Thursday, April 26, 2012

ಬತ್ತಿದ ಕೂಡ್ಲಿಗಿ ಕೆರೆ : ಹೊರಬಂದ ಈಶ್ವರ ದೇವಾಲಯ






ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪ್ರಮುಖ ಕೆರೆಗಳಲ್ಲಿ ಪಟ್ಟಣದ ಹೊರವಲಯದಲ್ಲಿರುವ ದೊಡ್ಡಕೆರೆಯೂ ಒಂದು. ೯೨.೫೬ ಹೆಕ್ಟೇರ್‌ನಷ್ಟು ನೀರಿನ ಹರವಿನ ಕ್ಷೇತ್ರವಿರುವ ದೊಡ್ಡಕೆರೆ ಮಳೆಗಾಲದಲ್ಲಿ ತುಂಬಿ ಭೋರ್ಗರೆದಾಗ ಪಟ್ಟಣದ ಜನತೆಯೆಲ್ಲ ಸಂತಸಪಡುತ್ತಾರೆ.
ಈ ಕೆರೆಯ ವೈಶಿಷ್ಟ್ಯವೆಂದರೆ ಈ ಕೆರೆಯ್ಲಲಿ ಕಾವಲು ಕಾಯಲೆಂದೇ ಹಿಂದಿನ ಪಾಳೆಗಾರರು ಕಾವಲಿನ ಜನರನ್ನಿಟ್ಟಿದ್ದರು. ಹೀಗಾಗಿ ಕೆರೆ ಕಾವಲು ಕಾಯುವವರು ಕೆರೆಯ ಪಕ್ಕದಲ್ಲಿ ವಾಸ್ತವ್ಯ ಹೂಡಿ, ಅದೇ ಒಂದು ಗ್ರಾಮವಾಗಿ, ಪ್ರಸ್ತುತ ಅದನ್ನು ‘ಕೆರೆ ಕಾವಲರ ಹಟ್ಟಿ’ ಎಂದು ಹೆಸರು ಬಂದಿದೆ. ಕೆರೆಯನ್ನು ಕಾವಲು ಕಾಯುವವರ ಹಟ್ಟಿಯೇ ಮುಂದೆ ಕೆರೆ ಕಾವಲರ ಹಟ್ಟಿಯೆಂಬ ಆಡು ಭಾಷೆಗೆ ರೂಪಾಂತರಗೊಂಡಿದೆ. ಇಂತಹ ಐತಿಹಾಸಿಕ ಹಿನ್ನೆಲೆಯಿರುವ ಕೆರೆಯ ಮಧ್ಯೆ ಈಶ್ವರನ ದೇವಸ್ಥಾನವಿದೆ. ಕೆರೆ ತುಂಬಿದಾಗ ಕೇವಲ ದೇವಸ್ಥಾನದ ಗೋಪುರದ ಭಾಗ ಮಾತ್ರ ಕಂಡು ಉಳಿದೆಲ್ಲವೂ ನೀರಿನಲ್ಲಿ ಮುಳುಗಿರುತ್ತದೆ. ಕೆರೆ ಬತ್ತಿದಾಗ ಮಾತ್ರ ಹೊರಕಾಣುವ ಈಶ್ವರ ದೇವಸ್ಥಾನ ಈಗಾಗಲೇ ಶಿಥಿಲಗೊಂಡಿದೆ. ಕುತೂಹಲದಿಂದ ದೇವಸ್ಥಾನವನ್ನು  ಕಾಣಲು ಹೋದರೆ, ದೇವಸ್ಥಾನದ ಸುತ್ತಲೂ ಪೌಳಿ ಇದ್ದುದು ಕಂಡುಬರುತ್ತದೆ. ನೆಲಮಟ್ಟದಿಂದ ೬ ಅಡಿ ಎತ್ತರವಿರುವ ದೇವಸ್ಥಾನದ ಒಳಗೆ ಕುಳಿತೇ ಒಳಹೋಗಬೇಕು. ದೇವಸ್ಥಾನವನ್ನು ಪೂರ್ವಾಭಿಮುಖವಾಗಿ ನಿರ್ಮಿಸಲಾಗಿದೆ. ಮುಂಭಾಗದ್ಲಲಿ ಮೇಲ್ಗಡೆ ಚಕ್ರಾಕಾರದ ಕೆತ್ತನೆಯಿದೆ. ಗರ್ಭಗುಡಿಯ ಮುಂಭಾಗದ ಪ್ರಮುಖ ದ್ವಾರದ ಮೇಲೆ ಗಜಲಕ್ಷ್ಮಿಯ ಕೆತ್ತನೆಯಿದೆ. ದ್ವಾರದ ಕಂಬಗಳೂ ಕೆತ್ತನೆಯಿಂದ ಕೂಡಿವೆ. ದೇವಸ್ಥಾನ ಶಿಥಿಲಗೊಂಡಿರುವುದರಿಂದ, ನೀರಿನಲ್ಲಿ ಹಾಳಾಗಿರುವುದರಿಂದ ಕೆತ್ತನೆಗಳೆಲ್ಲ ಅಸ್ಪಷ್ಟವಾಗಿವೆ. ಗರ್ಭಗುಡಿಯ ಒಳಭಾಗ ಲಿಂಗುವನ್ನು ಕಾಣಬಹುದಾಗಿದೆ. ದೇವಸ್ಥಾನದ ಮುಂಭಾಗದಲ್ಲಿ ಶಿಥಿಲಗೊಂಡ ನಂದಿಯ ಮೂರ್ತಿಯಿದೆ. ಕೆರೆಯ ಮಣ್ಣೆಲ್ಲ ದೇವಸ್ಥಾನದ ಹೊರಗೆ, ಒಳಗೆ ನುಗ್ಗಿರುವುದಕ್ಕೇನೋ ದೇವಸ್ಥಾನ ಹೂತುಹೋದಂತಾಗಿದೆ. ದೇವಸ್ಥಾನವು ದೊಡ್ಡ ಬಂಡೆಗಳಿಂದ ಪಟ್ಟಿಕೆಯಾಕಾರದಲ್ಲಿ ನಿರ್ಮಾಣಗೊಂಡಿದೆ. ಶಿಥಿಲಗೊಂಡಿರುವುದರಿಂದಾಗಿ ಗೋಪುರದ ಕಲ್ಲುಗಳ ಜೋಡಣೆ ತಪ್ಪಿದಂತಾಗಿದೆ.
ಏನೇ ಇರಲಿ ಕೆರೆ ಕಾವಲು ಕಾಯುವವರನ್ನು ನೇಮಕ ಮಾಡಿದ್ದ ಪಾಳೆಗಾರರು ಕೆರೆಯನ್ನು ಪವಿತ್ರ ಸ್ಥಳವೆಂದು ಪೂಜಿಸಲು ಬಹುಶ: ಈಶ್ವರನ ದೇವಸ್ಥಾನವನ್ನು ನಿರ್ಮಿಸಿರಬಹುದೆಂದು ಪಟ್ಟಣದ ಹಿರಿಯರು ಹೇಳುತ್ತಾರೆ. ಐತಿಹಾಸಿಕ ಗುರುತಾಗಿ ಉಳಿದಿರುವ, ಶಿಥಿಲಗೊಂಡಿರುವ ದೊಡ್ಡಕೆರೆಯ ಈಶ್ವರನ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದಲ್ಲಿ ಕೆರೆಗೆ ಮತ್ತಷ್ಟು ಪ್ರಾಮುಖ್ಯತೆ ಬರಬಹುದೆಂಬುದು ಜನರ ಆಶಯ. ಕೆರೆ ಸಂಪೂರ್ಣ ಬತ್ತಿದೆ. ಆಸಕ್ತರು ದೇವಸ್ಥಾನವನ್ನು ನೋಡಬಹುದಾಗಿದೆ.



