Sunday, August 26, 2012

ಸದ್ದಿಲ್ಲದೇ ಮರೆಯಾಗುತ್ತಿರುವ ಸೈಕಲ್ ರಿಕ್ಷಾಗಳು


          ದೈಹಿಕ ಶ್ರಮವನ್ನೇ ಬಯಸುವ ಕೆಲವೇ ಕೆಲವು ಕೆಲಸಗಳಲ್ಲಿ ಸೈಕಲ್ ರಿಕ್ಷಾ ತುಳಿಯುವುದು. ತ್ರಿಚಕ್ರದ ಸೈಕಲ್ ರಿಕ್ಷಾಗಳು ಕೆಲವು ದಶಕಗಳ ಹಿಂದೆ ರಸ್ತೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಂಚರಿಸುತ್ತಿದ್ದವು. ರಿಕ್ಷಾ ತುಳಿಯುವವರೂ ಅದರಿಂದಲೇ ತಮ್ಮ ಜೀವನೋಪಾಯ ಕಂಡುಕೊಂಡಿದ್ದರು. ಆದರೆ ಆಧುನಿಕ ಬದುಕಿನಲ್ಲಿ ವಾಹನಗಳ ಭರಾಟೆ ಹೆಚ್ಚಿದಂತೆಲ್ಲ ಸೈಕಲ್ ರಿಕ್ಷಾಗಳು ಮಾಯವಾಗಿ ರಿಕ್ಷಾ ಚಾಲಕರ ಬದುಕು ಅಸಹನೀಯವೆನಿಸತೊಡಗಿದೆ. ಅವರೀಗ ಪರ್ಯಾಯ ಮಾರ್ಗವನ್ನು ಹುಡುಕಲೇಬೇಕಾಗಿದೆ.
              ಕೂಡ್ಲಿಗಿ ಪಟ್ಟಣದಲ್ಲಿ ೧೯೯೦ರ ದಶಕದಲ್ಲಿ ೨೦ ಸೈಕಲ್ ರಿಕ್ಷಾಗಳಿದ್ದವು. ಸಾರ್ವಜನಿಕರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ರಿಕ್ಷಾ ಚಾಲಕರು ಕರೆದೊಯ್ಯುತ್ತಿದ್ದರು. ಇಬ್ಬರು ಕುಳಿತುಕೊಳ್ಳುವ ಅವಕಾಶವಿದ್ದ ಸೈಕಲ್ ರಿಕ್ಷಾಗಳಿಗೆ ಮಳೆ ಬಂದಾಗ ರಕ್ಷಣೆಗಾಗಿ ಮೇಲೇರಿಸಿಕೊಳ್ಳುವ ಟಾಪ್‌ಗಳಿದ್ದವು. ಮಿರಿಮಿರಿ ಮಿಂಚುತ್ತಿದ್ದ ಗಾಲಿಗಳ ರಿಮ್‌ಗಳು, ಹ್ಯಾಂಡಲ್‌ಗಳಿಗೆ ಹೂಕುಚ್ಚಗಳು, ಮಾರ್ಗದಲ್ಲಿ ಸಂಚರಿಸುವ ಜನರನ್ನು ಚದುರಿಸಲು ಗಂಟೆ, ರಿಕ್ಷಾದಲ್ಲಿ ಕುಳಿತವರು ಉಳಿದವರಿಗಿಂತ ಭಿನ್ನವಾಗಿಯೇ ಕಾಣುತ್ತಿದ್ದರು. ಚಾಲಕ ಮಾತ್ರಮಳೆ, ಬಿಸಿಲು, ಗಾಳಿಗೆ ಮೈಯೊಡ್ಡಿ ರಿಕ್ಷಾ ತುಳಿಯುತ್ತಿದ್ದ. ಕೆಲವರು ಮರುಕಪಟ್ಟು ಹೆಚ್ಚಿನ ಬಾಡಿಗೆ ನೀಡಿದರೆ, ಕೆಲವರು ಕಡಿಮೆಯೇ ಕೊಡುತ್ತಿದ್ದರೆಂದು ಹಳಬರು ನೆನೆಯುತ್ತಾರೆ. ರಿಕ್ಷಾಗಳನ್ನು ತುಳಿದು ತುಳಿದೇ ವಯಸ್ಸಾದ ಮೇಲೆ ಮಂಡಿನೋವಿನಿಂದ ಬಳಲುವವರೂ ಇದ್ದಾರೆ. ಇತ್ತೀಚೆಗೆ ಪಟ್ಟಣದಲ್ಲಿ ಆಟೋಗಳು ಬಂದ ನಂತರ ರಿಕ್ಷಾ ಚಾಲಕರನ್ನು ಕೇಳುವವರೇ ಇಲ್ಲದಂತಾಗಿ, ಬದಲಾಗುತ್ತಿರುವ ದಿನಗಳಿಗೆ ತಕ್ಕಂತೆ ರಿಕ್ಷಾ ಚಾಲಕರೂ ಪರ್ಯಾಯ ಮಾರ್ಗವನ್ನು ಹುಡುಕಿಕೊಂಡಿದ್ದಾರೆ. ರಿಕ್ಷಾಗಳು ತಮ್ಮ ಮೂಲ ಸ್ವರೂಪವನ್ನೇ ಕಳೆದುಕೊಂಡು ಅವೀಗ ಭಾರವಸ್ತುಗಳನ್ನು ಸಾಗಿಸುವ ಬಂಡಿಗಳಾಗಿ ಮಾರ್ಪಟ್ಟಿವೆ. ಅದಕ್ಕೆ ತಕ್ಕಂತೆ ಅವುಗಳ ವಿನ್ಯಾಸವೂ ಬದಲಾಗಿದೆ. ದಶಕದ ಹಿಂದೆ ಪ್ರತಿದಿನವೂ ೧೫೦ ರೂ.ಗಳವರೆಗೆ ದುಡಿಯುತ್ತಿದ್ದ ರಿಕ್ಷಾ ಚಾಲಕರು, ಇದೀಗ ಕೇವಲ ೬೦ ರೂ.ಗಳಿಗೇ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಹಲವಾರು ಜನ ಚಾಲಕರು ರಿಕ್ಷಾಗಳ ಸಹವಾಸವೇ ಬೇಡವೆಂದು ಕೂಲಿ ಕೆಲಸಗಳಿಗೆ, ಹಮಾಲಿ ಕೆಲಸಗಳಿಗೆ ಹೋಗುತ್ತಿದ್ದಾರೆಂದು ರಿಕ್ಷಾ ಚಾಲಕ ಹನುಮಂತಪ್ಪ ಹೇಳುತ್ತಾರೆ. ರಿಕ್ಷಾ ತುಳಿಯುತ್ತಿದ್ದ ಹಳಬರು ಮಂಡಿನೋವಿನಿಂದ ಮನೆಸೇರಿ, ತಮ್ಮ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳಿಸುವ ದುಸ್ಥಿತಿಯೊದಗಿದೆ. ಹೀಗಾಗಿ ಸದ್ಯ ಪಟ್ಟಣದಲ್ಲಿರುವ ೩೦ ಜನ ರಿಕ್ಷಾ ಚಾಲಕರ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಪಡೆಯದೇ ಪರ್ಯಾಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಲ್ಲಿ ಎಸ್ಸೆಸ್ಸೆಲ್ಸಿಯೇ ಹೆಚ್ಚಿನ ಶಿಕ್ಷಣವಾಗಿದೆ. ಹೆಚ್ಚಿನ ಓದಿಗೆ ಇವರಲ್ಲಿ ಆರ್ಥಿಕ ಬಲವಿಲ್ಲ. ಬ್ಯಾಂಕ್‌ಗಳು ಸಾಲ ನೀಡುವುದೂ ಇಲ್ಲ.


