Friday, October 12, 2012

ಯೆಂಡ್ಕುಡ್ಕನ್ ಪದಗೋಳು




ತೂರಾಡೋ ಸಂದ್ರ
ಬಿದ್ಗಿದ್ದಾನ್ರಪ್ಪೋ
ಪೆವಿಕಾಲಾದ್ರೂ ಅಂಟ್ಸಿ

ದಿನಾಲೂ ಸೀದಾ ಮನಿ ಹಾದಿ
ಇಡ್ಕೊಂಡೋದ್ರೆ, ಈ ಹಾದಿ ಮಾತ್ರಾ
ಎಂಗೋ ಏನೋ ನನ್ನೇ ಇಡ್ಕಂತೈತೆ

ಪರ್‌ಪಂಚೆಲ್ಲ ಗರ್ರ್ ಅಂತಾ
ತಿರ್ಗೋವಾಗ ನೆಟ್ಟಗ
ನಿಂದ್ರಂದ್ರ ಎಂಗೆ ನಿಲ್ಬೇಕ್ ನೀವೇ ಏಳಿ

ಕಳ್ ನನ್‌ಮಗ
ಒಂದೇ ಗ್ಳಾಸ್ ಇಡಂದ್ರೆ
ಕೊನಿ ಕೊನೀಗ್
ನನ್ಗೇ ಗೊತ್ ಆಗ್ಲಾರ್ದಂಗೆ
೪ ಗ್ಳಾಸ್ ಇಡ್ತಾನಾ
ರೊಕ್ಕ ಅವರ್ಪ್ಪಂದಾ?

ಕತ್ಲಂದ್ರೆ ಬಯ
ನಮ್ ಜನ್ರಿಗೆ
ಎಂಡ್ರಂದ್ರೆ ಬಯ
ನಮ್ಮಂತಾ ಕುಡುಕರ್ಗೆ

ಕುಡ್ ಕುಡದೇ
ಹಾಳಾದ್ರು ನಮ್ಮಂತೋರು
ಕುಡೀಲಾರ್ದೆ ಹಾಳಾದ್ರು
ಎಂಥೇಂಥೋರು

ಕುಡ್ದಾಗ್ ಮಾತ್ರ
ನಿಜಾ ಏಳ್ತೀವಿ ದಣಿ
ಕುಡೀದಿದ್ದಾಗ ಮಾತ್ರಾ
ನಿಜವಾಗ್ಲೂ ಸುಳ್ಳ್ ಏಳ್ತೀವಿ

ಅಪಮಾನಗಳಿಗಿಲ್ಲ ವಿರಾಮ : ಒಂದು ನೋಟ


            ಇತ್ತೀಚೆಗೆ ಬಿಡುಗಡೆಯಾದ ಡಾ.ವೆಂಕಟಗಿರಿ ದಳವಾಯಿಯವರ ಅಪಮಾನಗಳಿಗಿಲ್ಲ ವಿರಾಮ ಕವನ ಸಂಕಲನ ಕಾವ್ಯದ ಹೊರಳು ನೋಟವನ್ನು ಗುರುತಿಸುವ ಸಂಕಲನವಾಗಿದೆ. ಸಂಕಲನದಲ್ಲಿ ಒಟ್ಟು ೪೩ ಕವಿತೆಗಳಿದ್ದು, ಹಳೆಬೇರು, ಹೊಸ ಚಿಗುರು ಎಂಬಂತೆ ಹಿಂದಿನ ಎಲ್ಲ ಕಾವ್ಯಪ್ರಕಾರಗಳನ್ನು ಒಡಲೊಳಗಿಟ್ಟುಕೊಂಡು ಮೂಡಿರುವ ಕವಿತೆಗಳೇನೋ ಎನಿಸುವಂತಿವೆ.
ದಳವಾಯಿಯವರು ಹೇಗೆ ಸಹೃದಯಿಗಳೋ ಅವರ ಕವಿತೆಗಳಲ್ಲೂ ಅದರ ಛಾಪು ಮೂಡಿದೆ. ಕಾವ್ಯದಲ್ಲಿ ಬಂಡಾಯದ ಹೊಳಹಿದ್ದರೂ ಅದು ಮೃದುವಾಗಿಯೇ ವ್ಯಕ್ತವಾಗಿದೆ. ಜಾತಿಮದದ ಮುಳ್ಳನ್ನು ತೆಗೆಯುವ ಕವಿಯ ಭಾಷೆ ಹೀಗಿದೆ:

ಮಲ್ಲಯ್ಯನ ಬೆಟ್ಟ, ಕನಕನ ಬಾದ, ಶಿಶುವಿನಾಳದ
ಶಿಶುಗಳ ನಾನೆನ್ನುವ ಅಹಂಕಾರದ ಮಾತುಗಳು
ವೃಕ್ಷವಾಗಿ, ಪ್ರಭುವಿನ ನಿರ್ಮೋಹ,
ಕನಕನ ರಾಗಿತನ, ಷರೀಫನ ಷರಿಯತ್‌ಗೆ
ತೊಡಕಾಗುವ ಮುನ್ನ ತುಂಡರಿಸಬೇಕಿದೆ
ಜಾತಿ ಮದದ ನಾಲಿಗೆಯೆಂಬ ಮುಳ್ಳನ್ನು. (ಸ್ಥಾವರಕ್ಕಳಿವುಂಟು)

ಶಬ್ದಗಳ ಓಟ, ಭಾಷೆಯನ್ನು ಸಮರ್ಥವಾಗಿ ಹಿಡಿದಿಡುವಿಕೆಗೆ :
ರಕ್ತ ಬೀಜಾಸುರರಂತೆ ಕಾಡುವ
ವಿರೂಪದ ಕಲ್ಪನೆಗೆ ಬೆಳೆದು ನಿಂತ
ವಿಷದ ಜೋಳಿಗೆ ಅದ ಮೀರಿ ನಿಲ್ಲುವ
ಕಟ್ಟಡದ ಅಂಚಿಗೆ ಭೂತದ ಸಿಡಿಲು.
ಸುರಿದ ಮಳೆ; ನಿಲ್ಲದ ಹಾವುಗಳ
ಹರಿದಾಟ ಮೋಡದೊಂದಿಗೆ ಸಖ್ಯ
ಬಯಸದೇ ಹುತ್ತದೊಂದಿಗಷ್ಟೇ ಸರಸ.
ಸುರಗಿಯೆಂಬ ಬೇಲಿಯ ಆಟಕ್ಕೆ ನೀನಷ್ಟೆ
ಸಾಕ್ಷಿ. ಅದಕ್ಕೆಂದೇ ಈ ಅಪಮಾನ.(ಅಪಮಾನಗಳಿಗಿಲ್ಲ ವಿರಾಮ)

ಇಲ್ಲಿ ಬಳಸಿರುವ ರಕ್ತ ಬೀಜಾಸುರರು, ವಿಷದ ಜೋಳಿಗೆ, ಭೂತದ ಸಿಡಿಲು, ಹಾವುಗಳ ಹರಿದಾಟ, ಹುತ್ತದೊಂದಿಗಷ್ಟೆ ಸರಸ ಶಬ್ದಗಳು ಕಾವ್ಯದ ಓಘ, ಶಬ್ದಚಿತ್ರಗಳಿಗೆ ಸಾಕ್ಷಿಯಾಗಿವೆ. ಇಡೀ ಕವಿತೆ ಕಾವ್ಯ ನಿಯಮದ ಚೌಕಟ್ಟಿನೊಳಗೆ ಪರಿಪೂರ್ಣವಾಗಿ ಹೊಂದಿಕೊಂಡಿದೆ ಎನ್ನುವಷ್ಟರ ಮಟ್ಟಿಗೆ ಓದುಗನನ್ನು ಸೆರೆಹಿಡಿಯುತ್ತದೆ.

ದಿನದ ಜಂಜಡವನ್ನೇ ಕಾವ್ಯವನ್ನಾಗಿಸುವಲ್ಲಿ ದಳವಾಯಿ ಯಶಸ್ವಿಯಾಗಿದ್ದಾರೆ:

ಸೂರ್ಯ ಹಗಲಲ್ಲೇ ಕಾಣಿಸಿಕೊಳ್ಳುತ್ತಿದ್ದಾನೆ.
ಚಂದ್ರ ರಾತ್ರಿಗಳನ್ನೇ ನೆಚ್ಚಿಕೊಳ್ಳುತ್ತಿದ್ದಾನೆ.
ಬೇಸರಗೊಂಡು
ರಾತ್ರಿ ಸೂರ್ಯನ ಜನಕರು
ನಾವಾಗಬಾರದೆಂದು ಧೇನಿಸುತ್ತೇವೆ(ಅದೇ ಮಾತು ಕದಾ ತೆಗೀ)

ಅಲ್ಲಲ್ಲಿ ನವೋದಯ, ನವ್ಯದ ನೆನಪುಗಳೂ ಕವಿತೆಯಲ್ಲಿ ಮೂಡುತ್ತವೆ. ಹೀಗಾಗಿ ಓದುಗನಿಗೆ ಎಲ್ಲವನ್ನೂ ಒಳಗೊಂಡ ವಿಶೇಷವಾದ, ಹೊಸತನದ ಕವಿತೆಗಳೆನಿಸುತ್ತವೆ:

ಇದ್ದ ಕಾಲ ಕೊಟ್ಟ ಪ್ರೀತಿ
ಮೈಥುನ ಅದೆಲ್ಲವೂ ಗೀಜಗನಷ್ಟೇ
ಸುಂದರ ಮತ್ತು ಹತ್ತಿರ(ಬದುಕೆಲ್ಲವೂ ಬರಿದು.)