Sunday, April 15, 2012

ನೀಲಾಗಸದಲ್ಲಿ ಮೇಘಗಳ ವೈಭವ

         ಆಗಸದ ನೀಲವರ್ಣದಲ್ಲಿ ಬೆಳ್ಳನೆಯ, ಕಪ್ಪನೆಯ, ವರ್ಣಮಯ ಮೇಘಗಳ ವೈಭವ ಕಂಡು ಏನೋ ಮಹಾಕವಿ ಕಾಳಿದಾಸ ಮೇಘ ಸಂದೇಶ ಕಾವ್ಯ ಬರೆದಿರಬಹುದು. ಹಿಂಜಿದ ಅರಳೆಯು ಗಾಳಿಗೆ ತೂರಿ ಮೋಡಗಳಾಗಿಹವೆ? ಎಂದು ಕವಿಯೊಬ್ಬರು ಮಗುವಿನ ತೊದಲ್ನುಡಿಯಲ್ಲಿ ಪ್ರಶ್ನಿಸಿದ್ದಾರೆ.
           ಬರಿದಾದ ನೀಲ ಆಗಸಕ್ಕಿಂತ ಮೋಡಗಳಿರುವ ಬಾನೇ ಸುಂದರ ಎಂದು ಯಾರಿಗಾದರೂ ಅನಿಸದೇ ಇರದು. ಖಾಲಿ ಆಗಸ ಖಾಲಿ ಮನಸಿನ ಸಂಕೇತವೆಂದೇನೋ ಮೋಡಗಳಿಂದೊಡಗೂಡಿದ ಆಗಸವನ್ನು ಎಲ್ಲರೂ ಬಯಸುತ್ತಾರೆ. ಕವಿಗಳಿಗೆ ಅದು ಪ್ರಿಯತಮೆಗೆ ಕರೆದೊಯ್ಯುವ ಮೇಘ ಸಂದೇಶವಾದರೆ, ರೈತರಿಗೆ ಜೀವದಾಯಿನಿಯಾಗಿದೆ. ಬಿಳಿಯ ಮೋಡಗಳು ಸುಂದರವಾದರೂ ಅದರಿಂದ ಮಳೆ ಬರುವುದಿಲ್ಲವಾದ್ದರಿಂದ ರೈತರು ಬಿಳಿ ಮೋಡಗಳನ್ನು ಇಷ್ಟಪಡುವುದಿಲ್ಲ. ಕಪ್ಪನೆಯ ಮೋಡಗಳು ಆಗಸವನ್ನೆಲ್ಲ ಆವರಿಸಿದೊಡನೆ ರೈತರಿಗೆ ಮಳೆಯ ಮುನ್ಸೂಚನೆಯ ಸಂತಸ. ಮಕ್ಕಳಿಗೆ ಕುಣಿದು ಕುಪ್ಪಳಿಸುವ ಸಂದರ್ಭದ ಅವಕಾಶ. ಚಿತ್ರ ನಿರ್ದೇಶಕನಿಗೆ ಸುಂದರ ಭಾವನೆಗಳ ಕಥಾಹಂದರ. ಒಟ್ಟಿನಲ್ಲಿ ಅವರವರ ಭಾವಕ್ಕೆ ತಕ್ಕಂತೆ ಆಗಸದ ಮೋಡಗಳು ರೂಪುಗೊಂಡಿರುತ್ತವೆ.
           ಕ್ಷಣ ಕಾಲ ಎಲ್ಲವನ್ನೂ ಮರೆತು ಆಗಸದತ್ತಲೇ ದಿಟ್ಟಿ ನೆಟ್ಟು ಕೇವಲ ಮೋಡಗಳನ್ನೇ ನೋಡುತ್ತಿದ್ದರೆ ಮೂರ್ತತೆಯಿಂದ ಅಮೂರ್ತತೆಯೆಡೆ ಒಯ್ಯುವ ಭಾವ ಬಾರದೇ ಇರದು.
ಮೋಡಗಳಲ್ಲೂ ಎಷ್ಟೊಂದು ವಿಧ? ಕ್ಯಾಮೆರಾದ ಕಣ್ಣಿಗೆ ಕಂಡದ್ದು, ಹೊಳೆದದ್ದು, ಮೂಡಿದ್ದು ಎಲ್ಲವೂ ಕಣ್ಣೆದುರಿಗಿದೆ.

