆ ಮುಂದೆ ಪವಾಡವೋ ಎಂಬಂತೆ ದೇಶದ ಪ್ರತಿಷ್ಠಿತ ಐಐಟಿಯಲ್ಲಿ ಶಿಕ್ಷಣ ಪಡೆದು ಭೌತವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದರು. ಲೇಸರ್ ಮೂಲದ ಲಸಿಕ್  ಎಂಬ ಕಣ್ಣಿನ ಶಸ್ತ್ರಚಿಕಿತ್ಸಾ ವಿಧಾನವನ್ನು ಸಾಧ್ಯಗೊಳಿಸಿ ಅಂತರ್‌ರಾಷ್ಟ್ರೀಯ ಮನ್ನಣೆ ಪಡೆದರು. ಲೇಸರ್ ತಂತ್ರಜ್ಞಾನದ ಸಹ ಸಂಶೋಧಕರಾಗಿ ಕಾರ್ಯನಿರ್ವಹಿಸಿದರು. ಭೌಮಿಕ್ ಅವರು ಅಧ್ಯಯನ ಮಾಡಿದ ಐಐಟಿ ಸಂಸ್ಥೆಯು ಅವರ ಸಾಧನೆಗೆ ಡಿಎಸ್‌ಸಿ ಗೌರವ ಪದವಿ ನೀಡಿ ಸತ್ಕರಿಸಿದೆ. ಪ್ರಸ್ತುತ ಮಣಿ ಭೌಮಿಕ್ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದಾರೆ. ಇದೆಲ್ಲ ಹಿನ್ನೆಲೆ ಹೇಳಲು ಮೂಲ ಕಾರಣ ಮಣಿ ಭೌಮಿಕ್ ಒಬ್ಬ ವಿಜ್ಞಾನಿ ಎಂಬುದಕ್ಕೆ. ವಿಜ್ಞಾನಕ್ಕೂ ಆಧ್ಯಾತ್ಮಕ್ಕೂ ಜೋಡಣೆ ಮಾಡುವ ಅವರ ವಾದವನ್ನು ಒಪ್ಪದೇ ಇರಲು ಸಾಧ್ಯವಿಲ್ಲ. ಅದು ಹೇಗೆ ಎಂದು ತಿಳಿಯಬೇಕಾದಲ್ಲಿ ಈ ಕೃತಿಯನ್ನು ಕನ್ನಡಿಗರು ಓದಬೇಕು.
         ಪಶ್ಚಿಮ ಬಂಗಾಳದಲ್ಲಿ ಮುರುಕು ಜೋಪಡಿಯೊಂದರಲ್ಲಿ ಕಾಲಲ್ಲಿ ಚಪ್ಪಲಿಯೂ ಇಲ್ಲದ ಸ್ಥಿತಿಯಲ್ಲಿ ಕಡುಬಡತನದ ದಾರುಣತೆಯಲ್ಲಿ ಮಣಿಭೌಮಿಕ್ ಬೆಳೆದರು. ಬರಗಾಲದ ಬವಣೆಯನ್ನು ಕಣ್ಣಾರೆ ಕಂಡವರು. ಮನುಷ್ಯನ ಶವವನ್ನು ನಾಯಿಗಳು ಕಚ್ಚಾಡಿ ತಿನ್ನುವುದನ್ನು ನೋಡಿ ನೊಂದವರು. ತನ್ನ ಮೊಮ್ಮಗ ಬದುಕಬೇಕೆಂದೇ ಮಣಿಯವರ ಅಜ್ಜಿ ತನ್ನ ಪಾಲಿನ ತುಣುಕು ರೊಟ್ಟಿಗಳನ್ನೂ ಮಣಿಯವರಿಗೆ ಕೊಟ್ಟು ತಾನು ಇಹಲೋಕ ತ್ಯಜಿಸಿದಳು. ಇದನ್ನು ಮಣಿ ತುಂಬ ಭಾವುಕರಾಗಿ ಬರೆಯುತ್ತಾರೆ. ಒಬ್ಬ ವಿಜ್ಞಾನಿಯ ಆಧ್ಯಾತ್ಮಿಕ ಯಾತ್ರೆ ಇಲ್ಲಿಂದಲೇ ಆರಂಭಗೊಳ್ಳುತ್ತದೆ. ಮುಂದೆ ಅವರು ಶ್ರೀಮಂತಿಕೆಯ ತುತ್ತತುದಿಯನ್ನು ತಲುಪಿದಾಗಲೂ ಈ ಪ್ರಸಂಗಗಳನ್ನು ನೆನೆಸಿಕೊಳ್ಳುತ್ತಾರೆ. ಆಧ್ಯಾತ್ಮ ಚಿಂತನೆಯೊಂದೇ ಆಂತಿಕ ಸತ್ಯ ಎಂದು ಗೋಚರವಾಗುತ್ತದೆ. ಈ ದಿಸೆಯಲ್ಲಿ ಸಂಶೋಧನೆಯನ್ನು ಮುಂದುವರೆಸುತ್ತಾರೆ. ಕ್ವಾಂಟಂ ಸಿದ್ಧಾಂತಗಳನ್ನು ಆಳವಾಗಿ ಅಧ್ಯಯನ ಮಾಡುತ್ತಾರೆ. ಹೊಸಲೋಕವನ್ನುಕಾಣುತ್ತಾರೆ. 
                ವಿಶ್ವದ ಉಗಮದ ಸಿದ್ಧಾಂತ ಬಿಗ್‌ಬ್ಯಾಂಗ್ ಬಗ್ಗೆ ಹೇಳುವ ಮಣಿಯವರು ಅದಕ್ಕಿಂತ ಮುಂಚೆ ಏನಿತ್ತು? ಎಂಬ ಯೋಚನೆಗೆ ತಮ್ಮನ್ನು ತೊಡಗಿಸಿಕೊಳ್ಳುವುದೇ ಅಲ್ಲದೇ ಓದುಗರನ್ನೂ ಚಿಂತನೆಗೆ ಹಚ್ಚುತ್ತಾರೆ. ಬ್ರಹ್ಮಾಂಡ ಅಥವಾ ವಿಶ್ವ ಎನ್ನುವುದು ಉಗಮವಾಗಿದ್ದೇ ಮಹಾಸ್ಫೋಟದ ನಂತರ ಎಂಬುದನ್ನು ಎಲ್ಲ ವಿಜ್ಞಾನಿಗಳೂ ಒಪ್ಪುತ್ತಾರೆ. ಹಾಗಾದರೆ ಅದಕ್ಕಿಂತ ಮುಂಚೆ ಏನಿತ್ತು ? ಅದು ಸ್ಫೋಟಗೊಳ್ಳಲು ಕಾರಣವೇನು ? ಅದಕ್ಕೆ ಪ್ರೇರಣೆ ಯಾವುದು ? ಕುರಿತು ಚರ್ಚಿಸಿದ್ದಾರೆ. ನಾವು ನೋಡುವ ಅನೇಕ ನೀಹಾರಿಕೆಗಳು, ನಕ್ಷತ್ರಗಳು ಎಷ್ಟೋ ಸಹಸ್ರ ವರ್ಷಗಳ ಹಿಂದಿನ ಚಿತ್ರಣವನ್ನು ಅಂದಾಗ ನಾವು ವರ್ತಮಾನದಲ್ಲಿದ್ದು ನೋಡುತ್ತಿರುವೆವೋ, ಭೂತಕಾಲವನ್ನು ನೋಡುತ್ತಿರುವೆವೋ ಎಂದು ಯೋಚನೆಗೆ ತೊಡಗಿಸುತ್ತಾರೆ. ಬಲೂನಿನ ರೀತಿಯಲ್ಲಿ ಉಬ್ಬುತಿರುವ ವಿಶ್ವಕ್ಕೆ ಅಂತ್ಯ ಇದೆಯೇ ? ಇದ್ದರೆ ಹೇಗಿರಬಹುದು ? ಇದು ವಿಶ್ವವನ್ನು ಕುರಿತಾದ ಚಿಂತನೆಯಾದರೆ, ನಮ್ಮೊಳಗಿನ, ಇಡೀ ಬ್ರಹ್ಮಾಂಡದೊಳಗಿನ ಬ್ರಹ್ಮಾಂಡವನ್ನು ತೆರೆದು ತೋರುತ್ತಾರೆ ಮಣಿ. 
