Saturday, May 5, 2012

ಗಜಲ್




ಮೈತುಂಬ ಹೂ ಹೊತ್ತ ಮರ ಕಣ್ತುಂಬ ಕನವರಿಕೆ ನೀನೆಂದು ಬರುವಿ
ಮಧು ಬಟ್ಟಲಲಿ ತುಂಬಿದೆ ಕಂಬನಿ ತುಳುಕೀತು ಎದೆತುಂಬಿ ನೀನೆಂದು ಬರುವಿ

ದೂರದಲೆಲ್ಲೋ ಕೋಗಿಲೆಯ ಕೂಜನ ಮನದಲೇನೋ ತನನ
ವಿರಹದುರಿಯ ನವಿಲಿನ ನರ್ತನ ಎದೆತುಂಬ ಸಾವಿರ ಕಣ್ಣು ನೀನೆಂದು ಬರುವಿ

ರೆಪ್ಪೆಗಳಡಿಯಲಿ ಅಡಗಿದೆ ಸಾವು ಕಣ್ಗೊಂಯಲಿ ನೀನೇ
ಕಾಲ ಜಾರಿಹೋಗುವ ಮುನ್ನ ಕಣ್ಮಿಟುಕಿಸದೆ ಕಾದಿರುವೆ ನೀನೆಂದು ಬರುವಿ

ತೆರೆಗಳಾಗಿ ಅಪ್ಪಳಿಸಿವೆ ನೆನಪುಗಳು ಗಾಯಗಳನುಳಿಸಿ
ಜಗವೆಲ್ಲ ನಗುತಿದೆ ಇವನಿಗೇನೋ ಮರುಳೆಂದು ನೀನೆಂದು ಬರುವಿ

ಸವಿನೆನಪುಗಳೂ ಕೊರೆಯುವವೆಂದು ತಿಳಿದಿರಲಿಲ್ಲ ನನಗೆ
ಕೈಜಾರಿದ ಮುತ್ತಿನ ಬೆಲೆಯ ನೀ ಹೋದ ಮೇಲರಿತೆ ನೀನೆಂದು ಬರುವಿ

ಕಾಲನ ಕಾಲ್ತುಳಿತಕ್ಕೆ ನಲುಗಿದೆ ಈ ದೇಹ ಬೆಳಕಿನ ಬಾಗಿಲನರಸಿ
ಕೈಚಾಚಿ ಕರೆದಿಹನು ಅವನು ಹೇಗೆ ತಾನೇ ಹೋಗಲಿ ನೀನೆಂದು ಬರುವಿ

Thursday, April 26, 2012

ಬತ್ತಿದ ಕೂಡ್ಲಿಗಿ ಕೆರೆ : ಹೊರಬಂದ ಈಶ್ವರ ದೇವಾಲಯ






ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪ್ರಮುಖ ಕೆರೆಗಳಲ್ಲಿ ಪಟ್ಟಣದ ಹೊರವಲಯದಲ್ಲಿರುವ ದೊಡ್ಡಕೆರೆಯೂ ಒಂದು. ೯೨.೫೬ ಹೆಕ್ಟೇರ್‌ನಷ್ಟು ನೀರಿನ ಹರವಿನ ಕ್ಷೇತ್ರವಿರುವ ದೊಡ್ಡಕೆರೆ ಮಳೆಗಾಲದಲ್ಲಿ ತುಂಬಿ ಭೋರ್ಗರೆದಾಗ ಪಟ್ಟಣದ ಜನತೆಯೆಲ್ಲ ಸಂತಸಪಡುತ್ತಾರೆ.
ಈ ಕೆರೆಯ ವೈಶಿಷ್ಟ್ಯವೆಂದರೆ ಈ ಕೆರೆಯ್ಲಲಿ ಕಾವಲು ಕಾಯಲೆಂದೇ ಹಿಂದಿನ ಪಾಳೆಗಾರರು ಕಾವಲಿನ ಜನರನ್ನಿಟ್ಟಿದ್ದರು. ಹೀಗಾಗಿ ಕೆರೆ ಕಾವಲು ಕಾಯುವವರು ಕೆರೆಯ ಪಕ್ಕದಲ್ಲಿ ವಾಸ್ತವ್ಯ ಹೂಡಿ, ಅದೇ ಒಂದು ಗ್ರಾಮವಾಗಿ, ಪ್ರಸ್ತುತ ಅದನ್ನು ‘ಕೆರೆ ಕಾವಲರ ಹಟ್ಟಿ’ ಎಂದು ಹೆಸರು ಬಂದಿದೆ. ಕೆರೆಯನ್ನು ಕಾವಲು ಕಾಯುವವರ ಹಟ್ಟಿಯೇ ಮುಂದೆ ಕೆರೆ ಕಾವಲರ ಹಟ್ಟಿಯೆಂಬ ಆಡು ಭಾಷೆಗೆ ರೂಪಾಂತರಗೊಂಡಿದೆ. ಇಂತಹ ಐತಿಹಾಸಿಕ ಹಿನ್ನೆಲೆಯಿರುವ ಕೆರೆಯ ಮಧ್ಯೆ ಈಶ್ವರನ ದೇವಸ್ಥಾನವಿದೆ. ಕೆರೆ ತುಂಬಿದಾಗ ಕೇವಲ ದೇವಸ್ಥಾನದ ಗೋಪುರದ ಭಾಗ ಮಾತ್ರ ಕಂಡು ಉಳಿದೆಲ್ಲವೂ ನೀರಿನಲ್ಲಿ ಮುಳುಗಿರುತ್ತದೆ. ಕೆರೆ ಬತ್ತಿದಾಗ ಮಾತ್ರ ಹೊರಕಾಣುವ ಈಶ್ವರ ದೇವಸ್ಥಾನ ಈಗಾಗಲೇ ಶಿಥಿಲಗೊಂಡಿದೆ. ಕುತೂಹಲದಿಂದ ದೇವಸ್ಥಾನವನ್ನು  ಕಾಣಲು ಹೋದರೆ, ದೇವಸ್ಥಾನದ ಸುತ್ತಲೂ ಪೌಳಿ ಇದ್ದುದು ಕಂಡುಬರುತ್ತದೆ. ನೆಲಮಟ್ಟದಿಂದ ೬ ಅಡಿ ಎತ್ತರವಿರುವ ದೇವಸ್ಥಾನದ ಒಳಗೆ ಕುಳಿತೇ ಒಳಹೋಗಬೇಕು. ದೇವಸ್ಥಾನವನ್ನು ಪೂರ್ವಾಭಿಮುಖವಾಗಿ ನಿರ್ಮಿಸಲಾಗಿದೆ. ಮುಂಭಾಗದ್ಲಲಿ ಮೇಲ್ಗಡೆ ಚಕ್ರಾಕಾರದ ಕೆತ್ತನೆಯಿದೆ. ಗರ್ಭಗುಡಿಯ ಮುಂಭಾಗದ ಪ್ರಮುಖ ದ್ವಾರದ ಮೇಲೆ ಗಜಲಕ್ಷ್ಮಿಯ ಕೆತ್ತನೆಯಿದೆ. ದ್ವಾರದ ಕಂಬಗಳೂ ಕೆತ್ತನೆಯಿಂದ ಕೂಡಿವೆ. ದೇವಸ್ಥಾನ ಶಿಥಿಲಗೊಂಡಿರುವುದರಿಂದ, ನೀರಿನಲ್ಲಿ ಹಾಳಾಗಿರುವುದರಿಂದ ಕೆತ್ತನೆಗಳೆಲ್ಲ ಅಸ್ಪಷ್ಟವಾಗಿವೆ. ಗರ್ಭಗುಡಿಯ ಒಳಭಾಗ ಲಿಂಗುವನ್ನು ಕಾಣಬಹುದಾಗಿದೆ. ದೇವಸ್ಥಾನದ ಮುಂಭಾಗದಲ್ಲಿ ಶಿಥಿಲಗೊಂಡ ನಂದಿಯ ಮೂರ್ತಿಯಿದೆ. ಕೆರೆಯ ಮಣ್ಣೆಲ್ಲ ದೇವಸ್ಥಾನದ ಹೊರಗೆ, ಒಳಗೆ ನುಗ್ಗಿರುವುದಕ್ಕೇನೋ ದೇವಸ್ಥಾನ ಹೂತುಹೋದಂತಾಗಿದೆ. ದೇವಸ್ಥಾನವು ದೊಡ್ಡ ಬಂಡೆಗಳಿಂದ ಪಟ್ಟಿಕೆಯಾಕಾರದಲ್ಲಿ ನಿರ್ಮಾಣಗೊಂಡಿದೆ. ಶಿಥಿಲಗೊಂಡಿರುವುದರಿಂದಾಗಿ ಗೋಪುರದ ಕಲ್ಲುಗಳ ಜೋಡಣೆ ತಪ್ಪಿದಂತಾಗಿದೆ.
ಏನೇ ಇರಲಿ ಕೆರೆ ಕಾವಲು ಕಾಯುವವರನ್ನು ನೇಮಕ ಮಾಡಿದ್ದ ಪಾಳೆಗಾರರು ಕೆರೆಯನ್ನು ಪವಿತ್ರ ಸ್ಥಳವೆಂದು ಪೂಜಿಸಲು ಬಹುಶ: ಈಶ್ವರನ ದೇವಸ್ಥಾನವನ್ನು ನಿರ್ಮಿಸಿರಬಹುದೆಂದು ಪಟ್ಟಣದ ಹಿರಿಯರು ಹೇಳುತ್ತಾರೆ. ಐತಿಹಾಸಿಕ ಗುರುತಾಗಿ ಉಳಿದಿರುವ, ಶಿಥಿಲಗೊಂಡಿರುವ ದೊಡ್ಡಕೆರೆಯ ಈಶ್ವರನ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದಲ್ಲಿ ಕೆರೆಗೆ ಮತ್ತಷ್ಟು ಪ್ರಾಮುಖ್ಯತೆ ಬರಬಹುದೆಂಬುದು ಜನರ ಆಶಯ. ಕೆರೆ ಸಂಪೂರ್ಣ ಬತ್ತಿದೆ. ಆಸಕ್ತರು ದೇವಸ್ಥಾನವನ್ನು ನೋಡಬಹುದಾಗಿದೆ.