Friday, April 13, 2012

ಕೂಡ್ಲಿಗಿ ಕಾಡಿನಲ್ಲೀಗ ಅರಳಿದೆ : ಕಾಡಿನ ಜ್ವಾಲೆ ಮುತ್ತುಗದ ಹೂ

ಗಿಡಕ್ಕೇ ಬೆಂಕಿ ಹತ್ತಿದೆಯೇನೋ ಎಂಬ ಭ್ರಮೆ ಮೂಡಿಸುವಷ್ಟು ಬೆಂಕಿಯ ಕೆನ್ನಾಲಗೆಯಂತೆ ಹೂಗಳನ್ನರಳಿಸಿಕೊಳ್ಳುವ ಗಿಡ ಮುತ್ತುಗದ ಗಿಡ ಆಂಗ್ಲ ಭಾಷೆಯಲ್ಲಿ ಫ್ಲೇಮ್ ಆಫ್ ದಿ ಫಾರೆಸ್ಟ್. ಕೂಡ್ಲಿಗಿಯ ಕುರುಚಲು ಕಾಡಿನಲೀಗ ಇದರದೇ ದರ್ಬಾರು. ತಾಲೂಕಿನ ಅರಣ್ಯಪ್ರದೇಶದಲ್ಲಿ ಸಂಚರಿಸಿದರೆ ಥಟ್ಟನೆ ತನ್ನ ವರ್ಣಮಯ ಹೂಗಳಿಂದ ಸೆಳೆಯುವುದೇ ಮುತ್ತುಗದ ಗಿಡ. 
ಜನೆವರಿಯಿಂದ ಮಾರ್ಚ್ ತಿಂಗಳವರೆಗೆ ತಾಲೂಕಿನ ಕುರುಚಲು ಕಾಡಿನಲ್ಲಿ ತಿರುಗಾಡಿದರೆ, ತಕ್ಷಣ ತನ್ನ ಬೆಂಕಿಯ ನಾಲಗೆಯಂತಹ ಬಣ್ಣದಿಂದ ಮನಸೆಳೆಯುವ ಈ ಗಿಡ ಪ್ರಾಚೀನ ಕಾಲದಿಂದಲೂ ಭಾರತೀಯರಿಗೆ ಪವಿತ್ರವೆನಿಸಿಕೊಂಡಿದೆ. ಇದನ್ನು ಮುತ್ತುಗದ ಗಿಡ ಎಂದು ಕನ್ನಡದಲ್ಲಿ, ಪಲಾಶ ಎಂದು  ಹಿಂದಿಯಲ್ಲಿ, ಲಾಕ್ಷಾತರು ಎಂದು ಸಂಸ್ಕೃತದಲ್ಲಿ, ಫ್ಲೇಮ್ ಆಫ್ ದಿ ಫಾರೆಸ್ಟ್ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲಾಗುತ್ತದೆ. ‘ಬ್ಯುಟಿಯಾ ಮೊನೆಸ್ಪರ್ಮಾ’ ಎಂಬ ಬೊಟಾನಿಕಲ್ ಹೆಸರು ಇದಕ್ಕಿದೆ. 