                    ಪ್ರತಿಯೊಂದು ವಸ್ತುವೂ ಪರಮಾಣುವಿನಿಂದ ರಚಿತವಾಗಿದೆ. ಪರಮಾಣುವಿನಲ್ಲಿನ ಫೋಟಾನ್ ಹಾಗೂ ಅದರ ಸುತ್ತ ಸುತ್ತುವ ಎಲೆಕ್ಟ್ರಾನ್ ಇವುಗಳ ಮಧ್ಯ ಇರುವ ಕ್ಷೇತ್ರ(ಗ್ಯಾಪ್) ಅದೇ ಒಂದು ಬ್ರಹ್ಮಾಂಡ. ಹೊರಗಿನ ಬ್ರಹ್ಮಾಂಡಕ್ಕೂ ಪ್ರತಿ ವಸ್ತುವಿನೊಳಗಿನ ಬ್ರಹ್ಮಾಂಡಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂಬುದು ಮಣಿ ಭೌಮಿಕ್ ಅವರ ವಿಚಾರ. ಫೋಟಾನ್‌ಗಿಂತಲೂ ಚಿಕ್ಕದಾದ ಮತ್ತೊಂದು ಅಣು ಕ್ವಾಂಟಂ. ಕ್ವಾಂಟಂ ಸಿದ್ಧಾಂತ ಏನು ಹೇಳುತ್ತದೆ ? ಈ ಕಣಗಳು ಎಲ್ಲಿಂದ ಬಂದವು ? ಎಂದು ವಿವರಿಸುತ್ತಲೇ ನಮ್ಮೊಳಗಿನ ಕ್ವಾಂಟಂ ಜಗತ್ತನ್ನು ಪರಿಚಯಿಸುತ್ತಾರೆ. ಅಂದರೆ ವಿಶ್ವ ರಚನೆಗೆ ಮಹಾಸ್ಫೋಟ ನಡೆದ ಸಮಯದಲ್ಲಿಯೇ(ಇದಕ್ಕಿಂತ ಹಿಂದೆ ಅಂದರೆ ಸಮಯ ಎಂಬುದೇ ಇರಲಿಲ್ಲ ಅದಕ್ಕೆ ಅರ್ಥವೇ ಇಲ್ಲ ಎಂಬುದನ್ನು ಗಮನಿಸಬೇಕು) ಈ ಎಲ್ಲ ಪ್ರಕ್ರಿಯೆಗಳು ನಡೆದವು. ಎಲ್ಲವೂ ಒಂದು ನಿರ್ದಿಷ್ಟ ಗೊತ್ತು ಗುರಿಯೊಂದಿಗೆ ವಿಶ್ವ ಸಾಗುತ್ತಿದೆ. ಮನುಷ್ಯನ ಪ್ರಜ್ಞೆ ಉಗಮಗೊಂಡಿದ್ದೇ ಮಹಾ ಸ್ಫೋಟದಲ್ಲಿ. ಪ್ರಜ್ಞೆ ಅಥವಾ ನಾನು ಎಂಬ ಅರಿವು ಮಿದುಳು, ತಲೆಬುರುಡೆಯಲ್ಲಿಲ್ಲ ಅದು ಹೊರಜಗತ್ತಿನಲ್ಲಿದೆ, ವಿಶ್ವದಲ್ಲಿದೆ, ಕ್ವಾಂಟಂ ಕಣದಲ್ಲಿದೆ, ಅದನ್ನು ಹೀಗೇ ಎಂದು ವಿವರಿಸಲಿಕ್ಕಾಗದು ಎಂದು ಮಣಿ ಭೌಮಿಕ್ ಹೇಳುತ್ತಾರೆ. ದೇವರು ಎಂಬುದು ಎಷ್ಟು ನಿಗೂಢವೋ, ಪ್ರಜ್ಞೆ ಎಂಬುದೂ ಅಷ್ಟೇ ನಿಗೂಢ ಎನ್ನುತ್ತಾರೆ. ವಿಶ್ವದಲ್ಲಿ ನಮ್ಮ ಕಣ್ಣಳತೆಗೆ ಸಿಗುವ ನೀಹಾರಿಕೆ, ನಕ್ಷತ್ರ, ಗ್ರಹಗಳೆಲ್ಲದರ ಮಧ್ಯೆ ಗ್ಯಾಪ್ ಇದೆ. ಆದರೆ ಅಲ್ಲಿ ಗ್ಯಾಪ್ ಇಲ್ಲ ಅಲ್ಲಿ ಬಲ ಇದೆ ಎಂದು ಪ್ರತಿಪಾದಿಸಲಾಗುತ್ತದೆ. 
                   ಕೃತಿಯ ಕೆಲವು ಭಾಗಗಳನ್ನು ಇಲ್ಲಿ ಗಮನಿಸಬಹುದಾಗಿದೆ. "ಕ್ವಾಂಟಂ ಭೌತವಿಜ್ಞಾನ ಆಗಮನದವರೆಗೆ ಸುಮಾರು ಮುನ್ನೂರು ವರ್ಷಗಳ ಕಾಲ ಯಾವುದನ್ನು ಅಳೆಯಬಲ್ಲೆವೋ, ನೋಡಬಲ್ಲೆವೋ, ಸ್ಪರ್ಶಿಸಬಲ್ಲೆವೋ ಅದು ಮಾತ್ರ ವಾಸ್ತವ ಎಂಬಂತೆ ಪರಿಗಣಿತವಾಯಿತು. ಇದನ್ನು ಮನಶ್ಶಾಸ್ತ್ರಜ್ಞ ಮ್ಯಾಕ್ಸ್ ವೆಲ್ಮನ್ಸ್ ಮೂರನೆಯ ವ್ಯಕ್ತಿಯ ನೋಟದ ಪ್ರಾಬಲ್ಯ ಎಂದು ಕರೆದ. ಆ ಪ್ರಕಾರ ಯಾವುದು ನಮ್ಮಿಂದ ಹೊರಗೆ ಇರುತ್ತದೋ ಅದು ಸತ್ಯವಾದದ್ದು. ಇದು ಸರಳವಾಗಿ ಹೇಳುವುದಾದರೆ ಜಗತ್ತಿನ ಮತಿಭ್ರಮಣೆಗೆ ಮದ್ದು ನೀಡುವಂತಿತ್ತು. ನಂಬಿದರೆ ನಂಬಿ, ಈ ಡೇಕಾರ್ಟೆಯ ತಾತ್ವಿಕತೆಯೇ ನಮ್ಮ ಬಹುತೇಕ ಅನುಭವೈಕವಾದ ವಿಜ್ಞಾನಕ್ಕೆ ತಳಹದಿಯಾಗಿತ್ತು. ಆದರೆ ಈ ತಳಹದಿ ಎಂದೂ ಭದ್ರವಾಗಿರಲಿಲ್ಲ ಎಂಬುದು ನೆನಪಿರಲಿ".