Sunday, April 15, 2012

ನೀಲಾಗಸದಲ್ಲಿ ಮೇಘಗಳ ವೈಭವ

         ಆಗಸದ ನೀಲವರ್ಣದಲ್ಲಿ ಬೆಳ್ಳನೆಯ, ಕಪ್ಪನೆಯ, ವರ್ಣಮಯ ಮೇಘಗಳ ವೈಭವ ಕಂಡು ಏನೋ ಮಹಾಕವಿ ಕಾಳಿದಾಸ ಮೇಘ ಸಂದೇಶ ಕಾವ್ಯ ಬರೆದಿರಬಹುದು. ಹಿಂಜಿದ ಅರಳೆಯು ಗಾಳಿಗೆ ತೂರಿ ಮೋಡಗಳಾಗಿಹವೆ? ಎಂದು ಕವಿಯೊಬ್ಬರು ಮಗುವಿನ ತೊದಲ್ನುಡಿಯಲ್ಲಿ ಪ್ರಶ್ನಿಸಿದ್ದಾರೆ.
           ಬರಿದಾದ ನೀಲ ಆಗಸಕ್ಕಿಂತ ಮೋಡಗಳಿರುವ ಬಾನೇ ಸುಂದರ ಎಂದು ಯಾರಿಗಾದರೂ ಅನಿಸದೇ ಇರದು. ಖಾಲಿ ಆಗಸ ಖಾಲಿ ಮನಸಿನ ಸಂಕೇತವೆಂದೇನೋ ಮೋಡಗಳಿಂದೊಡಗೂಡಿದ ಆಗಸವನ್ನು ಎಲ್ಲರೂ ಬಯಸುತ್ತಾರೆ. ಕವಿಗಳಿಗೆ ಅದು ಪ್ರಿಯತಮೆಗೆ ಕರೆದೊಯ್ಯುವ ಮೇಘ ಸಂದೇಶವಾದರೆ, ರೈತರಿಗೆ ಜೀವದಾಯಿನಿಯಾಗಿದೆ. ಬಿಳಿಯ ಮೋಡಗಳು ಸುಂದರವಾದರೂ ಅದರಿಂದ ಮಳೆ ಬರುವುದಿಲ್ಲವಾದ್ದರಿಂದ ರೈತರು ಬಿಳಿ ಮೋಡಗಳನ್ನು ಇಷ್ಟಪಡುವುದಿಲ್ಲ. ಕಪ್ಪನೆಯ ಮೋಡಗಳು ಆಗಸವನ್ನೆಲ್ಲ ಆವರಿಸಿದೊಡನೆ ರೈತರಿಗೆ ಮಳೆಯ ಮುನ್ಸೂಚನೆಯ ಸಂತಸ. ಮಕ್ಕಳಿಗೆ ಕುಣಿದು ಕುಪ್ಪಳಿಸುವ ಸಂದರ್ಭದ ಅವಕಾಶ. ಚಿತ್ರ ನಿರ್ದೇಶಕನಿಗೆ ಸುಂದರ ಭಾವನೆಗಳ ಕಥಾಹಂದರ. ಒಟ್ಟಿನಲ್ಲಿ ಅವರವರ ಭಾವಕ್ಕೆ ತಕ್ಕಂತೆ ಆಗಸದ ಮೋಡಗಳು ರೂಪುಗೊಂಡಿರುತ್ತವೆ.
           ಕ್ಷಣ ಕಾಲ ಎಲ್ಲವನ್ನೂ ಮರೆತು ಆಗಸದತ್ತಲೇ ದಿಟ್ಟಿ ನೆಟ್ಟು ಕೇವಲ ಮೋಡಗಳನ್ನೇ ನೋಡುತ್ತಿದ್ದರೆ ಮೂರ್ತತೆಯಿಂದ ಅಮೂರ್ತತೆಯೆಡೆ ಒಯ್ಯುವ ಭಾವ ಬಾರದೇ ಇರದು.
ಮೋಡಗಳಲ್ಲೂ ಎಷ್ಟೊಂದು ವಿಧ? ಕ್ಯಾಮೆರಾದ ಕಣ್ಣಿಗೆ ಕಂಡದ್ದು, ಹೊಳೆದದ್ದು, ಮೂಡಿದ್ದು ಎಲ್ಲವೂ ಕಣ್ಣೆದುರಿಗಿದೆ.