ಗಂಧ ಪೂಸಿತ ಬಳುಕಿನ ವಡ್ಡ್ಯಾಣದ
ಭಾರ ಹೊತ್ತ ಕನ್ನಿಕೆಯ ಕೆನ್ನೆ ತುಂಬ
ಅರಗಳಿಗೆಯೂ ನಿಲ್ಲದೇ ಸುರಿವ ಜೇನಹನಿಯೊಂದು
ಮತ್ತೆ ಕಾಣದು ಮತ್ತೆ ಬಾರದು(ನಕ್ಷತ್ರ ಮತ್ತು ಅಳು)

ಮೋಟು ಮರಕ್ಕೆ ಮೋಡದಂತೆ
ನಿಂತು ಸುಮ್ಮನೆ ನೀರುಣಿಸುತ್ತೇನೆ
ಪುಷ್ಪವತಿಯೂ-ಫಲವತಿಯೂ ನೀನೇ ಆಗಬೇಕೆಂದು!(ಎಲ್ಲಾ ನೀನೇ)

         ವ್ಯವಸ್ಥೆಯ ವಿರುದ್ಧದ ಆಕ್ರೋಶವೂ ತಣ್ಣಗೆ ಹರಿದರೂ, ವ್ಯಂಗ್ಯ, ವಿಶಾದ, ಅಸಹಾಯಕತೆಗಳು ಮೇಳೈಸಿ ಕವಿತೆಗೆ ಸಾರ್ಥಕತೆಯನ್ನೂ ಒದಗಿಸಿವೆ.

ಶಿಬಿ ಬಲಿಗಳು
ಹುಟ್ಟುತ್ತಲೇ ಇರುತ್ತಾರೆ
ಗಿಡ್ಡನಾಗಿ ಉದ್ದವಾಗುವ ಗಾಳಿ-ಬೆಂಕಿಯಾಗುವ
ಹೆಣ್ಣು ಕ್ರಿಮಿಯಾಗುವ ಗರುಡ-ವಾಮನರ
ತಂತ್ರ ಅರಿಯದೆ. ಈ ಶಿಬಿ ಸಂತತಿ ಬೆಳೆದ
ರಕ್ತ ಮಾಂಸದ ತೋಳನ್ನು, ತೊಡೆಯನ್ನು ಕತ್ತರಿಸಿ
ಕೊಡುತ್ತಲೇ ಸಿಡಿ ಬಂಡಿಗೆ ನೇತಾಡುತ್ತಾರೆ
ಧನ್ಯತೆಯ ಅಮಲಿನಲ್ಲಿ.(ಸೇವಕನ ಮನೆಯಿಂದ)

ಏರುವ ದಂಡೆಯಲ್ಲಿ ರುದ್ರ ನರ್ತನ ಗೇಯುತಿಹ
ಭಸ್ಮಾಸುರರಿಗೆ ಒಂದಿಷ್ಟು ಕರುಣೆ ಮತ್ತಷ್ಟು
ಪ್ರೀತಿ ದೊರೆತಿತಾದರೂ ಎಲ್ಲಿಂದ? ನಗುವಿನ
ತೆನೆಯನ್ನು ಸುಟ್ಟು ತಿನ್ನುವ ವಿಕೃತ ದೇಹಿಗಳಿಗೆ
ಅನುಕೂಲಕ್ಕೆಂದೇ ಈ ಕತ್ತಲು(ಮೇಲೆ ಪಲ್ಲಿವಿಸುವುದು ನೋಡಾ)

ಬದುಕಿನ ನಶ್ವರತೆ, ಬಂಧನಗಳ ಕುರಿತು ಕವಿ ಅಕ್ಕಮಹಾದೇವಿ ಹಾಗೂ ಶರೀಫರನ್ನು ನೆನೆದು ಬರೆದಿರುವ ಕವಿತೆ ನಾನು ಮೆಚ್ಚಿರುವ ಕವಿತೆಗಳಲ್ಲೊಂದು:

ಅದೇ ಮಹಾದೇವಿ ನಿನ್ನ ಬೆನ್ನು ಕಂಡ
ಸಂತೆಯ ನಾಯಿ ಶಯನದ ಹಾಳು ದೇಗುಲಕ್ಕೆ
ಬಂದು ಜೊಲ್ಲು ಸುರಿಸುತ್ತಲೇ ತಿರುತಿರುಗಿ
ಕೂತಿದೆ ಕಟ್ಟೆಯ ಮೇಲೆ ಚನ್ನ ಮಲ್ಲಿ
ಕಾರ್ಜುನ ಇಲ್ಲದ ವೇಳೆ ದೊರಕಿತೆಂದು