                     "ವಸ್ತುವಿನಲ್ಲಿ ಮನಸ್ಸಿನಂತಹ ವಸ್ತುವೊಂದು ಕ್ವಾಂಟಂ ಸಾಮರ್ಥ್ಯದಲ್ಲಿ ಅಡವಾಗಿದೆಯೆಂದು ಬಾಮ್ ಹೇಳುತ್ತಾರೆ. ಅದನ್ನು ಸಕ್ರಿಯ ಮಾಹಿತಿ ಎಂದು ಕರೆಯುತ್ತಾರೆ. ಒಂದು ಎಲೆಕ್ಟ್ರಾನ್‌ನಲ್ಲೂ ಮಾನಸಿಕ ಶೇಷಾಂಶವಿದೆಯೆಂದು ಅವರು ವಾದಿಸುತ್ತಾರೆ. ಇದು ನಿಜವಿದ್ದರೆ ನಮ್ಮ ಮಿದುಳು ಸಕ್ರಿಯ ಮಾಹಿತಿಯ ಜೊತೆ ಸಮರಸದಿಂದ ಕಾರ್ಯನಿರ್ವಹಿಸಲು ವಿಕಾಸವಾಗಿರಬಹುದು ಎಂದು ಸಕಾರಣವಾಗಿ ತರ್ಕಿಸಬಹುದು. ಬಾಮ್ ಮತ್ತು ಹೀಲಿ ಅವರು ಹೇಳಿದಂತೆ ಮನುಷ್ಯನ ಮೂಲಕ ತನ್ನನ್ನು ತಾನು ನೋಡಿಕೊಳ್ಳಲು ವಿಶ್ವವು ಕನ್ನಡಿಯೊಂದನ್ನು ರೂಪಿಸಿಕೊಳ್ಳುತ್ತಿದೆ."
                          "ಪ್ರಜ್ಞೆಯು ನೆನಪು, ಗಮನ ಮತ್ತು ಬಹುಶ: ನಿಕಟವಾಗಿ ಭಾಷೆಯ ಜೊತೆ ಸ್ಪಷ್ಟವಾಗಿ ಸಮನ್ವಯಗೊಂಡಿದೆ. ಈ ಸಂಗತಿಗಳೆಲ್ಲವೂ ಮಿದುಳಿನಲ್ಲಿ ತಮ್ಮದೇ ಆದ ಸ್ಥಳದಲ್ಲಿವೆಯೆಂದು ಭಾವಿಸಲಾಗಿದೆ. ಆದರೆ ಪ್ರಜ್ಞೆ ಎಂಬುದು ನಮ್ಮ ತಲೆಯೊಳಗಿಲ್ಲ. ಅದು ನಾವಿರುವೆಲ್ಲೆಡೆಯಲ್ಲಿ ಇದೆ. ನಾವು ಇರದ ಎಡೆಯಲ್ಲಿಯೂ ಇದೆ. ನಾವು ಬಾಹ್ಯಾಕಾಶ ಕಾಲದಲ್ಲಿ ಚಲಿಸಿದಂತೆ ಪ್ರಜ್ಞೆಯ ಸಾಮರ್ಥ್ಯದಲ್ಲಿ ಚಲಿಸುತ್ತೇವೆ."