Friday, April 13, 2012

ಕೂಡ್ಲಿಗಿ ಕಾಡಿನಲ್ಲೀಗ ಅರಳಿದೆ : ಕಾಡಿನ ಜ್ವಾಲೆ ಮುತ್ತುಗದ ಹೂ

ಗಿಡಕ್ಕೇ ಬೆಂಕಿ ಹತ್ತಿದೆಯೇನೋ ಎಂಬ ಭ್ರಮೆ ಮೂಡಿಸುವಷ್ಟು ಬೆಂಕಿಯ ಕೆನ್ನಾಲಗೆಯಂತೆ ಹೂಗಳನ್ನರಳಿಸಿಕೊಳ್ಳುವ ಗಿಡ ಮುತ್ತುಗದ ಗಿಡ ಆಂಗ್ಲ ಭಾಷೆಯಲ್ಲಿ ಫ್ಲೇಮ್ ಆಫ್ ದಿ ಫಾರೆಸ್ಟ್. ಕೂಡ್ಲಿಗಿಯ ಕುರುಚಲು ಕಾಡಿನಲೀಗ ಇದರದೇ ದರ್ಬಾರು. ತಾಲೂಕಿನ ಅರಣ್ಯಪ್ರದೇಶದಲ್ಲಿ ಸಂಚರಿಸಿದರೆ ಥಟ್ಟನೆ ತನ್ನ ವರ್ಣಮಯ ಹೂಗಳಿಂದ ಸೆಳೆಯುವುದೇ ಮುತ್ತುಗದ ಗಿಡ. 
ಜನೆವರಿಯಿಂದ ಮಾರ್ಚ್ ತಿಂಗಳವರೆಗೆ ತಾಲೂಕಿನ ಕುರುಚಲು ಕಾಡಿನಲ್ಲಿ ತಿರುಗಾಡಿದರೆ, ತಕ್ಷಣ ತನ್ನ ಬೆಂಕಿಯ ನಾಲಗೆಯಂತಹ ಬಣ್ಣದಿಂದ ಮನಸೆಳೆಯುವ ಈ ಗಿಡ ಪ್ರಾಚೀನ ಕಾಲದಿಂದಲೂ ಭಾರತೀಯರಿಗೆ ಪವಿತ್ರವೆನಿಸಿಕೊಂಡಿದೆ. ಇದನ್ನು ಮುತ್ತುಗದ ಗಿಡ ಎಂದು ಕನ್ನಡದಲ್ಲಿ, ಪಲಾಶ ಎಂದು  ಹಿಂದಿಯಲ್ಲಿ, ಲಾಕ್ಷಾತರು ಎಂದು ಸಂಸ್ಕೃತದಲ್ಲಿ, ಫ್ಲೇಮ್ ಆಫ್ ದಿ ಫಾರೆಸ್ಟ್ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲಾಗುತ್ತದೆ. ‘ಬ್ಯುಟಿಯಾ ಮೊನೆಸ್ಪರ್ಮಾ’ ಎಂಬ ಬೊಟಾನಿಕಲ್ ಹೆಸರು ಇದಕ್ಕಿದೆ. 