ಸುಮಾರು ೨೦-೪೦ ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ಈ ಗಿಡದ ಎಲೆಗಳನ್ನು ಊಟದ ತಟ್ಟೆಯನ್ನು ತಯಾರಿಸಲು ಬಳಸಲಾಗುತ್ತಿತ್ತು. ಪತ್ರೋಳಿ ಎಂದೇ ಕರೆಯಲ್ಪಡುವ ಊಟದ ತಟ್ಟೆಗಳನ್ನು ಇದರ ಎಲೆಗಳನ್ನು ಹರಿದು, ಬಿಸಿಲಿನಲ್ಲಿ ಒಣಗಿಸಿ, ಸಣ್ಣ ಕಡ್ಡಿಗಳಿಂದ ಚುಚ್ಚಿ ಸಿದ್ಧಪಡಿಸಲಾಗುತ್ತಿತ್ತು. ಈಗ ಎಲ್ಲೆಡೆ ಕಾಗದದ, ಪ್ಲಾಸ್ಟಿಕ್‌ನ ತಟ್ಟೆಗಳು ಬಂದಿವೆ. ಡಿಸೆಂಬರ್‌ನಲ್ಲಿ ತನ್ನ ಎಲ್ಲ ಎಲೆಗಳನ್ನು ಉದುರಿಸಿಕೊಂಡು ನಗ್ನವಾಗಿ ನಿಲ್ಲುವ ಮುತ್ತುಗದ ಗಿಡ ಜನೆವರಿಯಿಂದ ಮೈತುಂಬ ಹೂಗಳನ್ನರಳಿಸಿಕೊಂಡಾಗ ನೋಡಲು ಕಣ್ಣುಗಳೇ ಸಾಲವು ಎನಿಸುತ್ತದೆ. ಹೂವಿಗೆ ವಾಸನೆ ಇಲ್ಲದಿದ್ದರೂ ತಕ್ಷಣ ಕಣ್ಮನ ಸೆಳೆಯುವ ಆಕರ್ಷಣ ಶಕ್ತಿ ಇದಕ್ಕಿದೆ. ಗಾಢ ಕೆಂಪು, ಹಳದಿ ಬಣ್ಣದ ಮಿಶ್ರಣದಂತಿರುವ ಈ ಹೂವುಗಳು ಗಿಳಿಯ ಕೊಕ್ಕಿನಂತಿವೆ. ಅದಕ್ಕಾಗಿಯೇ ಇದನ್ನು ಪ್ಯಾರೆಟ್ ಟ್ರೀ ಎಂದೂ ಕರೆಯಲಾಗುತ್ತದೆ. ರೈತರು ಮುತ್ತುಗದ ಗಿಡವನ್ನು ಪೂಜ್ಯ ಭಾವನೆಯಿಂದ ನೋಡುತ್ತಾರೆ. ಸುಗ್ಗಿಯಾಗಿ ರಾಶಿಯಾದಾಗ ಪೂಜೆಗಾಗಿ ಇದರ ಹೂವುಗಳನ್ನೇ ಬಳಸಲಾಗುತ್ತದೆ. ಜಗತ್ತಿನ ಎಲ್ಲ ಗಿಡಗಳಿಗೂ ಪುರಾತನವಾದುದು ಎಂಬ ನಂಬಿಕೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಇದನ್ನು ಮುದುಕನ ಮರ ಮತ್ತು ಮುದುಕನ ಹೂ ಎಂದು ಗುರುತಿಸಲಾಗುತ್ತದೆ. ಇದರ ಹೂಗಳನ್ನು ಮೊದಲೆಲ್ಲ ಹೋಳಿ ಹುಣ್ಣಿಮೆಯ ಬಣ್ಣಕ್ಕಾಗಿ ಬಳಸಲಾಗುತ್ತಿತ್ತು. ಇದು ಪರಿಸರ ಸ್ನೇಹಿ ಬಣ್ಣವಾಗಿದ್ದುದರಿಂದ ಚರ್ಮಕ್ಕೂ ಯಾವುದೇ ಹಾನಿಯನ್ನುಂಟುಮಾಡುತ್ತಿದ್ದಿಲ್ಲ. ಈಗ ರಾಸಾಯನಿಕ ಮಿಶ್ರಣದ ಬಣ್ಣವನ್ನು ಬಳಸುವುದರಿಂದಾಗಿ ಚರ್ಮಕ್ಕೆ ಹಾನಿ. ಆದರೆ ಅದರೆಡೆ ಚಿಂತಿಸುವವರಾರು? 
ಇಷ್ಟೆಲ್ಲ ವೈಶಿಷ್ಟ್ಯಗಳಿರುವ ಮುತ್ತುಗದ ಗಿಡ ಹಾಗೂ ಅದರ ಹೂವುಗಳ ಸೌಂದರ್ಯದತ್ತ ಯಾರ ಗಮನವೂ ಇದ್ದಂತಿಲ್ಲ. ಈ ಗಿಡಗಳ ಸಂತತಿ ಕಡಿಮೆಯಾಗುತ್ತಿರುವುದೂ ಇದೇ ಕಾರಣಕ್ಕೇನೋ. ಮನೆಯಲ್ಲಿ ಕುಂಡಗಳಲ್ಲಿ ಬಗೆ ಬಗೆಯ ಗಿಡಗಳನ್ನು ಹಣ ಕೊಟ್ಟು ಕೊಂಡು ತಂದು ಕಾಳಜಿ ಮಾಡಿ ನೋಡುವ ನಮಗೆ ನೈಸರ್ಗಿಕವಾಗಿ ಕಾಣಸಿಗುವ ಸುಂದರ ಗಿಡ, ಹೂಗಳ ಬಗ್ಗೆ ಆಸಕ್ತಿ ಮೂಡದಿರುವುದು ವಿಪರ್ಯಾಸ. ಈ ಗಿಡವನ್ನು ನೋಡಬೇಕೆಂಬ ಆಸಕ್ತಿಯಿರುವವರು ಗುಡೇಕೋಟೆ ಮಾರ್ಗದಲ್ಲಿ ಕುರುಚಲು ಕಾಡಿನಲ್ಲಿ ಸ್ವಲ್ಪ ಅಲೆದರೂ ಸಾಕು, ಬೆಂಕಿಯ ಕೆನ್ನಾಲಗೆಯಂತಿರುವ ಹೂಗಳನ್ನರಳಿಸಿಕೊಂಡ ವರ್ಣರಂಜಿತ ಗಿಡಗಳು ನಿಮ್ಮನ್ನು ಸ್ವಾಗತಿಸುತ್ತವೆ. ಹುಡುಕುವ ತಾಳ್ಮೆ, ನೋಡುವ ಆಸಕ್ತಿಯಿದ್ದಲ್ಲಿ ಇವು ನಿಮಗೆ ಕಂಡೇ ಕಾಣುತ್ತವೆ. ಮತ್ತೇಕೆ ತಡ ? ಹೊರಡಿ. ಯಾಕೆಂದರೆ ಗಿಡಗಳನ್ನೆಲ್ಲ ಕಡಿದೊಗೆಯುವ ಈ ದಿನಗಳಲ್ಲಿ ಮುಂದೊಮ್ಮೆ ಈ ಗಿಡಗಳು ನೋಡಲು ಸಿಗುವುದೋ ಇಲ್ಲವೋ ಯಾರಿಗೆ ಗೊತ್ತು?