                      "ನರವಿಜ್ಞಾನಿ ಕಾರ್ಲ್ ಪ್ರಿಬ್ರಮ್ ಅನೇಕ ಪ್ರಯೋಗಗಳನ್ನು ನಡೆಸಿದ್ದಾರೆ. ಅವರು ಪೆನ್‌ರೋಸ್ ಅಭಿಪ್ರಾಯಪಟ್ಟಂತೆ, ಪ್ರಜ್ಞೆ ಎನ್ನುವುದು ಕೇವಲ ರಾಸಾಯನಿಕ ಕ್ರಿಯೆ ಅಥವಾ ಲೆಕ್ಕಾಚಾರಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಅದನ್ನೂ ಮೀರಿದ ಸಂಗತಿಯಾಗಿದ್ದು ನೀವು ಪ್ರಜ್ಞೆಯನ್ನು ಇದೇ ನೋಡಿ ಎಂದು ತೋರಿಸಲಾಗದು ಎನ್ನುತ್ತಾರೆ. ಪ್ರಜ್ಞೆ ಎನ್ನುವುದು ಅವರ ಅಭಿಪ್ರಾಯದ ಪ್ರಕಾರ ಕ್ವಾಂಟಂ ಜಗತ್ತಿನಲ್ಲಿ ನಡೆಯುವ ಘಟನೆಗಳಂತೆ ಸಾಮಾನ್ಯ ಅಳತೆಗಳಿಗೆ ಸಿಗುವಂಥದ್ದಲ್ಲ."
                    ಒಟ್ಟಾರೆ ವಿಶ್ವದ ಉಗಮ, ಅದರ ನಿಗೂಢತೆಗಳು, ಉತ್ತರ ಸಿಗದ ಪ್ರಶ್ನೆಗಳು, ಕ್ವಾಂಟಂ ಎಂದರೇನು, ಪರಮಾಣುವಿನ ರಚನೆ, ಹೀಗೆ ಎಲ್ಲವನ್ನೂ ಒಬ್ಬ ವಿಜ್ಞಾನಿಯಾಗಿ ಹೇಳುತ್ತಲೇ ನಮ್ಮನ್ನು ಉತ್ತರ ಸಿಗಲಾರದ ದೇವರು ಎಂಬ ಪ್ರಶ್ನೆಯತ್ತ ಕೊಂಡೊಯ್ಯುತ್ತಾರೆ. ನೀವು ದೇವರು ಎಂದು ಹೇಳದೇ ಇದ್ದರೂ ಮೂಲಶಕ್ತಿಯೆಂದು ವೈಜ್ಞಾನಿಕವಾಗಿ ಒಪ್ಪುವಂತೆಯೇ ಮಣಿ ಹೇಳುತ್ತಾರೆ. ಹೀಗಾಗಿ ಇದು ಕನ್ನಡಕ್ಕೆ ಬಂದ ವಿಶೇಷವಾದ ಕೃತಿಯೆನ್ನಬಹುದು. 
ವಿಜ್ಞಾನ ಅದರ ಚಿಂತನೆ ಸಾಮಾನ್ಯರಿಗೆ ಕಠಿಣವೆನಿಸಿದರೂ ಅದನ್ನು ಅತ್ಯಂತ ಸರಳವಾಗಿ ಕನ್ನಡಕ್ಕೆ ತಂದವರು ಕೆ.ಪುಟ್ಟಸ್ವಾಮಿಯವರು. ಉತ್ತಮ ಕೃತಿಯೊಂದನ್ನು ಅನುವಾದಿಸಿ ಕನ್ನಡಿಗರಿಗೆ ಒದಗಿಸಿಕೊಟ್ಟ ಅವರಿಗೆ ಕನ್ನಡಿಗರೆಲ್ಲರೂ ಧನ್ಯವಾದಗಳನ್ನು ಹೇಳಲೇಬೇಕು.

ಕೃತಿ : ದೇವರು ಎಂಬ ಸಂಕೇತನಾಮ ವಿಜ್ಞಾನಿಯೊಬ್ಬನ ಆಧ್ಯಾತ್ಮಿಕ ಯಾತ್ರೆ
ಮೂಲ ಲೇಖಕರು : ಮಣಿ ಭೌಮಿಕ್
ಅನುವಾದ : ಕೆ.ಪುಟ್ಟಸ್ವಾಮಿ
ಬೆಲೆ : ರೂ. ೧೫೦
ಪ್ರಕಾಶನ : ಅಭಿನವ ವಿಜಯನಗರ, ಬೆಂಗಳೂರು.