ಸುಮಾರು ೨೦-೪೦ ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ಈ ಗಿಡದ ಎಲೆಗಳನ್ನು ಊಟದ ತಟ್ಟೆಯನ್ನು ತಯಾರಿಸಲು ಬಳಸಲಾಗುತ್ತಿತ್ತು. ಪತ್ರೋಳಿ ಎಂದೇ ಕರೆಯಲ್ಪಡುವ ಊಟದ ತಟ್ಟೆಗಳನ್ನು ಇದರ ಎಲೆಗಳನ್ನು ಹರಿದು, ಬಿಸಿಲಿನಲ್ಲಿ ಒಣಗಿಸಿ, ಸಣ್ಣ ಕಡ್ಡಿಗಳಿಂದ ಚುಚ್ಚಿ ಸಿದ್ಧಪಡಿಸಲಾಗುತ್ತಿತ್ತು. ಈಗ ಎಲ್ಲೆಡೆ ಕಾಗದದ, ಪ್ಲಾಸ್ಟಿಕ್‌ನ ತಟ್ಟೆಗಳು ಬಂದಿವೆ. ಡಿಸೆಂಬರ್‌ನಲ್ಲಿ ತನ್ನ ಎಲ್ಲ ಎಲೆಗಳನ್ನು ಉದುರಿಸಿಕೊಂಡು ನಗ್ನವಾಗಿ ನಿಲ್ಲುವ ಮುತ್ತುಗದ ಗಿಡ ಜನೆವರಿಯಿಂದ ಮೈತುಂಬ ಹೂಗಳನ್ನರಳಿಸಿಕೊಂಡಾಗ ನೋಡಲು ಕಣ್ಣುಗಳೇ ಸಾಲವು ಎನಿಸುತ್ತದೆ. ಹೂವಿಗೆ ವಾಸನೆ ಇಲ್ಲದಿದ್ದರೂ ತಕ್ಷಣ ಕಣ್ಮನ ಸೆಳೆಯುವ ಆಕರ್ಷಣ ಶಕ್ತಿ ಇದಕ್ಕಿದೆ. ಗಾಢ ಕೆಂಪು, ಹಳದಿ ಬಣ್ಣದ ಮಿಶ್ರಣದಂತಿರುವ ಈ ಹೂವುಗಳು ಗಿಳಿಯ ಕೊಕ್ಕಿನಂತಿವೆ. ಅದಕ್ಕಾಗಿಯೇ ಇದನ್ನು ಪ್ಯಾರೆಟ್ ಟ್ರೀ ಎಂದೂ ಕರೆಯಲಾಗುತ್ತದೆ. ರೈತರು ಮುತ್ತುಗದ ಗಿಡವನ್ನು ಪೂಜ್ಯ ಭಾವನೆಯಿಂದ ನೋಡುತ್ತಾರೆ. ಸುಗ್ಗಿಯಾಗಿ ರಾಶಿಯಾದಾಗ ಪೂಜೆಗಾಗಿ ಇದರ ಹೂವುಗಳನ್ನೇ ಬಳಸಲಾಗುತ್ತದೆ. ಜಗತ್ತಿನ ಎಲ್ಲ ಗಿಡಗಳಿಗೂ ಪುರಾತನವಾದುದು ಎಂಬ ನಂಬಿಕೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಇದನ್ನು ಮುದುಕನ ಮರ ಮತ್ತು ಮುದುಕನ ಹೂ ಎಂದು ಗುರುತಿಸಲಾಗುತ್ತದೆ. ಇದರ ಹೂಗಳನ್ನು ಮೊದಲೆಲ್ಲ ಹೋಳಿ ಹುಣ್ಣಿಮೆಯ ಬಣ್ಣಕ್ಕಾಗಿ ಬಳಸಲಾಗುತ್ತಿತ್ತು. ಇದು ಪರಿಸರ ಸ್ನೇಹಿ ಬಣ್ಣವಾಗಿದ್ದುದರಿಂದ ಚರ್ಮಕ್ಕೂ ಯಾವುದೇ ಹಾನಿಯನ್ನುಂಟುಮಾಡುತ್ತಿದ್ದಿಲ್ಲ. ಈಗ ರಾಸಾಯನಿಕ ಮಿಶ್ರಣದ ಬಣ್ಣವನ್ನು ಬಳಸುವುದರಿಂದಾಗಿ ಚರ್ಮಕ್ಕೆ ಹಾನಿ. ಆದರೆ ಅದರೆಡೆ ಚಿಂತಿಸುವವರಾರು? 
ಇಷ್ಟೆಲ್ಲ ವೈಶಿಷ್ಟ್ಯಗಳಿರುವ ಮುತ್ತುಗದ ಗಿಡ ಹಾಗೂ ಅದರ ಹೂವುಗಳ ಸೌಂದರ್ಯದತ್ತ ಯಾರ ಗಮನವೂ ಇದ್ದಂತಿಲ್ಲ. ಈ ಗಿಡಗಳ ಸಂತತಿ ಕಡಿಮೆಯಾಗುತ್ತಿರುವುದೂ ಇದೇ ಕಾರಣಕ್ಕೇನೋ. ಮನೆಯಲ್ಲಿ ಕುಂಡಗಳಲ್ಲಿ ಬಗೆ ಬಗೆಯ ಗಿಡಗಳನ್ನು ಹಣ ಕೊಟ್ಟು ಕೊಂಡು ತಂದು ಕಾಳಜಿ ಮಾಡಿ ನೋಡುವ ನಮಗೆ ನೈಸರ್ಗಿಕವಾಗಿ ಕಾಣಸಿಗುವ ಸುಂದರ ಗಿಡ, ಹೂಗಳ ಬಗ್ಗೆ ಆಸಕ್ತಿ ಮೂಡದಿರುವುದು ವಿಪರ್ಯಾಸ. ಈ ಗಿಡವನ್ನು ನೋಡಬೇಕೆಂಬ ಆಸಕ್ತಿಯಿರುವವರು ಗುಡೇಕೋಟೆ ಮಾರ್ಗದಲ್ಲಿ ಕುರುಚಲು ಕಾಡಿನಲ್ಲಿ ಸ್ವಲ್ಪ ಅಲೆದರೂ ಸಾಕು, ಬೆಂಕಿಯ ಕೆನ್ನಾಲಗೆಯಂತಿರುವ ಹೂಗಳನ್ನರಳಿಸಿಕೊಂಡ ವರ್ಣರಂಜಿತ ಗಿಡಗಳು ನಿಮ್ಮನ್ನು ಸ್ವಾಗತಿಸುತ್ತವೆ. ಹುಡುಕುವ ತಾಳ್ಮೆ, ನೋಡುವ ಆಸಕ್ತಿಯಿದ್ದಲ್ಲಿ ಇವು ನಿಮಗೆ ಕಂಡೇ ಕಾಣುತ್ತವೆ. ಮತ್ತೇಕೆ ತಡ ? ಹೊರಡಿ. ಯಾಕೆಂದರೆ ಗಿಡಗಳನ್ನೆಲ್ಲ ಕಡಿದೊಗೆಯುವ ಈ ದಿನಗಳಲ್ಲಿ ಮುಂದೊಮ್ಮೆ ಈ ಗಿಡಗಳು ನೋಡಲು ಸಿಗುವುದೋ ಇಲ್ಲವೋ ಯಾರಿಗೆ ಗೊತ್ತು?
 




Saturday, November 26, 2011

ಹೊಸ ಪುಸ್ತಕ : ಗುಡ್ ಅರ್ತ್ ಎಂಬ ಕೃಷಿ ಪ್ರಧಾನವಾದ ನೊಬೆಲ್ ಪುರಸ್ಕೃತ ಕಾದಂಬರಿ


                    ಭಾರತ ಹೇಗೆ ಕೃಷಿ ಪ್ರಧಾನವಾದ ದೇಶವೋ ಚೀನಾ ದೇಶವೂ ಕೃಷಿ ಪ್ರಧಾನವಾದ ದೇಶವೇ. ಇಂದು ಚೀನ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿದ್ದರೂ ಅದರ ಅಂತರಾಳದಲ್ಲಿ ಹರಿಯುತ್ತಿರುವುದು ಕೃಷಿಯ ಬೆವರೇ. ಅಮೆರಿಕನ್ ಲೇಖಕಿ ಪರ್ಲ್.ಎಸ್.ಬಕ್ ಚೀನಾ ದೇಶದಲ್ಲಿ ೫ ವರ್ಷಗಳವರೆಗೆ ಇದ್ದು, ಅಲ್ಲಿನವರಿಗೆ ಕೃಷಿಯ ಬಗೆಗಿರುವ ಒಲವು, ಅಲ್ಲಿನ ಬದುಕಿನ ಬವಣೆಗಳು, ಲಿಂಗ ತಾರತಮ್ಯ, ಮೇಲ್ವರ್ಗದವರ ಶೋಷಣೆ, ಭೂಮಿಯ ಬಗೆಗೆ ಕೃಷಿಕರಿಗಿರುವ ಪ್ರೀತಿ ಎಲ್ಲವನ್ನೂ ತಮ್ಮ ಗುಡ್ ಅರ್ತ್ ಕಾದಂಬರಿಯಲ್ಲಿ ಹಿಡಿದಿಟ್ಟಿದ್ದಾರೆ. ಅದನ್ನು ಇತ್ತೀಚೆಗೆ ಕನ್ನಡಕ್ಕೆ ಅನುವಾದಿಸಿದವರು ಪಾರ್ವತಿ ಜಿ.ಐತಾಳ್.