ಇವರಿಗೀಗ ಸಾಮಾನುಗಳನ್ನು ಹೇರಿಕೊಂಡು ಹೋಗುವ ಲಗೇಜ್ ಆಟೊಗಳು ಸ್ಪರ್ಧಿಗಳಾಗಿವೆ. ಹೀಗಾಗಿ ಇವರಿಗೆ ಎತ್ತನ್ನು ಹೂಡುವ ಟೈರ್ ಬಂಡಿಯಾದರೆ ಹೇಗೋ ಜೀವನ ಸಾಗಿಸಬಹುದು ಎಂಬುದು ಇವರ ಬಯಕೆ. ರಿಕ್ಷಾ ಚಾಲಕರ ಸಂಘವೂ ರಚಿತವಾಗಿದೆ. ಈಗ ಜನರನ್ನು ಕೂಡಿಸಿಕೊಂಡು ಹೋಗುವ ರಿಕ್ಷಾಗಳಿಲ್ಲ. ಅವೆಲ್ಲ ಈಗ ಪಳೆಯುಳಿಕೆ ಅಥವಾ ನೆನಪುಗಳು ಮಾತ್ರ. ಅವುಗಳನ್ನು ನೋಡಬೇಕೆಂದರೆ ಹಳೆಯ ಫೋಟೊಗಳಲ್ಲಿ ಮಾತ್ರನೋಡಬಹುದಾಗಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಿಲ್ಪವನದಲ್ಲಿ ಕ್ಲಿಕ್ಕಿಸಿದ ಚಿತ್ರಗಳು