Friday, April 13, 2012

ಕೂಡ್ಲಿಗಿ ಕಾಡಿನಲ್ಲೀಗ ಅರಳಿದೆ : ಕಾಡಿನ ಜ್ವಾಲೆ ಮುತ್ತುಗದ ಹೂ

ಗಿಡಕ್ಕೇ ಬೆಂಕಿ ಹತ್ತಿದೆಯೇನೋ ಎಂಬ ಭ್ರಮೆ ಮೂಡಿಸುವಷ್ಟು ಬೆಂಕಿಯ ಕೆನ್ನಾಲಗೆಯಂತೆ ಹೂಗಳನ್ನರಳಿಸಿಕೊಳ್ಳುವ ಗಿಡ ಮುತ್ತುಗದ ಗಿಡ ಆಂಗ್ಲ ಭಾಷೆಯಲ್ಲಿ ಫ್ಲೇಮ್ ಆಫ್ ದಿ ಫಾರೆಸ್ಟ್. ಕೂಡ್ಲಿಗಿಯ ಕುರುಚಲು ಕಾಡಿನಲೀಗ ಇದರದೇ ದರ್ಬಾರು. ತಾಲೂಕಿನ ಅರಣ್ಯಪ್ರದೇಶದಲ್ಲಿ ಸಂಚರಿಸಿದರೆ ಥಟ್ಟನೆ ತನ್ನ ವರ್ಣಮಯ ಹೂಗಳಿಂದ ಸೆಳೆಯುವುದೇ ಮುತ್ತುಗದ ಗಿಡ. 
ಜನೆವರಿಯಿಂದ ಮಾರ್ಚ್ ತಿಂಗಳವರೆಗೆ ತಾಲೂಕಿನ ಕುರುಚಲು ಕಾಡಿನಲ್ಲಿ ತಿರುಗಾಡಿದರೆ, ತಕ್ಷಣ ತನ್ನ ಬೆಂಕಿಯ ನಾಲಗೆಯಂತಹ ಬಣ್ಣದಿಂದ ಮನಸೆಳೆಯುವ ಈ ಗಿಡ ಪ್ರಾಚೀನ ಕಾಲದಿಂದಲೂ ಭಾರತೀಯರಿಗೆ ಪವಿತ್ರವೆನಿಸಿಕೊಂಡಿದೆ. ಇದನ್ನು ಮುತ್ತುಗದ ಗಿಡ ಎಂದು ಕನ್ನಡದಲ್ಲಿ, ಪಲಾಶ ಎಂದು  ಹಿಂದಿಯಲ್ಲಿ, ಲಾಕ್ಷಾತರು ಎಂದು ಸಂಸ್ಕೃತದಲ್ಲಿ, ಫ್ಲೇಮ್ ಆಫ್ ದಿ ಫಾರೆಸ್ಟ್ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲಾಗುತ್ತದೆ. ‘ಬ್ಯುಟಿಯಾ ಮೊನೆಸ್ಪರ್ಮಾ’ ಎಂಬ ಬೊಟಾನಿಕಲ್ ಹೆಸರು ಇದಕ್ಕಿದೆ. 