                   ಒಬ್ಬ ರೈತನಿಗೆ ಮಣ್ಣಿನ ಬಗೆಗಿರುವ ಭಕ್ತಿ, ಪ್ರೀತಿ, ತುಡಿತ ಹೇಗಿರುತ್ತದೆಂಬುದನ್ನು ಗುಡ್ ಅರ್ತ್ ಸಮರ್ಥವಾಗಿ ಹಿಡಿದಿಟ್ಟಿದೆ. ಉತ್ತರ ಚೀನಾದಲ್ಲಿನ ವಾಂಗ್‌ಲುಂಗ್ ಎಂಬ ರೈತನ ಮನೆತನವನ್ನು ಆಧಾರವಾಗಿಸಿಕೊಂಡು ಕಾದಂಬರಿಯನ್ನು ಹೆಣೆಯಲಾಗಿದೆ. ವಾಂಗ್‌ಲುಂಗ್‌ನ ತಂದೆ ಹಾಗೂ ವಾಂಗ್‌ಲುಂಗ್ ಆತನ ಮಕ್ಕಳು, ಮೊಮ್ಮಕ್ಕಳು ಕೂಡಿದಂತೆ ಒಟ್ಟು ೪ ತಲೆಮಾರುಗಳ ಕತೆ ಕಾದಂಬರಿಯಲ್ಲಿ ಹಾದುಹೋಗುತ್ತದೆ. ಪುಟ್ಟ ಭೂಮಿಯ ಒಡೆಯನಾಗಿದ್ದ ವಾಂಗ್‌ಲುಂಗ್‌ನಿಗೆ ಮಣ್ಣಿನಲ್ಲಿ ದುಡಿಯುವುದೆಂದರೆ ಅಪಾರ ಪ್ರೀತಿ. ತನ್ನ ಪ್ರಾಣಕ್ಕಿಂತ ಹೆಚ್ಚಿಗೆ ಮಣ್ಣನ್ನು ಪ್ರೀತಿಸಿತ್ತಿರುತ್ತಾನೆ. ಹೀಗಾಗಿ ಮೈಮುರಿದು ದುಡಿದು ನಿಧಾನವಾಗಿ ಭೂಮಿಯನ್ನು ಕೊಳ್ಳುತ್ತ ಹೋಗುತ್ತಾನೆ. ಯಾವುದು ಕೈಬಿಟ್ಟರೂ ಭೂಮಿ ಎಂದಿಗೂ ತನ್ನನ್ನು ನಂಬಿದವರನ್ನು ಕೈಬಿಡುವುದಿಲ್ಲ ಎಂಬ ಸಿದ್ಧಾಂತ ವಾಂಗ್‌ಲುಂಗ್‌ನದು. ಭೂಮಿಯಿಂದ ದೊರೆತ ಪ್ರತಿ ಪೈಸೆಯನ್ನೂ ಜೋಪಾನವಾಗಿಟ್ಟುಕೊಳ್ಳುವ ವಾಂಗ್‌ಲುಂಗ್‌ನಿಗಿರುವ ಆಸೆ ಒಂದೇ ಹೆಚ್ಚು ಭೂಮಿಯನ್ನು ಕೊಂಡು ಹೆಚ್ಚು ದುಡಿಯಬೇಕೆನ್ನುವುದು. ಈ ನಿರ್ಧಾರದಲ್ಲಿ ಆತ ತನ್ನ ಹೆಂಡತಿಯ ಬಗ್ಗೆಯೂ ಕರುಣೆ ಹೊಂದಿರುವುದಿಲ್ಲ. ಹೆಂಡತಿ ಓಲನ್ ಕುರೂಪಿಯಾಗಿದ್ದರೂ ಸಹನೆ, ಕರುಣೆ, ಚಿಂತನಾಪರಳಾಗಿರುತ್ತಾಳೆ. ಪ್ರತಿ ಸಂದರ್ಭದಲ್ಲೂ ವಾಂಗ್‌ಲುಂಗ್‌ನಿಗೆ ಹೆಗಲು ಕೊಡುತ್ತಾಳೆ. ಎಲ್ಲಿಯೂ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸದೇ ಇರುವುದು, ಚೀನಾ ದೇಶದಲ್ಲಿ ಹೆಣ್ಣಿನ ಬಗೆಗಿರುವ ಅನಾದರವನ್ನು ಎತ್ತಿ ತೋರುತ್ತದೆ. ಹೆರಿಗೆಯ ಸಮಯದಲ್ಲೂ ವಿಶ್ರಾಂತಿ ಪಡೆಯದೇ ದುಡಿಯುವ, ಹೆರಿಗೆಯಾದ ಸಂಜೆಯೇ ಹೊಲಕ್ಕೆ ಮರಳಿ ಬಂದು ಗಂಡನೊಂದಿಗೆ ಸರಿಸಾಟಿಯಾಗಿ ಶ್ರಮಿಸುವ ಓಲನ್‌ಳ ಪಾತ್ರ ಓದುಗರನ್ನು ಹಿಡಿದಿಡುತ್ತದೆ. ಭೋಗದಾಸೆಗೆ ತನ್ನ ಭೂಮಿಯನ್ನೆಲ್ಲ ಮಾರುವ ಊರಿನ ಶ್ರೀಮಂತ ಹುವಾಂಗ್ ಮನೆತನದ ಭೂಮಿಯನ್ನು ಕೊಳ್ಳುತ್ತಾನೆ. ನೆರೆ ಬಂದಾಗ ಕುಗ್ಗದೆ, ಮನುಷ್ಯರನ್ನೇ ತಿನ್ನುವಂತಹ ಬರ ಬಂದಾಗ ಎಲ್ಲವನ್ನೂ ಎದುರಿಸಿ, ದೂರದ ಪಟ್ಟಣಕ್ಕೆ ಹೋಗಿ, ಅಲ್ಲಿನ ಬದುಕಿನ ಬಗ್ಗೆ ತಿರಸ್ಕಾರ ಹೊಂದಿ, ಮತ್ತೆ ಮರಳಿ ತನ್ನ ಊರಿಗೆ ಮರಳಿ ತನ್ನ ಭೂಮಿಯಲ್ಲೇ ತನ್ನ ಶ್ರೇಯಸ್ಸಿದೆ ಎಂದು ಕಂಡುಕೊಂಡ  ವಾಂಗ್‌ಲುಂಗ್ ಶ್ರೀಮಂತಿಕೆಯನ್ನು ಪಡೆಯುತ್ತಾನೆ. ಮಾನವ ಸಹಜ ದೌರ್ಬಲ್ಯಗಳನ್ನೂ ಹೊಂದಿರುವ ವಾಂಗ್‌ಲುಂಗ್ ಬೆಲೆವೆಣ್ಣನ್ನೂ ತಂದಿರಿಸಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ಆತನಲ್ಲಿ ಉಂಟಾಗುವ ತುಮುಲ, ಕೌಟುಂಬಿಕ ಸಮಸ್ಯೆ ಎಲ್ಲವನ್ನೂ ಪರ್ಲ್ ಬಕ್ ಸಮರ್ಥವಾಗಿ ಕಾದಂಬರಿಯಲ್ಲಿ ಹಿಡಿದಿಟ್ಟಿದ್ದಾರೆ. ವಯಸ್ಸಾದ ನಂತರ ವಾಂಗ್‌ಲುಂಗ್ ಹೆಂಡತಿಯನ್ನು ಕಳೆದುಕೊಳ್ಳುತ್ತಾನೆ. ಮಕ್ಕಳು ಪ್ರೌಢಾವಸ್ಥೆಗೆ ಬಂದು ತಮ್ಮದೇ ಲೆಕ್ಕಾಚಾರದಲ್ಲಿ ತೊಡಗುತ್ತಾರೆ. ಬದುಕಿನ ಚಿತ್ರಣ ಬದಲಾದರೂ, ಸಾಮಾಜಿಕ ಬದಲಾವಣೆಗಳಾದರೂ ವಾಂಗ್‌ಲುಂಗ್‌ನಿಗೆ ಮಾತ್ರ ತನ್ನ ಮಣ್ಣಿನ ಬಗೆಗಿರುವ ವ್ಯಾಮೋಹ ಹೋಗುವುದೇ ಇಲ್ಲ. ವ್ಯಾಮೋಹ ಎಂದರೆ ಶ್ರಮ, ದುಡಿಮೆಯ ವ್ಯಾಮೋಹ. ತನ್ನ ಇಬ್ಬರು ಮಕ್ಕಳೂ ಭೂಮಿಯನ್ನು ಮಾರುವ ನಿರ್ಧಾರಕ್ಕೆ ಬಂದಾಗ ವಾಂಗ್‌ಲುಂಗ್‌ನಿಗೆ ಆಘಾತವೆನಿಸುತ್ತದೆ. ಭೂಮಿಯನ್ನು ಮಾರಿದರೆ ಅದೇ ನಮ್ಮ ಕೊನೆ ಎಂಬ ಮಾತನ್ನು ಮಕ್ಕಳಿಗೆ ತಿಳಿಸುತ್ತಾನಾದರೂ ತಂದೆಯ ಮಾತು ಕೇಳುವ ಸ್ಥಿತಿಯಲ್ಲಿ ಮಕ್ಕಳಿರುವುದಿಲ್ಲ. ಅಲ್ಲಿಗೆ ಕಾದಂಬರಿ ಕೊನೆಯಾಗುತ್ತದೆ.
                       ಒಟ್ಟಾರೆ ವಾಂಗ್‌ಲುಂಗ್ ರೈತನ ಮೂಲಕ ಕೃಷಿಯಲ್ಲಿರುವ ಬವಣೆ, ಕಷ್ಟನಷ್ಟಗಳು, ಎಲ್ಲವನ್ನೂ ಎದುರಿಸಿ ದುಡಿಯುವ ರೀತಿಯನ್ನು ಪರ್ಲ್‌ಬಕ್ ವಿಶದೀಕರಿಸಿದ್ದಾರೆ. ಸೋಮಾರಿಗಳನ್ನು ಎಂದೂ ಸಹಿಸದ ವಾಂಗ್‌ಲುಂಗ್ ದುಡಿಮೆಯೇ ಮೂಲಮಂತ್ರ ಎನ್ನುತ್ತಾನೆ. ಭೂಮಿಯನ್ನು ಮಾರುವುದರಿಂದ ಅವನತಿ ಆರಂಭ ಎಂಬುದು ವಾಂಗ್‌ಲುಂಗ್‌ನ ನಂಬಿಕೆ. ಸೋಮಾರಿಗಳಾಗದೆ ಭೂಮಿಯನ್ನೇ ನಂಬಿ ದುಡಿದರೆ ಭೂಮಿ ಎಲ್ಲವನ್ನೂ ಕೊಡುತ್ತದೆ ಎಂದು ಕಾದಂಬರಿ ತಿಳಿಸುತ್ತದೆ. ಅಲ್ಲದೆ ಚೀನಾ ದೇಶದ ಜನಜೀವನವನ್ನೂ ತಿಳಿಸುತ್ತದೆ. 
                    ನೋಬೆಲ್ ಪುರಸ್ಕೃತ ಗುಡ್‌ಅರ್ತ್ ಕಾದಂಬರಿಯನ್ನು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದವರು ಪಾರ್ವತಿ ಜಿ. ಐತಾಳ್ ಅವರು. ಕಾದಂಬರಿ ಎಲ್ಲಿಯೂ ಅಡೆತಡೆ ಇಲ್ಲದಂತೆ ಓದಿಸಿಕೊಂಡು ಹೋಗುತ್ತದೆ. ಇದಕ್ಕೆ ಮೂಲ ಕಾರಣ ಕನ್ನಡದ ಅನುವಾದ. ಕನ್ನಡಕ್ಕೆ ಉತ್ತಮ ಅನುವಾದ ಕೃತಿಯೊಂದನ್ನು ನೀಡಿರುವ ಪಾರ್ವತಿ ಜಿ.ಐತಾಳ್ ಅಭಿನಂದನಾರ್ಹರು.


