Monday, September 24, 2012

ಸಮಸ್ಯೆಗಳಾಗಿ ಕುಳಿತಿರುವ ಬ್ರಿಟಿಷರ ಕಾಲದ ತಿಜೋರಿಗಳ ಗ್ರಾಮ ಹನುಮನಹಳ್ಳಿ


            ನಮ್ಮ ದೇಶವನ್ನು ಬ್ರಿಟಿಷರು ೨೦೦ ವರ್ಷಗಳ ಕಾಲ ಆಳಿದರು ಎಂಬುದು ಇತಿಹಾಸದ ಮಾತು. ಈಗಿನ ಯುವಜನಾಂಗಕ್ಕೆ ಇದನ್ನು ಅರ್ಥೈಸಿಕೊಳ್ಳುವುದು ಇನ್ನೂ ಕಷ್ಟವೇ ಅನಿಸಬಹುದು. ಆದರೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ತೂಲಹಳ್ಳಿ ಬಳಿಯ ಹನುಮನಹಳ್ಳಿ ಗ್ರಾಮಕ್ಕೆ ಹೋದರೆ ಅಲ್ಲಿನ ಬಹುತೇಕ ಮನೆಗಳಲ್ಲಿ ಬ್ರಿಟಿಷರ ಕಾಲದ ತಿಜೋರಿಗಳು ಈಗಲೂ ಇವೆ. ಆದರೆ ಅವೆಲ್ಲ ಪಳೆಯುಳಿಕೆಗಳಂತಾಗಿ ಮೂಲೆ ಸೇರಿವೆ. ಇಷ್ಟೊಂದು ತಿಜೋರಿಗಳು ಈ ಗ್ರಾಮದಲ್ಲಿ ಹೇಗೆ ಸೇರಿದವೆಂಬುದೇ ಅಚ್ಚರಿಯ ಸಂಗತಿ. ಗ್ರಾಮಸ್ಥರಿಗೂ ಈ ಕುರಿತು ಗೊತ್ತಿಲ್ಲ. ವಿಶೇಷವೆಂದರೆ ಇವೆಲ್ಲವೂ ಗ್ರಾಮಸ್ಥರಿಗೆ ಸಮಸ್ಯೆಯಾಗಿ ಕುಳಿತಿರುವುದು.
            ತಾಲೂಕಿನ ತೂಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿರುವ ಹನುಮನಹಳ್ಳಿ ಕೂಡ್ಲಿಗಿ ತಾಲೂಕು ಕೇಂದ್ರದಿಂದ ಸುಮಾರು ೩೫ ಕಿ.ಮೀ ದೂರವಿದೆ. ಮೊದಲ ನೋಟಕ್ಕೇ ಕುಗ್ರಾಮದಂತೆ ಕಂಡುಬರುವ ಹನುಮನಹಳ್ಳಿಯಲ್ಲಿನ ಜನತೆ ತಮ್ಮ ಜಮೀನು, ಮನೆಯೊಂದಿಗೆ ನೆಮ್ಮದಿಯಿಂದ ಬದುಕಿದ್ದಾರೆ. ಒಕ್ಕಲುತನ ಪ್ರಧಾನ ವೃತ್ತಿ. ಕೂಲಿ ಕೆಲಸಕ್ಕೆ ಹೋಗುವ ಬಡಕುಟುಂಬಗಳೂ ಇಲ್ಲಿವೆ. ಆದರೆ ಹಳೆಯ ಮನೆಗಳಲ್ಲಿ ಹೆಜ್ಜೆಯಿರಿಸಿದರೆ ಕಂಡುಬರುವುದು ಬ್ರಿಟಿಷರ ಕಾಲದ ಭದ್ರವಾದ ತಿಜೋರಿಗಳು. ೪-೫ ಅಡಿ ಎತ್ತರದ ಈ ತಿಜೋರಿಗಳು ಬಹುತೇಕ ಮನೆಗಳ್ಲಲಿ ಫ್ರಿಜ್‌ಗಳ ರೀತಿಯಲ್ಲಿವೆ. ತಿಜೋರಿಗಳ ಮೇಲ್ಭಾಗದ್ಲಲಿ ಹಿತ್ತಾಳೆಯಲ್ಲಿ ಸಿದ್ಧಪಡಿಸಿದ ಬ್ರಿಟಿಷರ ರಾಜಲಾಂಛನವಿದೆ. ಮೇಲ್ಗಡ ಬ್ರಿಟಿಷ ರಾಜಮನೆತನದ ಕಿರೀಟ, ಅದರೆ ಮೇಲೆ ಸಿಂಹ, ಎರಡೂ ಬದಿಯಲ್ಲಿ ಸಿಂಹ ಮತ್ತು ಕುದುರೆ ಚಿತ್ರಗಳಿವೆ. ಚಿನ್ಹೆಯಲ್ಲಿ ಲ್ಯಾಟಿನ್ ಭಾಷೆಯ್ಲಲಿರುವ gÀĪÀ honi soit qui mal y pense ಎಂದಿದೆ. ಇಂಗ್ಲಿಷ್‌ನಲ್ಲಿ ಇದರರ್ಥ  evil be to him who evil thinks
ಎಂದಾಗುವುದು. ಇದರ ಕೆಳಗಡೆಯಲ್ಲಿಯೂ ಲ್ಯಾಟಿನ್ ಭಾಷೆಯಲ್ಲಿ dieuet mon droit ಎಂದಿದೆ. ಇಂಗ್ಲಿಷ್‌ನಲ್ಲಿ ಇದರರ್ಥ god and my right  ಎಂದಾಗುವುದು.