ಸುಮಾರು ೨೦-೪೦ ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ಈ ಗಿಡದ ಎಲೆಗಳನ್ನು ಊಟದ ತಟ್ಟೆಯನ್ನು ತಯಾರಿಸಲು ಬಳಸಲಾಗುತ್ತಿತ್ತು. ಪತ್ರೋಳಿ ಎಂದೇ ಕರೆಯಲ್ಪಡುವ ಊಟದ ತಟ್ಟೆಗಳನ್ನು ಇದರ ಎಲೆಗಳನ್ನು ಹರಿದು, ಬಿಸಿಲಿನಲ್ಲಿ ಒಣಗಿಸಿ, ಸಣ್ಣ ಕಡ್ಡಿಗಳಿಂದ ಚುಚ್ಚಿ ಸಿದ್ಧಪಡಿಸಲಾಗುತ್ತಿತ್ತು. ಈಗ ಎಲ್ಲೆಡೆ ಕಾಗದದ, ಪ್ಲಾಸ್ಟಿಕ್‌ನ ತಟ್ಟೆಗಳು ಬಂದಿವೆ. ಡಿಸೆಂಬರ್‌ನಲ್ಲಿ ತನ್ನ ಎಲ್ಲ ಎಲೆಗಳನ್ನು ಉದುರಿಸಿಕೊಂಡು ನಗ್ನವಾಗಿ ನಿಲ್ಲುವ ಮುತ್ತುಗದ ಗಿಡ ಜನೆವರಿಯಿಂದ ಮೈತುಂಬ ಹೂಗಳನ್ನರಳಿಸಿಕೊಂಡಾಗ ನೋಡಲು ಕಣ್ಣುಗಳೇ ಸಾಲವು ಎನಿಸುತ್ತದೆ. ಹೂವಿಗೆ ವಾಸನೆ ಇಲ್ಲದಿದ್ದರೂ ತಕ್ಷಣ ಕಣ್ಮನ ಸೆಳೆಯುವ ಆಕರ್ಷಣ ಶಕ್ತಿ ಇದಕ್ಕಿದೆ. ಗಾಢ ಕೆಂಪು, ಹಳದಿ ಬಣ್ಣದ ಮಿಶ್ರಣದಂತಿರುವ ಈ ಹೂವುಗಳು ಗಿಳಿಯ ಕೊಕ್ಕಿನಂತಿವೆ. ಅದಕ್ಕಾಗಿಯೇ ಇದನ್ನು ಪ್ಯಾರೆಟ್ ಟ್ರೀ ಎಂದೂ ಕರೆಯಲಾಗುತ್ತದೆ. ರೈತರು ಮುತ್ತುಗದ ಗಿಡವನ್ನು ಪೂಜ್ಯ ಭಾವನೆಯಿಂದ ನೋಡುತ್ತಾರೆ. ಸುಗ್ಗಿಯಾಗಿ ರಾಶಿಯಾದಾಗ ಪೂಜೆಗಾಗಿ ಇದರ ಹೂವುಗಳನ್ನೇ ಬಳಸಲಾಗುತ್ತದೆ. ಜಗತ್ತಿನ ಎಲ್ಲ ಗಿಡಗಳಿಗೂ ಪುರಾತನವಾದುದು ಎಂಬ ನಂಬಿಕೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಇದನ್ನು ಮುದುಕನ ಮರ ಮತ್ತು ಮುದುಕನ ಹೂ ಎಂದು ಗುರುತಿಸಲಾಗುತ್ತದೆ. ಇದರ ಹೂಗಳನ್ನು ಮೊದಲೆಲ್ಲ ಹೋಳಿ ಹುಣ್ಣಿಮೆಯ ಬಣ್ಣಕ್ಕಾಗಿ ಬಳಸಲಾಗುತ್ತಿತ್ತು. ಇದು ಪರಿಸರ ಸ್ನೇಹಿ ಬಣ್ಣವಾಗಿದ್ದುದರಿಂದ ಚರ್ಮಕ್ಕೂ ಯಾವುದೇ ಹಾನಿಯನ್ನುಂಟುಮಾಡುತ್ತಿದ್ದಿಲ್ಲ. ಈಗ ರಾಸಾಯನಿಕ ಮಿಶ್ರಣದ ಬಣ್ಣವನ್ನು ಬಳಸುವುದರಿಂದಾಗಿ ಚರ್ಮಕ್ಕೆ ಹಾನಿ. ಆದರೆ ಅದರೆಡೆ ಚಿಂತಿಸುವವರಾರು? 
ಇಷ್ಟೆಲ್ಲ ವೈಶಿಷ್ಟ್ಯಗಳಿರುವ ಮುತ್ತುಗದ ಗಿಡ ಹಾಗೂ ಅದರ ಹೂವುಗಳ ಸೌಂದರ್ಯದತ್ತ ಯಾರ ಗಮನವೂ ಇದ್ದಂತಿಲ್ಲ. ಈ ಗಿಡಗಳ ಸಂತತಿ ಕಡಿಮೆಯಾಗುತ್ತಿರುವುದೂ ಇದೇ ಕಾರಣಕ್ಕೇನೋ. ಮನೆಯಲ್ಲಿ ಕುಂಡಗಳಲ್ಲಿ ಬಗೆ ಬಗೆಯ ಗಿಡಗಳನ್ನು ಹಣ ಕೊಟ್ಟು ಕೊಂಡು ತಂದು ಕಾಳಜಿ ಮಾಡಿ ನೋಡುವ ನಮಗೆ ನೈಸರ್ಗಿಕವಾಗಿ ಕಾಣಸಿಗುವ ಸುಂದರ ಗಿಡ, ಹೂಗಳ ಬಗ್ಗೆ ಆಸಕ್ತಿ ಮೂಡದಿರುವುದು ವಿಪರ್ಯಾಸ. ಈ ಗಿಡವನ್ನು ನೋಡಬೇಕೆಂಬ ಆಸಕ್ತಿಯಿರುವವರು ಗುಡೇಕೋಟೆ ಮಾರ್ಗದಲ್ಲಿ ಕುರುಚಲು ಕಾಡಿನಲ್ಲಿ ಸ್ವಲ್ಪ ಅಲೆದರೂ ಸಾಕು, ಬೆಂಕಿಯ ಕೆನ್ನಾಲಗೆಯಂತಿರುವ ಹೂಗಳನ್ನರಳಿಸಿಕೊಂಡ ವರ್ಣರಂಜಿತ ಗಿಡಗಳು ನಿಮ್ಮನ್ನು ಸ್ವಾಗತಿಸುತ್ತವೆ. ಹುಡುಕುವ ತಾಳ್ಮೆ, ನೋಡುವ ಆಸಕ್ತಿಯಿದ್ದಲ್ಲಿ ಇವು ನಿಮಗೆ ಕಂಡೇ ಕಾಣುತ್ತವೆ. ಮತ್ತೇಕೆ ತಡ ? ಹೊರಡಿ. ಯಾಕೆಂದರೆ ಗಿಡಗಳನ್ನೆಲ್ಲ ಕಡಿದೊಗೆಯುವ ಈ ದಿನಗಳಲ್ಲಿ ಮುಂದೊಮ್ಮೆ ಈ ಗಿಡಗಳು ನೋಡಲು ಸಿಗುವುದೋ ಇಲ್ಲವೋ ಯಾರಿಗೆ ಗೊತ್ತು?
 




No comments:

Post a Comment