ಕೃತಿ: ನೊಬೆಲ್ ಪ್ರಶಸ್ತಿ ಪುರಸ್ಕೃತ ಚೀನೀ ಕಾದಂಬರಿ ಗುಡ್‌ಅರ್ತ್
ಕನ್ನಡಕ್ಕೆ: ಪಾರ್ವತಿ ಜಿ.ಐತಾಳ್
ಬೆಲೆ: ರೂ. ೧೯೫/-
ಪ್ರಕಾಶನ: ಅಂಕಿತ ಪುಸ್ತಕ ಪ್ರಕಾಶನ, ಬೆಂಗಳೂರು.
ಮೊದಲ ಮುದ್ರಣ: ೨೦೧೧

Tuesday, October 25, 2011

ಕೂಡ್ಲಿಗಿ ತಾಲೂಕಿನ ವಿಶಿಷ್ಟ ಗ್ರಾಮ ವಲಸೆ

            ತಾಲೂಕು ೧೬ನೇ ಶತಮಾನದ ವಿಜಯನಗರ ಅರಸರ ಕಾಲದಿಂದಲೂ ವಿವಿಧ ಪಾಳೆಗಾರರ ಆಳ್ವಿಕೆಯಲ್ಲಿ ಒಳಪಟ್ಟಿದ್ದ ಪ್ರದೇಶವಾಗಿದೆ. ಹೀಗಾಗಿ ಇಲ್ಲಿನ ಪ್ರತಿಯೊಂದ ಗ್ರಾಮ, ಹಟ್ಟಿಗಳೂ ವಿಶೇಷ ನಾಮಧೇಯವನ್ನು ಹೊಂದಿವೆ. ಇವುಗಳಲ್ಲಿ ವಿಶೇಷವಾದ ಐತಿಹಾಸಿಕ ಕುರುಹುಗಳಿರುವ ಅಲಕ್ಷಿತ ಗ್ರಾಮ ವಲಸೆ.