          ವಿಶೇಷವೆಂದರೆ ಈ ತಿಜೋರಿಗಳು ಎಷ್ಟು ಭದ್ರ ಹಾಗೂ ಉಕ್ಕಿನ ಬಾಗಿಲುಗಳನ್ನು ಹೊಂದಿವೆಯೆಂದರೆ ಇವನ್ನು ಕೊಂಚ ಸರಿಸಲೂ ಸಾಧ್ಯವಿಲ್ಲ. ಟನ್‌ಗಟ್ಟಲೆ ತೂಗುವ ಈ ತಿಜೋರಿಗಳನ್ನು ಎತ್ತಿ ಕೊಂಚ ಸರಿಸಲು ಕನಿಷ್ಟ ೮ ಜನರಾದರೂ ಬೇಕು. ಅಲ್ಲದೆ ಕೆಲವು ಮನೆಗಳಿಗೆ ಹೊಸರೂಪ ನೀಡಿ ನಿರ್ಮಿಸುವಾಗ ಇವುಗಳನ್ನು ಬೇರೆಡೆ ಸಾಗಿಸಲು ಸಾಧ್ಯವಾಗದೆ ಅವುಗಳನ್ನು ಇದ್ದಲ್ಲಿಯೇ ಇರಲು ಬಿಟ್ಟಿದ್ದಾರೆ. ಮತ್ತೆ ಕೆಲವರು ಇದಾವ ಸಮಸ್ಯೆ ಎಂದು ತಮ್ಮ ಸಂಬಂಧಿಕರಿಗೋ, ಸ್ನೇಹಿತರಿಗೋ ಕಾಣಿಕೆಯಾಗಿ ನೀಡಿ ಕೈ ತೊಳೆದುಕೊಂಡಿದ್ದಾರೆ. ಇಂದಿಗೂ ಸುಸ್ಥಿತಿಯಲ್ಲಿರುವ ಈ ತಿಜೋರಿಗಳ ಬಾಗಿಲನ್ನು ತೆರೆಯಲು ೨-೩ ಬೀಗದ ಕೈಗಳಿವೆ. ಎಲ್ಲವನ್ನೂ ಒಟ್ಟಿಗೆ ಬಳಸಿದಾಗ ಮಾತ್ರ ತಿಜೋರಿ ತೆರೆಯುತ್ತದೆ. ಬಾಗಿಲುಗಳೇ ಅಂಗೈಯಗಲ ಗಾತ್ರವನ್ನು ಹೊಂದಿವೆ. ಒಳಗಡೆ ೨-೩ ಖಾನೆಗಳಿವೆ. ಹಿಂದಿನ ಕಾಲದವರು ಹಣ, ಒಡವೆಗಳನ್ನಿರಿಸುತ್ತಿದ್ದರೋ ಏನೋ, ಈಗ ಮಾತ್ರ ಅಲ್ಲಿ ಕೆಲವು ಕಾಗದ ಪತ್ರಗಳನ್ನು ಹೊರತುಪಡಿಸಿದರೆ ಏನೇನೂ ಇಲ್ಲದೆ ಖಾಲಿಯಾಗಿವೆ. 
‘ಯಾವಾಗಲೋ ನಮ್ಮ ಮುತ್ತಾತರ ಕಾಲದಿಂದ ತಿಜೋರಿಗಳು ಹಂಗೇ ಅದಾವ ಸರ್, ಅವನ್ನು ಮನ್ಯಾಗ ಇಟ್ಟೀವಷ್ಟೇ ಅದರಿಂದೇನೋ ಪ್ರಯೋಜನಿಲ್ಲ ಎಂದು ಗ್ರಾಮದ ಕೆ.ಚನ್ನಬಸಪ್ಪ ಹೇಳುತ್ತಾರೆ. ‘ನಮ್ ದುಡಿಮೆ ನಾವು ಆರಾಮದೀವಿ, ಹೊಸಾ ಮನಿ ಕಟ್ಬೇಕಂದ್ರ ಅವನ್ನ ಏನ್ಮಾಡಬೇಕೆಂಬೂದ ದೊಡ್ಡ ಸಮಸ್ಯೆ’ ಎಂದು ಬಣಕಾರ ಚನ್ನಬಸಪ್ಪ, ಮಾಗಡಿ ಹೆಗ್ಗನಗೌಡ್ರು ಹೇಳುತ್ತಾರೆ. 
        ಗ್ರಾಮದಲ್ಲೇನೋ ತಿಜೋರಿಗಳಿವೆ, ಆದರೆ ಎಲ್ಲವೂ ಖಾಲಿಯಾಗಿವೆ ಇನ್ನೂ ವಿಚಿತ್ರವೆಂದರೆ ಇಲ್ಲಿನ ಜನತೆಗೆ ಅವು ದೊಡ್ಡ ಸಮಸ್ಯೆಯಾಗಿ ಕೂತಿವೆ.