ನಿಮಗೋ ಇಹಕ್ಕೊಬ್ಬ ಗಂಡ ಪರಕ್ಕೊಬ್ಬ ಗಂಡ
ನನಗಿನ್ನೂ ಕಾಯುವ ಗಂಡನಿಲ್ಲದೆ ಹಾವಿಗೆ
ಅಂಜಿದ್ದೇನೆ, ಕಪ್ಪೆಗೆ ಅಂಜಿದ್ದೇನೆ, ನನಗೂ
ಹುಡುಕಿಕೊಡಿ ಅಂಗಸಂಗವ ಬೆರೆತುಬಿಡುವ
ಬೆತ್ತವೊಂದನ್ನು ಮುಡಿಯುತ್ತೇನೆ
ಚಂದ್ರನಂತೆ ತಡ ಮಾಡದೇ! (ಮುಡಿ ಏರಿದ ಗಂಗೆ)

ಮಕ್ಕಳಿಂದಲೂ ಹಿರಿಯರು ಎನೆಲ್ಲವ ಕಲಿಯಬಹುದು ಎಂಬುದನ್ನು ಸಂಕಲನದ ೨ ಕವಿತೆಗಳು ತಿಳಿಹೇಳುತ್ತವೆ.

ಆಗಾಗ ಕ್ರಿಸ್ತ, ಗಾಂಧೀ, ಶರೀಫ, ಅಂಬೇಡ್ಕರರ
ಥೇರಿಗಾಥಾವನ್ನು ಹೇಳುವೆನಾದರೂ
ಯಾಕೆ ಸತ್ತರು? ಎಂದು ಭೀತಿ ಹುಟ್ಟಿಸುತ್ತಾಳೆ
ಈಗೀಗ ಕಥೆಗಳನ್ನು ಹೇಳುವುದಕ್ಕೆ
ಹಿಂಜರಿಯುತ್ತೇನೆ. ಅವರು ಸತ್ತಿಲ್ಲ ನಾವೇ
ಕೊಂದಿದ್ದೇವೆ ಎಂಬ ನಂಬಿಕೆಯಿಂದ!(ಸತ್ತ ಪ್ರಶ್ನೆಗೆ.ಕೊಂದ ನೆನಪು)

ತಟ್ಟನೆ ಹೊಳೆದದ್ದು ನಾವು ಲೋಕದೊಳಗೆ
ಉooಜ  ಎನಿಸಿಕೊಳ್ಳುವುದು ಮಕ್ಕಳಿಂದ ಹಾಗೂ
ನಮ್ಮನ್ನು ಶುದ್ಧಗೊಳಿಸುವುದೂ ಈ ಮಕ್ಕಳೇ
ಆಗಾಗ ನಾನೂ ಅವಸರದಿ
ಊome Woಡಿಞ ಮಾಡುತ್ತಿದ್ದೇನೆ,
ಆದರೆ ಮಿಸ್ ಬರೆದಿಲ್ಲ ಇನ್ನೂ ಗಿeಡಿಥಿ ಉooಜ ಅಂತ(ಅಮ್ಮನ ರೂಪಾಂತರ)

              ಅಲ್ಲದೆ ಶಿಕ್ಷಕರ ದಿನಾಚರಣೆಗೋಸ್ಕರವೇ ಬರೆದ ೩ ಕವಿತೆಗಳಿವೆ. ಶಿಕ್ಷಕರ ಘನತೆ, ಅವರ ಕೊಡುಗೆ, ಅವರ ಮೌಲ್ಯಗಳೆಲ್ಲ ಕವಿತೆಗಳಲ್ಲಿ ಹರಳುಗಟ್ಟಿವೆ.
          ಹೊಸತನದ ಬೆಚ್ಚನೆಯ ಅನುಭವ ನೀಡುವ ದಳವಾಯಿಯವರ ಅಪಮಾನಗಳಿಗಿಲ್ಲ ವಿರಾಮ ಸಂಕಲನ ಕಾವ್ಯಲೋಕಕ್ಕೊಂದು ವಿಶಿಷ್ಟ ಕೊಡುಗೆಯಾಗಿದೆ. ಅಂದವಾದ ಮುದ್ರಣ, ಮುಖಪುಟ ಕವನ ಸಂಕಲನಕ್ಕೆ ಮೆರುಗನ್ನು ತಂದಿದೆ.

ಕೃತಿ: ಅಪಮಾನಗಳಿಗಿಲ್ಲ ವಿರಾಮ
ಪ್ರಕಾಶನ: ಸಾಯಿಮಣಿ ಪ್ರಕಾಶನ ಹೊಸಪೇಟೆ.
ಮೊದಲ ಮುದ್ರಣ: ೨೦೧೨
ಬೆಲೆ: ೭೫ ರೂ.ಗಳು.