     ಹೆಸರೇ ಸೂಚಿಸುವಂತೆ ವಲಸೆ ಬಂದ ಅಥವಾ ಗುಳೆಬಂದ ಜನಾಂಗ ವಾಸವಿರುವ ಗ್ರಾಮವೇ ವಲಸೆಯಾಗಿರಬಹುದೆಂಬುದು ಸ್ಥಳೀಯ ಐತಿಹ್ಯಗಳಿಂದ ತಿಳಿದುಬರುತ್ತದೆ. ಹುರುಳಿಹಾಳು ಗ್ರಾಮ ಪಂಚಾಯ್ತಿಗೆ ಸೇರಿದ ವಲಸೆ ಪುಟ್ಟ ಗ್ರಾಮ. ಗ್ರಾಮದ ಸುತ್ತಲೂ ೪ ಬುರುಜುಗಳಿದ್ದು, ಇವುಗಳ್ಲಲಿ ೩ ನಾಶವಾಗಿದ್ದು, ಒಂದು ಮಾತ್ರ ಸುಸ್ಥಿತಿಯಲ್ಲಿದೆ. ಬುರುಜುಗಳ ಸುತ್ತಲೂ ಕೋಟೆಯ ಕಟ್ಟಡವಿತ್ತೆಂಬುದಕ್ಕೆ ಕಲ್ಲಿನ ಕೋಟೆಯ ಶಿಥಿಲಗೊಂಡ ಕುರುಹುಗಳಿವೆ. ಗ್ರಾಮದಲ್ಲಿ ಹೆಚ್ಚು ವಾಸವಾಗಿರುವವರು ನಾಯಕ ಜನಾಂಗದವರು. ಗ್ರಾಮದ ಮಧ್ಯೆ ವಿಶೇಷವಾದ ದೇವಸ್ಥಾನವಿದ್ದು, ಇಲ್ಲಿ ಎರಡು ದೈವಗಳಿವೆ. ಯರಗಟ್ಟೆನಾಯಕ ಹಾಗೂ ಗಾದ್ರಿಪಾಲನಾಯಕ. ವಿಶೇಷವೆಂದರೆ ಎರಡೂ ದೇವಸ್ಥಾನಗಳೂ ಗುಡಿಸಲಿನ ಮಾದರಿಯಲ್ಲಿದ್ದು, ಒಳಗೆ ದೇವರ ಪೂಜಾಸಾಮಗ್ರಿಗಳನ್ನಿರಿಸಲಾಗಿದೆ. ಬೇಡ ಜನಾಂಗದ ಪ್ರತಿಷ್ಠೆಯ ಸಂಕೇತವಾಗಿರುವ ಬಿಲ್ಲು, ಖಡ್ಗಗಳನ್ನು ಇಲ್ಲಿ ಪೂಜಿಸಲಾಗುವುದು. ದೈವಗಳ ಮೂರ್ತಿಗಳೂ ಇಲ್ಲಿವೆ. ವರ್ಷಕ್ಕೊಮ್ಮೆ ದಸರೆಯ ನಂತರ ಹುಣ್ಣಿಮೆಯ ಹತ್ತಿರದ ದಿನಗಳಲ್ಲಿ ಜಾತ್ರೆ ನಡೆಯುತ್ತದೆ. ಜಾತ್ರೆಗೆ ನಾಡಿನ ವಿವಿಧ ಭಾಗಗಳಾದ ಶಿವಮೊಗ್ಗ, ಅಂಕಮನಾಳ, ಆಂಧ್ರಪ್ರದೇಶದ ಗೊಲ್ಲಹಳ್ಳಿ, ಕೋನಸಾಗರ, ಹಿರೇಹಳ್ಳಿ, ಕರ್ನಾರ ಮನೆತನದ ೬ ಕರ್ನಾರಹಟ್ಟಿ ಗ್ರಾಮಸ್ಥರು ಮೊದಲಾದ ನಾಯಕ ಜನಾಂಗದವರು ಪಾಲ್ಗೊಳ್ಳುವರು. ಯರಗಟ್ಟೆನಾಯಕ, ಗಾದ್ರಿಪಾಲನಾಯಕರನ್ನು ಮ್ಯಾಸ ಮಂಡಲದ ಪ್ರಬುದ್ಧ ದೇವರುಗಳೆಂದು ಪೂಜಿಸಲಾಗುತ್ತದೆ. ದೇವಸ್ಥಾನವನ್ನು ನಿರ್ಮಿಸಿದ ಕಾಲವನ್ನು ಕೇಳಿದರೆ, ತಮ್ಮ ವಂಶಜರಿಂದಲೂ ಇದೇ ರೀತಿ ಉಳಿದುಬಂದಿದೆಯೆಂದು ಗ್ರಾಮಸ್ಥರು ತಿಳಿಸುತ್ತಾರೆ. ನಾಯಕ ಜನಾಂಗ ಅಥವಾ ಬೇಡ ಜನಾಂಗದ ಬೇಟೆಯ ಸಂಕೇತಗಳಾಗಿರುವ ಆಯುಧಗಳನ್ನು ಇಲ್ಲಿ ಪೂಜಿಸುವುದು ವಿಶೇಷವಾಗಿದೆ. ವಲಸೆ ಎಂಬ ಹೆಸರು ಹೇಗೆ ಬಂತೆಂದು ಗ್ರಾಮದ ಹಿರಿಯರನ್ನು ಕೇಳಿದರೆ, ಯರಗಟ್ಟೆನಾಯಕ ಮೂಲತ: ಬೆಳ್ಳಗಟ್ಟೆಯ ಸಮೀಪದ ತಮಟೆಕಲ್‌ನ ನಾಯಕ. ಯುದ್ಧದ ಸಂದರ್ಭದಲ್ಲಿ ತನ್ನ ಹಿಂಬಾಲಕರೊಂದಿಗೆ ಬಂದು ಈ ಪ್ರದೇಶದಲ್ಲಿ ಸಮಾಧಿಸ್ಥನಾದ. ಆತನ ಸಮಾಧಿಯೇ ದೇವಸ್ಥಾನವೆಂದು ಗ್ರಾಮದ ಜಿ.ಬಿ.ಪಾಲಯ್ಯ ಹೇಳುತ್ತಾರೆ. ಯರಗಟ್ಟೆನಾಯಕ ಹಾಗೂ ಗಾದ್ರಿಪಾಲನಾಯಕ ಇಬ್ಬರೂ ಮಹಾನ್ ಶೂರರು. ಅವರ ವಂಶಸ್ಥರೇ ನಮ್ಮ ಜನಾಂಗ ಎಂದೂ ಅವರು ಹೇಳಿದರು. ಯರಗಟ್ಟೆನಾಯಕ ಹಾಗೂ ಆತನ ತಂಡ ಇಲ್ಲಿ ವಲಸೆ ಬಂದು ನೆಲೆಸಿದುದಕ್ಕೆ ವಲಸೆ ಎಂಬ ಹೆಸರು ಬಂದಿರಬಹುದೇನೋ ಎಂದು ಹಿರಿಯರು ಊಹಿಸುತ್ತಾರೆ. ಮತ್ತೊಂದು ವಿಶೇಷವೆಂದರೆ ಯರಗಟ್ಟೆನಾಯಕ ಎತ್ತುಗಳನ್ನು ಪಾಲನೆ ಮಾಡುತ್ತಿದ್ದ. ಹೀಗಾಗಿ ಆತನ ಎತ್ತುಗಳೆಂದೇ ೨೫ ಎತ್ತುಗಳನ್ನು ದೇವರ ಎತ್ತುಗಳೆಂದು ಮೀಸಲಿರಿಸಲಾಗಿದೆ. ಅವುಗಳನ್ನು ಅಪ್ಪೇನಹಳ್ಳಿಯ ಬಳಿ ಡಿ.ಸಿದ್ದಾಪುರದಲ್ಲಿರಿಸಲಾಗಿದ್ದು, ಅವುಗಳನ್ನು ನೋಡಿಕೊಳ್ಳಲೆಂದೇ ಒಬ್ಬ ವ್ಯಕ್ತಿಯನ್ನು ನೇಮಕ ಮಾಡಲಾಗಿದೆ. ಆತನಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸುವುದೂ ಗ್ರಾಮಸ್ಥರ ಜವಾಬ್ದಾರಿಯಾಗಿದೆ. ಪ್ರತಿವರ್ಷದ ಜಾತ್ರೆಗೆ ದೇವರ ಎತ್ತುಗಳನ್ನು ವಿಧಿವತ್ತಾಗಿ ಕರೆತಂದು ಪೂಜಿಸಲಾಗುತ್ತದೆ.

         ಇಷ್ಟೊಂದು ವೈಶಿಷ್ಟ್ಯಗಳಿರುವ ವಲಸೆ ಗ್ರಾಮದಲ್ಲಿ ಯಾರೂ ವಾಹನಗಳನ್ನೇರಿ ಹೋಗುವಂತಿಲ್ಲ. ಸೈಕಲ್, ಬೈಕ್‌ಗಳನ್ನು ಗ್ರಾಮದ ಹೊರಗೆ ತಂದೇ ವಾಹನವೇರಿ ಹೋಗಬೇಕು. ಇದು ಇಲ್ಲಿಯ ಅಲಿಖಿತ ನಿಯಮಗಳಲ್ಲೊಂದು. ಬಂಡಿಗಳನ್ನೂ ಗ್ರಾಮದಲ್ಲಿ ತರುವಂತಿಲ್ಲ. ಇದು ಈ ಗ್ರಾಮದ ಪದ್ಧತಿ. ‘ಹಿಂದಿನೋರು ನಡಸ್ಕೊಂಡು ಬಂದಾರ, ಅದನ್ನ ನಾವು ಮುಂದುವರಿಸೀವಿ’ ಎಂದು ಗ್ರಾಮದ ಚಂದ್ರಪ್ಪ ಹೇಳುತ್ತಾರೆ. ‘ನಮ್ ದೇವರದು ಭಾಳ ಇತಿಹಾಸ ಐತೆ, ೨-೩ ದಿನಾ ಆದ್ರೂ ಮುಗಿಯಂಗಿಲ್ಲ’ ಎಂದು ತಳವಾರ ನಿಂಗಪ್ಪ, ದಡ್ಲ ಮಾರಮ್ಮನ ಪೂಜಾರ ಹೇಳುತ್ತಾರೆ. ‘ನಮ್ ಊರಿನ ಬಗ್ಗೆ ನಮ್ ಹುಡುಗ್ರಿಗೆ ಏನೂ ತಿಳಿದಿಲ್ಲ, ತಿಳಿಸಬೇಕಾದ ಹಿರೇರು ಹುಡುಗರಿಗೆ ಹೇಳಿದ್ರ, ಎಷ್ಟೋ ವಿಷಯಗಳ ಗೊತ್ತಾಗ್ತಾವ’ ಎಂದು ಗ್ರಾಮದ ಯುವಕ ಓಂಕಾರಪ್ಪ ಹೇಳುತ್ತಾರೆ. ಆಸಕ್ತರು ಈ ಗ್ರಾಮವನ್ನು ಸಂದರ್ಶಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಓಂಕಾರಪ್ಪ, ಮೊಬೈಲ್ ಸಂ.೯೯೦೧೮೬೮೬೯೨ಗೆ ಸಂಪರ್ಕಿಸಬಹುದು.
                               

ಕೆಡಿಎಲ್೧ ಚಿತ್ರ: ಕೂಡ್ಲಿಗಿ ತಾಲೂಕಿನ ಅಲಕ್ಷಿತ ವಿಶೇಷ ಐತಿಹಾಸಿಕ ಗ್ರಾಮ ವಲಸೆಯ ಆರಾಧ್ಯ ದೈವ ಯರಗಟ್ಟೆನಾಯಕನ ದೇಗುಲ.
ಕೆಡಿಎಲ್೨: ದೇಗುಲದ ಒಳಭಾಗದ ನೋಟ.
ಕೆಡಿಎಲ್೩ ಹಾಗೂ ಕೆಡಿಎಲ್೪: ಗ್ರಾಮದ ೪ ಬುರುಜುಗಳಲ್ಲಿ ಉಳಿದಿರುವ ಸುಸ್ಥಿತಿಯಲ್ಲಿರುವ ಒಂದು ಬುರುಜಿನ ದೃಶ್ಯ.
ಕೆಡಿಎಲ್೫: ಗಾದ್ರಿಪಾಲನಾಯಕನ ದೇಗುಲ
ಕೆಡಿಎಲ್೬: ಬುರುಜಿನ ಮಧ್ಯೆ ಇಂತಹ ಅನೇಕ ಮರದ ದಿಮ್ಮಿಗಳನ್ನಿರಿಸಿ ನಿರ್ಮಿಸಲಾಗಿದೆ.